ಶನಿವಾರ, ಸೆಪ್ಟೆಂಬರ್ 18, 2021
28 °C

ಬಸವೇಶ್ವರ ದೇವಸ್ಥಾನಕ್ಕೆ ಜೀವಕಳೆ

ಚಿಕ್ಕರಾಮು Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿಯ ಪುರದಪಾಳ್ಯದಲ್ಲಿ ಈಗ ಹಬ್ಬದ ಸಂಭ್ರಮ ಮನೆಮಾಡಿದೆ. ಶಿಥಿಲಗೊಂಡು ಜೀರ್ಣಾವಸ್ಥೆಗೆ ತಲುಪಿದ್ದ ಬಸವೇಶ್ವರ ಸ್ವಾಮಿ ದೇವಾಲಯಕ್ಕೆ ಜೀವಕಳೆ ಬಂದಿದೆ. ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ದೇಗುಲವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಜೊತೆಗೆ ಗೋಶಾಲೆಯೂ ತಲೆ ಎತ್ತಿದೆ. 6.18 ಎಕರೆಯಷ್ಟು ವಿಸ್ತೀರ್ಣದ ಈ ಜಾಗದಲ್ಲಿ ಇದೇ 8 ಮತ್ತು 9ರಂದು ಮೂಲ ಮೂರ್ತಿಯ ಪ್ರತಿಷ್ಠಾಪನೆ ಮತ್ತು ನಂದಿ ಗೋಶಾಲಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. 

ಬುಧವಾರದಂದು ಹೋಮ, ರುದ್ರಾಭಿಷೇಕ, ಶಾಂತಿಮಂತ್ರ ಮೊದಲಾದ ಪೂಜೆಗಳು ಜರುಗಲಿದೆ. ಮಹಿಳೆಯರು ದೀಪದಾರತಿಯನ್ನು ತಂದು ದೇವರಿಗೆ ಸಮರ್ಪಿಸಲಿದ್ದಾರೆ. ಗ್ರಾಮೀಣ ಕಲೆಗಳ ಪ್ರದರ್ಶನವೂ ಇದೆ. 

ಗುರುವಾರ ಮುಂಜಾನೆ ರುದ್ರಹೋಮ, ಕ್ಷೀರಾಭಿಷೇಕ, ದೇವರಿಗೆ ಅಲಂಕಾರ ಉತ್ಸವ, ಮೆರವಣಿಗೆ, ಶ್ರೀ ಬಸವೇಶ್ವರ ಜನಪದ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕೃಷಿ ಕುರಿತು ರೈತಪಾಠ, ವಚನ ಗಾಯನ ನಡೆಯಲಿವೆ. ಸಿದ್ಧಗಂಗಾಮಠದ ಸಿದ್ದಲಿಂಗಮಹಾಸ್ವಾಮಿ ಅವರು ಸಾನ್ನಿಧ್ಯ ವಹಿಸಲಿದ್ದು, ಗದ್ದಿಗೆ ಮಠದ ಶ್ರೀಮಹಂತಸ್ವಾಮಿ, ಕುಂಚಗಲ್ ಬಂಡೇಮಠದ ಬಸವಲಿಂಗಸ್ವಾಮಿ, ಪವಾಡ ಬಸವಣ್ಣ ದೇವರಮಠದ ಸಿದ್ಧಲಿಂಗಸ್ವಾಮಿ, ಜಗಣ್ಣಯ್ಯನ ಮಠದ ಚನ್ನಬಸವಸ್ವಾಮಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿವೆ.

ಶಾಸಕ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಶಾಸಕ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉದ್ಯಮಿ ಎನ್.ಎಂ.ಶಿವಕುಮಾರ್, ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ ಭಾಗವಹಿಸುವರು. ರಾತ್ರಿ 9 ಗಂಟೆಗೆ ಸಿದ್ಧಗಂಗಾಮಠದ ಕಲಾವಿದರಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. 

ದೇವಾಲಯ ಜೀರ್ಣೋದ್ಧಾರಕ್ಕೆ ಮಾತ್ರ ನಮ್ಮ ಯತ್ನವನ್ನು ಸೀಮಿತಗೊಳಿಸದೆ, ಸಮಿತಿಯ ಅಪೇಕ್ಷೆಯಂತೆ ಗೋಶಾಲೆ ನಿರ್ಮಿಸಿ, 15 ಗೋವುಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಜನೋಪಯೋಗಿ, ಗ್ರಾಮೀಣ ಸಂಸ್ಕೃತಿ ಉಳಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು ಎನ್ನುತ್ತಾರೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಪಿ.ಎಂ.ರುದ್ರೇಶ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು