ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಚಿತ್ರ: ಕಲೆಯನ್ನೇ ಬದುಕಾಗಿಸಿಕೊಂಡ ಕಲಾವಿದ ಉಪಾಸನಾ ಮೋಹನ್

Last Updated 15 ಜೂನ್ 2022, 15:38 IST
ಅಕ್ಷರ ಗಾತ್ರ

“ಸಾವಿರದಳ ಕಮಲಿನಿ ಓ ಭಾರತಿ”, “ಜಕ್ಕಣಕ್ಕ ಜೈ”, “ಆಗು ಗೆಳೆಯ”, “ಪ್ರಿಯತಮನಿಲ್ಲದೇ”, “ಜೋಗಿ ಕಾಡತಾನ”, “ಬಯಲಿನೊಳಗೆ”, “ಅಮ್ಮ ನಿನ್ನ ಮರೆಯದಂತೆ”, “ಯಾರ ದನಿಯದು” ಹೀಗೆ ನೂರಾರು ಸುಮಧುರ ಗೀತೆಗೆ ಸಂಗೀತ ನೀಡಿರುವ ಉಪಾಸನಾ ಮೋಹನ್, ಇಂದು ಸುಗಮಸಂಗೀತ ಕ್ಷೇತ್ರದಲ್ಲಿ ಸಿ. ಅಶ್ವಥ್ ನಂತರದ ಪೀಳಿಗೆಯ ಪ್ರಮುಖ ಹೆಸರು.

ಭಾವಗೀತಾ ಕ್ಷೇತ್ರಕ್ಕೆ ಯುವ ಪೀಳಿಗೆಯನ್ನು ಪರಿಚಯಿಸುತ್ತಾ ಅದರ ಸಿರಿವಂತಿಕೆಯನ್ನು ಹೆಚ್ಚಿಸಿದ್ದು ಹಾಗೂ ಅನೇಕ ಕವಿಪುಂಗವರ ಗೇಯ ಗೀತೆಗಳನ್ನು ಮನೆ-ಮನೆಗೆ ತಲುಪಿಸಿದ ಕೀರ್ತಿ ಉಪಾಸನಾ ಮೋಹನ್ ಅವರದು. ತಮ್ಮ ಉಪಾಸನಾ ಸಂಸ್ಥೆಯ ಮೂಲಕ ಗಾಯನದ ಹೊಸ ಹೊಸ ಆವಿಷ್ಕಾರ ಮಾಡಿದವರು. ಆದ್ದರಿಂದಲೇ ಕಲಾಸಕ್ತರು ಇವರನ್ನು ‘ಉಪಾಸನಾ ಮೋಹನ್’ ಎಂದೇ ಗುರುತಿಸುತ್ತಾರೆ.

ಉಪಾಸನಾ ಮೋಹನ್ವಿ.ಎಸ್. ಭಾಗ್ಯಲಕ್ಷ್ಮಿ ಹಾಗೂ ಎಂ.ಜಿ. ಜಯರಾಮ್ ಅವರ ಮೂರನೇ ಮಗನಾಗಿ 1967ರ ಜನವರಿ 28ರಂದು ಮೈಸೂರಲ್ಲ್ಲಿ ಜನಿಸಿದರು. ಹುಟ್ಟುತ್ತಲೇ ತಂದೆಯನ್ನು ಕಳೆದುಕೊಂಡರು. ಮುಂದೆ ತಾಯಿಯ ತವರು ಮಂಡ್ಯ ನಗರಕ್ಕೆ ಬಂದರು. ತಾತ ಶ್ರೀಕಂಠ ಶಾಸ್ತ್ರಿಗಳು ಬೇರೆ ಮಕ್ಕಳಿಗೆ ಕಲಿಸುತ್ತಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸ್ವರಗಳು ಒಂದೊಂದಾಗಿ ಮನಸ್ಸಿಗೆ ನಾಟತೊಡಗಿತ್ತು.

ಮೋಹನ್ ತಮ್ಮ 12ನೇ ವಯಸ್ಸಿನಲ್ಲಿ ಮೆನಂಜಿಟೀಸ್ ಎಂಬ ಮೆದುಳು ರೋಗಕ್ಕೆ ತುತ್ತಾದರು. ಇದರಿಂದ ನೆನಪಿನ ಶಕ್ತಿಯು ಕ್ಷೀಣಿಸಿತ್ತು. ಎಷ್ಟೇ ಓದಿದರೂ ಅದು ಉಳಿಯುತ್ತಿರಲಿಲ್ಲ. ಹೇಗೋ ಕಾಲೇಜಿನವರೆವಿಗೂ ನಿಭಾಯಿಸಿದ ಮೋಹನ್ ಸಂಗೀತದಲ್ಲಾದರೂ ಏನಾದರೂ ಸಾಧಿಸೋಣವೆಂದು ಶಾಸ್ತ್ರೀಯ ಸಂಗೀತ ಕಲಿಕೆಗೆ ಮುಂದಾದರು.

ಮೋಹನ್ ಅವರಿಗೆ ವಿದ್ವಾನ್ ತಾಂಡವಮೂರ್ತಿ ಅವರಲ್ಲಿ ಶಾಸ್ತ್ರೀಯ ಸಂಗೀತದ ಓಂಕಾರವಾಯಿತು. ನಂತರದಲ್ಲಿ ಮೈಸೂರಿನ ವಿದ್ವಾನ್ ಶ್ರೀವತ್ಸ ಹೆಚ್ಚಿನ ಪಾಠವನ್ನು ಭೋದಿಸಿದರು. ಮೋಹನ್ ಮೂಲತ: ಶಾಸ್ತ್ರೀಯ ಸಂಗೀತ ಪರಂಪರೆಯ ಮನೆತನದವರಾದರೂ ಮುಂದೆ ಸುಗಮಸಂಗೀತಕ್ಕೆ ಆಕರ್ಷಿತರಾದರು. ಅವರಿಗೆ ನಾದ ವಿನೋದಿನಿ ಕಲಾವೃಂದದಲ್ಲಿ ಹಾಡುವ ಅವಕಾಶ ದೊರೆಯಿತು.

ಮಂಡ್ಯ ನಗರದಲ್ಲಿ ಕೆಲವು ಕಾರ್ಯಕ್ರಮಗಳನ್ನು ನೀಡುತ್ತಾ ಭಾವಗೀತೆಯ ಕಡೆ ಹೆಚ್ಚಾಗಿ ಒಲವನ್ನು ಬೆಳೆಸಿಕೊಂಡರು. ಇದರ ಮಧ್ಯೆ ರೇಡಿಯೋ-ಟಿವಿ ಡಿಪ್ಲೊಮಾ ಮುಗಿಸಿ ಒಂದು ಅಂಗಡಿಯಲ್ಲಿ ಉಪಕರಣಗಳನ್ನು ರಿಪೇರಿ ಮಾಡುವ ಕಾಯಕದಲ್ಲಿದ್ದರು.

ಮುಂದೆ ಮೋಹನ ಅವರು ಬೆಂಗಳೂರಿಗೆ ಬಂದು ಜೀವನ ನಿರ್ವಹಣೆಗಾಗಿ ಗಾಂಧಿಬಜಾರಿನಲ್ಲಿ ಟಿವಿ-ಟೇಪ್ ರೆಕಾರ್ಡರ್ ರಿಪೇರಿ ಅಂಗಡಿ ತೆರೆದರು. ಗಾಂಧಿಬಜಾರ್ ಆಗಿನ ಕಾಲದಲ್ಲಿ ಕವಿಗಳಿಗೆ ಸ್ಫೂರ್ತಿಯ ನೆಲೆವೀಡು. ಕವಿ ಕವನಗಳನ್ನು ಗುನುಗುತ್ತಲೇ ಸುಗಮಸಂಗೀತದ ಕಲಿಕೆಗೆ ಸೇರ್ಪಡೆಯಾದರು ಮೋಹನ್.

ಸ್ಪಲ್ಪ ಏರು-ಪೇರಿನ ಜೀವನ ಇದರ ನಡುವೆಯೇ ಫಿಲಿಪ್ಸ್ ಕಂಪೆನಿಯ ಉದ್ಯೋಗಿಯಾದರು. ಬಿಡುವಿನ ವೇಳೆಯಲ್ಲಿ ಮತ್ತೆ ಗಾನಲೋಕ. ಅದೇ ವೇಳೆ ಪ್ರಸಿದ್ಧ ಗಾಯಕ ಜಿ.ವಿ.ಅತ್ರಿ ಅವರು “ಸಂಗೀತ ಗಂಗಾ” ಸಂಸ್ಥೆಯನ್ನು ತೆರೆದಿದ್ದರು. ಮೋಹನ್ ಅತ್ರಿಯವರಲ್ಲಿ ಶಿಷ್ಯವೃತ್ತಿ ಪ್ರಾರಂಭಿಸಿದರು. ಇಲ್ಲಿ ಬಂದ ಮೇಲೆ ಒಂದು ನಿರ್ಧಿಷ್ಟ ಗುರಿಗೆ ಮನಸ್ಸು ಹದವಾಗತೊಡಗಿತು. ಅತ್ರಿಯವರ ಬಳಿ ಸಂಗೀತದ ಎಲ್ಲಾ ಪ್ರಾಕಾರಗಳಲ್ಲಿಯೂ ಸೂಕ್ತ ಮಾರ್ಗದರ್ಶನ ಪಡೆಯುತ್ತಾ ವಿದ್ಯಾರ್ಥಿಯಾಗಿ ಸೇರಿದ್ದ ಮೋಹನ್, ಅದೇ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾಗಿ ದುಡಿದರು. ನೂರಾರು ಕನಸಿನೊಂದಿಗೆ ತನ್ನ ಜೊತೆಯಲ್ಲೇ ಇದ್ದ ಮತ್ತೊಬ್ಬ ಕಲಾವಿದ ಕಿಕ್ಕೇರಿ ಕೃಷ್ಣಮೂರ್ತಿ ಜೊತೆ ಸೇರಿ “ಆದರ್ಶ ಸುಗಮ ಸಂಗೀತ ಶಾಲೆಯನ್ನು ಆರಂಭಿಸಿದರು.


ಇಲ್ಲಿ ಎರಡು ವರ್ಷಗಳ ಕಾಲ ತಾವೂ ಬೆಳೆಯುತ್ತಾ ತಮ್ಮೊಂದಿಗೆ ಹಲವಾರು ವಿದ್ಯಾರ್ಥಿಗಳನ್ನು ಕ್ಷೇತ್ರಕ್ಕೆ ಪರಿಚಯಿಸಿದರು. ಅಲ್ಲಿಂದ ಹೊರಬಂದು ಸುಗಮಸಂಗೀತ ಕಲಾವಿದರ ಕ್ಷೇಮಾಭಿವೃದ್ದಿಗೆ ಸಹಾಯವಾಗಲೆಂದು “ಕಲಾಚಾವಡಿ” ಎಂಬ ಸಂಸ್ಥೆಯನ್ನು ಆರಂಭಿಸಿದರು. ಕೊನೆಗೆ ಈ ಸಂಸ್ಥೆಯನ್ನು ಅಲ್ಲಿಗೇ ಬಿಟ್ಟು “ಉಪಾಸನಾ” ಸಂಸ್ಥೆಯನ್ನು ಕಟ್ಟುವ ಕೈಂಕರ್ಯಕ್ಕೆ ಮುಂದಾದರು.

ಮುಂದೆ ಈ ಸಂಸ್ಥೆ ನೂರಾರು ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಾ ಸುಗಮಸಂಗೀತ ಕ್ಷೇತ್ರದಲ್ಲಿ ಹೆಸರಾಯಿತು ಈಗ ಇದು ಇತಿಹಾಸ. ಇಂದು ಬೆಂಗಳೂರಿನಲ್ಲಿರುವ ನೂರಾರು ಸಂಸ್ಥೆಗಳಿಗೂ ಆದರ್ಶಪ್ರಾಯವಾಗಿದೆ. ಉಪಾಸನಾ ಸಂಸ್ಥೆಗೆ ಉಚಿತ ಜಾಗ ನೀಡಿದ್ದ ಹರಿಣಿ ಸತ್ಯಪ್ರಕಾಶ್‌ರವರನ್ನು ಮೋಹನ್ ಇಂದಿಗೂ ನೆನೆಯುತ್ತಾರೆ.


ಸಂಗೀತ ಗಂಗೆಯಲ್ಲಿ ತೇಲಿ ಹೋದ ಜಿ.ವಿ.ಅತ್ರಿಯವರನ್ನು ಸ್ಮರಿಸುತ್ತಾ ಭಾವುಕರಾದ ಮೋಹನ್, ಅವರ ಸವಿ ನೆನಪಿಗಾಗಿ “ಜಿ.ವಿ ಅತ್ರಿ ಪ್ರಶಸ್ತಿ”ಯನ್ನು ಜಾರಿಗೆ ತಂದರು. ಉಪಾಸನಾ ಸಂಸ್ಥೆಯ ಈ ಪ್ರತಿಷ್ಠಿತ ಪ್ರಶಸ್ತ್ತಿಯನ್ನು ಅನೇಕ ಯುವ ಕಲಾವಿದರಿಗೆ ನೀಡಿ ಪುರಸ್ಕರಿಸಿದ್ದಾರೆ. ಇದು ಅತ್ರಿಯವರ ಕನಸು ಕೂಡಾ ಹೌದು ಎನ್ನುತ್ತಾರೆ ಮೋಹನ್.

ಉಪಾಸನಾ ಮೋಹನ್ ತಮ್ಮ ಸಂಸ್ಥೆಯ ಮೂಲಕ ಗೀತಧಾರೆ, ಬಳ್ಳಿಯೊಡಲ ಕುಸುಮಗಳು, ಬಾ ಬಾ ಓ ಬೆಳಕೆ, ಪ್ರೇಮದಚಿಟಿಕೆ, ಚಿಗುರುಚೈತ್ರ, ಭರವಸೆಯ ಕುಡಿಗಳು, ನಾಳಿನ ಗೀತೆಗಳು, ಹಾಡುಹಬ್ಬ, ಜೋಡಿ-ಮೋಡಿ, ಗಾನಜಗಲಿ, ನಿರಂತರ ಕವಿತಾಗಾಯನ ಎಂಬ ನೂರಾರು ವಿನೂತನ ಕಾರ್ಯಕ್ರಮಗಳನ್ನು ನಡೆಸಿ ಯುವ ಗಾಯಕ-ಗಾಯಕಿಯರನ್ನು ಹೊರ ತರುವ ಪ್ರಯತ್ನ ಮಾಡಿದರು.

ತಮ್ಮ ಸಂಸ್ಥೆಯಲ್ಲಿ ಹೊಸ ಹೊಸ ಕವಿಗೀತೆಗಳಿಗೆ ಸಂಗೀತದ ಸ್ಪರ್ಷ ನೀಡಿ ಹಾಡುಗಳನ್ನು ಕಲಿಸುತ್ತಾ ಬಂದ ಉಪಾಸನಾ ಮೋಹನ್ ಇಂದಿನ ಪೀಳಿಗೆಯ ಪ್ರಮುಖ ಸಂಗೀತ ನಿರ್ದೇಶಕರೆನಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಭಾವಗೀತೆಗಳ ಸಿ.ಡಿಯನ್ನು ಹೊರತಂದು, ಐನೂರಕ್ಕೂ ಹೆಚ್ಚು ಭಾವಗೀತೆಗಳನ್ನು ಸಂಯೋಜಿಸಿದ್ದಾರೆ. ಆಕಾಶವಾಣಿಯ ಸುಗಮಸಂಗೀತ ವಿಭಾಗದ “ಬಿ-ಹೈ ಗ್ರೇಡ್” ಸಂಯೋಜಕರಾಗಿದ್ದಾರೆ. “2020ರ ಕರ್ನಾಟಕ ಕಲಾಶ್ರೀ ಪ್ರಶಸ್ತಿ”ಗೆ ( ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ) ಭಾಜನರಾಗಿದ್ದಾರೆ.

ಕಲಾತ್ಮಕ ಚಲನಚಿತ್ರ “ಭಾವನೆಗಳ ಬೆನ್ನೇರಿ” ಚಿತ್ರಕ್ಕೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರಲ್ಲದೇ “ಗುಳ್ಳೇನರಿ” ಹಾಗೂ “ಮಂಜುಮಾಯೆ”ನಾಟಕಕ್ಕೂ, ಕೆಲ ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ. ಎರಡು ಪ್ರಮುಖ ಕೃತಿಗಳನ್ನು ಹೊರತಂದ ಮೇರು ಕಲಾವಿದ ಉಪಾಸನಾ ಮೋಹನ್, ಸಾಂಸಾರಿಕ ಜೀವನದಿಂದ ಹೊರಗಿದ್ದು ಸುಗಮಸಂಗೀತ ಲೋಕಕ್ಕೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಲೇಖನ– ಸಂಧ್ಯಾ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT