ಈ ಹಾಡುಗಳದ್ದೇ ಆರ್ಭಟ

7

ಈ ಹಾಡುಗಳದ್ದೇ ಆರ್ಭಟ

Published:
Updated:
Deccan Herald

ಗಣೇಶನ ಭಕ್ತರ ಭಕ್ತಿ ಸದಾ ಅದ್ದೂರಿ ಗಣೇಶೋತ್ಸವದ ಕಡೆಗೆ ಹಾತೊರೆಯುತ್ತದೆ. ಹೀಗಾಗಿ ಗಣೇಶ ಚತುರ್ಥಿ ಬಂತೆಂದರೆ ವಾದ್ಯಗೋಷ್ಠಿಗಳ ಸದ್ದು ನಗರದಾದ್ಯಂತ ಮೊಳಗುತ್ತದೆ.

ಸಾಮಾನ್ಯವಾಗಿ ವಾದ್ಯಗೋಷ್ಠಿ ತಂಡದವರು, ಪ್ರೇಕ್ಷಕರ ಮನಗೆದ್ದಿರುವ ಕೆಲವೊಂದು ಹಾಡುಗಳನ್ನು ಅಭ್ಯಾಸ ಮಾಡಿ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಇವುಗಳ ಜೊತೆಗೆ ಆಯಾ ವರ್ಷ ತೆರೆಕಂಡ ಚಿತ್ರಗಳ ಜನಪ್ರಿಯ ಹಾಡುಗಳನ್ನೂ ವಾದ್ಯಗೋಷ್ಠಿಯ ಪಟ್ಟಿಯ ಸೇರಿಸಬೇಕು. ಇಲ್ಲದಿದ್ದರೆ ವಾದ್ಯಗೋಷ್ಠಿಯಲ್ಲಿ ಹೊಸತನ ಕಾಣುವುದಿಲ್ಲ. ಈ ವರ್ಷವೂ ಅಂತಹ ಹಲವು ಹಾಡುಗಳು ವಾದ್ಯಗೋಷ್ಠಿಗಳಲ್ಲಿ ಆರ್ಭಟಿಸಬಹುದು. ಅವುಗಳಲ್ಲಿ ಕೆಲವು ಹಾಡುಗಳು ಇಲ್ಲಿವೆ.

ಟಗರು ಬಂತು ಟಗರು...

ಈ ವರ್ಷ ತೆರೆಕಂಡ ಜನಪ್ರಿಯ ಚಿತ್ರಗಳಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ನಟನೆಯ ಟಗರು ಚಿತ್ರವೂ ಒಂದು. ಈ ಚಿತ್ರದ ಟೈಟಲ್ ಸಾಂಗ್ ‘ಟಗರು ಬಂತು ಟಗರು...’ ಹಾಡು ಕೂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜನ ಹುಚ್ಚೆದ್ದು ಕುಣಿಯುವಂತೆ ಸಂಗೀತ ನಿರ್ದೇಶಕ ಚರಣ್‌ರಾಜ್ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಗೀತಕ್ಕೆ ತಕ್ಕಂತೆ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್‌ ಅವರು ಅದ್ಭುತವಾಗಿ ಅಕ್ಷರಗಳನ್ನು ಪೋಣಿಸಿದ್ದಾರೆ. ಈ ಹಾಡಿನ ಸಾಲುಗಳು ಮಾಸ್‌ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿವೆ. ಈ ಹಾಡು ಈ ಬಾರಿಯ ವಾದ್ಯಗೋಷ್ಠಿಗಳಲ್ಲಿ ಆರ್ಭಟಿಸಲು ಶುರುವಾಗಿದೆ.

ಅಂದ ನೋಡಲು ಕಾತರ

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್‌ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ದಿ ವಿಲನ್ ಚಿತ್ರ ಈಗಾಗಲೇ ಹಲವು ಕುತೂಹಲಗಳನ್ನು ಹುಟ್ಟು ಹಾಕಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ಪ್ರೇಮ್ ಬರೆದಿರುವ ‘ನೋಡಿವಳಂದವಾ’ ಹಾಡು ಅಭಿಮಾನಗಳ ಗಮನ ಸೆಳೆಯುತ್ತಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತವಿರುವ ಈ ಹಾಡನ್ನು ಗಾಯಕರಾದ ಅರ್ಮಾನ್ ಮಾಲಿಕ್ ಮತ್ತು ಶ್ರೇಯಾ ಘೋಷಾಲ್‌ ಇಂಪಾಗಿ ಹಾಡಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ವರ್ಷ ಹೆಚ್ಚು ಜನಪ್ರಿಯವಾಗಿರುವ ಹಾಡುಗಳ ಪಟ್ಟಿಯಲ್ಲಿ ಈ ಹಾಡು ಇರುವುದರಿಂದ ವಾದ್ಯಗೋಷ್ಠಿಗಳಲ್ಲಿ ಕೇಳಬಹುದು.

ಖಳನ ಖದರ್

ದಿ ವಿಲನ್ ಚಿತ್ರದ ಟೈಟಲ್ ಹಾಡು ‘ಅಯಾಮ್‌ ವಿಲನ್‌’ ಹಾಡು ಕೂಡ ಹೆಚ್ಚು ಗಮನ ಸೆಳೆದಿದೆ. ಈ ಹಾಡನ್ನು ನಿರ್ದೇಶಕ ಪ್ರೇಮ್ ಅವರೇ ಬರೆದಿದ್ದಾರೆ. ಗಾಯಕ ಶಂಕರ್‌ ಮಹದೇವನ್ ಅವರು ಸಾಹಿತ್ಯಕ್ಕೆ ತಕ್ಕಂತೆ ಹುಬ್ಬೇರುವಂತೆ ಹಾಡಿದ್ದು, ಪ್ರೇಕ್ಷಕರ ಬಾಯಲ್ಲಿ ಈ ಹಾಡು ಹೆಚ್ಚು ಗುನುಗುತ್ತಿದೆ. 

ಚುಟು ಚುಟು ಅಂತಿದೆ...

ಅನಿಲ್‌ ಕುಮಾರ್ ನಿರ್ದೇಶನದ ಶರಣ್ ನಾಯಕ ನಟನಾಗಿ ನಟಿಸಿರುವ ರ್‍ಯಾಂಬೊ–2 ಚಿತ್ರದ  ಚುಟು ಚುಟು ಅಂತೈತೆ ಹಾಡು ಕೂಡ ಈ ಬಾರಿಯ ವಾದ್ಯಗೋಷ್ಠಿಗಳಲ್ಲಿ ಕೇಳಿಸುತ್ತಿದೆ. ಉತ್ತರ ಕರ್ನಾಟಕ ಭಾಗದ ಭಾಷೆಯ ಸೊಗಡನ್ನು ಚಿತ್ರ ಸಾಹಿತಿ ಶಿವು ಬೆರಗಿ ಅವರು ಅಕ್ಷರ ರೂಪದಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯಕ್ಕೆ ತಕ್ಕಂತೆ ಜನರನ್ನು ರಂಜಿಸುವಂತಹ ಸಂಗೀತವನ್ನು ಅರ್ಜುನ್ಯ ಜನ್ಯ ನೀಡಿದ್ದಾರೆ. 

ಎಣ್ಣೆ ನಮ್ದು... ಊಟ ನಿಮ್ದು...

ದುನಿಯಾ ವಿಜಯ ನಾಯಕ ನಟನಾಗಿ ನಟಿಸಿರುವ ಕನಕ ಚಿತ್ರದ ‘ಎಣ್ಣೆ ನಮ್ದು, ಊಟ ನಿಮ್ದು’ ಹಾಡನ್ನು ಟ್ರೋಲ್‌ ಮಾಡಲು ಹೆಚ್ಚು ಬಳಸಿಕೊಳ್ಳಲಾಗಿದೆ. ಈ ಮೂಲಕವೇ ಈ ಹಾಡು ಹೆಚ್ಚು ಜನಪ್ರಿಯವಾಗಿದೆ. ಹೀಗಾಗಿ ಮಾಸ್ ಪ್ರೇಕ್ಷಕರನ್ನು ರಂಜಿಸುವಂತ ಈ ಹಾಡು ಗಣೇಶೋತ್ಸವದ ವಾದ್ಯಗೋಷ್ಠಿಗಳಲ್ಲಿ ಕೇಳಬಹುದು. ಈ ಹಾಡನ್ನು ಸಂಗೀತ ನಿರ್ದೇಶಕ ನವೀನ್ ಸಂಜು ಅವರೇ ಬರೆದು ಹಾಡಿರುವುದು ವಿಶೇಷ.

ಅಮ್ಮನ ಲಾಲಿ ಹಾಡು

ಈ ವರ್ಷ ತೆರೆಕಂಡ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ಅಮ್ಮ ಐ ಲವ್ ಯು ಚಿತ್ರದ ಟೈಟಲ್ ಹಾಡು ಕೂಡ ಪ್ರೇಕ್ಷಕರ ಗಮನ ಸೆಳೆಯಿತು. ತಾಯಿ–ಮಗನ ಬಂಧವನ್ನು ಅಕ್ಷರ ರೂಪದಲ್ಲಿ ನಾಗೇಂದ್ರ ಪ್ರಸಾದ್ ಅವರು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಗುರುಕಿರಣ್ ಅವರ ಇಂಪಾದ ಸಂಗೀತ, ಚಿತ್ರ ರಸಿಕರ ಹೃದಯ ಗೆದ್ದಿದೆ. ಈ ಹಾಡು ಕೂಡ ಈ ಬಾರಿಯ ವಾದ್ಯಗೋಷ್ಠಿಗಳಲ್ಲಿ ಕೇಳಿಬರುತ್ತಿದೆ. 

ಏನಮ್ಮಿ... ಏನಮ್ಮಿ

ನೀನಾಸಂ ಸತೀಶ್ ನಾಯಕ ನಟನಾಗಿ ನಟಿಸಿರುವ ಏನಮ್ಮಿ, ಏನಮ್ಮಿ ಹಾಡು ಕೂಡ ಈ ಬಾರಿಯ ಜನಪ್ರಿಯ ಹಾಡುಗಳ ಪಟ್ಟಿಗೆ ಸೇರಿದೆ. ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಪಲಕ್ ಮುಚ್ಚಲ್ ಈ ಹಾಡನ್ನು ಹಾಡಿದ್ದಾರೆ. 

ಹೆಂಡತಿಯ ಚೆಂದ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಮತ್ತು ರಷ್ಮಿಕಾ ನಟನೆಯ ಅಂಜನಿಪುತ್ರ ಚಿತ್ರದ ಚಂದ ಚಂದ ನನ್ನ ಹೆಂಡ್ತಿ ಹಾಡು ಕೂಡ ಈ ವರ್ಷದ ಜನಪ್ರಿಯ ಹಾಡುಗಳ ಪಟ್ಟಿಗೆ ಸೇರಿ ಆಗಿದೆ. ಹಲವು ಶಾಲಾ–ಕಾಲೇಜುಗಳ ಸಮಾರಂಭಗಳಲ್ಲಿ ವಿದ್ಯಾರ್ಥಿಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವರ್ಷದ ವಾದ್ಯಗೋಷ್ಠಿಗಳಲ್ಲಿ ಕೇಳಿಸಬಹುದಾದ ಹಾಡುಗಳಲ್ಲಿ ಇದು ಕೂಡ ಒಂದು.

**

ಈ ಬಾರಿಯೂ ಹೆಚ್ಚು ಬೇಡಿಕೆ ಇದೆ. ಪ್ರೇಕ್ಷಕರು ಹೊಸತನವನ್ನು ಬಯಸುತ್ತಾರೆ. ಹಳೆ ಹಾಡುಗಳ ಜೊತೆಗೆ ಹೊಸ ಹಾಡುಗಳನ್ನೂ ಅಭ್ಯಾಸ ಮಾಡಿ ಹಾಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ.

–ಭೀಮ್‌ ಜಿ., ಧ್ವನಿ ಆರ್ಕೆಸ್ಟ್ರಾ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !