ಗುರುವಾರ , ಜನವರಿ 23, 2020
26 °C

ವಿಮಾನದ ಕಿಟಕಿ ಏಕೆ ಗೋಲಾಕಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಮಾನ ಎನ್ನುವ ಯಂತ್ರವನ್ನು ಬಳಸಿ ಆಕಾಶದಲ್ಲಿ ಹಾರುವ ಸಾಮರ್ಥ್ಯವನ್ನು ಮನುಷ್ಯ ಪಡೆದುಕೊಂಡ ದಿನದಿಂದಲೂ, ವಿಮಾನ ಯಾನವನ್ನು ಇನ್ನಷ್ಟು ವೇಗವಾಗಿ, ಇನ್ನಷ್ಟು ಸುಖಮಯವಾಗಿ ಮಾಡಲು ಯತ್ನಗಳು ನಡೆದಿವೆ. ಅಷ್ಟೇ ಅಲ್ಲ, ಉಳಿದೆಲ್ಲ ವಿಷಯಗಳಿಗಿಂತ ಮುಖ್ಯವಾಗಿ, ವಿಮಾನ ಯಾನವನ್ನು ಇನ್ನಷ್ಟು ಸುರಕ್ಷಿತಗೊಳಿಸುವ ಯತ್ನಗಳೂ ನಡೆದಿವೆ. ವೈಮಾನಿಕ ತಂತ್ರಜ್ಞಾನ ಬೆಳೆದಂತೆಲ್ಲ ವಿಮಾನಗಳು ಹೆಚ್ಚೆಚ್ಚು ಎತ್ತರದಲ್ಲಿ ಹಾರಲು ಆರಂಭಿಸಿದವು. ಅಲ್ಲಿ ಗಾಳಿಯ ಸಾಂದ್ರತೆ ಕಡಿಮೆ ಇರುವ ಕಾರಣ, ವಿಮಾನಗಳು ಕಡಿಮೆ ಇಂಧನ ಬಳಸಿ ಹಾರಾಟ ನಡೆಸಬಹುದು. ಇದರಿಂದ ಹಣ ಕೂಡ ಉಳಿತಾಯ ಆಗುತ್ತದೆ.

ಆದರೆ, 30 ಸಾವಿರ ಅಡಿಗಳಿಗಿಂತ ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸುವಾಗ ಕೆಲವು ಸವಾಲುಗಳೂ ಎದುರಾಗುತ್ತವೆ. ಅಷ್ಟು ಎತ್ತರದಲ್ಲಿ ಪ್ರಯಾಣಿಕರು ಉಸಿರಾಡಲು ಸುಲಭ ಆಗುವಂತೆ ವಿಮಾನದ ಒಳ ಆವರಣದ ಒತ್ತಡ ಸರಿಹೊಂದಿಸಿಕೊಳ್ಳಬೇಕಾಗುತ್ತದೆ. ವಿಮಾನದ ಆಕಾರವನ್ನು ಆ ಎತ್ತರದಲ್ಲಿ ಹಾರಲು ಅನುವು ಮಾಡಿಕೊಡುವಂತೆ ರೂಪಿಸಬೇಕಾಗುತ್ತದೆ – ಒಳಗಿನ ಒತ್ತಡ ಹೆಚ್ಚಿರುವ ಕಾರಣ ವಿಮಾನದ ಆಕಾರ ಸಿಲಿಂಡರ್‌ ಮಾದರಿಯಲ್ಲಿ ಇರಬೇಕಾಗುತ್ತದೆ.

ಬ್ರಿಟನ್ನಿನಲ್ಲಿ ವಿನ್ಯಾಸಗೊಂಡ ವಿಮಾನವೊಂದಕ್ಕೆ ಚೌಕಾಕಾರದ ಕಿಟಕಿಗಳು ಇದ್ದವು. 1950ರಲ್ಲಿ ಈ ರೀತಿಯ ವಿನ್ಯಾಸದ ಮೂರು ವಿಮಾನಗಳು ಆಕಾಶದಲ್ಲೇ ಚೂರುಚೂರಾದವು. ಇದಕ್ಕೆ ಕಾರಣ ವಿನ್ಯಾಸದಲ್ಲಿನ ದೋಷ. ವಿಮಾನಗಳು ಹಾಗೆ ಚೂರಾಗಲು ಕಾರಣ ಚೌಕಾಕಾರದ ಕಿಟಕಿಗಳು ಎಂದು ತಜ್ಞರು ಕಂಡುಕೊಂಡರು.

ವಿಮಾನಗಳು ಎತ್ತರದಲ್ಲಿ ಹಾರಾಟ ನಡೆಸುವಾಗ ಒಳಗಿನ ಒತ್ತಡವು, ಹೊರಗಿನ ವಾತಾವರಣದ ಒತ್ತಡಕ್ಕಿಂತ ಹೆಚ್ಚಾಗುತ್ತದೆ. ಈ ವ್ಯತ್ಯಾಸದ ಪರಿಣಾಮವಾಗಿ ವಿಮಾನದ ಒಳಭಾಗವು ಚೂರು ಹಿಗ್ಗುತ್ತದೆ. ಇದು ವಿಮಾನದ ಕಿಟಕಿಗಳ ಮೇಲೆ ಅಪಾರ ಪ್ರಮಾಣದ ಒತ್ತಡ ಸೃಷ್ಟಿಸುತ್ತದೆ. ಚೌಕಾಕಾರದ ಕಿಟಕಿಗಳ ನಾಲ್ಕು ತುದಿಗಳಲ್ಲಿ ಸೃಷ್ಟಿಯಾಗುವ ಒತ್ತಡ ಅತಿಹೆಚ್ಚಾಗಿರುತ್ತದೆ. ಈ ಒತ್ತಡವು ಕಿಟಕಿಗಳಲ್ಲಿ ಬಿರುಕು ಉಂಟಾಗಲು ಮೂಲವಾಗುತ್ತದೆ.

ಆದರೆ, ಕಿಟಕಿಗಳ ವಿನ್ಯಾಸವು ಗೋಲಾಕಾರದಲ್ಲಿ ಇದ್ದರೆ ಅವು ಹೆಚ್ಚಿನ ಪ್ರಮಾಣದ ಒತ್ತಡವನ್ನು ತಾಳಿಕೊಳ್ಳುತ್ತವೆ. ಇದರಿಂದಾಗಿ ಕಿಟಕಿಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಕಡಿಮೆ ಆಗುತ್ತದೆ. ಹಾಗಾಗಿ, ವಿಮಾನಗಳ ವಿನ್ಯಾಸಕಾರರು ಗೋಲಾಕಾರದ ಕಿಟಕಿಗಳ ಮೊರೆ ಹೋದರು.

ಮಿಂಚುಹುಳು


ಮಿಂಚುಹುಳು

ದೇಹದಿಂದ ಬೆಳಕು ಚೆಲ್ಲುವ ಜೀವಿಗಳು ಹಲವು. ಆದರೆ ಇಂತಹ ಜೀವಿಗಳು ಹೆಚ್ಚಾಗಿ ಕಾಣುವುದು ಸಮುದ್ರವಾಸಿಗಳ ನಡುವೆ. ಭೂಮಿಯ ಮೇಲೆ ವಾಸಿಸುವ ಜೀವಿಗಳಲ್ಲಿ, ದೇಹದಿಂದ ಬೆಳಕು ಚೆಲ್ಲುವ ಮೂಲಕವೇ ಗುರುತಿಸಿಕೊಂಡಿರುವುದು ಮಿಂಚುಹುಳು ಅಥವಾ ಮಿಣುಕು ಹುಳು.

ಈ ಹುಳು ಹೀಗೆ ಬೆಳಕು ಬೀರುವುದು ಸಂಗಾತಿಯನ್ನು ಆಕರ್ಷಿಸುವ ಉದ್ದೇಶದಿಂದ. ಹೀಗೆ ಬೆಳಕು ಬೀರುವುದರಿಂದ ಈ ಹುಳುಗಳು ತಮ್ಮನ್ನು ಹಲ್ಲಿಗಳಿಂದ ರಕ್ಷಿಸಿಕೊಳ್ಳುತ್ತವೆ ಕೂಡ.

ಸೂರ್ಯ ಗ್ರಹಣ: ಒಂದೆರಡು ವೈಚಿತ್ರ್ಯ


ಕಂಕಣ ಸೂರ್ಯ ಗ್ರಹಣ (ಸಾಂದರ್ಭಿಕ ಚಿತ್ರ

ಈಚಿನ ಸೂರ್ಯ ಗ್ರಹಣದ ಸಂದರ್ಭದಲ್ಲಿ ಅಲ್ಲಲ್ಲಿ ಮೂಢ ಆಚರಣೆಗಳು ನಡೆದ ಬಗ್ಗೆ ನೀವು ಪತ್ರಿಕೆಗಳಲ್ಲಿ ಓದಿರುತ್ತೀರಿ. ಇಂತಹ ಮೂಢ ಆಚರಣೆಗಳು ಭಾರತೀಯರಲ್ಲಿ ಮಾತ್ರವಲ್ಲ, ವಿಶ್ವದ ಅನೇಕ ನಾಗರಿಕತೆಗಳಲ್ಲಿ ಬಗೆಬಗೆಯ ರೀತಿಯಲ್ಲಿ ಜಾರಿಯಲ್ಲಿದ್ದವು.

ಚೀನೀಯರು ಹಿಂದೆ, ಸೂರ್ಯ ಗ್ರಹಣದ ವೇಳೆ ಸೂರ್ಯನತ್ತ ಬಾಣಗಳನ್ನು ಬಿಡುತ್ತಿದ್ದರಂತೆ. ಚಂದ್ರನು ಸೂರ್ಯನನ್ನು ಮರೆಮಾಚಿ, ಗ್ರಹಣ ಸೃಷ್ಟಿಸುವುದನ್ನು ಅವರು ಸಂಭ್ರಮದಿಂದ ಕಾಣುತ್ತಿರಲಿಲ್ಲ. ಬದಲಿಗೆ, ಸೂರ್ಯ ಇನ್ನು ಮುಂದೆ ಬೆಳಗುವುದೇ ಇಲ್ಲ ಎಂಬ ಭೀತಿಯಿಂದ ಅದರತ್ತ ಬಾಣ ಬಿಡುತ್ತಿದ್ದರು. ಡ್ರ್ಯಾಗನ್‌ ಸೂರ್ಯನನ್ನು ತಿನ್ನದಿರಲಿ ಎಂಬ ಆಶಯವೂ ಅವರು ಹಾಗೆ ಬಾಣ ಬಿಡುವುದರ ಹಿಂದೆ ಇತ್ತಂತೆ!

ಮಧ್ಯ‍ಪ್ರಾಚ್ಯದ ಕೆಲವು ಸಮುದಾಯಗಳ ಜನ ಸೂರ್ಯಗ್ರಹಣದ ಸಂದರ್ಭದಲ್ಲಿ ತಮ್ಮ ಮನೆಯ ಪಾತ್ರೆಗಳನ್ನು ಜೋರಾಗಿ ಬಡಿಯುತ್ತಿದ್ದರಂತೆ. ಹೀಗೆ ಮಾಡುವುದರಿಂದ ಗ್ರಹಣ ಬಿಡುತ್ತದೆ ಎಂದು ಅವರು ನಂಬಿದ್ದರಂತೆ.

(ವಿವಿಧ ಮೂಲಗಳಿಂದ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು