ಮಳೆಯ ಬೀಭತ್ಸ ಮುಖ ಕಂಡೆ

7

ಮಳೆಯ ಬೀಭತ್ಸ ಮುಖ ಕಂಡೆ

Published:
Updated:
Deccan Herald

ಒಂಬತ್ತು ವರ್ಷಗಳ ಹಿಂದಿನ ಆ ಮಳೆ ಅನುಭವವನ್ನು ನೆನಪಿಸಿಕೊಂಡರೆ ಇಂದಿಗೂ ಮೈ ಒಮ್ಮೆ ಕಂಪಿಸಿದಂತಾಗುತ್ತೆ! 2009 ಮೇ 19ರಂದು ನಡೆದ ಘಟನೆ ಇದು. ಮರುದಿನ ಮೇ 20 ರಂದು ನನ್ನ ಮದುವೆ. ಹಾಗಾಗಿಹಿಂದಿನ ರಾತ್ರಿ 7 ಗಂಟೆ ಸುಮಾರಿಗೆ ನಾವೆಲ್ಲರೂ ನಮ್ಮೂರು ಸುಗ್ಗೇನಳ್ಳಿಯಿಂದ ಬೀಗರ ಊರು ಸಂಡೂರಿಗೆ ಹೊರಟೆವು. ಬಂಧುಬಳಗ, ಸಂಬಂಧಿಕರು, ಸ್ನೇಹಿತರು ದೂರದೂರಿನ ಬಂಧುಗಳೂ ಬಂದಿದ್ದರು. ನಾನು ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಹೊನ್ನಳ್ಳಿ ಶಾಲೆಯ ಪುಟ್ಟ ಪುಟ್ಟ ಮಕ್ಕಳು ಬಂದಿದ್ದರು. ಎಲ್ಲರೂ ಹೋಗಲು ಒಂದು ದೊಡ್ಡ ಲಾರಿ, ಮದುಮಗನಾದ ನಾನು ಮತ್ತು ಗೆಳೆಯರು, ಕೆಲವು ಹಿರಿಯರು ಹೋಗಲೆಂದು ಒಂದು ಟ್ಯಾಕ್ಸಿ ಹೇಳಿದ್ದೆವು.

ಆದರೆ, ಟ್ಯಾಕ್ಸಿಯವನು ಕೈ ಕೊಟ್ಟಿದ್ದರಿಂದ ನಾವೆಲ್ಲರೂ ಅದೇ ಲಾರಿಯೊಳಗೆ ಸೇರಿಕೊಂಡೆವು. ಎರಡು ಲಾರಿಗಾಗುವಷ್ಟು ಜನ ಒಂದೇ ಲಾರಿಯಲ್ಲಿದ್ದೆವು! ತೋರಣಗಲ್ ದಾಟಿ ತಾರಾನಗರ ತಲುಪಿದಾಗ ಚಿಟಪಟ ಮಳೆ ಸಣ್ಣಗೆ ಆರಂಭವಾಯಿತು. ಬೇಸಿಗೆಯಲ್ಲಿ ಮಳೆ ಎಲ್ಲಿ ಬರುತ್ತೆ, ಸಂಡೂರು ಇನ್ನೇನು ಹತ್ತನ್ನೆರಡು ಕಿ.ಮೀ. ದೂರ ಇರಬಹುದು, ಹೋಗೇ ಬಿಡೋಣ ಅಂತ ಎಲ್ರೂ ಹೇಳಿದ್ದರಿಂದ, ಹೊರಟೇ ಬಿಟ್ಟಿತು. ಅದು ಬೆಟ್ಟಗಳ ಪ್ರಪಾತದ ಅಂಚಿನ ರಸ್ತೆ ಮಾರ್ಗವದು.

ರಸ್ತೆಯ ಎಡಕ್ಕೆ ‘ಯತ್ನಟ್ಟಿ’ ಡ್ಯಾಂನ ರಿವರ್ ಬ್ಯಾಂಕ್. ಮುಂದೆ ನಾರೀಹಳ್ಳವೆಂಬ ಪುಟ್ಟ ನದಿ. ಬಲಕ್ಕೆ ಮೈನಿಂಗ್ ಬೆಟ್ಟಗಳು. ಹಗಲಿನಲ್ಲಿಯೇ ಭಯವಾಗುವಂತಹ ಜಾಗವದು. ಅಲ್ಲಿಗೆ ತಲುಪಿದಾಗ ರಾತ್ರಿ 8-30ರ ಸಮಯವಾಗಿರಬಹುದು. ಮಳೆ ಸುರಿಯಲಾರಂಭಿಸಿತು ಆಲಿಕಲ್ಲಿನಷ್ಟು ದಪ್ಪನೆಯ ಹನಿಗಳು ಧೋ... ಎಂದು ಉಸಿರುಗಟ್ಟಿಸಿ ಸುರಿಯಲಾರಂಭಿಸಿತು.

ಮೈನ್ಸ್ ಲಾರಿಗಳ ಆರ್ಭಟದಿಂದ ದೊಡ್ಡ ದೊಡ್ಡ ಕುಣಿಗಳಿಂದನೇ ತುಂಬಿ ಹೋಗಿದ್ದ ರಸ್ತೆಯಲ್ಲಿ ಹಳ್ಳದಲ್ಲಿ ಹರಿಯುವಂತೆ ನೀರು ಹರಿಯುತ್ತಿತ್ತು! ಮಳೆಯ ಬಿರುಸಿಗೆ ಚಾಲಕನಿಗೆ ರಸ್ತೆಯೇ ಕಾಣುತ್ತಿರಲಿಲ್ಲ. ಎಡಕ್ಕೆ ಜಾರಿದರೆ ಪ್ರಪಾತದಲ್ಲಿರುವ ನದಿಗೆ ಬೀಳುವುದು, ಬಲಕ್ಕೆ ಜಾರಿದರೆ ಗುಡ್ಡಕ್ಕೆ ಹಾಯುವುದು ಎಂಬಂಥ ಪರಿಸ್ಥಿತಿಯಲ್ಲಿ ಚಾಲಕ ಲಾರಿಯನ್ನು ನಿಲ್ಲಿಸಿ ಬಿಟ್ಟ. ಮಳೆ, ಚಳಿ ತಾಳಲಾರದೇ ಲಾರಿ ಓಡಿಸುವಂತೆ ಬಯ್ಯುತ್ತಿರುವ, ಗದರುತ್ತಿರುವ ಹಿಂಬದಿಯ ಜನ. ಯಾವುದಕ್ಕೂ ಜಗ್ಗದೆ ಸುಮ್ಮನೆ ಕೂತು ಚಾಲಕ ಒಳ್ಳೆಯ ನಿರ್ಧಾರ ಕೈಗೊಂಡಿದ್ದ. ಲಾರಿಯ ಕ್ಯಾಬಿನ್ನೊಳಗಿನ ಚಾಲಕ ಸೇರಿದಂತೆ ನಾವೆಲ್ಲಾ ತೋಯ್ದು ತೊಪ್ಪೆಯಾಗಿದ್ದೆವೆಂದರೆ, ಹಿಂಬದಿ ಕೂತವರ ಪರಿಸ್ಥಿತಿ ಹೇಗಿರಬೇಡ. ಪುಟ್ಟ ಪುಟ್ಟ ಕಂದಮ್ಮಗಳನ್ನು ಕ್ಯಾಬಿನ್ನೊಳಗಿದ್ದ ನನ್ನ ಕೈಗೆ ಕೊಡುತ್ತಿದ್ದರು.

ಅರ್ಧ ಗಂಟೆಯ ನಂತರ ಮಳೆ ಕಡಿಮೆಯಾಯ್ತು. ಮೆಲ್ಲಗೆ ಹೋಗಿ ಸಂಡೂರು ತಲುಪಿದೆವು. ಛತ್ರಕ್ಕೆ ಹೋದ ತಕ್ಷಣ ಅಡಿಗೆ ಮಾಡುತ್ತಿರುವ ಕಡೆಗೆ ಹೋಗಿ ತೋಯ್ದ ದುಡ್ಡನ್ನು, ಬಟ್ಟೆಗಳನ್ನು ಒಣಗಿಸಿಕೊಳ್ಳುವುದೇ ಆಗಿತ್ತು. ಪ್ರತಿಯೊಬ್ಬರ ಬಟ್ಟೆಗಳು ತೋಯ್ದಿದ್ದರಿಂದ ಬದಲಾಯಿಸಲು ಯಾರಲ್ಲೂ ಒಣ ಬಟ್ಟೆಗಳೇ ಇರಲಿಲ್ಲ. ಇಂದಿಗೂ ಆ ಚಾಲಕ ಪುಣ್ಯಾತ್ಮನನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.
-ಸುಗ್ಗೇನಳ್ಳಿ ರಮೇಶ್ ಕಂಪ್ಲಿ, ಬಳ್ಳಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !