ಸೋಮವಾರ, ಸೆಪ್ಟೆಂಬರ್ 23, 2019
22 °C

ಸಜ್ಜಾಗಿದ್ದಾನೆ ಶ್ರೀಕೃಷ್ಣ!

Published:
Updated:
Prajavani

ಮೈಸೂರು ರಸ್ತೆಯ ರಾಜರಾಜೇಶ್ವರಿ ಕಮಾನು ಬಳಿ ಇರುವ ಗೋಪಾಲನ್ ಮಾಲ್‌ನಿಂದ ಕೊಗಳತೆ ದೂರದಲ್ಲಿ ರಸ್ತೆ ಬದಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಗೊಂಬೆ ತಯಾರಿಸಿ ಮಾರುವ ಕಾಯಕ ಶಂಕರ್ ಅವರದು.

ವಿಶೇಷವೆಂದರೆ ಶಂಕರ್‌ ದೇವರುಗಳ ಗೊಂಬೆ ತಯಾಠಿಸಿ ಮಾರುವುದೇ ಹೆಚ್ಚು. ಅವರ ಬಳಿ ರಾಮ, ಆಂಜನೇಯ, ಸಾಯಿ ಬಾಬಾ, ಗಣಪತಿ.. ಹಲವು ದೇವರ ಗೊಂಬೆಗಳಿವೆ. ಇದೇ ಆ23ರಂದು ಶ್ರೀಕೃಷ್ಣ ಜನ್ಮಾಷ್ಟಮಿ. ಆಗಲೇ ಶ್ರೀಕೃಷ್ಣ, ರಾಧೆ ಹಾಗೂ ಬೆಣ್ಣೆ ಕೃಷ್ಣ ಇವರ ಕಲೆಯಲ್ಲಿ ಅರಳಿ ನಿಂತಿದ್ದಾರೆ.

ಹೆಚ್ಚಿನವು ಅಚ್ಚುಗಳ ಮೂಲಕ ರೂಪುಗೊಂಡ ಗೊಂಬೆಗಳು. ‘ಒಂದು ಮೂರ್ತಿಯ ಬೆಲೆ ಅದರ ಗಾತ್ರದ ಮೇಲೆ ನಿರ್ಧಾರವಾಗುತ್ತದೆ. ನಮ್ಮಲ್ಲಿ ಮೂರ್ತಿ ಬೆಲೆ ₹500ರಿಂದ ಆರಂಭವಾಗುತ್ತದೆ’ ಎನ್ನುತ್ತಾರೆ ಶಂಕರ್‌.

ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀಕೃಷ್ಣ. ಚಾಂದ್ರಮಾನ ಪಂಚಾಂಗ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀಕೃಷ್ಣನ ಜನ್ಮವಾಯಿತು. ಸೌರಮಾನ ಪಂಚಾಂಗದಂತೆ ಸಿಂಹಮಾಸದಲ್ಲಿ ಜನ್ಮವಾಯಿತು. ಇದಲ್ಲದೇ ವರಾಹ ಪುರಾಣದ ಪ್ರಕಾರ ಆಷಾಢ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಶ್ರೀಕೃಷ್ಣನ ಜನ್ಮವಾಯಿತು. ಆ ಸಂದರ್ಭದಲ್ಲಿ ಚಾಂದ್ರಮಾನದ ಶ್ರಾವಣ ಮಾಸವೇ ಸೌರಮಾನದ ಸಿಂಹಮಾಸವಾಗಿತ್ತು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ. ಈ ದಿನವನ್ನು ಗೋಕುಲಾಷ್ಟಮಿ, ಶ್ರೀಕೃಷ್ಣ ಜಯಂತಿ, ಜನ್ಮಾಷ್ಟಮಿ ಎಂದು ಕರೆಯುತ್ತಾರೆ.

ನಗರದಲ್ಲಿ ಜನ್ಮಾಷ್ಟಮಿಯನ್ನು ಶ್ರದ್ಧೆಯಿಂದ ಆಚರಿಸುವವರಿದ್ದಾರೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳು ಈಗಿನಿಂದಲೇ ಶುರುವಾಗಿವೆ. ಮಾರುಕಟ್ಟೆಯಲ್ಲಿ ಹಬ್ಬದ ಪ್ರಯುಕ್ತ ವಿವಿಧ ಅಗತ್ಯ ವಸ್ತುಗಳ ವ್ಯಾಪಾರದ ಭರಾಟೆಯೂ ನಡೆಯುತ್ತಿದೆ. ಸೈಕಲ್‌ಗೆ ಗೊಂಬೆ ಕಟ್ಟಿ ಬೀದಿ ಬೀದಿಗಳಲ್ಲಿ ಗೊಂಬೆ ವ್ಯಾಪಾರ ವಹಿವಾಟು ಮಾಡುವ ಶಂಕರ್‌ ಕೂಡ ತಮ್ಮ ಶ್ರೀಕೃಷ್ಣ–ರಾಧೆ ಗೊಂಬೆಗಳ ಮಾರಾಟಕ್ಕೆ ಅಣಿಯಾಗುತ್ತಿದ್ದಾರೆ.

‘ಕೃಷ್ಣಜನ್ಮಾಷ್ಟಮಿಗೆಂದೇ ಶ್ರೀಕೃಷ್ಣನ ಅನೇಕ ಲೀಲೆಗಳನ್ನು ಹೇಳುವ ಗೊಂಬೆಗಳನ್ನು ತಯಾರು ಮಾಡಿ ಹಬ್ಬದ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಇದ್ದೇನೆ’ ಎನ್ನುತ್ತಾರೆ ರಾಜಸ್ತಾನ್‌ನಿಂದ ವಲಸೆ ಬಂದಿರುವ ಶಂಕರ್‌ ಮತ್ತು ಸುನೀಲ್‌. 

ಸಂಪರ್ಕಿಸಿ: 9902423792

ಚಿತ್ರ–ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

Post Comments (+)