ಯುವ ಜನರಿಗೆ ಮಾದರಿ!

7

ಯುವ ಜನರಿಗೆ ಮಾದರಿ!

Published:
Updated:

ರಾಣಿ ಚೆನ್ನಮ್ಮಾ ಎಕ್ಸಪ್ರೆಸ್ ರೈಲು ತುಮಕೂರು ದಾಟಿ ಮುಂದೆ ಓಡುತ್ತಿತ್ತು. ’ಆ..ಡಿನ್ನರ್.. ..ಡಿನ್ನರ್’ ಎಂಬ ಕೂಗಿನ ಹಿಂದೆ ನೀರಿನ ಬಾಟಲ್ ಮಾರುವವನ ಧ್ವನಿಯೂ ಕೇಳಿಬಂದಿತ್ತು. ಎದುರಿಗೆ ಕುಳಿತ ಅಪ್ಪ ಮಕ್ಕಳನ್ನು ಆಗಲೇ ನಾನು ಸರಿಯಾಗಿ ಗಮನಿಸಿದ್ದು. ಅವರೂ ಬೆಳಗಾವಿಗೆ ಮದುವೆಗೆ ಹೊರಟಿದ್ದರು. ಸುಮಾರು ಐವತ್ತೈದರ ಅಪ್ಪನ ಕೂದಲುಗಳು ಡೈ ಮಾಡಿದ್ದನ್ನು ಸ್ಪಷ್ಟವಾಗಿ ತೋರುತ್ತಿದ್ದವು.

ಮಾತು-ಕತೆ ಬೆಳೆದಂತೆ ಅವರೊಬ್ಬ ಸರ್ಕಾರಿ ಅಧಿಕಾರಿ ಎಂದು ತಿಳಿಯಿತು. ಜವಾಬ್ದಾರಿಯುತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಬ್ಬರೂ ಹರಯ ಮೂಡಿದ ಹೆಣ್ಣು ಹುಡುಗಿಯರು ಅರಳುವ ಮೊಗ್ಗುಗಳಂತಿದ್ದರು. ಬಹುಶಃ ತಾಯಿಯ ಹೋಲಿಕೆ ಇರಬೇಕು. ದೊಡ್ಡವಳು ಬಿ.ಇ. ಮುಗಿಸಿ ಅದೇ ಕೆಲಸಕ್ಕೆ ಸೇರಿದ್ದಳು. ಚಿಕ್ಕವಳು ಇನ್ನೂ ಓದುತ್ತಿದ್ದಳು. ಅವಳ ಪರೀಕ್ಷೆ ಇದ್ದುದರಿಂದ ಕೊನೆಯಲ್ಲಿ ಬೇರೆಯಾಗಿಯೇ ರಿಸರ್ವೇಷನ್ ಮಾಡಿಸಿದ್ದರು. ಅವಳ ಸೀಟು ಬೇರೆ ಬೋಗಿಯಲ್ಲಿ ಬಂದಿತ್ತು. ಅವಳು ಕಾಲೇಜಿನಿಂದ ನೇರವಾಗೇ ರೇಲ್ವೆ ಸ್ಟೇಷನ್‍ಗೆ ಬಂದಂತಿತ್ತು. ‘ಒಬ್ಬಳೇ ಹೋಗಲು ಬೇಜಾರು. ನೀನೂ ಬಾರೇ ಅಕ್ಕಾ’ ಎನ್ನುತ್ತ ಸೀಟು ನೋಡಿಕೊಂಡು ಬಂದದ್ದಾಯಿತು. ‘ಟಿ.ಸಿ. ಬರುವವರೆಗೆ ಅಲ್ಲಿಯೇ ಕುಳಿತಿರಿ. ನಂತರ ಯಾರಾದರೂ ಅಲ್ಲಿಗೆ ಹೋಗಲು ಸಿದ್ಧರಿದ್ದರೆ ಅಡ್ಜಸ್ಟ್ ಮಾಡಿದರಾಯಿತು’ ಎಂದ ಅಪ್ಪ. ಸರಿ ಎಂದು ಅಕ್ಕ ತಂಗಿಯರಿಬ್ಬರೂ ಊಟ ಮುಗಿಸಿ ಹೊರಟರು.

ಸಂಭಾಷಣೆ ಮುಂದುವರಿಯಿತು. ಅನೇಕ ವಿಷಯಗಳ ಮಧ್ಯೆ ಅಪ್ಪ ತಾನೆಷ್ಟು ಒಳ್ಳೆಯ ಅಧಿಕಾರಿ, ಎಷ್ಟೋ ಜನರಿಗೆ ಬುದ್ಧಿ ಕಲಿಸಿದ್ದೇನೆ, ಎದುರು ನಿಂತವರನ್ನು ಮಣ್ಣು ಮುಕ್ಕಿಸಿದ್ದೇನೆ ಎನ್ನುತ್ತಾ ಜಂಭ ಕೊಚ್ಚಿಕೊಂಡ. ಆಗಲೇ ಓಡಿ ಬಂದ ಹಿರಿಯ ಮಗಳು ’ಅಪ್ಪಾ, ಟಿ.ಸಿ. ಬಂದಿದ್ದಾರೆ. ಇವಳು ಗಡಿಬಿಡಿಯಲ್ಲಿ ಐ.ಡಿ.ಕಾರ್ಡು ಮರೆತು ಬಂದಿದ್ದಾಳೆ. ನಮ್ಮ ಹತ್ತಿರ ಬೇರಾವ ಪ್ರೂಫೂ ಇಲ್ಲ. ಅವರು ದಂಡ ಹಾಕುತ್ತೇನೆಂದು ಹೇಳುತ್ತಿದ್ದಾರೆ. ನೀನೇ ಮಾತಾಡು ಬಾ ಅಪ್ಪ’ ಎಂದಳು. ಅರೆಗಳಿಗೆ ಯೋಚಿಸಿದ ಅಪ್ಪ ‘ಇಷ್ಟಕ್ಕೆಲ್ಲ ನಾನು ಬಂದು ಅವನ ಮುಂದೆ ನಿಂತು ಬೇಡಬೇಕೆ? ಛೆ! ನನ್ನ ಐ.ಡಿ. ತೆಗೆದುಕೊಂಡು ಹೋಗು. ನಾನ್ಯಾರು ಅಂತ ಹೇಳು. ತಾನೇ ಸುಮ್ಮನಾಗ್ತಾನೆ’ ಎಂದು ಕಳಿಸಿದ. ಸುತ್ತಲೂ ನಾವು ಆರು ಜನ ಕುಳಿತಿದ್ದೆವು. ಅನಗತ್ಯವಾದರೂ ತಲೆಗೊಂದು ಸಲಹೆ ಕೊಟ್ಟೆವು.

ಕೆಲವೇ ನಿಮಿಷಗಳ ನಂತರ ಅದೇ ಮಗಳ ಫೋನ್ ಬಂತು. ‘ಅಪ್ಪಾ, ಅವರು ಕೇಳುತ್ತಿಲ್ಲ. ಅವಳದ್ದೇ ಐ.ಡಿ. ಬೇಕು ಎನ್ನುತ್ತಿದ್ದಾರೆ. ನೀನು ಸ್ವಲ್ಪ ಬರ್ತೀಯಾ?’ ಎಂದದ್ದು ಕೇಳಿಸಿತು. ಕದಲದೇ ಕುಳಿತ ಅಪ್ಪ ‘ಇದಕ್ಕೆಲ್ಲಾ ನಾನೇನು ಬರುವದು? ನೀವೇ ಎಲ್ಲಾ ಹ್ಯಾಂಡಲ್ ಮಾಡಲು ಕಲಿಯಬೇಕು. ಏನು ಚಿಕ್ಕವರಾ ನೀವು ? ಈಗಲ್ಲವಾದರೆ ಇನ್ಯಾವಾಗ ಕಲಿಯೋದು?’ ಎಂದು ಗುಟುರು ಹಾಕಿದ.

ಪಾಪದ ಹುಡುಗಿ ಸುಮ್ಮನಾಗಿರಬೇಕು. ಐದು ನಿಮಿಷಗಳ ನಂತರ ಬಂದವಳು ‘ಅವರು ಕೇಳಲು ಸಿದ್ಧರಿಲ್ಲಾಪ್ಪ. ಎನೂ ಸಾಕ್ಷಿ ಇಲ್ಲದಿದ್ರೆ ದಂಡ ಕಟ್ಟಬೇಕಂತೆ. ನೂರೈವತ್ತು ರೂಪಾಯಿ ಕೊಡು’ ಎಂದಳು. ‘ಛೆ ! ಇವರಿಗೆಲ್ಲಾ ಅಧಿಕಾರ ಇದೇಂತಾ.. ..ನೀನೆಲ್ಲಾ ನನ್ನ ಬಗ್ಗೆ ಹೇಳಿದ್ಯಾ? ಆದರೂ ದಂಡ ಕೇಳ್ತಿದಾನಾ? ನಿಮಗೇನಾದ್ರೂ ತೊಂದರೆ ಕೊಟ್ನಾ? ಕೇಸ್ ಹಾಕಿ ಬಿಡ್ತೇನೆ ಅಂತ ಹೇಳ್ಬೇಕಿತ್ತು. ಮೈ.. ಕೈ ಮುಟ್ಟಿದ್ದರೆ ಹೇಳು. ಸೆಕ್ಸುವಲ್ ಹೆರಾಸ್‍ಮೆಂಟ್ ಕೇಸಲ್ಲಿ ಒಳಗೆ ಹಾಕಿದರೆ ಜೈಲಲ್ಲಿ ಬಿದ್ದಿರ್ತಾನೆ’ ಎಂಬ ನುಡಿಮುತ್ತುಗಳನ್ನುದುರಿಸಿದ. ನಮಗೆಲ್ಲ ಅಚ್ಚರಿ. ಬರೀ ಜಂಭಗಾರ ಎಂದುಕೊಂಡಿದ್ದವನ ಮಾತಿನ ವೈಖರಿ ಬೇಸರ ಮೂಡಿಸಿತ್ತು. ಅದೂ ಇನ್ನೊಬ್ಬ ಕರ್ತವ್ಯ ನಿರತ ಸರ್ಕಾರಿ ನೌಕರನ ಬಗ್ಗೆ.. ಆರು ಜೊತೆ ಕಣ್ಣುಗಳು ಕುತೂಹಲದಿಂದ ಮಗಳ ಉತ್ತರಕ್ಕಾಗಿ ಕಾಯುತ್ತಿದ್ದವು.

ಮಗಳಿಗೂ ಅಪ್ಪನ ಮಾತು ಮುಜುಗರ ತರಿಸಿತ್ತು. ಒಂದು ಕ್ಷಣ ಸುಮ್ಮನೆ ನಿಂತವಳು ‘ಬಿಡಪ್ಪಾ, ಅವರು ನಮಗೆ ಶಾಂತವಾಗಿಯೇ ಹೇಳಿದ್ದಾರೆ. ತಮ್ಮ ಕರ್ತವ್ಯ ತಾವು ಮಾಡಿದ್ದಾರೆ. ಐ.ಡಿ ಮರೆತು ಬಂದ ತಪ್ಪು ನಮ್ಮದು. ನೂರೈವತ್ತು ರೂಪಾಯಿಯ ದಂಡಕ್ಕೋಸ್ಕರ ಯಾರದೋ ಚಾರಿತ್ರ್ಯಕ್ಕೆ ಮಸಿ ಬಳಿಯುವ ಕೆಲಸ ಯಾಕೆ ಬೇಕು? ಬೇಗ ದುಡ್ಡು ಕೊಡು’ ಎಂದವಳೇ ತಾನೇ ಅಪ್ಪನ ಪರ್ಸು ತೆಗೆದು ದುಡ್ಡು ತೆಗೆದುಕೊಂಡು ಹೋದಳು. ನೋಡುತ್ತಿದ್ದ ನಮ್ಮ ಮನದಲ್ಲಿ ಮಂದಹಾಸ. ನನಗೂ ‘ಅಬ್ಬಾ!’ ಎನಿಸಿತು. ಪಾಲಕರೇ ಮಕ್ಕಳಿಗೆ ಆದರ್ಶವಾಗಬೇಕಿಲ್ಲ. ಸಮಯ ಬಂದರೆ ಮಕ್ಕಳೇ ಅವರಿಗೆ ಮಾದರಿಯಾದಾರು. ಭಾರತದ ಯುವ ಜನತೆಯಲ್ಲಿ ಇಷ್ಟು ವಿವೇಚನೆ ಇದ್ದರೆ ಸಾಕು ಒಳ್ಳೆಯ ದಿನಗಳು ಖಂಡಿತ ಬರುತ್ತವೆ ಎನಿಸಿ ನಿರಾಳವಾದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !