ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Valentine day: ರಹಸ್ಯ ದ್ವೇಷಿಗಳ ವಿನೆಗರ್ ವ್ಯಾಲೆಂಟೈನ್ಸ್

Last Updated 13 ಫೆಬ್ರುವರಿ 2021, 5:29 IST
ಅಕ್ಷರ ಗಾತ್ರ
ADVERTISEMENT
""

ಪ್ರೇಮಿಗಳ ದಿನವಾದ (ವ್ಯಾಲೆಂಟೈನ್ಸ್ ಡೇ) ಫೆಬ್ರುವರಿ 14ರಂದು ಪ್ರೇಮಿಗಳು ಪ್ರೇಮ ಸಂದೇಶವುಳ್ಳ ಶುಭಾಶಯ ಪತ್ರಗಳನ್ನು ಕಳುಹಿಸುವ ಮೂಲಕ ಮತ್ತು ಚಾಕೊಲೇಟ್ ಇನ್ನಿತರೆ ಉಡುಗೊರೆಗಳನ್ನು ನೀಡುವ ಮೂಲಕ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ವಿಕ್ಟೋರಿಯನ್ ಯುಗದಲ್ಲಿ ಮತ್ತು 19ನೇ ಶತಮಾನದ ಉತ್ತರಾರ್ಧದಲ್ಲಿ ಫೆಬ್ರುವರಿ 14 ಸಹ ದುರಾದೃಷ್ಟ ಬಲಿಪಶುಗಳು ಅವರ ರಹಸ್ಯ ದ್ವೇಷಿಗಳಿಂದ(ಹೇಟರ್ಸ್) ನಿಂದನೆ ಮತ್ತು ಅವಮಾನಗಳನ್ನು ಪಡೆಯುವ ದಿನವೂ ಆಗಿತ್ತು.

ಸ್ವೀಕರಿಸುವವರನ್ನು ಕೆಣಕಲು ಅಥವಾ ಅಪಹಾಸ್ಯ ಮಾಡಿ ನೋಯಿಸುವ ಉದ್ದೇಶದಿಂದ ವಿನೆಗರ್ ವ್ಯಾಲೆಂಟೈನ್ಸ್ ಅಥವಾ ಕಾಮಿಕ್ ವ್ಯಾಲೆಂಟೈನ್ಸ್ ಎಂದು ಕರೆಯುವ ಕಾರ್ಡ್‌ಗಳನ್ನು ಕಳಿಸಲಾಗುತ್ತಿತ್ತು. ಈ ಸಿನಿಕ, ವ್ಯಂಗ್ಯಭರಿತ ಶುಭಾಶಯ ಪತ್ರಗಳನ್ನು 1840ರ ಹಿಂದೆಯೇ ಅಮೆರಿಕದ ವಿವಿಧ ಮುದ್ರಣ ಕಂಪನಿಗಳು ಮುದ್ರಿಸಿದವು. ಈ ಕಾರ್ಡ್‌ಗಳು ಅಮೆರಿಕ ಮತ್ತು ಯುರೋಪಿನಾದ್ಯಂತ ಅಂಗಡಿಗಳಲ್ಲಿ, ಹೃದಯ ಮತ್ತು ಹೂವುಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟ ಕಾರ್ಡ್‌ಗಳೊಂದಿಗೆ ಮಾರಾಟಕ್ಕೆ ಲಭ್ಯವಿರುತ್ತಿದ್ದವು.

ಅನೇಕ ವೇಳೆ ವ್ಯಾಲೆಂಟೈನ್ಸ್‌ ಹಾಗೂ ವಿನೆಗರ್ ಎರಡೂ ಕಾರ್ಡ್‌ಗಳನ್ನು ಒಂದೇ ಕಂಪನಿಗಳು ಉತ್ಪಾದಿಸುತ್ತಿದ್ದವು. ವಿನೆಗರ್ ವ್ಯಾಲೆಂಟೈನ್ಸ್ ಕಾರ್ಡ್‌ಗಳಲ್ಲಿ ಚಿತ್ರ ಹಾಗೂ ಪ್ರೀತಿ, ಪ್ರೇಮ ನಿವೇದನೆಯ ಸಂದೇಶಗಳ ಬದಲಾಗಿ ಸ್ವೀಕರಿಸುವವರನ್ನು ಅವಮಾನಿಸುವ ವಿಷಯವನ್ನೊಳಗೊಂಡಿರುವ ಒಂದೆರಡು ಸಣ್ಣ ಸಾಲು ಅಥವಾ ಕವಿತೆ ಇರುತ್ತಿತ್ತು. ಈ ಕ್ರೂರ ಸಂಪ್ರದಾಯವು ಮೊದಲು ಅಮೆರಿಕದಲ್ಲಿ ಅಭಿವೃದ್ಧಿ ಹೊಂದಿತು. ಇದರ ಜನಪ್ರಿಯತೆಯು ಬಹುಶಃ 1840ರ ದಶಕದಲ್ಲಿ ಮತ್ತು ಮುಂದೆ ಒಂದು ಶತಮಾನದವರೆಗೂ ಪ್ರವೃತ್ತಿಯಲ್ಲಿತ್ತು. ಯಾರಿಗಾದರೂ ಅವರ ಸ್ವಭಾವ ಅಥವಾ ಇನ್ನಿತರ ವಿಷಯಗಳ ಬಗ್ಗೆ ನೇರವಾಗಿ ಹೇಳಲು ಧೈರ್ಯವಿಲ್ಲದವರು ಚಿತ್ರದೊಡನೆ ಅವಮಾನಕರ ನಿಂದನೆ ಅಥವಾ ಛೇಡಿಸುವ ವಿವರಣೆಯುಳ್ಳ ಅನಾಮಧೇಯ ಕಾರ್ಡ್‌ಗಳನ್ನು ಕಳುಹಿಸುತ್ತಿದ್ದರು. ಇದನ್ನು ಸ್ವೀಕರಿಸುವವರು ತಮ್ಮನ್ನು ಯಾರು ದ್ವೇಷಿಸುತ್ತಿದ್ದಾರೆಂದು ಊಹೆ ಮಾಡಬೇಕಿತ್ತು.

ಒಂದು ಪೆನ್ನಿ ಖರ್ಚಿನಲ್ಲಿ ಅಗ್ಗವಾಗಿ ತಯಾರಿಸಿದ ವಿನೆಗರ್ ವ್ಯಾಲೆಂಟೈನ್ಸ್‌ಗಳನ್ನು ಸಾಮಾನ್ಯವಾಗಿ ಒಂದೇ ಕಾಗದದ ಹಾಳೆಯ ಒಂದು ಬದಿಯಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು. ಅಮೆರಿಕ ಹಾಗೂ ಯೂರೋಪಿನಾದ್ಯಂತ ಅವು ವೇಗವಾಗಿ ಜನಪ್ರಿಯವಾಗಲು ಕಾರಣಗಳೆಂದರೆ ಆ ಸಮಯದಲ್ಲಿ ಬಡವರು ಮತ್ತು ಕಾರ್ಮಿಕ ವರ್ಗದವರಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದ್ದುದು. ಇವರು ಐಷಾರಾಮಿ ಉಡುಗೊರೆಗಳಿಗಾಗಿ ಒಂದು ಪೆನ್ನಿಯನ್ನು ಅಪರೂಪಕ್ಕೆ ಖರ್ಚು ಮಾಡುತ್ತಿದ್ದುದು. ಆದರೆ ರಾಷ್ಟ್ರೀಯ ವ್ಯಾಲೆಂಟೈನ್ ಕಲೆಕ್ಟರ್ ಅಸೋಸಿಯೇಷನ್ ಅಧ್ಯಕ್ಷ ನ್ಯಾನ್ಸಿ ರೋಸಿನ್ ಅವರ ಪ್ರಕಾರ ಅವುಗಳ ಬಳಕೆಯು ಕೇವಲ ಕೆಳ ಆರ್ಥಿಕ ವರ್ಗಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಎಲ್ಲಾ ಆದಾಯ ಗುಂಪಿನವರು ತಮ್ಮ ಶತ್ರುಗಳು, ನೆರೆಹೊರೆಯವರು ಸ್ನೇಹಿತರ ಗುಂಪಿನ ನಡುವೆ ಇವುಗಳನ್ನು ಮುಕ್ತವಾಗಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಮಹಿಳೆಯರು ತಮ್ಮ ಅನಪೇಕ್ಷಿತರಿಗೆ, ವಿದ್ಯಾರ್ಥಿಗಳು ತಮಗೆ ಇಷ್ಟವಾಗದ ಗುರುಗಳಿಗೆ ಮತ್ತು ಕಾರ್ಮಿಕರು ತಮ್ಮ ಜಿಪುಣ ಮೇಲಧಿಕಾರಿಗಳಿಗೆ ಅನಾಮಧೇಯವಾಗಿ ಕಾರ್ಡ್‌ಗಳನ್ನು ಕಳಿಸುತ್ತಿದ್ದರು. ಪ್ರತಿ ಅವಮಾನಕ್ಕೂ ಒಂದು ಕಾರ್ಡ್ ಇತ್ತು.

1840ರವರೆಗೆ ಕಾರ್ಡ್‌ಗಳನ್ನು ಕಳಿಸುವವರಲ್ಲದೆ ಸ್ವೀಕರಿಸುವವರೇ ಅಂಚೆ ವೆಚ್ಚ ಭರಿಸಬೇಕಿತ್ತು. ಆ ದಿನಗಳಲ್ಲಿ ಒಬ್ಬ ವ್ಯಕ್ತಿಯು ಅನಾಮಧೇಯ ‘ಅಭಿಮಾನಿ’ಯಿಂದ ಅವಹೇಳನ ಮಾಡಿಸಿಕೊಳ್ಳುವ ಸಲುವಾಗಿಯೇ ಅಂಚೆವೆಚ್ಚ ಪಾವತಿಸುತ್ತಿದ್ದ. ವ್ಯಕ್ತಿಯ ನೋಟ, ಬುದ್ಧಿವಂತಿಕೆ ಅಥವಾ ಉದ್ಯೋಗವನ್ನು ಅವಮಾನಿಸುವ ಕವಿತೆಯೊಂದಿಗೆ ಲಕ್ಷಾಂತರ ವಿನೆಗರ್ ವ್ಯಾಲೆಂಟೈನ್‌ಗಳು 19 ಮತ್ತು 20ನೇ ಶತಮಾನಗಳ ನಡುವೆ ಮಾರಾಟವಾದವು.

ಕಲೆ ಮತ್ತು ವಿನ್ಯಾಸ ಇತಿಹಾಸಗಾರ ಅನ್ನೆಬೆಲ್ಲಾ ಪೋಲನ್ ಅವರು ಬ್ರಿಟನ್‌ನಲ್ಲಿ ಅವುಗಳ ಉತ್ಪಾದನೆ ಮತ್ತು ಅಂಗೀಕಾರವನ್ನು ವ್ಯಾಪಕವಾಗಿ ಸಂಶೋಧಿಸಿದ್ದಾರೆ. ಅಲ್ಲಿ ಅವರನ್ನು ಸಾಮಾನ್ಯವಾಗಿ ಅಣಕು ಅಥವಾ ಅಪಹಾಸ್ಯ ಪ್ರೇಮಿಗಳೆಂದುಕರೆಯಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT