ಗುರುವಾರ , ಜೂನ್ 17, 2021
22 °C

ಸಾಹಿತಿಗಳ ‘ರಾಜಕೀಯ’

ಚಿದಾನಂದ ಸಾಲಿ Updated:

ಅಕ್ಷರ ಗಾತ್ರ : | |

prajavani

ಸಂಸ್ಕೃತಿಯಲ್ಲಿ ರಾಜಕೀಯ ಹಸ್ತಕ್ಷೇಪದ ಪ್ರಶ್ನೆಯು ಬಹುಕಾಲದಿಂದ ಕಾಡುತ್ತಿದೆ. ರಾಜಕೀಯ ಪಕ್ಷಗಳ ಪರವಾಗಿ ಸಾಹಿತಿಗಳ ವಕ್ತಾರಿಕೆ ಪ್ರಶ್ನೆಯೂ ಅದಕ್ಕೀಗ ಸೇರಿಕೊಂಡಿದೆ. ಈ ಮಧ್ಯೆ ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಮಾಡಲಾಗಿರುವ ನಾಮನಿರ್ದೇಶನದ ವಿಷಯ ಕೂಡ ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನವೇ ಭಿನ್ನ ಆಯಾಮಗಳ ಇಲ್ಲಿನ ಮೂರು ವಿಶ್ಲೇಷಣೆಗಳು...

ರಾಜನ ಆಸ್ಥಾನದಲ್ಲಿ ಇದ್ದೂ ತನ್ನ ರಾಜನನ್ನೇ ವಿಮರ್ಶಿಸಿದ-ಪ್ರಶ್ನಿಸಿದ ಪಂಪನ ನಾಡು ನಮ್ಮದು. ಆತ್ಮಸಾಕ್ಷಿಯ ಮಾತಿಗೆ ಕಿವಿಗೊಟ್ಟು ಬದುಕಿದಂಥ ಆ ಪರಂಪರೆಯ ಮುಂದುವರಿಕೆಯಾಗಿ ನಮ್ಮ ನಾಡಿನಲ್ಲಿ ಬಸವಾದಿ ಶರಣರ ವಚನ ಚಳವಳಿ ನಡೆಯಿತು. ಇವರೂ ರಾಜಪ್ರಭುತ್ವದ ಕಾಲದವರೇ. ಇನ್ನು ಕುವೆಂಪು ಅವರು ‘ಅರಸುಗಿರಸುಗಳಿಗಿದು ಕಾಲವಲ್ಲ’ ಎಂದು ದಿಟ್ಟವಾಗಿ ಬರೆದಾಗ ಆಗಷ್ಟೇ ರಾಜಪ್ರಭುತ್ವದ ಕಾಲ ಹಿನ್ನೆಲೆಗೆ ಸರಿದು ಪ್ರಜಾಸತ್ತೆ ಕಣ್ಬಿಡತೊಡಗಿತ್ತಷ್ಟೆ. ಲಂಕೇಶರು ಪಕ್ಷಾತೀತವಾಗಿ ಬಾಸುಂಡೆ ಬರುವಂತೆ ಬಾರಿಸುವ ಹೊತ್ತಿಗಾಗಲೇ ಪ್ರಜಾಪ್ರಭುತ್ವದ ಹೆಸರಲ್ಲಿ ರಾಜಕಾರಣಿಗಳ ಚರ್ಮ ಚೆನ್ನಾಗಿ ಕೊಬ್ಬಿಯಾಗಿತ್ತು. ಹಲವು ಆಮಿಷಗಳು, ಅವಕಾಶಗಳು ಇದ್ದಾಗ್ಯೂ ಇವರು ತಮ್ಮನ್ನು ಯಾವುದೇ ವ್ಯಕ್ತಿ/ ಸಂಸ್ಥೆ/ ವ್ಯವಸ್ಥೆಯ ಒತ್ತೆಯಾಗಿಸಿಕೊಳ್ಳಲಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಲೇಖಕನನ್ನು ‘ಜನಸಮುದಾಯದ ಬಾಯಿ’, ‘ಸದಾ ಕಾಲದ ಶಾಸಕ’ ಎನ್ನಲಾಗುತ್ತದೆ. ಏಕೆಂದರೆ, ಅವನು ಏಕಕಾಲಕ್ಕೆ ವಾದಿಯೂ, ಪ್ರತಿವಾದಿಯೂ ಹಾಗೂ ಅವರಿಬ್ಬರ ವಾದಗಳನ್ನು ಆಲಿಸಿ ಸರ್ವಸಮ್ಮತ ತೀರ್ಪು ನೀಡುವ ನ್ಯಾಯಾಧೀಶನೂ ಆಗಿದ್ದಾನೆ. ಹಾಗಾಗಿ ಎಲ್ಲ ಪಕ್ಷಗಳಿಂದಲೂ ಸಮಾನದೂರ ಕಾಪಾಡಿಕೊಂಡವನು; ಅದರಲ್ಲೂ ಆಡಳಿತರೂಢ ಪಕ್ಷದಿಂದ ಸಾಕಷ್ಟು ದೂರ ಇರುವವನೇ ನಿಜವಾದ ಅಂತಃಸಾಕ್ಷಿಯ ಲೇಖಕ. ಅದಕ್ಕೆಂದೇ ಅವನನ್ನು ಎಲ್ಲ ಕಾಲಕ್ಕೂ ‘ರಚನಾತ್ಮಕ ವಿರೋಧಪಕ್ಷದ ನಾಯಕ’ನಾಗಿ ಇರಬೇಕೆಂದು ಸಮಾಜ ನಿರೀಕ್ಷಿಸುತ್ತದೆ.

ಆದರೆ, ಅದೇನು ಕಾಲವೇ ಬದಲಾಯಿತೋ, ಆದ್ಯತೆಗಳೇ ಬದಲಾದವೋ ಅಂತೂ ಲೇಖಕನಾದವನು ಒಂದು ರಾಜಕೀಯ ಪಕ್ಷಕ್ಕೆ ಆತುಕೊಳ್ಳುವಂಥ ವಿಚಿತ್ರವಾದ ನಾಚಿಕೆಯ ಪರಿಸ್ಥಿತಿ ಬಂದುಬಿಟ್ಟಿದೆ. ಇದೊಂದು ದುರಂತವೇ ಸರಿ. ರಾಜಕೀಯ ಪ್ರಜ್ಞೆಯ ಹೆಸರಿನಲ್ಲಿ, ಸೈದ್ಧಾಂತಿಕತೆಯ ಸೋಗಿನಲ್ಲಿ  ಸಾಂಸ್ಕೃತಿಕ ಧ್ರುವೀಕರಣವೇ ನಡೆಯುತ್ತಿದೆ. ‘ಯಾವ ಕಡೆ ನಿಲ್ತಿಯೋ ಹೇಳು?’ ಅಂತ ಎಲ್ಲರನ್ನು ನಿಲ್ಲಿಸಿ ಕೇಳಲಾಗ್ತಿದೆ. ಯಾವುದೋ ಒಂದು ಪಕ್ಷ, ಯಾವುದೋ ಒಂದು ಸಿದ್ಧಾಂತವನ್ನು ಹೇಳಲೇಬೇಕು. ಹಾಗೆ ಹೇಳಿದ ಮೇಲೆ ನಿಮ್ಮ ಪಕ್ಷದ ದೋಷದ ಬಗ್ಗೆ ಹಾಗೂ ಪ್ರತಿಪಕ್ಷದ ಗುಣದ ಬಗ್ಗೆ ಚಕಾರವೆತ್ತಕೂಡದು ಎಂಬ ಅಲಿಖಿತ ಸಂವಿಧಾನವನ್ನು ಹೇರಲಾಗುತ್ತದೆ.

‘ನಾನು ಎಲ್ಲದರಿಂದ ದೂರ, ನನಗೆ ಎಲ್ಲದರ ಒಳಿತು ಬೇಕು. ಆದರೆ, ಯಾವುದರ ಕೆಡುಕೂ ಬೇಡ’  ಎಂದಿರೋ ಎಲ್ಲ ಕಡೆಯವರೂ ಸೇರಿಯೇ ನಗಾಡುತ್ತಾರೆ. ಅಲಿಪ್ತ ನೀತಿಯೇ ನಮ್ಮ ರಾಜಕೀಯ ಸಿದ್ಧಾಂತವಾಗಿದ್ದ ಕಾಲವೊಂದಿತ್ತು. ಹಾಗೆ ನೋಡಿದರೆ ಅಲಿಪ್ತತೆಯೇ ಲೇಖಕನ ನಿಜವಾದ ಅಸ್ಮಿತೆ. ಅವನು ಎಲ್ಲ ಒಳಿತಿನ ಪರ ಮತ್ತು ಎಲ್ಲ ಕೆಡುಕುಗಳ ವಿರೋಧಿ. ಹಾಗೆಂದೇ ಅವನು ಸಿದ್ಧಾಂತದ ಕಣ್ಕಾಪು ಕಟ್ಟಿಕೊಂಡ ಪಕ್ಷಪಾತಿ ರಾಜಕಾರಣಿಯಲ್ಲ; ಬದಲಿಗೆ ಸಾಹಿತ್ಯದ ಬೆಳಕನ್ನು ಸಮಾಜದ ಕತ್ತಲಮೂಲೆಗಳ ಮೇಲೆ ಬೀರುತ್ತಿರುವ ಸುಧಾರಣಾವಾದಿ ಮುತ್ಸದ್ದಿ. ಆದರೆ, ಈಗ ಅಲಿಪ್ತತೆಗೆ ಆರೋಗ್ಯಕರ ಅಂತರ ಎಂಬುದರ ಬದಲಿಗೆ ಅವಕಾಶವಾದಿತನವೆಂಬ ಹೊಸ ಅರ್ಥವನ್ನು ಆರೋಪಿಸಲಾಗಿದೆ. ಅಷ್ಟೇ ಏಕೆ, ಲೇಖಕರ ಪ್ರಶಸ್ತಿ ಮತ್ತು ಅದರ ವಾಪಸಾತಿ, ಅಧಿಕಾರ ಮತ್ತದರ ತಿರಸ್ಕಾರ, ಖ್ಯಾತಿ ಮತ್ತು ಅಪಖ್ಯಾತಿ ಎಲ್ಲಕ್ಕೂ ರಾಜಕೀಯ ಬಣ್ಣ ಬಳಿಯಲಾಗಿದೆ. ಹಾಗೆ ನೋಡಿದರೆ ಬಣ್ಣಗಳೂ ರಾಜಕೀಕರಣಕ್ಕೊಳಗಾಗಿವೆ. ಕೇಸರಿ, ಹಸಿರು, ಕೆಂಪು, ನೀಲಿ, ಕಪ್ಪು... ಎಲ್ಲವೂ! ಸದ್ಯಕ್ಕೆ ‘ಬಿಳಿ’ಯೊಂದು ಉಳಿದಿದೆ ತಿಳಿಯಾಗಿ!

ನವೋದಯವೊಂದನ್ನು ಹೊರತುಪಡಿಸಿದರೆ ನಮ್ಮ ಎಲ್ಲ ಸಾಹಿತ್ಯಿಕ ಪಂಥಗಳೂ ಕಮ್ಯುನಿಸಂ, ಸೋಶಿಯಲಿಸಂ, ಜನಸಂಘ, ಕಾಂಗ್ರೆಸ್, ಬಹುಜನವಾದ... ಹೀಗೆ ಒಂದಲ್ಲ ಒಂದು ರಾಜಕೀಯ ಪಕ್ಷ/ ಸಿದ್ಧಾಂತದ ವಿಚಾರಗಳೊಂದಿಗೆ ಗುಪ್ತಗಾಮಿನಿಯಾಗಿ ಬೆಸೆದುಕೊಂಡಿದ್ದವು. ಆದರೆ, ಸಾಹಿತಿಗಳು ಘಂಟಾಘೋಷವಾಗಿ ಪಕ್ಷದ ಮುಖವಾಣಿಗಳಾಗಿ ಪ್ರಕಟಗೊಳ್ಳುತ್ತಿರುವ ಹಾಗೂ ಬಹಿರಂಗವಾಗಿ ಪ್ರಚಾರಸಭೆಗಳಿಗೆ ತೆರಳುತ್ತಿರುವ ರಾಜಕೀಯ ವಕ್ತಾರಿಕೆಯ ಈ ಸಾಂಸ್ಕೃತಿಕ ಸಂದರ್ಭವು ಅದಕ್ಕಿಂತ ಭಿನ್ನವಾಗಿದೆ. ಇದು ಯುವಕರಿಗೆ ನೀಡುತ್ತಿರುವ ಸಂದೇಶವೇನೆಂದು ನಾವು ತುಸುವಾದರೂ ನಿಂತು ಆಲೋಚಿಸಬೇಕಾಗಿದೆ. ರಾಜಕೀಯ ಪ್ರಜ್ಞೆ ಮತ್ತು ರಾಜಕೀಯ ಪಕ್ಷವೊಂದರ ವಕ್ತಾರಿಕೆಗಳ ನಡುವಿನ ವ್ಯತ್ಯಾಸವನ್ನು ಪಂಪ-ಬಸವ-ಕುವೆಂಪು- ಲಂಕೇಶರ ಹಾಗೂ ಇಂದಿನ ಸಂದರ್ಭಗಳನ್ನು ಹೋಲಿಸಿ ನೋಡುವ ಮೂಲಕವೇ ಸ್ಪಷ್ಟಪಡಿಸಿ ಕೊಳ್ಳಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು