ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ರ ‘ಅಮನ’ಳ ಕವನಾಸಕ್ತಿಗೆ ನಮನ!

ಬಿಡುಗಡೆಗೆ ಸಿದ್ಧವಾಗಿದೆ ಈ ಬಾಲೆಯ ‘ಭಾವಾತಿರೇಕದ ಪದ್ಯಗಳ ಪ್ರತಿಧ್ವನಿಗಳು’
Last Updated 15 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಈಕೆ ಅಮನ. 13ರ ಹರೆಯದ ಬಾಲೆ. ಅಷ್ಟರಲ್ಲೇ ಅವಳ ‘ಭಾವಪೂರ್ಣ ಪದ್ಯಗಳ ಪ್ರತಿಧ್ವನಿಗಳು’ (The echoes of soulful Poems) ಹರಳುಗಟ್ಟಿವೆ; ಅರ್ಥಾತ್‌ 68 ಕವನಗಳಿರುವ ಗುಚ್ಛವೊಂದು ಸಾಹಿತ್ಯ ಕ್ಷೇತ್ರಕ್ಕೆ ಬರಲು ಸಿದ್ಧವಾಗಿದೆ!

ಈ ಕೃತಿಯಲ್ಲಿರುವ ಪದ್ಯಗಳನ್ನು ಕಂಡು ಚಂದ್ರಯಾನ–1, 2 ಮತ್ತು ಮಂಗಳಯಾನ –1 ಯೋಜನಾ ನಿರ್ದೇಶಕ, ‘ಮೂನ್‌ ಮ್ಯಾನ್‌ ಆಫ್‌ ಇಂಡಿಯಾ‘ ಎಂದೇ ಕರೆಸಿಕೊಂಡ ಡಾ.ಎಂ. ಅಣ್ಣಾದುರೈ ಬೆರಗುಗೊಂಡಿದ್ದಾರೆ. ಆಕೆಯ ಈ ಮೊದಲ ಕೃತಿಗೆ ತಾವೇ ಮುನ್ನಡಿ ಬರೆದು, ‘ಭವಿಷ್ಯದ ಸಾಹಿತಿ’ಯೆಂದು ಬೆನ್ನು ತಟ್ಟಿದ್ದಾರೆ. ಸ್ವಪ್ನಾ ಬುಕ್‌ ಹೌಸ್‌ ಈ ಕೃತಿಯ ಪ್ರಕಾಶಕರು.

ಯಾರೀಕೆ: ಅಮನ ಬೆಂಗಳೂರಿನ ಬಿಷಪ್‌ ಕಾಟನ್‌ ಹೆಣ್ಮಕ್ಕಳ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ. ಮರೆಯಲ್ಲೇ ನಿಂತು ಮಗಳ ಸಾಹಿತ್ಯಾಸಕ್ತಿಗೆ ನೀರೆರೆದು ಪೋಷಿಸುತ್ತಿದ್ದಾರೆ ಅಮ್ಮ. ಶಾಲೆಯಲ್ಲಿ ಪ್ರತಿಭಾವನ್ವಿತೆ. ಬಿಡುವು ಸಿಕ್ಕಾಗಲೆಲ್ಲ ಕೈಯಲ್ಲಿ ಪೆನ್ನು–ಕಾಗದ. ಗೀಚುಗೀಚುತ್ತಲೇ ಅಕ್ಷರಗಳನ್ನು ಪ್ರಾಸಬದ್ಧವಾಗಿ ಪೋಣಿಸಿದ್ದಾಳೆ. ನನಗಿದು ಒಲವು ಎನ್ನುವುದು ಆಕೆಯ ಮಾತು.

ಈಗಾಗಲೇ 100ಕ್ಕೂ ಹೆಚ್ಚು ಕವನಗಳನ್ನು ಅಮನ ಬರೆದಿದ್ದಾಳೆ. ಬಿಡುಗಡೆಗೆ ಸಿದ್ಧವಾಗಿರುವ ಕೃತಿಯಲ್ಲಿರುವ ಹಲವು ಪದ್ಯಗಳು ಆಂಗ್ಲ, ಕನ್ನಡ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕವನ ಬರೆಯುವ ಜೊತೆಗೆ ಪ್ರವಾಸ ಕಥನ ಬರೆಯುವುದೂ ಹವ್ಯಾಸ. ಖಗೋಳ ವಿಜ್ಞಾನ ಕಡೆಗೆ ಒಲವು. ಮುಂದೆ ಐಎಎಸ್‌ ಓದಬೇಕೆಂಬ ಬಯಕೆ.

ಲಾಕ್‌ಡೌನ್‌ ಅವಧಿಯಲ್ಲಿ ಮನೆಯೊಳಗೇ ಇದ್ದು ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದೆ. ‘ನೀನು ಅಷ್ಟೊಂದು ಓದುತ್ತಿಯಲ್ಲ... ನೀನ್ಯಾಕೆ ಬರೆಯಬಾರದು’ ಎಂದು ಅದೊಂದು ದಿನ ಅಮ್ಮ ಕೇಳುತ್ತಾರೆ. ‘ನಾನೂ ಕವನಗಳನ್ನು ಬರೆಯುತ್ತೇನೆ’ ಎಂದ ಮಗಳಿಗೆ, ಅಮ್ಮನ ಶಹಭಾಷ್‌ ಸಿಗುತ್ತದೆ. ಅಂದಿನಿಂದ ಓದುವ ಜೊತೆಗೆ ಬರವಣಿಗೆಯನ್ನೂ ಆರಂಭಿಸಿದೆ ಎನ್ನುತ್ತಾಳೆ ಅಮನ.

ತನ್ನ ಮೊದಲ ಕೃತಿಯಲ್ಲಿರುವ ಕವನಗಳಿಗೆ ಕೊರೊನಾ ವಾರಿಯರ್ಸ್‌ ಕಾರ್ಯವೈಖರಿ, ಮನಶಾಂತಿ, ಕ್ಷಮೆ ಹೀಗೆ ವಸ್ತುಗಳಾಗಿವೆ. ಮನಸಿನ ಭಾವನೆಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿರುವ ಅಮನಳಿಗೆ ಪುಸ್ತಕಗಳನ್ನು ಓದುವುದೆಂದರೆ ಬಲು ಇಷ್ಟ. ಸುಧಾ ಮೂರ್ತಿ, ಶಶಿತರೂರು, ರಬೀಂದ್ರನಾಥ ಟ್ಯಾಗೋರ್‌ ಮುಂತಾದವರ ಕೃತಿಗಳು ಆಕೆಯ ಬಳಿ ಇವೆ. ಪ್ರಕಟಣೆಗೆ ಮುನ್ನವೇ ‘ಪ್ರಿ ಬುಕ್ಕಿಂಗ್‌’ ಮಾಡಿ ತರಿಸಿಕೊಳ್ಳುವ ತರಾತುರಿ. ಅಷ್ಟರಮಟ್ಟಿಗೆ ಓದುವ ಹುಚ್ಚು. ಪುಸ್ತಕಗಳ ಮಧ್ಯೆ ಇರಬೇಕೆಂಬ ಕನಸು. ಪುಸ್ತಕಗಳ ಮನೆಯನ್ನೇ ಕಟ್ಟ ಬೇಕೆಂಬ ಹಂಬಲ!

‘ಕೊರೊನಾ ಯಾರಿಗೂ ಅರಿಯದಂತೆ ನಿಮ್ಮನ್ನು ಪ್ರವೇಶಿಸುವ ದುಷ್ಟ ಶಕ್ತಿ. ಪ್ರವೇಶದ ಬಳಿಕವೇ ಎಲ್ಲರೂ ಅರಿಯುವಂತೆ ಗೋಚರವಾಗುತ್ತದೆ. ಯಾರನ್ನೂ ದೂಷಿಸುವಂತಿಲ್ಲ ಯಾಕೆಂದರೆ ನಾವು ಈಗ ಇನ್ನೇನು ಕತ್ತರಿಸಿಯೇ ಹೋಗಲಿದೆ ಎನ್ನುವ ದಾರದ ಮೇಲೆ ನಿಂತಿದ್ದೇವೆ' ಎನ್ನುವ ಅರ್ಥ ನೀಡುವ ಅಮನಳ ಕವನ ಓದಿದರೆ ಸದ್ಯದ ಕೋವಿಡ್‌ ಸ್ಥಿತಿ ಕಣ್ಣಿಗೆ ಕಟ್ಟುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT