ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾ ಬಾರೋ ಬೈಸಿಕಲ್‌!

Last Updated 6 ಜೂನ್ 2020, 20:13 IST
ಅಕ್ಷರ ಗಾತ್ರ

ಬೈಸಿಕಲ್‌ ಎಂದಾಕ್ಷಣ ನನಗೆ ಅಜ್ಜ ಮುತ್ತಜ್ಜರ ನೆನಪು. ಯಾವ ಸಂಪರ್ಕದ ವಾಹನಗಳೂ ಇಲ್ಲದ ಅಂದಿನ ಕಾಲದಲ್ಲಿ, ಸಣ್ಣ ದೊಡ್ಡ ಊರುಗಳಲ್ಲಿ ಬೈಸಿಕಲ್ಲೇ ದೇವರಾಗಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದವು. ಬೈಸಿಕಲ್‌ ನನಗೂ ಬಾಲ್ಯದ ಆಪ್ತ ಮಿತ್ರ. ನಮ್ಮ ಮನೆಯ ಹಿಂಬಾಗದಲ್ಲಿರುವ ಹಳೆಯ ವಸ್ತುಗಳನ್ನಿಡುವ ಗರಾಜು ‘ನಿರುಪಯೋಗಿ ವಸ್ತುಗಳ ಭಂಡಾರ.’ ಹಳೆಯ ವಸ್ತುಗಳೆಂದ ಮೇಲೆ ಅವನ್ನೆಲ್ಲ ಒಪ್ಪ ಓರಣವಾಗಿ ಯಾರಿಡುತ್ತಾರೆ? ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಬಿಸಾಕಿದ ಹಳೆಯ ಕುರ್ಚಿ, ಕಾಲು ಮುರಿದ ಟೇಬಲ್ಲು, ತುಂಡಾದ ಶೆಲ್ಫು, ಅಜ್ಜಿಯ ಹಿತ್ತಾಳೆಯ ತಪ್ಪೆಲೆ, ತಾಮ್ರದ ಬಿಸಿನೀರಿನ ಬಾಯ್ಲರ್‌, ಕಂಠವಿಲ್ಲದ ಹಂಡೆ, ಹರಕು ಅರಿವೆಗಳ ಗಂಟು- ಒಂದೇ ಎರಡೇ!

ನನ್ನ ಮೊಬೈಲಿನಲ್ಲಿರುವ ದೀಪ ಹಚ್ಚಿ ಸುತ್ತಲೂ ಕಣ್ಣಾಡಿಸಿದೆ. ಕುರುಕ್ಷೇತ್ರದಲ್ಲಿ ಸತ್ತುಬಿದ್ದ ಯೋಧರಂತೆ ಎಲ್ಲ ವಸ್ತುಗಳು ಬಿದ್ದುಕೊಂಡಿದ್ದವು. ಅವುಗಳಲ್ಲಿ ತ್ರಿಕೋನಾಕೃತಿಯಲ್ಲಿರುವ ನಮ್ಮ ಪೂರ್ವಜರ ಹಳೆಯ ಸೈಕಲ್ಲೂ ಕಂಡಿತು. ಚಕ್ರಗಳಿಲ್ಲ, ಸೀಟು ಇಲ್ಲ, ಹ್ಯಾಂಡಲ್ಲಂತೂ ಇಲ್ಲವೇ ಇಲ್ಲ. ಅಜ್ಜ, ಅಪ್ಪ ಹೇಳಿದ ತಮ್ಮ ಬೈಸಿಕಲ್ ಕತೆಗಳು ನೆನಪಾದವು. ಅಜ್ಜ ತನ್ನ ಹರೆಯದಲ್ಲಿ ಅಜ್ಜಿಯನ್ನು ಬೈಸಿಕಲ್‌ ಮೇಲೆ ಕೂಡ್ರಿಸಿಕೊಂಡು ರಾತ್ರಿ ಸಿನೆಮಾ ಷೋ ನೋಡಿದ ಕತೆ; ಅಪ್ಪ ಬೈಸಿಕಲ್ಲಿನಲ್ಲಿ ಇಪ್ಪತ್ತು ಕಿ.ಮೀ. ದೂರದ ಹುಬ್ಬಳ್ಳಿಗೆ ಮೇಲಿಂದ ಮೇಲೆ ಹೋಗುತ್ತಿದ್ದ ಕಥೆ. ಅಪ್ಪ ತಾನು ಮದುವೆಯಾಗಲಿರುವ ಕನ್ಯೆ ನನ್ನ ಅವ್ವನನ್ನು ನೋಡಲಿಕ್ಕೆ ಹೋಗುತ್ತಿದ್ದರಂತೆ! ಅಣ್ಣ ಸೈಕಲ್‌ನಲ್ಲಿ ಮೂರು ಸಲ ಅಪಘಾತ ಮಾಡಿಕೊಂಡು ಕಾಲು ಮುರಿದುಕೊಂಡಿದ್ದರ ಕತೆ, ಯಾರಿಗೂ ಗೊತ್ತಿಲ್ಲದಂತೆ ನಾನು ಹೊಸದಾಗಿ ಸೈಕಲ್ ಕಲಿಯುವಾಗ ಬ್ರೇಕ್ ಹತ್ತದೆ ಗಟಾರದಲ್ಲಿ ಬಿದ್ದ ಕತೆ ಮತ್ತು ತನ್ನ ಬೈಸಿಕಲ್ ಕಳೆದುಕೊಂಡು ಹುಚ್ಚನಂತೆ ಹುಡುಕಿದ ತಮ್ಮನ ಕತೆ..! ಇಂಥ ಸೈಕಲ್ ಸವಾರಿಯ ಕತೆಗಳು ನನ್ನ ಬಾಲ್ಯದ ಲೋಕ ತೆರೆದಿಟ್ಟವು.

ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸೈಕಲ್‌ ಸವಾರಿ ನಿಷೇಧವಿತ್ತು. ಆದರೂ ಅಣ್ಣ, ತಮ್ಮಂದಿರ ಜೊತೆಗೆ ಹಿಂದಿನ ಸೀಟಿನಲ್ಲಿ ಕುಳಿತು ಪೇಟೆಗೆ, ಜಾತ್ರೆಗೆ ಹೋಗುತ್ತಿದ್ದೆ. ‘ನಾನೂ ಏಕೆ ತಮ್ಮನನ್ನು ಕೂಡ್ರಿಸಿಕೊಂಡು ಅವನ ಶಾಲೆಗೆ ಮುಟ್ಟಿಸಬಾರದು’ ಎಂದು ಆಲೋಚಿಸಿ, ಕಳ್ಳತನದಿಂದ ಹತ್ತಿರದ ಕನ್ನಡ ಪ್ರಾಥಮಿಕ ಶಾಲೆಯ ಬಯಲಿಗೆ ಹೋಗಿ ಪ್ರಾಕ್ಟಿಸ್ ಮಾಡುತ್ತ ಸೈಕಲ್ ಕಲಿತೆ. ಅವ್ವನಿಗೆ ನನ್ನ ಕಳ್ಳತನದ ಸುಳಿವು ಹತ್ತಿ ಒಂದು ದಿನ ಕೈ ಹಿಡಿದು ಬೈದೇ ಬಿಟ್ಟಳು. ‘ಅದೇನು ಸೈಕಲ್ ಕಲಿಯುದು? ಗಂಡ್ರಾಮಿ ಆದೇನು?’ ನಾನೂ ಧೈರ್ಯದಿಂದ ಉತ್ತರಿಸಿದೆ– ‘ಸೈಕಲ್ಲು ಗಂಡಸರಿಗೆ ಅಂತ ಹುಟ್ಟಿದೆ ಏನು? ಹೋಗು ನೋಡು, ಪೂನಾ, ಮುಂಬೈ ಕಡೆ ಹೆಂಗಸರೂ ಬೇಫಾಮ ಸೈಕಲ್ ಹೊಡಿತಾರ..!’

ಸುಮಾರು 100 ವರ್ಷಗಳ ಹಿಂದೆ ನಮ್ಮೂರಲ್ಲಿ ಮಧ್ಯಮ ವರ್ಗದ ಕೆಲವು ಮನೆಗಳ ಮುಂದೆ ಇಟ್ಟ ಥಳ ಥಳ ಹೊಳೆಯುವ ಸೈಕಲ್ಲುಗಳನ್ನು ನೋಡಿ ನಮ್ಮ ಅಜ್ಜನಿಗೆ ಹೊಟ್ಟೆಕಿಚ್ಚಾಗುತ್ತಿತ್ತಂತೆ. ಸೈಕಲ್ ಇದ್ದ ಮನೆ ಶ್ರೀಮಂತರದ್ದಿರಬೇಕು, ಕಾರಿದ್ದವರ ಮನೆಯಂತೂ ರಾಜರ ಮನೆತನದವರದು ಅಂತ ನಮ್ಮ ಹಿರಿಯರು ತಿಳಿದುಕೊಂಡಿದ್ದರಂತೆ. ಜಂಭ ತೋರಿಸಲೆಂದೇ ಕಾರುಗಳನ್ನು, ಬೈಸಿಕಲ್ಲುಗಳನ್ನು, ಬಾಗಿಲ ಮುಂದಿಟ್ಟು, ಕಟ್ಟೀ ಮೇಲ ಕುಳಿತು ಸಿಗರೇಟ ಸೇದುವವರನ್ನು ನೋಡಿ ಅವರಿಗೆ ಸಿಟ್ಟು ಬರುತ್ತಿತ್ತಂತೆ. ಈಗ ನೋಡ್ರಿ, ಪ್ರತಿಯೊಂದು ಮನೆ ಮುಂದ ಕಾರು, ಮೋಟಾರ್‌ ಬೈಕು.

ಗ್ರಾಮೀಣ ಜನರಿಗೆ ಸ್ವಾವಲಂಬನೆಯಲ್ಲಿ ಹೆಚ್ಚಿನ ವಿಶ್ವಾಸ. ಆದ್ದರಿಂದ ಇಂದಿಗೂ ಚಕ್ಕಡಿ, ಬೈಸಿಕಲ್ಲುಗಳು ಜೀವ ಹಿಡಿದುಕೊಂಡಿವೆ. ಚಕ್ಕಡಿ, ಟಾಂಗಾ ನಮ್ಮ ದೇಶದಲ್ಲಿಯೇ ಸೃಷ್ಟಿಯಾದ ವಾಹನಗಳು. ಇವನ್ನು ನಾವು ‘ದೇಶೀಯ ವಾಹನ’ ಎಂದು ಕರೆಯಬಹುದು. ಆದರೆ ಬೈಸಿಕಲ್ಲು ನಮ್ಮ ದೇಶದಲ್ಲಿ ಹುಟ್ಟಿಲ್ಲ. ಅದು ಪಾಶ್ಚಾತ್ಯರ ಕೊಡುಗೆ.

ಪಾಶ್ವಾತ್ಯ ದೇಶಗಳಲ್ಲಿ ಬೈಸಿಕಲ್ಲಿನ ಶೋಧ ಹೇಗಾಯ್ತು ಎಂದು ಗೂಗಲ್‍ನಲ್ಲಿ ಹುಡುಕಿದರೆ ಬಹಳ ಸಂಗತಿಗಳು ಗೊತ್ತಾಗುತ್ತವೆ. ಜರ್ಮನಿಯ ಬ್ಯಾರನ್ ಕಾರ್ಲ ವಾನ್ ಡ್ರೇಸ್ ಎಂಬಾತ 1817-18ರಲ್ಲಿ ಬೈಸಿಕಲ್ಲಿಗೆ ಪ್ರಥಮ ರೂಪವನ್ನು ಕೊಟ್ಟದ್ದು. ಈ ಶೋಧದ ಹಿಂದೆ ಕೆಲವು ಒತ್ತಡಗಳಿದ್ದವು. ಆ ಸಮಯದಲ್ಲಿ ಕುದುರೆಗಳು ಅಪಾರ ಸಂಖ್ಯೆಯಲ್ಲಿ ಸತ್ತು ಹೋದವು. ಈ ಹಾನಿಯನ್ನು ತುಂಬಿಕೊಡಲು ಬೈಸಿಕಲ್ಲಿನ ಶೋಧವಾಯ್ತಂತೆ. ಮೊಟ್ಟ ಮೊದಲಿನ ಬೈಸಿಕಲ್ಲಿನ ಬಹು ಭಾಗಗಳು ಕಟ್ಟಿಗೆಯವು ಆಗಿದ್ದವು; ಆದರೆ ಗಾಲಿಗಳು ಕಬ್ಬಿಣದವು. ಆಗ ಬೇರೆ ಬೇರೆ ದೇಶಗಳಿಂದ ಬೈಸಿಕಲ್ಲಿನ ಬೇಡಿಕೆ ಬಂತು. ಆದರೆ ಅನೇಕ ಬೈಸಿಕಲ್ ಸವಾರರಿಗೆ ಅಪಘಾತಗಳಾಗಿ ಕೈ ಕಾಲು ಮುರಿದುಕೊಂಡದ್ದೂ ವರದಿಯಾಯಿತು. ಬಳಿಕ ಬ್ರಿಟನ್, ಚೀನಾ ದೇಶಗಳಲ್ಲಿ ಈ ಬೈಕಿಗೆ ಮೂರು ಅಥವಾ ನಾಲ್ಕು ಗಾಲಿಗಳನ್ನು ಅಳವಡಿಸಿದರಂತೆ.

ಮುಂದೆ ಸ್ಕಾಟ್‍ಲ್ಯಾಂಡಿನ ಕರ್ಕ ಪ್ಯಾಟಿಸ್ ಮ್ಯಾಕ್‍ಮಿಲನ್ ಎಂಬ ಕಮ್ಮಾರ ನಮ್ಮ ಇಂದಿನ ಬೈಸಿಕಲ್ಲಿನ ರೂಪದ ವಾಹನವನ್ನು ತಯಾರಿಸಿದ. ಇದಕ್ಕೆ ಪೆಡಲ್‌ಗಳನ್ನು ಅಳವಡಿಸಲಾಯಿತು. ಅಂದಿನಿಂದ ಹತ್ತು ಹಲವು ರೂಪಗಳಲ್ಲಿ ಪರಿವರ್ತನೆಗೊಂಡ ಬೈಸಿಕಲ್‌ 19ನೇ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟಿತು.

ನಾನು ಪ್ರವಾಸ ಮಾಡಿದ ಯೂರೋಪಿನ ದೇಶಗಳಾದ ಫ್ರಾನ್ಸ್, ಜರ್ಮನಿ, ನೆದರ್ಲಂಡ್‌ಗಳಲ್ಲಿ ಎಲ್ಲ ರಸ್ತೆಗಳಲ್ಲಿ ಅಸಂಖ್ಯ ಬೈಸಿಕಲ್‌ ಸವಾರರು! ಕೂಟು ಕೂಟುಗಳಲ್ಲಿ ನೂರಾರು ಬೈಸಿಕಲ್ಲುಗಳನ್ನು ಬಾಡಿಗೆಗಾಗಿ ಇಟ್ಟದ್ದನ್ನೂ ಅಲ್ಲಿ ಕಂಡೆ. ಬೈಸಿಕಲ್‌ ಸವಾರರಿಗಾಗಿಯೇ ಪಾಶ್ಚಾತ್ಯ ದೇಶಗಳ ರಸ್ತೆಗಳಲ್ಲಿ ಪ್ರತ್ಯೇಕವಾದ ಟ್ರಾಕ್‍ಗಳನ್ನು ಗುರುತಿಸಲಾಗಿದೆ. ವರ್ಷವಿಡೀ ಬೈಸಿಕಲ್ ರೈಡ್‍ನ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಆ ದೇಶಗಳು ಬೈಸಿಕಲ್ ಸವಾರಿಗೆ ಅಪಾರ ಪ್ರೋತ್ಸಾಹವನ್ನು ನೀಡುತ್ತಿವೆ.

ನಾವಿರುವ 21ನೇ ಶತಮಾನದಲ್ಲಿ ಸುತ್ತಲಿನ ವಾತಾವರಣ ಹದಗೆಟ್ಟಿದೆ. ಇದಕ್ಕೆ ಮೂಲ ಕಾರಣ ನಾವೇ. ಪಟ್ಟಣಗಳಲ್ಲಿ ರಸ್ತೆಯ ತುಂಬ ಕಾರ್ಬನ್ ಉಗುಳುವ ನೂರಾರು ಕಾರುಗಳು, ಬಸ್ಸುಗಳು, ಟ್ರಕ್‍ಗಳು. ಹೆಚ್ಚುತ್ತಿರುವ ಜನಸಂಖ್ಯೆಗಾಗಿ ಹೆಚ್ಚೆಚ್ಚು ಸಾಮಗ್ರಿಯ ಉತ್ಪಾದನೆಗಾಗಿ ರಾಷ್ಟ್ರ ರಾಷ್ಟ್ರಗಳಲ್ಲಿ ಲೆಕ್ಕವಿಲ್ಲದಷ್ಟು ಕಾರ್ಖಾನೆಗಳ ನಿರ್ಮಾಣ. ಇವು ಆಕಾಶಕ್ಕೆ ಕಾರ್ಬನ್ ಡೈ ಆಕ್ಸೈಡನ್ನು ಕಳಿಸುತ್ತಿವೆಯಾದ್ದರಿಂದ ವಾತಾವರಣವೆಲ್ಲ ವಿಷಮಯವಾಗಿದೆ.

ವಿಶ್ವಸಂಸ್ಥೆಯ ಅಧಿಕಾರಿಗಳು ಕಳೆದ ಹತ್ತು ವರ್ಷಗಳಿಂದ “ಹೊಗೆ ಉಗುಳುವ ನಿಮ್ಮ ವಾಹನಗಳಿಗೆ ಮತ್ತು ಕಾರ್ಖಾನೆಗಳಿಗೆ ಪರ್ಯಾಯವನ್ನು ಹುಡುಕಿರಿ” ಎಂದು ಹೇಳಿದ್ದಾರೆ. ಪೆಟ್ರೋಲ್, ಡೀಸೆಲ್‌ಗಾಗಿ ನಾವು ವಿದೇಶಗಳ ಮುಂದೆ ಕೈಚಾಚಬೇಕು. ಈ ಭಿಕ್ಷೆ ತಪ್ಪಿಸಲಿಕ್ಕಾದರೂ ನಾವು ಪೆಟ್ರೋಲ್, ಡೀಸೆಲ್‌ ಬಳಕೆಯನ್ನು ಸಂಪೂರ್ಣ ಕಡಿಮೆ ಮಾಡಬೇಕು. ಮತ್ತೆ ನಮ್ಮ ಬೈಸಿಕಲ್ಲುಗಳು, ಕಾರಿನ ಸ್ಥಳವನ್ನು ಆಕ್ರಮಿಸಬೇಕು.

ಬೈಸಿಕಲ್‌ ಬಳಕೆಯನ್ನು ಹೆಚ್ಚಿಸಲು ಒಂದು ದಾರಿಯಿದೆ. ಸರ್ಕಾರವು ಒಂದು ಕಾಯ್ದೆಯ ಮೂಲಕ, 30 ವರ್ಷದ ಕೆಳಗಿನ ಎಲ್ಲ ತರುಣ ತರುಣಿಯರು ಬೇರೆ ಯಾವುದೇ ವಾಹನವನ್ನು ಬಳಸದೆ ಬೈಸಿಕಲ್ಲನ್ನು ಮಾತ್ರ ಉಪಯೋಗಿಸುವುದನ್ನು ಕಡ್ಡಾಯ ಮಾಡಬೇಕು.

ಈ ಬೈಸಿಕಲ್ಲಿಗೆ ವನಸ್ಪತಿ ಅಥವಾ ಇತರ ನೈಸರ್ಗಿಕ ಸಂಪನ್ಮೂಲದಿಂದ ಶಕ್ತಿಯನ್ನು ತುಂಬುವ ಸಂಶೋಧನೆ ಆಗಬೇಕು. ಕೋವಿಡ್‌ -19ರ ದಾಳಿಯಾದ ಮೊದಲ ಒಂದು ತಿಂಗಳು ರಸ್ತೆಯಲ್ಲಿ ಯಾವ ವಾಹನಗಳೂ ಇಲ್ಲದೆ ಇಡೀ ದೇಶದಲ್ಲಿ ವಾತಾವರಣವು ಸ್ವಚ್ಛವಾಗಿತ್ತು. ಆ ಅನುಭವದಿಂದಲಾದರೂ ನಾವು ಪಾಠ ಕಲಿಯಬೇಕು.
ಸ್ವಾಸ್ಥ್ಯದ ದೃಷ್ಟಿಯಿಂದ, ಮಿತವ್ಯಯ, ಪರಿಸರದ ದೃಷ್ಟಿಯಿಂದ, ಬಡವರೂ ಕೊಳ್ಳಲು ಸಾಧ್ಯವಾಗುವ ಬೈಸಿಕಲ್‌ ನಿಜಕ್ಕೂ ಮನುಷ್ಯನಿಗೆ ಆತ್ಮೀಯ ವಾಹನ. ಸರಳ ಯಂತ್ರವಾದದ್ದರಿಂದ ಸ್ವಂತದ ರಿಪೇರಿ ಸಾಧ್ಯ. ಅಪಘಾತದಿಂದ ಜೀವಹಾನಿ ಸಾಧ್ಯತೆ ಕಡಿಮೆ. ಮನೆಯಲ್ಲಿ ಮತ್ತು ಪಾರ್ಕಿಂಗ್‌ನಲ್ಲಿ ಇಡಲು ಕಡಿಮೆ ಸ್ಥಳ ಸಾಕು. ವಾಹನ ಟ್ಯಾಕ್ಸ್ ಮತ್ತು ಇನ್ಶೂರೆನ್ಸ್‌ಗಾಗಿ ಹಣ ಕಟ್ಟಬೇಕಾದ ತಲೆಬೇನೆ ಇಲ್ಲ.
ಕೊರೊನಾ ವೈರಸ್‌ ಸೃಷ್ಟಿಸಿರುವ ಅವಕಾಶವೊಂದನ್ನು ಸದ್ಬಳಕೆ ಮಾಡಲು ನಮಗೆ ಸಾಧ್ಯವಾಗಬೇಕು. ಎಲ್ಲ ನಗರಗಳಲ್ಲಿ ಬೈಸಿಕಲ್‌ ಬಳಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಪ್ರತ್ಯೇಕ ಕಾನೂನು ರೂಪಿಸಬೇಕು. ಯುವಜನರು ಬೈಸಿಕಲ್‌ ಮೊರೆಹೋಗಬೇಕು. ‘ಬಾ ಬಾರೋ ರಣಧೀರ..’ ಎನ್ನುವ ಹಾಡಿನಂತೆ, ‘ಬಾ ಬಾರೋ ಬೈಸಿಕಲ್‌..’ ಎಂದು ಸೈಕಲ್‌ಗಳನ್ನು ಅಪ್ಪಿಕೊಳ್ಳಬೇಕು. ಮೋಟಾರು ವಾಹನಗಳು ಉಗುಳುವ ಹೊಗೆಗೆ ಉಂಟಾಗುವ ಪರಿಸರ ಮಾಲಿನ್ಯದಿಂದ ಮುಕ್ತಿ ಹೊಂದಲು ಇದೊಂದೇ ಸುಲಭದ ದಾರಿ.

ಚೀನಾ ಮೇಲ್ಪಂಕ್ತಿ

ಭಾರತದಲ್ಲಿ ಪ್ರತಿ ವರ್ಷ 1.6 ಕೋಟಿಯಷ್ಟು ಬೈಸಿಕಲ್‌ಗಳಿಗೆ ಬೇಡಿಕೆ ಇದೆ. ಪ್ರತಿ ಸಾವಿರ ಜನರಿಗೆ ನಮ್ಮಲ್ಲಿ 90 ಬೈಸಿಕಲ್‌ಗಳಿವೆ. ಚೀನಾಕ್ಕೆ ಹೋಲಿಸಿದರೆ ಈ ಬೇಡಿಕೆ ತೀರಾ ಕಡಿಮೆಯೆಂದೇ ಹೇಳಬಹುದು. ಚೀನಾದಲ್ಲಿ ಪ್ರತಿ ಸಾವಿರ ಜನರಿಗೆ 149 ಬೈಸಿಕಲ್‌ಗಳಿವೆ. ಪ್ರತಿವರ್ಷ ಜಗತ್ತಿನಾದ್ಯಂತ 13 ಕೋಟಿ ಬೈಸಿಕಲ್‌ಗಳು ಮಾರಾಟವಾಗುತ್ತಿವೆ. ಈ ಬೈಸಿಕಲ್‌ಗಳ ಪೈಕಿ ಶೇಕಡಾ 66ರಷ್ಟು ಮೇಡ್‌ ಇನ್‌ ಚೀನಾ! ಈ ವಿಷಯದಲ್ಲಿ ನಾವು ಚೀನಾದಿಂದ ಕಲಿಯುವುದು ಬಹಳಷ್ಟಿದೆ.

ನೆದರ್ಲಂಡ್‌ ಮಾದರಿ

ಜಗತ್ತಿನಾದ್ಯಂತ 200 ಕೋಟಿ ಬೈಸಿಕಲ್‌ಗಳಿವೆ ಎನ್ನುವುದು ಇತ್ತೀಚಿನ ಅಂದಾಜು. ಅದರಲ್ಲೂ ಯೂರೋಪಿಯನ್‌ ದೇಶಗಳಲ್ಲಿ ಬೈಸಿಕಲ್‌ ಮಹತ್ವ ಜನರಿಗೆ ಚೆನ್ನಾಗಿ ಗೊತ್ತಿದೆ. ನೆದರ್ಲಂಡ್‌ ಈ ವಿಷಯದಲ್ಲಿ ಜಗತ್ತಿಗೇ ಮಾದರಿ. ಅಲ್ಲಿ ಶೇಕಡಾ 50ರಷ್ಟು ಜನರು ಬೈಸಿಕಲ್‌ ಹೊಂದಿದ್ದಾರೆ. ಆ ಪುಟ್ಟ ದೇಶದಲ್ಲಿ 500 ಕಿ.ಮೀ ಗಳಷ್ಟು ಉದ್ದದ ಬೈಸಿಕಲ್‌ ಟ್ರ್ಯಾಕ್‌ ಇದೆ. ಡೆನ್ಮಾರ್ಕ್‌ನಲ್ಲಿ ಶೇಕಡಾ 40ರಷ್ಟು ಜನ ಬೈಸಿಕಲ್‌ ಬಳಸುತ್ತಿದ್ದಾರೆ. ಜರ್ಮನಿ, ಸ್ವೀಡನ್‌, ಫಿನ್ಲಂಡ್‌, ಚೀನಾ, ಸ್ವಿಝರ್ಲಂಡ್‌, ಬೆಲ್ಜಿಯಂ ಮುಂತಾದ ದೇಶಗಳಲ್ಲಿ ಅತ್ಯಧಿಕ ಜನ ಬೈಸಿಕಲ್ ಬಳಸುತ್ತಿದ್ದಾರೆ.

ಅತ್ಯಾಧುನಿಕ ಬೈಸಿಕಲ್‌

ಹಳೆಕಾಲದ ಪೆಡೆಲ್‌ ಬೈಸಿಕಲ್‌ಗಳು ಗೇರ್‌ ವ್ಯವಸ್ಥೆಗೆ ಬದಲಾವಣೆ ಹೊಂದಿ ಬಹಳ ವರ್ಷಗಳಾದವು. ಅವುಗಳನ್ನು ಬೈಕ್‌ಗಳೆಂದೇ ಕರೆಯುತ್ತಾರೆ. ಗೇರ್‌ ಇರುವ ಬೈಸಿಕಲ್‌ಗಳ ಬೆಲೆ ಸಾಮಾನ್ಯವಾಗಿ ₹ 10 ಸಾವಿರದಿಂದ ಆರಂಭವಾಗುತ್ತವೆ. ಮಂಗಳೂರಿನಲ್ಲಿ ₹ 12 ಲಕ್ಷ ಬೆಲೆಯ ಗೇರ್‌ ಬೈಸಿಕಲ್‌ ಮಾರಾಟಕ್ಕೆ ಇರುವುದು ಕಳೆದ ವಾರ ಸುದ್ದಿಯಾಗಿತ್ತು. ಕಳೆದ ವರ್ಷ ಕೊಯಿಕ್ಕೋಡ್‌ನಲ್ಲಿ ₹ 20 ಲಕ್ಷಕ್ಕೆ ಗೇರ್‌ ಬೈಸಿಕಲ್ ಮಾರಾಟವಾಗಿತ್ತು. ಇವು ರೇಸ್‌ ಉದ್ದೇಶಕ್ಕೆ ಬಳಕೆಯಾಗುವ ಬೈಸಿಕಲ್‌ಗಳು.
ಗೇರ್‌ ಇರುವ ಸೈಕಲ್‌ಗಳನ್ನು ದಾಟಿ ಈಗ ಇ–ಬೈಸಿಕಲ್‌ಗಳು ಜನಪ್ರಿಯಗೊಳ್ಳುತ್ತಿವೆ. ಮೋಟರ್‌ ಮತ್ತು ಬ್ಯಾಟರಿಗಳನ್ನು ಹೊಂದಿದ ಇ–ಬೈಸಿಕಲ್‌ಗಳಿಗೆ ₹ 20 ಸಾವಿರದಿಂದ ₹ 60 ಸಾವಿರದವರೆಗೆ ಬೆಲೆ ಇದೆ. ಇವುಗಳಲ್ಲೂ ರಸ್ತೆ ರೇಸ್‌ಗಳಿಗೆ ಬಳಸುವ ಬೈಸಿಕಲ್‌ಗಳಿಗೆ ₹ 1ರಿಂದ 2 ಲಕ್ಷದವರೆಗೆ ಬೆಲೆ ಇದೆ. ₹ 5 ಲಕ್ಷ ಮೌಲ್ಯದ ಇ–ಬೈಸಿಕಲ್‌ಗಳೂ ಭಾರತದಲ್ಲಿ ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿವೆ.

ಬ್ಯಾಂಕ್‌ಗಳೇಕೆ ಸಾಲ ಕೊಡಲ್ಲ?

ನಮ್ಮಲ್ಲಿ ಬೈಸಿಕಲ್‌ ಬಳಕೆಯನ್ನು ಹೆಚ್ಚಿಸಲು ಮುಖ್ಯವಾಗಿ ಆಗಬೇಕಿರುವುದು ರಸ್ತೆಗಳಲ್ಲಿ ಪ್ರತ್ಯೇಕ ಬೈಸಿಕಲ್‌ ಟ್ರ್ಯಾಕ್‌ ನಿರ್ಮಿಸುವುದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಕಲ್ಬುರ್ಗಿ ಮುಂತಾದ ಮಹಾನಗರಗಳಲ್ಲಿ ಈಗಲೇ ಇದಕ್ಕಾಗಿ ಪೂರಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಪ್ರತ್ಯೇಕ ಟ್ರ್ಯಾಕ್‌ ಇದ್ದರೆ ನಮ್ಮ ಜನ ಈಗಿರುವ ಸೈಕಲ್‌ ಬಳಕೆಯನ್ನು ದುಪ್ಪಟ್ಟುಗೊಳಿಸುವುದು ಖಂಡಿತಾ.
ಪೆಟ್ರೋಲ್‌ ಬಳಕೆಯನ್ನು ತಗ್ಗಿಸಿ, ನಮ್ಮ ವಿದೇಶಿ ವಿನಿಮಯ ಉಳಿಸಿ ಎಂದು ಸರ್ಕಾರವೇ ಹೇಳುತ್ತದೆ. ಅದೇ ವೇಳೆ, ಮೋಟಾರ್‌ ಬೈಕ್, ಕಾರು ಕೊಳ್ಳಲು ಬ್ಯಾಂಕ್‌ಗಳ ಮೂಲಕ ಕೋಟ್ಯಂತರ ರೂಪಾಯಿ ಸಾಲ ಕೊಡಿಸುತ್ತವೆ. ಕೇವಲ ₹ 2000 ಕೊಟ್ಟು ಸಾಲದ ಮೇಲೆ ಮೋಟಾರ್‌ಬೈಕ್‌ ಖರೀದಿಸಬಹುದು! ಆದರೆ ಬ್ಯಾಂಕ್‌ಗಳು ಬೈಸಿಕಲ್‌ ಖರೀದಿಸಲು ಏಕೆ ಸಾಲ ಕೊಡುವುದಿಲ್ಲ? ಬ್ಯಾಂಕ್‌ಗಳು ಬೈಸಿಕಲ್‌ ಸಾಲಮೇಳ ನಡೆಸುವ ಮೂಲಕ ಜನರನ್ನು ಸೈಕಲ್‌ನಲ್ಲಿ ಓಡಾಡಲು ಪ್ರೋತ್ಸಾಹಿಸಬೇಕು.

ವಿಶ್ವದಾಖಲೆಗಳು

ಪರ್ಥ್‌ಶೈರ್‌ನ ಮಾರ್ಕ್‌ ಬ್ಯೂಮೊಂಟ್‌ ಎಂಬಾತನ ಹೆಸರಿನಲ್ಲೊಂದು ಗಿನ್ನೆಸ್‌ ವಿಶ್ವದಾಖಲೆ ಇದೆ. ಆತ ಬೈಸಿಕಲ್‌ ಮೇಲೆ ವಿಶ್ವಪ್ರದಕ್ಷಿಣೆ ಮಾಡಿದ ಸಾಹಸಿಗ. 79 ದಿನಗಳಲ್ಲಿ ಸುಮಾರು 29,000 ಕಿ.ಮೀ ದೂರ ಸೈಕಲ್‌ ತುಳಿದು ಆತ ವಿಶ್ವಕ್ಕೆ ಒಂದು ಸುತ್ತು ಹಾಕಿದ. ಪ್ಯಾರಿಸ್‌ನಿಂದ ಹೊರಟು ಯೂರೋಪ್‌, ಮಧ್ಯಪೂರ್ವ, ಏಷ್ಯಾ, ಆಸ್ಟ್ರೇಲಿಯಾ ಮತ್ತು ಉತ್ತರ ಅಮೆರಿಕಾದ 20 ದೇಶಗಳನ್ನು ಹಾದು ಮತ್ತೆ ಪ್ಯಾರಿಸ್‌ನಲ್ಲಿ ಈತ ತನ್ನ ವಿಶ್ವಪರ್ಯಟಣೆಯನ್ನು ಕೊನೆಗೊಳಿಸಿದ. ಈತ ಭಾರತವನ್ನೂ ಹಾದುಹೋಗಿದ್ದ. ಬೈಸಿಕಲ್‌ನಲ್ಲಿ ಎಷ್ಟು ವೇಗವಾಗಿ ಹೋಗಬಹುದು? 1995ರಲ್ಲಿ ನೆದರ್ಲಂಡ್‌ನ ಫ್ರೆಡ್‌ ರಾಂಪೆಲ್‌ಬರ್ಗ್‌ ಗಂಟೆಗೆ 167 ಮೈಲಿ ವೇಗದಲ್ಲಿ ಸೈಕಲ್‌ ಓಡಿಸಿ (ಸ್ಲಿಪ್‌ಸ್ಟ್ರೀಮ್‌ ವಾತಾವರಣದಲ್ಲಿ) ವಿಶ್ವದಾಖಲೆ ನಿರ್ಮಿಸಿದ. ಎರಡು ವರ್ಷಗಳ ಹಿಂದೆ ಡೆನಿಸ್ ಮುಲ್ಲರ್‌ ಕೊರೆನಿಕ್‌‌ ಎಂಬಾತ ಗಂಟೆಗೆ 183 ಮೈಲಿ ವೇಗದಲ್ಲಿ ಸೈಕಲ್‌ ಚಲಾಯಿಸಿ ಈ ದಾಖಲೆಯನ್ನು ಮುರಿದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT