ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ವಲಸೆಯ ತ್ರಿವಿಕ್ರಮ ಕನಸು

ಅಮೆರಿಕದಲ್ಲಿ ಭಾರತೀಯ ‘ಅಕ್ರಮ’ ವಲಸೆಗಾರರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಮೂರು ಪಟ್ಟು ಹೆಚ್ಚಳ
Last Updated 20 ಅಕ್ಟೋಬರ್ 2018, 19:47 IST
ಅಕ್ಷರ ಗಾತ್ರ

ಅಕ್ಟೋಬರ್‌ ಮೊದಲ ವಾರದಲ್ಲಿ ಭಾರತೀಯ ದಿನಪತ್ರಿಕೆಗಳಲ್ಲಿ ಸುಳಿದಾಡಿದ ಸುದ್ದಿ- ಅಮೆರಿಕದಲ್ಲಿ ಭಾರತೀಯ ‘ಅಕ್ರಮ’ ವಲಸೆಗಾರರ ಸಂಖ್ಯೆಯ ಏರಿಕೆ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚು.

ನಾವೀಗ ಜಾಗತಿಕ ಗ್ರಾಮದಲ್ಲಿದ್ದೇವೆ. ಯಾವುದೇ ದೇಶದ ಗಡಿ, ಸೀಮೆಯ ಪರಿಮಿತಿಗೊಳಪಡದೆ ಜ್ಞಾನ, ಗಳಿಕೆಯ ಆಲೋಚನೆಗಳನ್ನು ಮೂರ್ತಗೊಳಿಸಲು ಅಂತರ್ಜಾಲದ ಮೂಲಕ ವ್ಯವಹರಿಸುವ ಸೌಲಭ್ಯಗಳು ನಮಗಿವೆ. ಆದರೂ, ಭೌತಿಕ ಗಡಿರೇಖೆ, ರಾಷ್ಟ್ರದ ಕಾನೂನುಗಳು ಆಯಾ ದೇಶಗಳ ಆಳ್ವಿಕೆಗೆ ಸ್ವಂತವಾಗಿಯೇ ಇವೆ. ಇರಲೂ ಬೇಕು.

ಈಗಿನ ಅಮೆರಿಕದಲ್ಲಿ ಭಾರತೀಯರ ಛಾಪು ಅಂದರೆ ಶಿಕ್ಷಣ ಕೇಂದ್ರಿತ ತಲೆಮಾರು. ತಂತ್ರಜ್ಞಾನ, ವೈದ್ಯಕೀಯ, ಹಣಕಾಸು, ಬಂಡವಾಳ ಹೂಡಿಕೆಯ ಉನ್ನತ ಪರಿಮಾಣದ ಉದ್ಯೋಗಗಳಲ್ಲಿ ಇರುವವರು. ಐಟಿ, ಮೆಡಿಕಲ್‌ ಮತ್ತು ಉಳಿದ ಕ್ಷೇತ್ರದಿಂದ ಉನ್ನತ ವ್ಯಾಸಂಗಕ್ಕಾಗಿ ಸ್ಟೂಡೆಂಟ್ ವೀಸಾ ಅಥವಾ ಕೆಲಸದ ವೀಸಾ ಮೂಲಕ ನ್ಯಾಯಯುತ ದಾರಿಯಲ್ಲಿ ವಲಸೆ ಹೋದವರು. ಅಮೆರಿಕದಲ್ಲಿನ ಜನರಿಗೂ ಭಾರತೀಯರ ಮೇಲೆ ಅದೇ ಭಾವನೆ ಇದೆ. ‘ತಮ್ಮ ಪಾಡಿಗೆ ತಾವು ಇರುತ್ತಾರೆ. ತಾವಾಯ್ತು, ತಮ್ಮ ಮನೆ, ಸಂಸಾರ, ಮಕ್ಕಳ ವಿದ್ಯಾಭ್ಯಾಸ, ದೂರದ ಊರಿನ ವಯಸ್ಸಾದ ಪೋಷಕರ ಚಿಂತೆ, ಆರ್ಥಿಕ ಭದ್ರತೆ ಮುಂತಾದ ಚಟುವಟಿಕೆಗಳೊಡನೆ ಕೆಲಸದ ಕಡೆಯ ಏಕಾಗ್ರತೆ- ಧ್ಯಾನ- ಗಮನ’ ಎನ್ನುವುದು ಭಾರತೀಯರ ಕುರಿತ ಇಲ್ಲಿನವರ ಧೋರಣೆ.

ಭಾರತೀಯ ಅಕ್ರಮ ವಲಸೆಗಾರರ ಸುದ್ದಿ ಒಂದು ರೀತಿಯ ಆಶ್ಚರ್ಯ ಮತ್ತು ಆತಂಕ ಉಂಟು ಮಾಡಿದೆ. ಇಷ್ಟು ದಿನ ಇಲ್ಲದ ವಾರ್ತೆ ಈಗ ಏನು, ಯಾಕೆ? ಅದಕ್ಕೂ ಕಾರಣವಿದೆ. ಸಿಬಿಪಿ(U.S. Customs and Border Protection) ಪ್ರತಿವರ್ಷದಂತೆ ಈ ವರ್ಷವೂ ವರದಿ ನೀಡಿದೆ. ಅದರ ಪ್ರಕಾರ 2018ರಲ್ಲಿ ಭಾರತೀಯ ಅಕ್ರಮ ವಲಸಿಗರ ಸಂಖ್ಯೆ 9 ಸಾವಿರಕ್ಕೇರಿದೆ. 2017ರಲ್ಲಿ ಆ ಸಂಖ್ಯೆ ಸುಮಾರು 3 ಸಾವಿರದಷ್ಟಿತ್ತು.ಅಕ್ರಮವಾಗಿ ಅಮೆರಿಕಕ್ಕೆ ಬರುವವರ ಶ್ರೇಣಿಯಲ್ಲಿ ಭಾರತೀಯ ಪ್ರಜೆಗಳು 5ನೇ ಸ್ಥಾನದಲ್ಲಿದ್ದಾರೆ.

ಭಾರತದ ಚರಿತ್ರೆಯನ್ನು ಗಮನಿಸಿದಾಗ ಮೂಲದಿಂದಲೂ ಭಾರತೀಯರು ಬೇರೆ ದೇಶಗಳ ಮೇಲೆ ಆಕ್ರಮಣ ಮಾಡಿದ್ದು ಕಡಿಮೆ. ಅಕ್ರಮವಾಗಿ ಬೇರೆ ದೇಶಗಳಿಗೆ ವಲಸೆ ಹೋದವರೂ ಕಡಿಮೆ. ಆಧುನಿಕತೆಯ ನಾಗಾಲೋಟದಲ್ಲಿ 20 ಮತ್ತು 21ನೇ ಶತಮಾನದಲ್ಲಿ ವಲಸೆ ಕಡೆಗೆ ಗಮನ ಹೆಚ್ಚುತ್ತಲೇ ಇದೆ.

‘ಇಷ್ಟು ದೊರಕಿದರೆ ಮತ್ತಷ್ಟರಾಸೆ... ಇಷ್ಟ ಜೀವನದಾಸೆ... ಕಾಡು ಸುಖವ ಕಾಂಬಾಸೆ’ ಎಂಬ ದಾಸವಾಣಿಯಂತೆ ಮಾನವ ಎಲ್ಲೆಲ್ಲಿ ಜಲ, ಫಲವತ್ತತೆಯ ನೆಲ ಇರುವುದೋ ಅದನ್ನು ಸರಿಸಿ, ಆ ನಾಡಗಳಿಸಿ ನೆಲೆ ನಿಲ್ಲಲು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾನೆ.

ಮಾನವಜನಾಂಗವುಆಫ್ರಿಕಾ ಖಂಡದಿಂದ ವಲಸೆ ಹೋಗಿ ಬೇರೆ ನಾಡು, ನೆಲೆಯನ್ನು ಹಿಡಿದು ನಿಂತಿತು. ಅಂದಿನಿಂದ ಇಂದಿನವರೆಗೂ ಮನುಷ್ಯ ಪ್ರತಿದಿನ ಎಲ್ಲೇ ಇರಲಿ, ಹೇಗೆ ಇರಲಿ ಹೊಟ್ಟೆಪಾಡಿಗಾಗಿ ವಲಸೆ ನಿಂತೇ ಇಲ್ಲ.

ತೊಂಬತ್ತರ ದಶಕದ ನಂತರ ಅಮೆರಿಕಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ, ಆರ್ಥಿಕ ಸುರಕ್ಷೆಗಾಗಿ, ಉತ್ತಮ ಜೀವನ ಶೈಲಿಯ ಬದುಕಿಗಾಗಿ, ಹೊಸದಾರಿ, ಹೊಸ ತಿರುವುಗಳಕನಸಿಗೆ ಸಾಕಾರ ನೀಡಲು ವಲಸೆ ಹೋಗುವವರ ಪ್ರಮಾಣ ಹೆಚ್ಚಾಗಿದೆ. ವಲಸೆ ಹೋಗುವುದನ್ನೂ ಮನುಷ್ಯನ ತ್ರಿಗುಣಗಳಂತೆ ಸತ್ವ, ರಜಸ್, ತಮೋ ಗುಣಗಳಿಗೆ ಹೋಲಿಸಬಹುದು.

ಸಾತ್ವಿಕ ವಲಸಿಗರು, ಉನ್ನತ ವಿದ್ಯಾಭ್ಯಾಸದ ಆಕಾಂಕ್ಷಿತರು, ಪೋಷಕರು, ದೇಗುಲದ ಅರ್ಚಕರು- ಕೆಲಸದ ವೀಸಾದಿಂದ ಕಾನೂನು ಚೌಕಟ್ಟಿನಲ್ಲಿ ಬರುತ್ತಾರೆ. ಅಕ್ರಮ ವಲಸಿಗರು ‘ಗಂಡಾಗುಂಡಿ ಮಾಡಿ ಆದ್ರೂ ಗಡಿಗೆ ತುಪ್ಪ ಕುಡೀಬೇಕು’ ಅನ್ನುವ ಮನೋಭಾವದಿಂದ ಅಕ್ರಮವಾದರೂ ಸರಿ ಹೆಂಗಾದ್ರೂ ಮಾಡಿ ಅಮೆರಿಕಕ್ಕೆ ನುಗ್ಗಿ ಜೀವನದ ದಾರಿ, ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ.

ಅಕ್ರಮ ವಲಸಿಗರು ತಮ್ಮ ಜೀವನವನ್ನೇ ಪಣಕ್ಕಿಟ್ಟು ತಾಯಿ, ತಂದೆ, ಸಂಸಾರ ಎಲ್ಲವನ್ನು ದೂರ ಬಿಟ್ಟು ಭವ್ಯ ಬದುಕಿನ ಕನಸಿನ ಸೌಧದ ಸೈನಿಕನಂತೆ ಅಮೆರಿಕದ ಗಡಿಗೆ ಬಂದು ಆ ದೇಶದೊಳಗೆ ನುಸುಳುವ ಹಾದಿಯನ್ನು ಹಿಡಿಯುತ್ತಾರೆ. ಮಧ್ಯ ಅಮೆರಿಕ ದೇಶಗಳಾದ ಗ್ವಾಟೆಮಾಲಾ, ಹೊಂಡುರಾಸ್, ಎಲ್‌ಸಾಲ್ವಡಾರ್ ಮತ್ತು ಮೆಕ್ಸಿಕೋ ದೇಶಗಳಿಂದ ಸಿಕ್ಕಿ ಬೀಳುವ ಅಕ್ರಮ ವಲಸಿಗರ ಸಂಖ್ಯೆಗೆ ಹೋಲಿಸಿದರೆ ಭಾರತೀಯ ನಾಗರಿಕರ ಸಂಖ್ಯೆ ಕಡಿಮೆಯೇ.

ಸಿಕ್ಕಿ ಬಿದ್ದವರು ನೀಡುವ ಕಾರಣವೂ ಕುತೂಹಲಕರ. ಭಾರತೀಯ ಜಾತಿ ವ್ಯವಸ್ಥೆ, ರಾಜಕೀಯ ಪರಿಸ್ಥಿತಿಯಿಂದ ಆಶ್ರಯ ನಿರೀಕ್ಷಿಸಿ ಇಮಿಗ್ರೇಷನ್ ಜಡ್ಜ್‌ ಮುಂದೆ ತಮ್ಮ ಅಹವಾಲು ಹೇಳಿ ನಿರ್ಣಯಕ್ಕೆ ಕಾಯುತ್ತಾರೆ. ಶೇಕಡ 50ಕ್ಕಿಂತ ಹೆಚ್ಚು ಭಾಗ ಕೇಸ್‌ಗಳು ವಜಾ ಆಗುವ ಸಾಧ್ಯತೆ ಇದ್ದರೂ ‘ಪ್ರಯತ್ನವೇ ಪರಮಾರ್ಥ’ ಎಂಬಂತೆ ಅಮೆರಿಕದ ವ್ಯವಸ್ಥೆಯೊಳಗೆ ಸೇರುವ ಸಂಚಲ್ಲಿ ಒಂದಾಗುತ್ತಾರೆ.

ಉದ್ದೇಶ ಏನೇ ಆದರೂ ಮೂಲತಃ ಅಮೆರಿಕದ ಗಡಿಗೆ ಬಂದು ದೇಶದೊಳಗೆ ಪ್ರವೇಶ ಸಿಕ್ಕಿದರೆ ಕೈಗೆ ಸಿಕ್ಕಿದ ಕೆಲಸ ಮಾಡಿ, ಜೀವನ ಮಾಡೋ ದಾರಿ ಕಾಣೋ ಕನಸಿನ ಬೆನ್ನತ್ತಿ ಬಂದವರೇ ಇರುತ್ತಾರೆ. ಕೆಲಸ ಯಾವುದಾದರೇನು ಮಾಡುವ ಹುಮ್ಮಸ್ಸು ಇರುವ ಈ ಗುಂಪು ಕಾಯಕವೇ ಕೈಲಾಸ ಎಂಬಂತೆ ಭವಿಷ್ಯದ ಬೆಳಕನು ಕಾಣೋ ಆಸೆಯಿಂದ ಕಠಿಣ ಕೆಲಸ ಮಾಡಿ, ಯಶಸ್ಸು ಕಾಣುವ ಬಯಕೆ ಹೊಂದಿರುತ್ತಾರೆ.

ಕೂಲಂಕಷವಾಗಿ ಅಂಕಿ-ಅಂಶ ನೋಡಿದಾಗ ಅಮೆರಿಕದಲ್ಲಿ 2008ರ ಆರ್ಥಿಕ ಹಿಂಜರಿತ ಇದ್ದಾಗ ತುಲನಾತ್ಮಕವಾಗಿ ಅಕ್ರಮ ವಲಸೆ ಕಡಿಮೆ ಆಗಿತ್ತು.

ಆ ನಂತರ ಕ್ರಮೇಣ ಹೆಚ್ಚುತ್ತಿದೆ. ಅಂದರೆ ಆರ್ಥಿಕ ಸ್ಥಿತಿ ಬೆಳೆದಾಗ, ಸ್ಥಿರವಾಗಿ ನಿಂತಾಗ ಡಾಲರ್ ಸೆಳೆತದ ಸುಳಿಗೆ ಸಿಲುಕಿ ಅಕ್ರಮದ ಹಾದಿಯಾದರೂ ಪರವಾಗಿಲ್ಲವೆಂದು ಆರ್ಥಿಕ ಸ್ವಾವಲಂಬನೆಯ ಬಿಡುಗಡೆಯ ಬಯಕೆಯಲ್ಲಿ ಅಮೆರಿಕದ ಒಳಗೆ ನುಸುಳುವಾಗ ಬಂದಿಯಾಗುತ್ತಾರೆ. ಇನ್ನು ಕೆಲವರು ಅದು ಹೇಗೋ ಒಳನುಸುಳಿದ್ದರೂ, ದೇಶದ ಸಕ್ರಮ ವ್ಯವಸ್ಥೆಯ ಕೈಗೆ ಸಿಲುಕಿ ಬಂದಿಯಾಗುತ್ತಾರೆ. ಅಕ್ರಮ ವಲಸಿಗರು ಸಾಮಾನ್ಯವಾಗಿ ಕಡಿಮೆ ಶಿಕ್ಷಣ ಹೊಂದಿದವರು. ಅವರಿವರಿಂದ ಅಮೆರಿದ ದಂತಕಥೆಗಳನ್ನು ಕೇಳಿ, ಜಮೀನು ಮಾರಿಯೋ, ಸಾಲ ಮಾಡಿಯೋ ಹಣ ಕೂಡಿಸಿ, ಪರಿಚಯದವರ ಮೂಲಕ ಸಿನಿಮೀಯ ರೀತಿಯಲ್ಲಿ ಜನರ ಸಾಗಾಣಿಕೆಯ ಜಾಲದ ನೆರವು ಪಡೆಯುತ್ತಾರೆ. ಇದಕ್ಕಾಗಿ 25 ಸಾವಿರದಿಂದ 50 ಸಾವಿರ ಡಾಲರ್‌ ಖರ್ಚು ಮಾಡುತ್ತಾರೆ.

ಸಿಬಿಪಿ ಕೈಲಿ ಸಿಕ್ಕಿ ಬಿದ್ದರೆ ಅಮೆರಿಕದ ಕಾನೂನು ಪ್ರಕಾರ ಬೈಲ್/ ಬಾಂಡ್‌ಗಳನ್ನೂ ಬಳಸಿ ಜೈಲಿನಿಂದ ಬಿಡುಗಡೆ ಹೊಂದುತ್ತಾರೆ. ದೇಶದೊಳಗೆ ಉಳಿದುಕೊಂಡು ಕಾನೂನು ರೀತಿಯಲ್ಲಿ ಹೋರಾಡುತ್ತಾರೆ. ಇಮಿಗ್ರೇಷನ್‌ ಜಡ್ಜ್‌ನ ಕರುಣೆಯಿಂದ ಅಕ್ರಮ ವಲಸಿಗನ ಕೇಸ್ ವಜಾ ಆಗುವ ಆಸೆಯಿಂದ ಕಾಯುತ್ತಾರೆ. ಅಂಕಿ–ಅಂಶಗಳ ಪ್ರಕಾರ ಸುಮಾರು ಶೇ 40ರಷ್ಟಕ್ಕೂ ಹೆಚ್ಚು ಪ್ರಕರಣಗಳು ವಜಾ ಆಗಿವೆಯಂತೆ. ಸಿಬಿಪಿಯ ಕಣ್ಣು ಮರೆಸಿ ದೇಶದೊಳಗೆ ಬಂದರೆ ಅದೇ ಜಯ ಎಂದು ಹಲವರು ಜೀವನದ ದಾರಿ ಹಿಡಿಯುತ್ತಾರೆ. ಈ ಘಟ್ಟದವರೆಗೆ ಬಂದರೆ ತಮ್ಮ ಇನ್ವೆಸ್ಟ್‌ಮೆಂಟ್ ಫಲಕಾರಿಯಾಯಿತೆಂದೇ ಭಾವಿಸುತ್ತಾರೆ.

ಅಮೆರಿಕದೊಳಕ್ಕೆ ನುಸುಳಲು ಯತ್ನಿಸುತ್ತಿರುವ ಮೆಕ್ಸಿಕನ್ ಜನರು
ಅಮೆರಿಕದೊಳಕ್ಕೆ ನುಸುಳಲು ಯತ್ನಿಸುತ್ತಿರುವ ಮೆಕ್ಸಿಕನ್ ಜನರು

ಮನುಷ್ಯನಿಗೆ ನಡೆಯಲು ಕಾಲು ಎಷ್ಟು ಮುಖ್ಯವೋ ಅದೇ ರೀತಿ ಅಮೆರಿಕದಲ್ಲಿ ಜೀವನ ಮಾಡಲು ಕಾರು, ವೆಹಿಕಲ್‌ ಡ್ರೈವಿಂಗ್, ಡ್ರೈವರ್ಸ್‌ ಲೈಸೆನ್ಸ್ ಅಷ್ಟೇ ಅವಶ್ಯಕ. ಅಲ್ಲಿನ 12 ರಾಜ್ಯಗಳಲ್ಲಿ ಡ್ರೈವರ್ಸ್‌ ಲೈಸೆನ್ಸ್ ಅಕ್ರಮ ವಲಸಿಗರಿಗೂ ಸಿಗುತ್ತದೆ!
ಇಲ್ಲಿಂದಲೇ ಅವರ ಜೀವನದ ಗುರಿ ದುಡಿಯೋದು, ಗಳಿಸೋದು, ಉಳಿಸೋದು, ಹಣವನ್ನು ಹುಟ್ಟಿದೂರಿಗೆ ಕಳಿಸೋದು. ಮುಂದುವರಿದಿರುವ ಅಮೆರಿಕದಂತಹ ದೇಶದಲ್ಲಿ ಕಡಿಮೆ ಕೂಲಿಯ ಮಾರುಕಟ್ಟೆ ವ್ಯವಸ್ಥೆ ಒಂದು ರೀತಿಯ ಅಕ್ಷಯ ಪಾತ್ರೆ ಇದ್ದಂತೆ.

8ರಿಂದ 10 ಡಾಲರ್‌ ಮೂಲವೇತನದಿಂದತಿಂಗಳಿಗೆ 3 ಸಾವಿರ ಡಾಲರ್‌. ವಾರ್ಷಿಕವಾಗಿ 36ರಿಂದ 40 ಸಾವಿರ ಡಾಲರ್‌!

ದುಡಿಯೋ ಹುಮ್ಮಸ್ಸು ಇರೋದ್ರಿಂದ ಸಿಕ್ಕಿದ ಕೆಲಸ, ಕಲಿತಿದ್ದ, ನುರಿತ ಕೆಲಸ ಯಾವುದಾದ್ರೂ ಸರಿ! ದಿನಕ್ಕೆ 9ರಿಂದ 11ಗಂಟೆ ಕಾಲ ವಾರಾಂತ್ಯದ ಬಿಡುವು ಇಲ್ಲದೆ ಕೆಲಸ ಮಾಡುತ್ತಾರೆ.
ಹೊಸದನ್ನು ಕಲಿಯೋಕೆ ಉತ್ಸಾಹ ಇರೋದ್ರಿಂದ 40 ಸಾವಿರ ಡಾಲರ್‌ಗೂ ಹೆಚ್ಚು ಗಳಿಸೋ ಸಾಧ್ಯತೆ ಇದೆ. ವಸತಿ, ಊಟ ಬಿಟ್ರೆ ಉಳಿದೆಲ್ಲವನ್ನು ಉಳಿತಾಯ ಮಾಡಿ 2ರಿಂದ 4 ವರ್ಷದಲ್ಲಿ ಇನ್ವೆಸ್ಟ್‌ಮೆಂಟ್‌ನ ಸಾಲ ತೀರಿಸುತ್ತಾರೆ. ಇನ್ನುಳಿದ ವರ್ಷದ ಗಳಿಕೆ ಎಲ್ಲ ಲಾಭ. ಆ ನಂತರ ದೇಶದೊಳಗೆ ಇದ್ದು ಸಬ್ಜೆಕ್ಟ್ ಮ್ಯಾಟರ್ ಎಕ್ಸ್ಪರ್ಟ್ ರೀತಿ ಮುಂಬರುವ ನವ ಕನಸುಗಾರರಿಗೆ ಮಾರ್ಗದರ್ಶಕರಾಗಿ ಬಿಡುತ್ತಾರೆ.

ಇವಾವೂ ಆಗಲಿಲ್ಲ ಅಂದ್ರೆ ಕೆಟ್ಟದಾದ ಕೇಸೊಂದರಲ್ಲಿ ತಾಯ್ನಾಡಿಗೆ ವಾಪಸಾಗುತ್ತಾರೆ.ಎಲ್ಲ ಆರ್ಥಿಕ ಹೂಡಿಕೆಯ ಕೊನೆಯಲ್ಲಿ ಹೇಳುವಂತೆ, ‘ಹೂಡಿಕೆಯ ಮೂಲಕ ಹಣ ಕಳೆದುಕೊಳ್ಳುವ ಅಥವಾ ಖರೀದಿಸುವ ಶಕ್ತಿ ಕಳೆದುಕೊಳ್ಳುವ ಅಪಾಯವನ್ನು ನೀವು ಎದುರಿಸಬೇಕಾಗುತ್ತದೆ’ ಎನ್ನುವ ಮಾತಿಗೆ ಅವರು ಅನ್ವರ್ಥವಾಗುತ್ತಾರೆ.ಅಕ್ರಮ ವಲಸಿಗರು ಜೀವನವನ್ನೇ ರಿಸ್ಕ್ ಮಾಡಿ ಅಮೆರಿಕಕ್ಕೆ ಬರುವ ಭಗೀರಥ ಯತ್ನ ಮಾಡ್ತಾರೆ. ಕಾಣದ ಸುಖದ ಬೆನ್ನೇರಿ ಜೀವನವನ್ನೇ ಪಣವಾಗಿಡುತ್ತಾರೆ.
ಈ ಅಕ್ರಮ ವಲಸೆಯ ಸಮಸ್ಯೆ ಸುಮಾರು ವರ್ಷಗಳಿಂದ ಇದ್ದರೂ ಸಂಪೂರ್ಣ ಪರಿಹಾರ ಕಂಡಿಲ್ಲ ಏಕೆ? ಅಕ್ರಮ ವಲಸಿಗರು ದಾಖಲೆರಹಿತ ಕಾರ್ಮಿಕರ ಪಂಗಡದಲ್ಲಿ ಸೇರುತ್ತಾರೆ.

ಮೂಲತಃ ಅಮೆರಿಕ ವಲಸಿಗರ ದೇಶವಾದ್ದರಿಂದ ದಾಖಲೆರಹಿತ ಜನರಿಗೂ ಸಂವಿಧಾನ ಅನ್ವಯಿಸುತ್ತದೆ. ಆದರೆ ಹಲವಾರು ಕಡೆಯ ನೀತಿ, ನಿಯಮ, ಕಾಯಿದೆಯಲ್ಲಿ ನಾಗರಿಕ- ಸಿಟಿಜನ್ ಮಾತ್ರ ಎಂಬ ಸಂಬೋಧನೆ ಇಲ್ಲದೆ ದೇಶದ ನಿವಾಸಿ/ ದೇಶದ ಜನ ಎಂದೇ ಸಂಬೋಧಿಸಲಾಗಿದೆ. ಹಾಗಾಗಿ ಸಂವಿಧಾನದ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕುಮುಂತಾದವು ಅಲ್ಲಿನ ನಾಗರಿಕರು ಮತ್ತು ನಾಗರಿಕರಲ್ಲದವರಿಗೂ ಒಂದೇ ಆಗಿವೆ. ಈ ಗ್ರೇ ಏರಿಯಾ ಇರೋದ್ರಿಂದ ಹಾಗೂ ಅಮೆರಿಕ ಆರ್ಥಿಕ ವ್ಯವಸ್ಥೆ ಗಟ್ಟಿ ಇರೋ ತನಕ ಬಹುಶ ಅಕ್ರಮ ವಲಸೆಯ ಬಯಲು ದಾರಿ ಡ್ರೋನ್, ರೋಬೊ ವಿಜಿಲೆನ್ಸ್‌ ಕಾಲದಲ್ಲೂ ನಡೆಯುತ್ತಿದೆ ಹಾಗೂ ಮುಂದೆ ಹಲವು ಕಾಲಗಳ ಕಾಲ ಮುಂದುವರಿಯಬಹುದೇನೋ.

ಒಂದು ಕುತೂಹಲಕಾರಿ ಸಂಗತಿಯನ್ನು ಇಲ್ಲಿ ಗಮನಿಸಬೇಕು. ಮೂಲತಃ ಎಲ್ಲರಿಗೂ ತಿಳಿದಿರುವಂತೆ ಅಮೆರಿಕ ಎನ್ನುವುದು ಯುರೋಪ್‌ನ ವಲಸಿಗರು ಕಟ್ಟಿ ಬೆಳೆಸಿದ ದೇಶ. ಮೊದಲ ಭಾರತೀಯ ವಲಸೆಗಾರ 1776ರಲ್ಲೇ ಅಂದರೆ ಅಮೆರಿಕ ಹುಟ್ಟುತ್ತಿದ್ದ/ ಹುಟ್ಟಿದ ದಿನಗಳಲ್ಲೇ ಇದ್ದ ಎನ್ನುವುದು ಒಂದು ಸಂಶೋಧನೆಯ ಮಾಹಿತಿ. ಈಗ ಅಮೆರಿಕದಲ್ಲಿಭಾರತೀಯ ಮೂಲದ ಜನರು ಆ ದೇಶದ ಜನಸಂಖ್ಯೆಯ ಶೇಕಡ 1.3ರಷ್ಟು ಇದ್ದಾರೆ. ಅಂದರೆ ಇಲ್ಲಿರುವ ಭಾರತೀಯರ ಒಟ್ಟು ಸಂಖ್ಯೆ ಸುಮಾರು 44 ಲಕ್ಷ. ಟ್ರಂಪ್‌ ಸರ್ಕಾರದ ಈಗಿನ ವಲಸೆ ನೀತಿಯನ್ನು ಗಮನಿಸಿದರೆ ಈ ಸಂಖ್ಯೆ ಇನ್ನಷ್ಟು
ಕಡಿಮೆಯಾಗುವುದು ಖಚಿತ. ಅಧಿಕೃತ ವಲಸೆಗೆ ಕಡಿವಾಣ ಬಿದ್ದಷ್ಟೂ ಅಕ್ರಮ ವಲಸಿಗರ ಸಂಖ್ಯೆ ಏರುತ್ತಿರುವುದೂ ಅಷ್ಟೇ ಸತ್ಯ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT