ಅಂಗವೈಕಲ್ಯದ ನಡುವೆ ಆತ್ಮವಿಶ್ವಾಸದ ಬದುಕು!

7
ಅಂಗವೈಕಲ್ಯ ಮರೆಸಿದ ಸ್ವಾವಲಂಬಿ ಬದುಕು..!

ಅಂಗವೈಕಲ್ಯದ ನಡುವೆ ಆತ್ಮವಿಶ್ವಾಸದ ಬದುಕು!

Published:
Updated:
Deccan Herald

ಗುಬ್ಬಚ್ಚಿಯಂತಹ ಪುಟ್ಟ ದೇಹ. ತುಸು ಗೂನು ಬೆನ್ನು. ಕಾಲುಗಳಿಗೆ ಸ್ವಾಧೀನವಿಲ್ಲ. ಗಾಲಿ ಕುರ್ಚಿ ಮೇಲೆ ಕುಳಿತೇ ಸಂಚಾರ. ಯಾರಾದರೂ ಗಟ್ಟಿಯಾಗಿ ಹಿಡಿದು ಎಬ್ಬಿಸಿ ನಿಲ್ಲಿಸಲು ಪ್ರಯತ್ನಿಸಿದರೆ ಮೂಳೆ ಮುರಿಯುತ್ತದೆ. ಹೀಗೆ ಮಾಡಲು ಹೋಗಿ 25 ವರ್ಷಗಳಲ್ಲಿ 50 ಬಾರಿ ಮೂಳೆ ಮುರಿದು ಜೋಡಿಸಲಾಗಿದೆ. ಇಂಥ ಅಂಗಾಂಗ ವೈಕಲ್ಯ, ಅನಾರೋಗ್ಯದ ನಡುವೆಯೂ, ಮುಗುಳು ನಗುವಿನೊಂದಿಗೆ ವೀಲ್ ಚೇರ್ ಮೇಲೆ ಕುಳಿತು ಸ್ವಾವಲಂಬಿ ಬದುಕಿನ ಗಾಲಿ ಉರುಳಿಸುತ್ತಿದ್ದಾರೆ...!

ಇದು ಇಪ್ಪತ್ತಾರು ವರ್ಷದ ಯುವಕ ರೂಪೇಶ್ ರಾಬರ್ಟ್ ಜೀವನದ ಕಥೆ. ಹುಟ್ಟಿದ ಹನ್ನೊಂದು ದಿನಕ್ಕೇ ಬ್ರಿಟಿಲ್ ಬೋನ್ ಕಾಯಿಲೆಗೆ ತುತ್ತಾದ ಇವರು, ಬಾಲ್ಯವೆಲ್ಲ ಅಮ್ಮನ ಮಡಿಲಲ್ಲೇ ಕಳೆದರು. ನಿರಂತರ ಚಿಕಿತ್ಸೆ ನಂತರ 20ನೇ ವರ್ಷಕ್ಕೆ ಮೂಳೆ ಮುರಿಯುವುದು ಕಡಿಮೆಯಾಯಿತು. ಆದರೆ, ಕಾಲು ಸ್ವಾಧೀನ ಕಳೆದುಕೊಂಡಿತು. ಕ್ಯಾನ್ಸರ್ ದಾಳಿ ಮಾಡಿತು. ಯೌವನದ ಬದುಕು ಅಮ್ಮನ ಮಡಿಲಿಂದ ವೀಲ್ ಚೇರ್‌ಗೆ ಶಿಫ್ಟ್ ಆಯಿತು.

ಸತತ ಚಿಕಿತ್ಸೆ, ಮನಸ್ಸಿನಲ್ಲಿರುವ ಆತ್ಮವಿಶ್ವಾಸ (ವಿಲ್ ಪವರ್) ಎಲ್ಲವೂ ಸೇರಿಸಿಕೊಂಡು ಕ್ಯಾನ್ಸರ್ ಎದುರಿಸಿ ನಿಂತರು ಅವರು. ತನಗೆ ಅಂಗವೈಕಲ್ಯ ಇಲ್ಲವೇ ಇಲ್ಲ ಎಂದು ಮನಸ್ಸಿಗೆ ಹೇಳಿಕೊಟ್ಟರು. ಹಾಗಾಗಿ ಇಂಥ ಘೋರ ಸಮಸ್ಯೆಗಳ ನಡುವೆಯೂ ಅವರೊಬ್ಬ ಈಗ ಉತ್ತಮ ಡಿಸ್ಕ್ ಜಾಕಿ (ಡಿಜೆ)ಯಾಗಿದ್ದಾರೆ. ವೀಲ್ ಚೇರ್ ಮೇಲೆ ಕುಳಿತೇ ಫ್ಯಾಷನ್ ಫೋಟೊಗ್ರಫಿ ಮಾಡುತ್ತಾರೆ. ಅದ್ಭುತವಾಗಿ ಕೀಬೋರ್ಡ್ ನುಡಿಸುತ್ತಾರೆ. ಡಿಜೆಯಾಗಿ ಹಲವು ಶೋಗಳನ್ನು ಕೊಟ್ಟಿದ್ದಾರೆ.

‘ಡಿಜೆ’ ಹಾದಿಯಲ್ಲಿನ ಮುಳ್ಳುಗಳು...

ಇಷ್ಟೆಲ್ಲ ಅನಾರೋಗ್ಯದ ನಡುವೆ ರೂಪೇಶ್ ಡಿಜೆಯಾಗಿದ್ದೇ ಒಂದು ಸಾಧನೆ. ಇದಕ್ಕೆ ನೆರವಾಗಿದ್ದು ಅವರ ತಾಯಿ ವಿಮಲಾ. ‘ನಾನು ಡಿಜೆ ಕೋರ್ಸ್ ಕಲಿಯುತ್ತೇನೆ ಎಂದಾಗ ಅಮ್ಮ ಬೇಡ ಎನ್ನಲಿಲ್ಲ. ಆಸ್ಪತ್ರೆಯ ಖರ್ಚಿನ ನಡುವೆಯೂ ಕೋರ್ಸ್ ಗೆ ಬೇಕಾದ ರೂ 25 ಸಾವಿರ ಫೀಸ್ ಹೊಂದಿಸಿಕೊಟ್ಟರು. ಅದಕ್ಕಾಗಿ ತನ್ನ ಒಡೆವೆಗಳನ್ನು ಅಡವಿಟ್ಟರು’ ಎಂದು ತಾಯಿಯ ಪರಿಶ್ರಮ ನೆನಪಿಸಿಕೊಳ್ಳುತ್ತಾರೆ ಅವರು.

ಹಣ ಹೊಂದಿಕೆಯಾದರೂ, ಕೋರ್ಸ್‌ ಕಲಿಸಲು ಯಾವ ಸಂಸ್ಥೆಯೂ ಮುಂದೆಬರಲಿಲ್ಲ. ಉತ್ತೇಜನ ನೀಡುವ ಬದಲಿಗೆ ‘ನಿನಗ್ಯಾಕೇ ಇದೆಲ್ಲ’ ಎಂದು ಅಲ್ಲಗಳೆದವರು ಹೆಚ್ಚು. ಆಗ ಸಹಾಯಕ್ಕೆ ಬಂದವರು ಬೀಟ್‌ ಸೆನ್ಸೇಷನ್ ಸಂಸ್ಥೆಯ ಅರವಿಂದ್‌. ಅವರು ರೂಪೇಶ್‌ಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿಸಿದರು. ವಾರದಲ್ಲಿ ಮೂರು ದಿನ ಕೋರ್ಸ್‌ ಇರುತ್ತಿತ್ತು. ಕ್ಲಾಸ್‌ ಎರಡನೇ ಮಹಡಿಯಲ್ಲಿ ಇದ್ದಿದ್ದರಿಂದ ಅಲ್ಲಿಗೆ ಹೋಗುವುದು ಕಷ್ಟವಾಗಿತ್ತು. ಆಗ ಅಮ್ಮ ಅಥವಾ ಅಪ್ಪ ಇವರನ್ನು ಮಗುವಿನಂತೆ ಎತ್ತಿಕೊಂಡು ಹೋಗುತ್ತಿದ್ದರಂತೆ.

‘ಡಿಜೆ ಕೋರ್ಸ್‌ ಮುಗಿಯಿತು. ಆದರೆ, ಕೆಲಸ ಸಿಗಲಿಲ್ಲ. ಯಾರೂ ನನ್ನನ್ನು ಗುರುತಿಸಲಿಲ್ಲ’ ಎಂದು ಹೇಳುವಾಗ ರೂಪೇಶ್ ಅವರ ಮಾತುಗಳಲ್ಲಿ ನೋವು ತುಂಬಿಕೊಂಡಿತ್ತು. ‘ನನ್ನನ್ನು ಡಿಜೆಯಾಗಿ ಪಾರ್ಟಿಗೆ ಕರೆದರೆ, ಅಲ್ಲೇನಾದರೂ ತಪ್ಪಾಗಿಬಿಟ್ಟರೆ ಎಂಬ ಅಳಕು ಆಯೋಜಕರಿಗಿತ್ತು ಎನ್ನಿಸುತ್ತದೆ. ಹಾಗಾಗಿ ಯಾರು ಅವಕಾಶಗಳನ್ನು ನೀಡಲಿಲ್ಲ’ ಎಂದು ಗುರುತಿಸಿದಿದ್ದಕ್ಕೆ ಕಾರಣವನ್ನೂ ಹೇಳಿಬಿಟ್ಟರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಅವರು, ಡಿಜೆ ಆಗಿ ಕಾರ್ಯನಿರ್ವಹಿಸಲು ಬೇಕಾದ ತಾಲೀಮನ್ನು ಮನೆಯಲ್ಲೇ ಮಾಡಿಕೊಂಡರು. ಕುಳಿತುಕೊಳ್ಳುವ ಕುರ್ಚಿಯನ್ನು ಅಡ್ಜೆಸ್ಟ್ ಮಾಡಿಕೊಳ್ಳುವುದು, ಡಿಸ್ಪ್ಲೆ ಪರದೆಯನ್ನು ಬೇಕಾದಂತೆ ಸರಿಪಡಿಸಿಕೊಳ್ಳವುದನ್ನು ಅಭ್ಯಾಸ ಮಾಡಿದರು. ಜತೆಗೆ, ಎಲ್ಲ ವರ್ಗದವರೂ ಮೆಚ್ಚುವಂತಹ ಹಾಡುಗಳನ್ನು ಆಯ್ಕೆ ಮಾಡಿಕೊಂಡರು. ನಿತ್ಯ ಹೆಚ್ಚು ಸಮಯವನ್ನು ಸಂಗೀತ ಕೇಳುವುದಕ್ಕೆ ಮೀಸಲಿಟ್ಟರು. ಪ್ರತಿ ಹಾಡಿನ ಬೀಟ್‌ (ತಾಳ) ನೆನಪಿಟ್ಟುಕೊಂಡು, ಅದಕ್ಕೆ ಸರಿಹೊಂದುವ ಮತ್ತೊಂದು ಹಾಡಿನ ಬೀಟ್‌  ಮಿಕ್ಸ್ ಮಾಡುವುದನ್ನು ಕಲಿತರು. ಆಗ ಅವಕಾಶಗಳು ಇವರನ್ನೇ ಹುಡುಕಿ ಬಂದವು. ‘ಇದೆಲ್ಲ ಆದ ನಂತರ ನಾನು 40ಕ್ಕೂ ಹೆಚ್ಚು ಶೋಗಳನ್ನು ಕೊಟ್ಟಿದ್ದೇನೆ. ಕೆಲವು ಕಡೆ ಕಾರ್ಯಕ್ರಮಗಳಲ್ಲಿ ನಾನೇ ವೀಲ್‌ ಚೇರ್‌ಗಳನ್ನೇ ಅಡ್ಜಸ್ಟ್‌ ಮಾಡಿಕೊಳ್ಳುತ್ತೀನಿ. ಇನ್ನು ಕೆಲವು ಕಡೆ ಇರುವ ಕುರ್ಚಿಯಲ್ಲೇ ಕಷ್ಟಪಟ್ಟು ಮೂರು ಗಂಟೆಗಳ ಕಾಲ ಕುಳಿತು ಕಾರ್ಯಕ್ರಮ ನಡೆಸಿಕೊಡುತ್ತೇನೆ. ಇದೆಲ್ಲವು ನನ್ನ ಪೋಷಕರು ಹಾಗೂ ಸ್ನೇಹಿತರು ಸಹಾಯ, ಧೈರ್ಯದಿಂದ ಸಾಧ್ಯವಾಗಿದೆ’ ಎಂದು ನೆನಪಿಸಿಕೊಂಡರು ರೂಪೇಶ್.

ಚೇರ್ ಮೇಲೆ ಫೋಟೊಗ್ರಫಿ!

ಡಿಜೆ ಕಾರ್ಯಕ್ರಮಗಳು ಹೆಚ್ಚಾಗಿ ಸಿಗದ ಕಾಲವದು. ಒಂದು ವಾರದಲ್ಲಿ ಒಂದೋ ಎರಡೋ ಸಿಕ್ಕರೆ ಹೆಚ್ಚು. ಬಿಡುವಿನ ವೇಳೆ ಏನು ಮಾಡುವುದು ಎಂದು ರೂಪೇಶ್ ಚಿಂತನೆ. ಹಾಗಾಗಿಯೆ ಛಾಯಾಗ್ರಹಣದ ಬಗ್ಗೆಯೂ ತರಬೇತಿ ಪಡೆದರು. ಪೊನ್ನಂ ಎಂಬ ಗೆಳೆಯರು ಛಾಯಾಗ್ರಹಣ ತರಬೇತಿ ನೀಡಿದರು. ‘ಬೇರೆಯವರ ತರಹ ಓಡಾಡಿಕೊಂಡು ಫೋಟೊ ತೆಗೆಯಲು ಸಾಧ್ಯವಿಲ್ಲ. ಕುರ್ಚಿ ಮೇಲೆ ಕುರ್ಚಿ ಹಾಕಿಕೊಂಡು ಐದು ಅಡಿ ಎತ್ತರಕ್ಕೆ ಏರಿಸಿಕೊಂಡು, ಅದರ ಮೇಲೆ ಕುಳಿತು ಫೋಟೊ ತೆಗೆಯುತ್ತೇನೆ’ ಎನ್ನುತ್ತಾರೆ ರಾಬರ್ಟ್‌. ‘ಈಗ ಸ್ನೇಹಿತರ ಕಾರ್ಯಕ್ರಮಗಳಿಗೆ ನಾನೇ ಛಾಯಾಗ್ರಾಹಕ’ ಎಂದು  ಅವರು ಹೇಳುವಾಗ ಅವರ ಮಾತಿನಲ್ಲಿ ಅದೆಂಥ ವಿಶ್ವಾಸ.

ಜೀವನದುದ್ದಕ್ಕೂ ನೋವುಗಳು ಎದುರಾದರೂ, ಕಲಿತಿರುವ ಚಟುವಟಿಕೆಗಳಿಂದ ಆ ನೋವನ್ನು ಮರೆಯುವ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಲಿಂಗರಾಜಪುರದಲ್ಲಿ ನೆಲಸಿರುವ ಇವರಿಗೆ ತಂದೆ ಮೋಹನ್, ತಾಯಿ ವಿಮಲ, ತಮ್ಮ ಕಾರ್ತಿಕ್ ಜತೆಗೆ ನೂರಾರು ಸ್ನೇಹಿತರು ಅವರ ನೋವನ್ನು ಮರೆಸುವಲ್ಲಿ ನೆರವಾಗಿದ್ದಾರೆ.

‘ನನಗೂ ಇತರರಂತೆ ಜೀವನ ನಡೆಸುವ ಆಸೆ. ಆದರೆ, ಈಗಿರುವ ಡಿಜೆ ಕೆಲಸದಿಂದಲೇ ಜೀವನ ಸುಗಮವಾಗಿ ನಡೆಯುವುದಿಲ್ಲ. ನನಗೊಂದು ಅವಕಾಶ ಕೊಡಿ, ನಾನು ಎಲ್ಲರಂತೆ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರೂ, ನನ್ನನ್ನು ನಂಬುವವರೇ ಕಡಿಮೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೂಪೇಶ್. ಇಂಥ ನೋವಿನ ನಡುವೆಯೂ ಅವರು ‘ಯಾವುದಾದರೂ ಕೆಲಸ ಸಿಗಬಹುದೇ’ ಎಂಬ ನಿರೀಕ್ಷೆಯಲ್ಲಿದ್ದಾರೆ. ರೂಪೇಶ್ ಅವರ ಸಂಪರ್ಕ ಸಂಖ್ಯೆ: 9606845424

ರೂಪೇಶ್‌ ರಾಬರ್ಟ್‌ ಅವರ ಯೂಟ್ಯೂಬ್‌ ಚಾನೆಲ್ ಗಾಗಿ ಈ ಲಿಂಕ್ ನೋಡಿ: https://www.youtube.com/channel/UCmWOr16o1Ndpb_MrYXtalkQ

***

ಬ್ರಿಟಿಲ್ ಬೋನ್‌

‘ಬ್ರಿಟಿಲ್ ಬೋನ್ ಕಾಯಿಲೆ’ ಎಂದರೆ ಮನುಷ್ಯ ದೇಹದ ಮೂಳೆಯ ಭಾಗವನ್ನು ಗಟ್ಟಿಯಾಗಿ ಹಿಡಿದರೆ, ಅಲ್ಲಿರುವ ಮೂಳೆಗಳು ಪುಡಿಯಾಗುತ್ತವೆ. ಇದೇ ಕಾಯಿಲೆ ರೂಪೇಶ್‌ಗೆ ಇರುವುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !