ಬುಧವಾರ, ನವೆಂಬರ್ 13, 2019
17 °C
ಅಮೆರಿಕದ ಮಿಚಿಗಾನ್‌ ವಿಶ್ವವಿದ್ಯಾಲಯದ ಗ್ರಂಥಪಾಲಕಿ ಜ್ಯಾಮಿ ಲಾಷ್‌ನ ವಿನೂತನ ಪ್ರಯತ್ನ

ಗ್ರಂಥಪಾಲಕಿಯ ಸೃಜನಶೀಲತೆ: ಬಾಯಲ್ಲಿ ಇಟ್ಟರೆ ಕರಗುತ್ತವೆ ‘ಬೆಣ್ಣೆ’ ಪುಸ್ತಕಗಳು

Published:
Updated:
Prajavani

ಇತಿಹಾಸವನ್ನು ಓದಿಕೊಂಡ ಯುವತಿ ಜ್ಯಾಮಿ ಸೃಜನಶೀಲ ಪುಸ್ತಕಗಳನ್ನು ರೂಪಿಸಿ ಗಮನ ಸೆಳೆಯುತ್ತಿದ್ದಾರೆ. ಹಾಗೆಂದು ಈಕೆ ಲೇಖಕಿಯಲ್ಲ, ಮುದ್ರಕಿಯೂ ಅಲ್ಲ. ಆದರೆ, ಹೊಸ ಹೊಸ ಪರಿಕಲ್ಪನೆಗಳೊಂದಿಗೆ ಚಂದನೆಯ ಪುಸ್ತಕಗಳನ್ನು ರಚಿಸುವ ಕಲೆಗಾರ್ತಿ. 

ಅಮೆರಿಕದ ಹಲವು ವಿಶ್ವವಿದ್ಯಾಲಯಗಳು, ಪ್ರಮುಖ ಕಾಲೇಜುಗಳು, ಗ್ರಂಥಾಲಯಗಳ ಕಪಾಟುಗಳಲ್ಲಿ ಇಣುಕುವ ಈ ಅಪರೂಪದ ಪುಸ್ತಕಗಳ ಪ್ರತಿ ಪುಟವೂ ವಿಶೇಷ. ಈಚೆಗಷ್ಟೇ ಅವರು ತಯಾರಿಸಿರುವ ಪುಸ್ತಕ ಗಮನ ಸೆಳೆಯುತ್ತಿದೆ. ಏಕೆಂದರೆ ಇದು, ಕಾಗದದಿಂದ ತಯಾರಾಗಿಲ್ಲ. ಪ್ರಿಂಟಿಂಗ್‌ ಪ್ರೆಸ್‌ನಲ್ಲೂ ಅಚ್ಚಾಗಿಲ್ಲ. ಆದರೆ, ಬಾಯಲ್ಲಿ ಇಟ್ಟರೆ ಕರಗುವ ಸಂರಕ್ಷಿ‌ತ (ಪ್ರಿಸರ್ವ್ಡ್‌) ಬೆಣ್ಣೆಯಿಂದ ತಯಾರಾಗಿದೆ! 

ಯಾವಾಗಲೂ ಹೊಸತನಕ್ಕೆ ತುಡಿಯುವ ಜ್ಯಾಮಿ ಭಿನ್ನವಾಗಿ ಏನಾದರೂ ಮಾಡಬೇಕೆಂಬ ಛಾತಿ ಉಳ್ಳವರು. ಹಾಗಾಗಿ ಆಹಾರಪ್ರಿಯರ ಬೆಣ್ಣೆ (ಚೀಸ್‌) ಇಲ್ಲಿ ಪುಸ್ತಕದ ರೂಪ ಪಡೆದುಕೊಂಡಿದೆ. ಆಯಾತಾಕಾರದ 20 ಬೆಣ್ಣೆಯ ತುಣುಕುಗಳನ್ನು ತೆಗೆದುಕೊಂಡು ಪ್ರತಿಯೊಂದನ್ನೂ ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟು, ಒಂದೇ ಗಾತ್ರದ ಪುಟಗಳಂತೆ ಬದಲಿಸಿದರು. ಇವನ್ನೆಲ್ಲಾ ಕೂಡಿಸಿ ಹಳದಿ ಬಣ್ಣದ ರಟ್ಟಿನಲ್ಲಿ ಜೋಡಿಸಿ ಪುಸ್ತಕ ತಯಾರಿಸಿದರು. ಇದಕ್ಕೆ ‘ಅಮೆರಿಕನ್ ಚೀಸ್‌–20 ಸ್ಲೈಸೆಸ್‌’ ಎಂದು ಹೆಸರಿಟ್ಟಿದ್ದಾರೆ.

ಕಸವನ್ನೆಲ್ಲ ರಸವಾಗಿಸುವ ಪ್ರಕ್ರಿಯೆಯಲ್ಲಿ ಸದಾ ಕ್ರಿಯಾಶೀಲರಾಗಿರುವ ಅವರು 200 ಡಾಲರ್‌ ಮುಖಬೆಲೆಯ ನೋಟುಗಳನ್ನು ಕ್ರಮಸಂಖ್ಯೆಗೆ ಅನುಗುಣವಾಗಿ ಜೋಡಿಸಿ ಪುಸ್ತಕ ತಯಾರಿಸಿದ್ದಾರೆ. ಬಳಸಿ ಬಿಸಾಡುವಂತಹ ನ್ಯಾ‍ಪಿಕಿನ್‌ಗಳಿಂದಲೂ ಅವರು ಪುಸ್ತಕ ತಯಾರಿಸಿದ್ದಾರೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೇಕಾದ ಪ್ರೊಗ್ರಾಮಿಂಗ್ ಪುಸ್ತಕಗಳನ್ನೂ ತಯಾರಿಸಿದ್ದಾರೆ.

ಹಾಗೆಂದು ಪ್ರವೃತ್ತಿಯಲ್ಲಿ ಕುಸುರಿ ಕಲೆಗೆ ಆತುಕೊಂಡಿದ್ದರೂ ಇಲ್ಲಿನ ಆರ್ಟ್‌ ಆ್ಯಂಡ್ ಡಿಸೈನ್ ಶಾಲೆಯ ಗ್ರಂಥಾಲಯದಲ್ಲಿ  ಏಕಕಾಲದಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಬೇಕಾಗುವ ಪುಸ್ತಕಗಳನ್ನು ಒದಗಿಸುತ್ತಾರೆ. ಸದ್ಯಕ್ಕೆ ಇವರ ಚೀಸ್‌ ಪುಸ್ತಕ ಎಲ್ಲರನ್ನು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 

ಈ ರೀತಿ ಕಲಾತ್ಮಕತೆಯನ್ನು ಬಳಸಿ ತಯಾರಿಸಿದ ಪುಸ್ತಕಗಳು ಈ ಗ್ರಂಥಾಲಯದಲ್ಲಿ ಪ್ರದರ್ಶನವಿದ್ದು, ಇತರೆ ಗ್ರಂಥಪಾಲಕರ ಕೆಂಗೆಣ್ಣಿಗೂ ಗುರಿಯಾಗಿದೆ. ಇಂಥ ಆಲಂಕಾರಿಕ ಪುಸ್ತಕಗಳನ್ನು ನಿಜವಾದ ಪುಸ್ತಕಗಳ ಪಕ್ಕ ಇಡುವುದರ ಅಗತ್ಯವೇನು? ಎಂಬ ಟೀಕೆಗಳು ಕೇಳಿಬಂದಿವೆ. ಇದಾವೂದಕ್ಕೂ ತಲೆಕೆಡಿಸಿಕೊಳ್ಳದ ಜ್ಯಾಮಿ ಇನ್ನೇನಾದರೂ ಬಳಸಿ ಪುಸ್ತಕ ತಯಾರಿಸಬಹುದಾ? ಎಂದು ಲೆಕ್ಕ ಹಾಕುತ್ತಿದ್ದಾರೆ.  ಸ್ಥಳೀಯ ಲೇಖಕರ, ಕಲಾವಿದರ ಪುಸ್ತಕಗಳನ್ನು ಖರೀದಿಸಿ ತಾವಿರುವ ಗ್ರಂಥಾಲಯದಲ್ಲಿ ಮತ್ತೊಂದು ವಿಶೇಷ ಗ್ರಂಥಾಲಯ ನಿರ್ಮಿಸಿದ್ದಾರೆ. ಆ ಮೂಲಕ ಅಕ್ಷರಾಸಕ್ತರನ್ನು ಗ್ರಂಥಾಲಯದತ್ತ ಸೆಳೆಯುತ್ತಿದ್ದಾರೆ. 

ಪ್ರತಿಕ್ರಿಯಿಸಿ (+)