ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಗನ್ನಡ ಕಾವ್ಯದ ಮುಂಗೋಳಿ

Last Updated 23 ಜನವರಿ 2021, 19:30 IST
ಅಕ್ಷರ ಗಾತ್ರ

150 ವರ್ಷಗಳಿಗೂ ಹಿಂದೆ ಜನಿಸಿ (24.1.1870 – 15.2.1901), ‘ಹೊಸಗನ್ನಡ ಕಾವ್ಯದ ಮುಂಗೋಳಿ’ ಎಂದು ಹೊಗಳಿಸಿಕೊಂಡ ನಂದಳಿಕೆ ಲಕ್ಷ್ಮೀನಾರಾಯಣ, ಮುದ್ದಣನೆಂದೇ ಪ್ರಸಿದ್ಧನಾದ ಕವಿ. ಮುದ್ದಣ ಎಂದೊಡನೆ ಇಂದಿಗೂ ಸಾಹಿತ್ಯಾಸಕ್ತರಿಗೆ ನೆನಪಾಗುವುದು ‘ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು’, ‘ಕನ್ನಡಂ ಕತ್ತೂರಿಯಲ್ತೆ’, ‘ಭವತಿ ಭಿಕ್ಷಾಂದೇಹಿ ಎನ್ನುವ ಸಪ್ತಾಕ್ಷರಿ ಮಂತ್ರ’ ‘ಪದ್ಯಂ ವದ್ಯಂ, ಗದ್ಯಂ ಹೃದ್ಯಂ’ ‘ನಾಡಿಗರೊಳೆಲ್ಲರುಂ ಭೋಗಿಗಳ್ ಕುಟಿಲಗಾಮಿಗಳಲ್ತು’ ಮುಂತಾದ ಕನ್ನಡದ ನುಡಿಗಟ್ಟುಗಳು.

‘ರತ್ನಾವತಿ ಕಲ್ಯಾಣ’, ‘ಕುಮಾರ ವಿಜಯ’ ಎಂಬೆರಡು ಯಕ್ಷಗಾನ ಪ್ರಸಂಗಗಳನ್ನೂ ‘ಶ್ರೀ ರಾಮಪಟ್ಟಾಭಿಷೇಕ’, ‘ಅದ್ಭುತ ರಾಮಾಯಣ’ ಮತ್ತು ‘ಶ್ರೀ ರಾಮಾಶ್ವಮೇಧ’ ಎಂಬ ಮೂರು ಖಂಡ ಕಾವ್ಯಗಳನ್ನೂ ಬರೆದು ನಾಡಿನ ಸಾಹಿತ್ಯ ಸಂಪತ್ತನ್ನು ಹೆಚ್ಚಿಸಿದ ಕವಿ ಈತ. ವಿದ್ಯಾಭ್ಯಾಸಕ್ಕೆ ಅನುಕೂಲವಿಲ್ಲದ ಕುಗ್ರಾಮದಲ್ಲಿ ಬಡತನದ ಕುಟುಂಬದಲ್ಲಿ ಜನಿಸಿದರೂ ಓದಿನ ಗುರಿಯೊಂದಿಗೆ ಉಡುಪಿಗೆ ಬಂದ. ವಾರಾನ್ನ ಮಾಡಿಕೊಂಡು ಅಧ್ಯಯನಕ್ಕೆ ನಿಂತರೆ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸವನ್ನೂ ಆತನಿಗೆ ಮುಗಿಸಲಾಗಲಿಲ್ಲ. ತನ್ನ ಶರೀರ ಬಲವನ್ನು ನಂಬಿ ಮದ್ರಾಸಿಗೆ ಹೋಗಿ ತರಬೇತಿ ಪಡೆದು ಕುಸ್ತಿಪಟು ಎನಿಸಿಕೊಂಡು ಬಂದ.

ಉಡುಪಿಯ ಸರ್ಕಾರಿ ಶಾಲೆಯಲ್ಲಿ ಕುಸ್ತಿ ಮಾಸ್ತರನಾಗಿ ಕೆಲಸಕ್ಕೆ ಸೇರಿ ಅಲ್ಲಿಯೇ ಕನ್ನಡ ಅಧ್ಯಾಪಕರಾಗಿದ್ದ ಮಳಲಿ ಸುಬ್ಬರಾಯರ ಪ್ರಭಾವಕ್ಕೆ ಒಳಗಾಗಿ ಕನ್ನಡ ಕಾವ್ಯಗಳನ್ನು ಅಭ್ಯಾಸ ಮಾಡಿದ. ಪ್ರಪ್ರಥಮವಾಗಿ ಯಕ್ಷಗಾನ ಪ್ರಸಂಗಗಳಾದ ‘ರತ್ನಾವತಿ ಕಲ್ಯಾಣ’ ಮತ್ತು ‘ಕುಮಾರ ವಿಜಯ’ ಎಂಬ ಎರಡು ಪುಸ್ತಕಗಳನ್ನು ಬರೆದ. ಆದರೆ, ಅದನ್ನು ಪ್ರಕಟಿಸಲು ಯಾರೂ ಸಿಗಲಿಲ್ಲವಾದ್ದರಿಂದ ಮುದ್ದಣನೇ ಸ್ವಂತ ವೆಚ್ಚದಿಂದ ಮುದ್ರಿಸಿದ. ಅವುಗಳು ಖರ್ಚಾಗದೇ ಮನೆಯಲ್ಲಿ ಉಳಿದಿದ್ದನ್ನು ಕಂಡು ನೊಂದಿದ್ದ.

ಮುದ್ದಣ ಹುಟ್ಟುಕವಿ, ಸದಾ ತನ್ನ ಬರಹಗಳಲ್ಲಿ ಹೊಸತನವನ್ನು ಬಿಂಬಿಸುತ್ತಿದ್ದ ಕವಿ. ಅದರಿಂದಾಗಿಯೇ ರಾಮಾಯಣದ ಕಥೆಗೆ ಮೂರು ಹೊಸರೂಪಗಳನ್ನು ಕೊಟ್ಟು ಮೂರು ಕೃತಿ ರತ್ನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ.

ಮೊದಲು ರಚಿಸಿದ ‘ಅದ್ಭುತ ರಾಮಾಯಣ’ ಗ್ರಂಥವನ್ನು ಪ್ರಕಟಣೆ ಕೋರಿ ಎಲ್ಲಿಗೆ ಕಳಿಸಬೇಕೆಂಬ ಪ್ರಶ್ನೆ ಎದುರಾದಾಗ ಸುಬ್ಬರಾಯರು ಸಲಹೆ ಮಾಡಿದ್ದೇ ಕಾವ್ಯಮಂಜರಿ. ಆಗ ಮೈಸೂರಿನಲ್ಲಿ ರಾಮಾನುಜಯ್ಯಂಗಾರರೂ ಎಸ್.ಜಿ. ನರಸಿಂಹಾಚಾರ್ಯರೂ ಸೇರಿ ಕನ್ನಡ ಕಾವ್ಯಮಂಜರಿ ಎನ್ನುವ ಪುಸ್ತಕಮಾಲೆ ನಡೆಸುತ್ತಿದ್ದರು. ಅಲ್ಲಿಗೆ ಕಳಿಸುವಾಗ ಮುದ್ದಣನಿಗೆ ಅಳುಕಿತ್ತು. ಏಕೆಂದರೆ ಯಾವುದೇ ಪಾಂಡಿತ್ಯ ಬಲವಿಲ್ಲದ ತನ್ನಂಥವನು ಇಂತಹ ಗ್ರಂಥವನ್ನು ಬರೆದನೆಂದರೆ ಯಾರೂ ನಂಬಲಾರರು ಎಂದು. ಆಗ ಸುಬ್ಬರಾಯರು ‘ಈ ಗ್ರಂಥ ಪ್ರಕಟವಾಗುವುದಕ್ಕೆ ಒಂದು ಉಪಾಯ ಇದೆ. ಇದು ಹಳೆಯ ಪುಸ್ತಕ ಸಂಗ್ರಹದಲ್ಲಿ ದೊರಕಿದ ಕೃತಿ. ಲೇಖಕರು ಯಾರೋ ತಿಳಿಯದು. ಇದು ನನಗೆ ಸಿಕ್ಕಿದ ಗ್ರಂಥ, ನಕಲು ಮಾಡಿ ಕಳಿಸಿದ್ದೇನೆ. ಯೋಗ್ಯವಾಗಿದೆ ಎನ್ನಿಸಿದರೆ ಪ್ರಕಟಿಸಿ ಎಂಬ ಟಿಪ್ಪಣಿಯೊಂದಿಗೆ ಕಾವ್ಯಮಂಜರಿಗೆ ಕಳಿಸಿ’ ಎಂದು ಸಲಹೆ ಕೊಟ್ಟರು. ಸದ್ಯ ತನ್ನ ಗ್ರಂಥ ಪ್ರಕಟವಾದರೆ ಸಾಕು ಅನಿಸಿದ್ದರಿಂದ ಈ ಸಲಹೆಗೆ ಮುದ್ದಣ ಒಪ್ಪಿದ.

ಕೆಲವು ದಿನಗಳಲ್ಲಿ ಅಲ್ಲಿಂದ ‘ಕಾವ್ಯ ಚೆನ್ನಾಗಿದೆ. ಕವಿಯ ಹೆಸರು ಗೊತ್ತಿದ್ದರೆ ತಿಳಿಸಿ’ ಎಂದು ಓಲೆ ಬಂದಾಗಲೂ ಮುದ್ದಣ ತನ್ನ ಹೆಸರು ಬಹಿರಂಗಗೊಳಿಸಲಿಲ್ಲ. ಒಂದು ಸಾರಿ ನನ್ನದಲ್ಲ ಅಂದಮೇಲೆ ಅದನ್ನು ಈಗ ನನ್ನದು ಎಂದು ಹೇಳುವುದು ಸರಿಯಲ್ಲ ಅಂದುಕೊಂಡ. ಆದರೆ ಕವಿಯೆಂದು ಕರೆದುಕೊಳ್ಳಲಾರದಂಥ ಸ್ಥಿತಿಗೆ ತನ್ನನ್ನು ತಾನು ಒಡ್ಡಿಕೊಂಡು ಯಾರೋ ಬರೆದ ಕೃತಿಗಳೆಂದು ಮೈಸೂರಿನಿಂದ ಪ್ರಕಟವಾಗುತ್ತಿದ್ದ ಕಾವ್ಯಮಂಜರಿ ಪತ್ರಿಕೆಯಲ್ಲಿ ಅಚ್ಚು ಕಂಡಾಗ ಒಳಗೊಳಗೇ ದುಃಖಿಸಿದ್ದು ಹೆಚ್ಚು. ‘ಅದ್ಭುತ ರಾಮಾಯಣ’ ಮುದ್ದಣನ ಹೆಸರಿಲ್ಲದೇ 1896ರಲ್ಲಿ ಪ್ರಕಟಗೊಂಡಿತು.

ಮುಂದೆ ಮುದ್ದಣ ರಚಿಸಿದ ‘ಶ್ರೀರಾಮ ಪಟ್ಟಾಭಿಷೇಕ’ ಗ್ರಂಥಕ್ಕೆ ತನ್ನ ತಾಯಿ ಮಹಾಲಕ್ಷ್ಮಿ ಹೆಸರು ಇಟ್ಟ. ಅದನ್ನೂ ಕಾವ್ಯಮಂಜರಿಗೇ ಕಳಿಸಿ, ‘ಈ ಬಾರಿ ಇದು ಯಾರೋ ಮಹಾಲಕ್ಷ್ಮಿ ಎನ್ನುವವರು ರಚಿಸಿರುವ ಕೃತಿ. ಇದು ನನ್ನ ಕೈಗೆ ಸಿಕ್ಕಿದೆ. ಸೂಕ್ತ ಅನಿಸಿದರೆ ಪ್ರಕಟಿಸಿ’ ಎಂದು ಬರೆದ. ಕಾವ್ಯಮಂಜರಿಯವರು ಎರಡೂ ಕೃತಿಗಳ ಕೈ ಬರಹಗಳು ಒಂದೇ ರೀತಿ ಇದ್ದುದನ್ನು ಗುರುತಿಸಿ, ನಮಗೆ ಸರಿಯಾದ ವಿವರ ಕೊಡಿ ಈ ಎರಡೂ ನೀವೇ ಬರೆದ ಗ್ರಂಥಗಳೇ ಅಂತ ಕೇಳಿದಾಗಲೂ ಮುದ್ದಣ ನಿಜ ಹೇಳಲು ಹಿಂದೇಟು ಹಾಕಿದ. ‘ಶ್ರೀರಾಮ ಪಟ್ಟಾಭಿಷೇಕ’ವೂ 1897ರಲ್ಲಿ ಪ್ರಕಟವಾಯಿತು. ಎರಡೂ ಗ್ರಂಥಗಳು ಪ್ರಕಟವಾದಾಗ ಸಂತಸಪಟ್ಟ.

‘ಈಗಲಾದರೂ ಆ ಎರಡೂ ಕೃತಿಗಳು ನಿಮ್ಮವು ಎಂದು ಹೇಳಿ. ಅದರಿಂದ ಬರುವ ಪ್ರಶಂಸೆ ಮತ್ತು ಹಣ ನಿಮಗೆ ಸೇರಲಿ’ ಎಂದು ಸುಬ್ಬರಾಯರು ಸಲಹೆ ಕೊಟ್ಟರು. ‘ಮೊದಲು ನನ್ನವಲ್ಲ ಎಂದು ಹೇಳಿ, ಅವು ಯಶಸ್ವಿಯಾದ ಮೇಲೆ ನನ್ನವು ಅಂತ ಹೇಳಿಕೊಂಡರೆ ಚೆನ್ನಾಗಿರೋದಿಲ್ಲ’ ಎಂದು ತನ್ನ ಮೊದಲಿನ ಸಿದ್ಧಾಂತಕ್ಕೇ ಅಂಟಿಕೊಂಡ. ಆ ಎರಡೂ ಕೃತಿಗಳು ಮದ್ರಾಸು ವಿಶ್ವವಿದ್ಯಾನಿಲಯದ ಎಫ್.ಎ. ಪರೀಕ್ಷೆಗೆ ಪಠ್ಯವಾಗಿ ನಿಯುಕ್ತವಾದವು. ಗ್ರಂಥಕರ್ತೃ ಯಾರೆಂದು ನಿಖರವಾಗಿ ತಿಳಿದಿಲ್ಲದಿದ್ದರಿಂದ ಸಂಭಾವನೆ ಯಾರಿಗೂ ಹೋಗಲಿಲ್ಲ. ಲಕ್ಷ್ಮೀನಾರಾಯಣ ಇದರಿಂದಲೂ ವಂಚಿತನಾದ.

ಎರಡೂ ಪುಸ್ತಕಗಳನ್ನು ಪಂಜೆ ಮಂಗೇಶರಾಯರು ಓದಿ ಮೆಚ್ಚಿದ್ದು ಸಂತಸದ ಸಂಗತಿ. ಮುಂದೆ 1895ರಲ್ಲಿ ಇದೇ ಮಂಗೇಶರಾಯರೂ ಮುದ್ದಣನೂ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ 20 ರೂಪಾಯಿ ಸಂಬಳದ ಕನ್ನಡದ ಅಧ್ಯಾಪಕರ ಹುದ್ದೆಗೆ ಅರ್ಜಿದಾರರು. ಇಂಗ್ಲಿಷ್ ಬರುತ್ತಿದೆ ಎನ್ನುವ ಕಾರಣಕ್ಕೆ ಪಂಜೆ ಮಂಗೇಶರಾಯರಿಗೆ ಆ ಕೆಲಸ ಸಿಕ್ಕಿತು. ಲಕ್ಷ್ಮೀನಾರಾಯಣ ನಿರಾಸೆಯಿಂದ ತನ್ನ ಹಿಂದಿನ ಉದ್ಯೋಗಕ್ಕೇ ಬಂದ. ಆಗ ಪಂಜೆ ಮಂಗೇಶರಾಯರು, ಲಕ್ಷ್ಮೀನಾರಾಯಣ ಈ ಹುದ್ದೆಗೆ ಆಯ್ಕೆ ಆಗದಿದ್ದುದರ ಕುರಿತು ‘ಭತ್ತದ ಸಿಪ್ಪೆಯನ್ನು ಕುಟ್ಟುವ ಒನಕೆಯನ್ನು ಕನ್ನಡ ಬರಹವನ್ನು ಬರೆಸುವುದಕ್ಕೆ ತಂದರು, ಚಿತ್ರ ಬಿಡಿಸುವ ಬಣ್ಣದ ಗರಿಯನ್ನು ಕಿವಿಯ ತುರಿಕೆಗೆ ಕುಗ್ಗೆ ಕಡ್ಡಿಯನ್ನಾಗಿ ಮಾಡಿದರು’ ಎಂದು ಹೇಳಿದ್ದರಂತೆ. ಪಂಜೆ ಮಂಗೇಶರಾಯರ ಬಳಿ ಮೂರೂ ಕೃತಿಗಳನ್ನು ರಚಿಸಿದ್ದು ತಾನೇ ಎಂದು ಮುದ್ದಣ ಒಪ್ಪಿಕೊಂಡಿದ್ದ. ಈ ಮಾತಿಗೆ ಸಾಕ್ಷಿಯಾಗಿ ಸುಬ್ಬರಾಯರೂ ದನಿಗೂಡಿಸಿದ್ದರು.

ಲಕ್ಷ್ಮೀನಾರಾಯಣನ ಮನೆ ಮತ್ತು ಮನವನ್ನು ಬೆಳಗಿದವಳು ಕಮಲಮ್ಮ. ಶಿವಮೊಗ್ಗದ ಬಳಿಯ ಕಾಗೆಕೋಡಮಗ್ಗಿ ಎನ್ನುವ ಗ್ರಾಮದ ಹೆಣ್ಣು. ಇವಳೇ ಮುಂದೆ ಮನೋರಮೆಯಾಗಿ ‘ಶ್ರೀರಾಮೇಶ್ವಮೇಧ’ ಕಾವ್ಯದ ಜೊತೆಜೊತೆಗೆ ಕಾಣಿಸಿಕೊಂಡಿದ್ದಾಳೆ. ಕೆಲವು ಕಾಲದ ನಂತರ ಮನೆಯಲ್ಲಿ ಮಗುವಿನ ಜನನ. ಅದರಿಂದಾಗಿ ಖರ್ಚು ಹೆಚ್ಚು. ದುಡ್ಡಿಗೆ ಬರ. ಬಡತನದ ಸಂಸಾರ. ತಿಂಗಳ ಕೊನೆಯಲ್ಲಿ ಅಲ್ಲಲ್ಲಿ ಕೈ ಚಾಚುವ ಪರಿಸ್ಥಿತಿ.

ಮುದ್ದಣ ಬರಹಕ್ಕೆ ಉಪಯೋಗಿಸುತ್ತಿದ್ದುದು ಶಾಲೆಯಲ್ಲಿ ಮಕ್ಕಳು ಹಾಳೆಯ ಒಂದು ಬದಿಯಲ್ಲಿ ಮಾತ್ರ ಉತ್ತರ ಪತ್ರಿಕೆ ಬರೆದಿದ್ದ ಹಾಳೆಗಳು. ಇನ್ನೊಂದು ಬದಿ ಖಾಲಿಯಿದ್ದ ಹಾಳೆಗಳಲ್ಲಿ ಅವನ ಕಾವ್ಯರಚನೆ ಸಾಗಿತ್ತು. ಮುಂದಿನ ಕಾವ್ಯ ‘ಶ್ರೀರಾಮೇಶ್ವಮೇಧ’ ಬರೆದಾಗ ಅದಕ್ಕೆ ಮುದ್ದಣ ಎಂದು ಹೆಸರಿಟ್ಟ. ಚಿಕ್ಕಂದಿನಲ್ಲಿ ಕಸರತ್ತು ಮಾಡಿ ಮೈ ಕೈ ತುಂಬಿಕೊಂಡಿರುತ್ತಿದ್ದ ಲಕ್ಷ್ಮೀನಾರಾಯಣನನ್ನು ಮನೆಯಲ್ಲಿ ಮುದ್ದ ಮುದ್ದಣ ಎಂದು ಕರೆಯುತ್ತಿದ್ದರು. ಅದೇ ಹೆಸರನ್ನು ತನ್ನ ಕಾವ್ಯನಾಮವಾಗಿ ಬಳಸಿ ರಚಿಸಿದ.

ಗಂಡ ಹೆಂಡತಿಯರ ನಡುವಿನ ಸಂಭಾಷಣೆಯಲ್ಲಿ ಕಥೆ ಸಾಗುವ ವಿಶಿಷ್ಟ ಶೈಲಿಯನ್ನು ಮುದ್ದಣ ಇಲ್ಲಿ ಪ್ರಯೋಗಿಸಿದ. ತನ್ನನ್ನು ಮುದ್ದಣ ಎಂದು ಕರೆದುಕೊಂಡು ತನ್ನ ಹೆಂಡತಿಯನ್ನು ಮನೋರಮೆಯನ್ನಾಗಿಸಿ ಕಥೆಗೆ ಚಾಲನೆಕೊಟ್ಟ. ಇಡೀ ರಾಮೇಶ್ವಮೇಧ ಕಾವ್ಯದಲ್ಲಿ ಒಂದು ಕಡೆ ರಾಮೇಶ್ವಮೇಧದ ಕಥೆ ವಿಜೃಂಬಿಸಿದರೆ, ಮತ್ತೊಂದೆಡೆ ದಂಪತಿಯ ಸರಸ ಸಂಭಾಷಣೆಗಳ ಜೊತೆಜೊತೆಗೆ ಕಥೆ ಮುಂದುವರೆಯುತ್ತದೆ. ಇದರಿಂದಾಗಿ ಕಾವ್ಯ ಕುತೂಹಲದಿಂದ ಓದಿಸಿಕೊಳ್ಳುವ ಗುಣ ಹೆಚ್ಚಿಸಿಕೊಂಡಿದೆ. ಶ್ರೀ ರಾಮೇಶ್ವಮೇಧ ಕಾವ್ಯ ಬರೆದು ಮುಗಿಸಿದ ಮೇಲೆ ಮತ್ತೊಂದು ಪ್ರಶ್ನೆ ಎದುರಾಯಿತು. ಇದನ್ನು ಎಲ್ಲಿಗೆ ಕಳಿಸುವುದು ಅಂತ. ಅಷ್ಟೊತ್ತಿಗೆ ಮೈಸೂರಿನಿಂದ ಪ್ರಕಟವಾಗುತ್ತಿದ್ದ ಕಾವ್ಯಮಂಜರಿ ಆರ್ಥಿಕ ಕಾರಣಗಳಿಂದಾಗಿ ಮುಚ್ಚಿತ್ತು. ಆದರೆ, ಕೆಲವು ತಿಂಗಳುಗಳ ನಂತರ ರಾಮಾನುಜಯ್ಯಂಗಾರರೂ ಮತ್ತು ನರಸಿಂಹಾಚಾರ್ಯರೂ ಸೇರಿ ಕಾವ್ಯಕಲಾನಿಧಿ ಎನ್ನುವ ಪತ್ರಿಕೆಯ ಪ್ರಕಟಣೆಯನ್ನು ಮೈಸೂರಿನಿಂದಲೇ ಆರಂಭಿಸಿದ್ದರು. ಆದರೆ ಮುದ್ದಣನ ದುರದೃಷ್ಟ. ಶ್ರೀರಾಮೇಶ್ವಮೇಧ ಕೃತಿ ಅಚ್ಚಾಗುವ ಮೊದಲೇ ಅವನು ಅಸ್ತಂಗತನಾದ. ಅಚ್ಚಾಗುವ ಮೊದಲೇ ಮುದ್ದಣ ತನಗೆ ಅಂಟಿದ ಕ್ಷಯ ರೋಗಕ್ಕೆ ತುತ್ತಾಗಿ ಕೇವಲ ತನ್ನ 31ನೆಯ ವಯಸ್ಸಿನಲ್ಲಿ ಇಹಲೋಕ ವ್ಯಾಪಾರ ಮುಗಿಸಿದ.

ಮುದ್ದಣ ಅಸ್ತಂಗತನಾದ ನಂತರ ಅವನ ಹೆಸರನ್ನು ಉಳಿಸುವಂಥ ಅನೇಕ ಕೆಲಸಗಳು ನಂದಳಿಕೆಯಲ್ಲಿ ನಡೆದಿವೆ. ಮುದ್ದಣನ ಸಮಗ್ರ ಕಾವ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುದ್ದಣ ಭಂಡಾರ ಎನ್ನುವ ಹೆಸರಿನಲ್ಲಿ ಪ್ರಕಟಿಸಿದೆ. 1969ರಲ್ಲಿ ಮುದ್ದಣನ ಜನ್ಮಶತಾಬ್ದಿ ವರ್ಷದಲ್ಲಿ ವಿಶ್ವ ಕರ್ನಾಟಕ ಮತ್ತು ಸುಧಾ ಪತ್ರಿಕೆಗಳು ವಿಶೇಷಾಂಕಗಳನ್ನು ಪ್ರಕಟಿಸಿದವು. 1943ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ತ.ಸು. ಶಾಮರಾಯರು ಮುದ್ದಣ ಎನ್ನುವ ಕಿರುಹೊತ್ತಿಗೆಯನ್ನು ಹೊರತಂದರು. ಮುದ್ದಣನನ್ನು ಕನ್ನಡ ಸಾರಸ್ವತ ಲೋಕದಲ್ಲಿ ನೆನಪಿನಲ್ಲಿ ಇಡುವ ಅನೇಕ ಕೆಲಸಗಳು ನಂದಳಿಕೆಯಲ್ಲಿ ಮತ್ತಿತರ ಕಡೆಗಳಲ್ಲಿ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT