ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಚ್ಚಿದ ಹಣತೆಗೆ ಕವಿದ ಮಂಜು ತಿವಿಯಲು ‘ಮತ್ತೆ ಕಲ್ಯಾಣ’

ಅಕ್ಷರ ಗಾತ್ರ

ಜನರನ್ನೇ ಬೇಡಿ ಹೊಟ್ಟೆ ಹೊರೆದುಕೊಳ್ಳುವ ಕಿರುಕುಳ ದೈವಗಳು ಏನು ಕೊಡಬಲ್ಲವು ಎಂದು ಕೇಳುತ್ತಾ ಪರಿವರ್ತನೆಯ ಕನಸು ಕಾಣುತ್ತಿದೆ ಆ. 1ರಿಂದ ಶುರುವಾಗಲಿರುವ ‘ಮತ್ತೆ ಕಲ್ಯಾಣ’ ಆಂದೋಲನ. ಹೌದು, ಇದರ ಹಿಂದಿರುವ ಹಕೀಕತ್ತಾದರೂ ಏನು?

ಶರಣರು ಸಾಮಾಜಿಕ ಸಮಾನತೆ ನೆಲೆಗೊಳಿಸಲು, ಎಲ್ಲ ರೀತಿಯ ಅನಿಷ್ಟಗಳನ್ನು ನಿವಾರಿಸಲು ಏನೆಲ್ಲ ಪ್ರಯೋಗಗಳನ್ನು ಮಾಡಿದ್ದಾರೆ. ಅವುಗಳತ್ತ ನಾವು ಕಣ್ಣು ಹಾಯಿಸಿ ಅಲ್ಲಿಯ ವಿಚಾರಗಳನ್ನು ಆಚರಣೆಯಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಇಂದಂತೂ ಜನರು ಅನೇಕ ಸಮಸ್ಯೆಗಳಿಂದ ನಲಗುವಂತಾಗಿದೆ. ಅದರಲ್ಲೂ ಬಹುಬೇಡಿಕೆಯಲ್ಲಿರುವ ದೃಶ್ಯಮಾಧ್ಯಮಗಳು ಜನರ ಬದುಕನ್ನೇ ಕಿತ್ತುಕೊಳ್ಳುತ್ತಿವೆ. ಅಲ್ಲಿ ಬರುವ ಧಾರಾವಾಹಿಗಳಾಗಲಿ, ಜ್ಯೋತಿಷಿಗಳ ಮಾತುಗಳಾಗಲಿ, ಜಾಹೀರಾತುಗಳಾಗಲಿ ವ್ಯಕ್ತಿತ್ವದ ವಿಕಾಸಕ್ಕೆ ನೆರವಾಗುತ್ತಿಲ್ಲ. ಬದಲಾಗಿ ಕೊಳ್ಳುಬಾಕತನ ಬೆಳೆಸುತ್ತಿವೆ, ಆದರ್ಶಗಳನ್ನು ಗಾಳಿಗೆ ತೂರುವಂತೆ ಪ್ರೇರೇಪಿಸುತ್ತಿವೆ. ಮನೋವಿಕಲತೆಗೆ ಕಾರಣವಾಗುತ್ತಿವೆ. ಈ ನೆಲೆಯಲ್ಲಿ ಮತ್ತೆ ನಾವು ಶರಣರ ವಿಚಾರಗಳತ್ತ ಹೊರಳುವ ಅಗತ್ಯವಿದೆ.

ಶರಣರದು ಸಕಾರಾತ್ಮಕ ಚಿಂತನೆ, ಅವರ ಪ್ರೇರಣೆಯನ್ನು ಮನುಕುಲಕ್ಕೆ ತಿಳಿಸುವ ಜರೂರಿದೆ. ಬಸವಾದಿ ಶರಣರು, ದಾಸರು, ತತ್ತ್ವಪದಕಾರರು, ಜನಪದರು ಮಾನವತೆಯ ಮಹತಿಯನ್ನು ಎತ್ತಿಹಿಡಿದು ದಾರಿದೀಪವಾಗಿದ್ದಾರೆ. ಹಚ್ಚಿದ ಹಣತೆಗೆ ಕೆಲಕಾಲದಲ್ಲಿ ಮಂಕು ಕವಿದಾಗ ಬೆಳಕು ಮಂದವಾಗುವುದು. ಮಂಕು ತಿವಿದರೆ ಹಣತೆ ದೇದೀಪ್ಯಮಾನವಾಗಿ ಬೆಳಕನ್ನು ನೀಡುತ್ತದೆ. ಇಂದು ಆಗಬೇಕಾದ ಕೆಲಸ ಮಾನವತೆಯೆಂಬ ಹಣತೆಗೆ ಅಂಟಿದ ಸಂಕುಚಿತತೆ, ಅಹಂಕಾರ, ಜಾತೀಯತೆಗಳೆಂಬ ಮಂಕಿಗೆ ಸಮತೆಯೆಂಬ ಕೋಲಿನಿಂದ ತಿವಿಯುವುದು. ಆಗ ಮಹಾಮಾನವತೆಯ ಬೆಳಕು ದೇದೀಪ್ಯಮಾನವಾಗಿ ಹೊರಗಣ್ಣಲ್ಲದೆ ಒಳಗಣ್ಣನ್ನೂ ತೆರೆಯುತ್ತದೆ.

ಬಸವಣ್ಣನವರು ಜನರ ಬದುಕನ್ನು ಬದಲಾಯಿಸಲು ಲೋಕದ ದೋಷಗಳನ್ನು ತಮ್ಮ ಮೇಲೆಯೇ ಆರೋಪಿಸಿಕೊಳ್ಳುವರು. ‘ಭಕ್ತಿಯಿಲ್ಲದ ಬಡವ ನಾನಯ್ಯಾ: ಕಕ್ಕಯ್ಯನ ಮನೆಯಲು ಬೇಡಿದೆ, ಚೆನ್ನಯ್ಯನ ಮನೆಯಲು ಬೇಡಿದೆ, ದಾಸಯ್ಯನ ಮನೆಯಲು ಬೇಡಿದೆ. ಎಲ್ಲ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.’ ಶರಣ ಶರಣೆಯರೆಲ್ಲ ಬಸವಣ್ಣನವರನ್ನು ‘ಭಕ್ತಿಭಂಡಾರಿ’ ಎಂದು ಗೌರವಿಸಿದ್ದಾರೆ. ಆದರೆ, ಬಸವಣ್ಣನವರು ಹೇಳುವುದು ‘ಭಕ್ತಿಯಿಲ್ಲದ ಬಡವ ನಾನು’ ಎಂದು. ‘ನನ್ನ ಭಕ್ತಿಯ ಬಡತನ ನಿವಾರಣೆ ಮಾಡಿಕೊಳ್ಳಲು ಕಕ್ಕಯ್ಯ, ಚೆನ್ನಯ್ಯ, ದಾಸಯ್ಯ ಮುಂತಾದ ಪುರಾತನರಲ್ಲಿ ಭಿಕ್ಷೆ ಬೇಡಿದೆ. ಅವರು ನನ್ನ ಪಾತ್ರೆಗೆ ಭಕ್ತಿಯ ಭಿಕ್ಷೆ ನೀಡಿದ್ದರಿಂದ ಎನ್ನ ಪಾತ್ರೆ ತುಂಬಿತ್ತು’ ಎನ್ನುವರು. ಎಂಥ ಹೃದಯವಂತಿಕೆ!

ಬಹುತೇಕ ಜನರು ಸಂಪತ್ತಿಲ್ಲದೆ ಬಡವ ಎಂದರೆ ಬಸವಣ್ಣನವರು ಭಕ್ತಿಯಿಲ್ಲದ ಬಡವ ಎನ್ನುವರು. ಇದೇ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಇಲ್ಲಿ ಕಕ್ಕಯ್ಯ, ಚೆನ್ನಯ್ಯ, ದಾಸಯ್ಯ ಎಷ್ಟು ಶ್ರೇಷ್ಠರು ಎಂದು ತೋರಿಸುವ, ತನ್ಮೂಲಕ ಮೇಲು ಕೀಳು ಎನ್ನುವ ಭಾವನೆಯನ್ನು ನಿವಾರಿಸುವ ಒಳ ತುಡಿತವೂ ಇದೆ. ‘ಎನ್ನ ತಪ್ಪು ಅನಂತಕೋಟಿ ನಿಮ್ಮ ಸೈರಣೆಗೆ ಲೆಕ್ಕವಿಲ್ಲ’ ಎನ್ನುತ್ತಲೇ ವ್ಯಕ್ತಿತ್ವದ ವಿಕಾಸಕ್ಕೆ ಬೇಕಾದ ದಾರಿಯನ್ನು ಸೂಚಿಸುವರು. ನಾನು ಎನ್ನುವುದೇ ಎಲ್ಲ ಅಪಾಯಗಳಿಗೆ ಕಾರಣ. ಅದಕ್ಕಾಗಿ ಬಸವಣ್ಣನವರು ಹೇಳುವುದು: ಕಾಗೆ ಕೂತು ಹೊಲಸು ಮಾಡುವ ದೇವಸ್ಥಾನದ ಕಳಸವಾಗುವ ಬದಲು ಶರಣರು ಮೆಟ್ಟುವ ಚಮ್ಮಾವುಗೆಯ ಮಾಡು ಎಂದು. ಅವರಿಗೆ ಮೇಲಾಗುವುದರಲ್ಲಿ ಸಂತೋಷವಿಲ್ಲ. ಕೀಳಾಗುವಲ್ಲೇ ಸಂತೋಷ. ಹೊಗಳಿಕೆ ಹೊನ್ನ ಶೂಲ. ದೇವರೇ ನನಗೆ ಒಳ್ಳೆಯದನ್ನು ಮಾಡುವುದಾದರೆ ಎನ್ನ ಹೊಗಳತೆಗೆ ಅಡ್ಡ ಬಾ ಎಂದು ಬೇಡಿಕೊಳ್ಳುವರು. ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ವಿನಯವಂತಿಕೆ ಅವರದು. ಇಂಥ ಕಿಂಕರ ಮನೋಭಾವದಿಂದಲೇ ವ್ಯಕ್ತಿ ದೊಡ್ಡವನಾಗಲು ಸಾಧ್ಯ.

ಇಂದಂತೂ ವಿದ್ಯಾವಂತ-ಅವಿದ್ಯಾವಂತ, ಬಡವ-ಶ್ರೀಮಂತ, ಹೆಣ್ಣು-ಗಂಡು, ಸ್ವಾಮಿ-ಭಕ್ತ ಎನ್ನದೆ ಎಲ್ಲರೂ ಮೂಢನಂಬಿಕೆಗಳ ದಾಸರಾಗುತ್ತಿರುವುದನ್ನು ಕಾಣುತ್ತಲಿದ್ದೇವೆ. ಎದ್ದರೆ ಬಿದ್ದರೆ ದೇವರ ಅಪ್ಪಣೆ ಕೇಳುವುದು, ಜ್ಯೋತಿಷಿಗಳ ಬಳಿ ಹೋಗುವುದು, ಹೊತ್ತಿಗೆ, ಗಿಳಿಶಾಸ್ತ್ರ, ಹೋಮ ಇತ್ಯಾದಿ ಅತಿಯಾಗಿವೆ. ಅದರಲ್ಲೂ ರಾಜಕಾರಣಿಗಳು ತಮ್ಮ ಸೋಲು-ಗೆಲುವುಗಳಿಗೆ ತಾವು ಮಾಡುವ ಪೂಜೆ, ಹೋಮಾದಿ ಕ್ರಿಯೆಗಳೇ ಕಾರಣ ಎನ್ನುವ ಭ್ರಮೆಯಲ್ಲಿದ್ದಾರೆ. ಅವರಿಗೆ ಅಮೂಲ್ಯ ಮತ ನೀಡಿ ಆಯ್ಕೆ ಮಾಡುವ ಇಲ್ಲವೇ ಸೋಲಿಸುವ ಮತದಾರ ಮುಖ್ಯವಲ್ಲ. ಸರ್ಕಾರದ ಹಣದಲ್ಲೇ ಮೌಢ್ಯಗಳನ್ನು ಪ್ರಸಾರ ಮಾಡುವ ಗುತ್ತಿಗೆ ಹಿಡಿದಂತೆ ಅನೇಕ ರಾಜಕಾರಣಿಗಳು ವರ್ತಿಸುವರು. ಅಂಥವರು ಸ್ವಲ್ಪವಾದರೂ ವಚನ ಸಾಹಿತ್ಯದ ಪರಿಚಯ ಮಾಡಿಕೊಂಡರೆ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಲು ಸಾಧ್ಯ.

ಗಿಳಿಗೆ ತನ್ನ ಭವಿಷ್ಯವೇ ಗೊತ್ತಿಲ್ಲ. ಅದು ಬೇರೆಯವರ ಭವಿಷ್ಯ ಹೇಳಲು ಸಾಧ್ಯವೇ? ಅದನ್ನೇ ಬಸವಣ್ಣನವರು ‘ಗಿಳಿಯೋದಿ ಫಲವೇನು? ಬೆಕ್ಕು ಬಹುದ ಹೇಳಲರಿಯದು’ ಎಂದು ಅರಿವಿನ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. ಮರ ಸುತ್ತುವ, ತೀರ್ಥಕ್ಷೇತ್ರಗಳಲ್ಲಿ ಮುಳುಗುವ ಮೂಢರಿಗೆ ಬತ್ತುವ ಜಲ, ಒಣಗುವ ಮರವನ್ನು ನಂಬಿದವರು ಶಿವ ಚೇತನವನ್ನು ನಂಬಲು ಸಾಧ್ಯವೇ ಎಂದು ಪ್ರಶ್ನಿಸುವರು. ಸ್ಥಾವರ ದೇವರುಗಳ ಶಕ್ತಿ ಏನೆಂಬುದನ್ನು ಶರಣರು ಅನೇಕ ವಚನಗಳಲ್ಲಿ ವಿಡಂಬಿಸಿದ್ದಾರೆ. ಜನರನ್ನೇ ಬೇಡಿ ಹೊಟ್ಟೆ ಹೊರೆದುಕೊಳ್ಳುವ ಕಿರುಕುಳ ದೈವಗಳು ಏನು ಕೊಡಬಲ್ಲವು ಎಂದು ಕೇಳುವರು.

ಜನರಿಗೆ ಧರ್ಮದ ಬಗ್ಗೆ ಸರಿಯಾದ ಅರಿವೇ ಇದ್ದಂತಿಲ್ಲ. ಕ್ರಿಯಾಚರಣೆಗಳೇ ಧರ್ಮವೆಂದು ಏನೆಲ್ಲ ಅವೈಜ್ಞಾನಿಕ ಕಾರ್ಯಗಳನ್ನು ಮಾಡುವರು. ದೇವರು, ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುವುದು ಸಹ ನಿಂತಿಲ್ಲ. ದೇವರಿಗೆ ಕುರಿ, ಕೋಣ, ಕೋಳಿಗಳನ್ನು ಬಲಿ ಕೊಡುವರು. ಅದೇ ನಿಜಧರ್ಮ ಎನ್ನುವ ಭ್ರಮೆಯಲ್ಲಿ ಬಾಳುವರು. ಅದನ್ನು ಕಂಡ ಬಸವಣ್ಣನವರು ಅಂದೇ ಹೇಳಿದ್ದು: ‘ಕುರಿ ಬೇಡ ಮರಿ ಬೇಡ, ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವ’ನ ಎಂದು. ದೇವರಿಗೆ ಕುರಿ, ಮರಿಯ ಬಲಿ ಕೊಡುವುದನ್ನು ಬಲವಾಗಿ ವಿರೋಧಿಸುವರು. ಕೊಂದವರುಳಿವರೆ ಎಂದು ಕೇಳುವರು. ಯಜ್ಞದ ನೆಪದಲ್ಲಿ ಬಲಿ ಕೊಡುವ ಕುರಿಯ ಗೋಳನ್ನು ಕಂಡು ಬಸವಣ್ಣನವರ ಹೃದಯ ಮಮ್ಮಲ ಮರುಗುವುದು. ಆಗ ಅವರು ಹೇಳುವುದು: ವೇದವನೋದಿದವರ ಮುಂದೆ ಅಳು, ಕಂಡಾ! ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ! ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ ಎಂದು.

ಶರಣರು ಧರ್ಮಕ್ಕೆ ದಯೆ ಮೂಲ ಎನ್ನುವರು. ಇಂದಿನ ಬಹುತೇಕ ಧಾರ್ಮಿಕ ಆಚರಣೆಗಳು ಭಯಮೂಲವಾಗಿವೆ. ಅದಕ್ಕಾಗಿಯೇ ‘ದಯದಿಂದ ಬಿಟ್ಟು ಧರ್ಮವಿಲ್ಲ’ ಎಂದು ಸಕಳೇಶ ಮಾದರಸರು ಹೇಳಿದರೆ ಬಸವಣ್ಣನವರು, ‘ದಯವಿಲ್ಲದ ಧರ್ಮವದೇವುದಯ್ಯಾ?’ ಎಂದು ಅದನ್ನು ಇನ್ನಷ್ಟು ಸ್ಪಷ್ಟಪಡಿಸುವರು. ಧರ್ಮಕ್ಕೆ ಮೂಲ ದಯೆ. ಅದು ಕೇವಲ ಮಾನವ ಕುಲದ ಬಗ್ಗೆ ಅಲ್ಲ. ಎಲ್ಲ ಪ್ರಾಣಿಗಳ ಬಗೆಗೂ ದಯೆ ಇರಬೇಕೆಂದು ಪ್ರತಿಪಾದಿಸುವರು. ಶರಣರು ವೇದ, ಶಾಸ್ತ್ರ, ಪುರಾಣ, ಆಗಮಗಳನ್ನು ಒಪ್ಪಿದವರಲ್ಲ. ಅವೆಲ್ಲ ಶಬ್ದ ಜಾಲಗಳು. ಅವುಗಳನ್ನು ನಂಬಿ ಬಳಲಬೇಡ ಎಂದು ಎಚ್ಚರಿಸುವರು ಆದಯ್ಯ, ಬಸವಣ್ಣ, ಅಲ್ಲಮ ಮುಂತಾದವರು. ನಮ್ಮ ಒಡನಾಟ ಸಜ್ಜನರೊಂದಿಗೆ ಮಾತ್ರ ಇರಬೇಕು. ಸತ್ಯವನ್ನು ಆಡದ ಜನರೊಂದಿಗೆ ಬಾಯಿ ಕೂಡ ತೆರೆಯಬಾರದು ಎನ್ನುವರು ಪ್ರಭುದೇವರು. ಸತ್ಯಶುದ್ಧ ಕಾಯಕಕ್ಕೆ ಒತ್ತು ಕೊಡುವರು ಸತ್ಯಕ್ಕ, ಕಾಳವ್ವೆ, ನುಲಿಯ ಚಂದಯ್ಯ ಮುಂತಾದವರು. ಮುಹೂರ್ತ, ಸೋಮವಾರ ಎಂದು ನಂಬಿದವರಲ್ಲ ಶರಣರು. ಚೆನ್ನಬಸವಣ್ಣನವರು ದಿನ ಶ್ರೇಷ್ಠವೋ, ಲಿಂಗ ಶ್ರೇಷ್ಠವೋ ಎಂದು ಕೇಳುತ್ತ ದಿನ ಶ್ರೇಷ್ಠವೆಂದು ಮಾಡುವವರನ್ನು ಪಂಚ ಮಹಾಪಾತಕರು ಎಂದು ಹೀಯಾಳಿಸಿ ಅಂಥವರ ಮುಖ ನೋಡಬಾರದು ಎಂದು ಎಚ್ಚರಿಸಿದ್ದಾರೆ.

ಅರ್ಚನೆ, ಪೂಜೆ ಇತ್ಯಾದಿ ನೇಮವಲ್ಲ. ಪರಧನ, ಪರಸ್ತ್ರೀಗೆ ಆಸೆ ಪಡದಿರುವುದೇ ನಿತ್ಯ ನೇಮ ಎನ್ನುವರು ಸತ್ಯಕ್ಕ. ‘ಅಜ್ಞಾನಿ ಗುರು, ಅಜ್ಞಾನಿ ಶಿಷ್ಯನಿಗೆ ಅನುಗ್ರಹ ಮಾಡುವುದು ಅಂಧಕನ ಕೈ ಅಂಧಕ ಹಿಡಿದಂತೆ, ಈಸು ಬಾರದವನು ನೀರಲ್ಲಿ ಮುಳುಗುವವನನ್ನು ರಕ್ಷಿಸಿದಂತೆ’ ಎಂದು ಅಂಬಿಗರ ಚೌಡಯ್ಯನವರು ಹೇಳುವರು. ‘ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮಾನವಾ’ ಎನ್ನುವುದು ಮೋಳಿಗೆ ಮಾರಯ್ಯನವರ ಸಂದೇಶ. ‘ಕಾಯಕವೆ ಕೈಲಾಸ’ ಎನ್ನುವುದು ಮನಸಂದ ಮಾರಿತಂದೆಯವರ ಅಭಿಪ್ರಾಯ. ಹೀಗೆ ಅರ್ಥಪೂರ್ಣ, ಆದರ್ಶ ಬದುಕಿಗೆ ಬೇಕಾದ ಮೌಲ್ಯಗಳನ್ನೆಲ್ಲ ತಮ್ಮ ವಚನ ಸಾಹಿತ್ಯದಲ್ಲಿ ಕೊಟ್ಟಿದ್ದಾರೆ ಶರಣರು. ಅವರ ವಚನಗಳಲ್ಲಿ ಯಾವ ಸಮಸ್ಯೆಗೆ ಪರಿಹಾರವಿಲ್ಲ ಎಂದು ಪ್ರಶ್ನಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎನ್ನುವ ಉತ್ತರ ತನ್ನಿಂದ ತಾನೇ ಹೊರಹೊಮ್ಮುವುದು. ಈ ದಿಶೆಯಲ್ಲಿ ಶರಣರ ವಚನಗಳನ್ನು ಓದುವ, ಅರ್ಥೈಸುವ, ಅನುಷ್ಠಾನದಲ್ಲಿ ತರುವ ಸಂಕಲ್ಪ ಮಾಡಿದರೆ ಮನುಕುಲ ನೆಮ್ಮದಿಯಿಂದ ಬದುಕಲು ಸಾಧ್ಯ.

ಶರಣರು ಅನುಭವ ಮಂಟಪದ ಮೂಲಕ ಕಾಯಕ ಜೀವಿಗಳ ಸಂಘಟನೆ ಮಾಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಕಾಯಕ ಶ್ರದ್ಧೆಯಿಂದ ವ್ಯಕ್ತಿಗತ ಮತ್ತು ದೇಶದ ಆರ್ಥಿಕ ಸ್ಥಿತಿ ಸುಧಾರಿಸಿತು. ಜಾತ್ಯತೀತ ಸಮಸಮಾಜದ ಕನಸು ನನಸಾಯಿತು. ತರ್ಕಹೀನ ಆಚಾರ-ವಿಚಾರಗಳಿಗೆ ಮೊಳೆ ಜಡಿಯಲಾಯಿತು. ಮೌಢ್ಯಗಳು ಬೆಂಕಿಯಲ್ಲಿ ಬೂದಿಯಾದವು. ಅದೇ ಕೆಲಸ ಇಂದು ನಡೆಯಬೇಕಿದೆ. ಅದಕ್ಕಾಗಿ ನಾವು ಯುವಪೀಳಿಗೆಯತ್ತ ನೋಡಬೇಕಿದೆ. ಯುವಪೀಳಿಗೆಗೆ ಜವಾಬ್ದಾರಿ ಇಲ್ಲ, ಯಾರ ಮಾತನ್ನೂ ಕೇಳುವುದಿಲ್ಲ, ದಿಕ್ಕುತಪ್ಪಿದ್ದಾರೆ ಎಂದೆಲ್ಲ ಆಪಾದನೆಗಳಿವೆ. ಹಾಗಂತ ಅವರಿಗೆ ದಿಕ್ಕು ತೋರಿಸುವ ಕೆಲಸ ಮಾಡಿದ್ದೇವೆಯೇ?

ಪರಿವರ್ತನೆಯ ಕಾರ್ಯ ಫಲಪ್ರದವಾಗುವುದು ಯುವ ಪೀಳಿಗೆಯಿಂದಲೇ. ಹಾಗಾಗಿ `ಮತ್ತೆ ಕಲ್ಯಾಣ' ಅಭಿಯಾನದಲ್ಲಿ ಕಾಲೇಜಿನ ಯುವಪೀಳಿಗೆಯ ಜೊತೆ ಕಲ್ಯಾಣ ಕುರಿತಂತೆ ಸಂವಾದ ನಡೆಸಲಾಗುವುದು. ಸಹಮತ ವೇದಿಕೆಯಿಂದ `ಮತ್ತೆ ಕಲ್ಯಾಣ' ಎನ್ನುವ ಅಭಿಯಾನ ರಾಜ್ಯದ 30 ಜಿಲ್ಲಾ ಕೇಂದ್ರಸ್ಥಾನದಲ್ಲಿ ಆಗಸ್ಟ್ 1 ರಿಂದ 30ರವರೆಗೆ ನಡೆಯುವುದು. ತರಿಕೆರೆಯಲ್ಲಿ ಪ್ರಾರಂಭವಾದ ಈ ಅಭಿಯಾನ ಬಸವಕಲ್ಯಾಣದಲ್ಲಿ ಮುಕ್ತಾಯವಾಗುವುದು. ಇದರ ಉದ್ದೇಶ ಸಾರ್ವಜನಿಕರಲ್ಲಿ, ಯುವಪೀಳಿಗೆಯಲ್ಲಿ ಶರಣರ ವಿಚಾರ-ಆಚಾರ ಕ್ರಾಂತಿಯ ಬೀಜಗಳನ್ನು ಬಿತ್ತುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT