ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಧರ್ವ ಗಾನ ನಾದ ನಮನ

Last Updated 22 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಸಂಗೀತ ಸಾಮ್ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಅಪರೂಪದ ಸ್ವರ ಶ್ರದ್ಧಾಂಜಲಿ ಸವಾಯಿ ಗಂಧರ್ವ ಭೀಮಸೇನ್ ಮಹೋತ್ಸವ. ಗುರು– ಶಿಷ್ಯ ಪರಂಪರೆಯ ಮಹತ್ವ ಸಾರುವ ಈ ನಾದ ನಮನ ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸಂಗೀತ ಪ್ರೇಮಿಗಳ ಮನತಣಿಸಿತು. ಮಾಗಿ ಚಳಿಯಲ್ಲಿ ಮುದುಡಿದ ಮನಗಳಿಗೆ ಸ್ವರಗಳ ಸುರಿಮಳೆ ಬೆಚ್ಚನೆಯ ಅನುಭವ ನೀಡಿತು.

**

ತಾನ್‌ಪೂರ್‌ಗಳಿಂದ ಸೂಸಿ ಬಂದ ಶ್ರುತಿ. ಅದರೊಂದಿಗೆ ಸಾಗಿ ಬಂದ ಸ್ವರ. ಇವುಗಳಿಗೆ ಅನುಗುಣವಾಗಿ ಹೆಜ್ಜೆ ಹಾಕಿದ ತಾಳ...
ಗಂಧರ್ವ ಲೋಕವನ್ನೇ ಸೃಷ್ಟಿಸಿದ ಇಂಥದೊಂದು ತಾನ್ ತರಾನಾಗಳ ಭವ್ಯ ಉತ್ಸವ ಪುಣೆ ನಗರದಲ್ಲಿ ಜರುಗಿತು. ಸ್ವರಗಳಲ್ಲೇ ಬದುಕಿನ ಅರ್ಥ ಹುಡುಕಲು ಕಲಿಸಿದ ಗುರುವಿಗೆ ಸ್ವರಗಳಿಂದಲೇ ನಮನ ಸಲ್ಲಿಸಲು ಶಿಷ್ಯ ಹುಟ್ಟುಹಾಕಿದ ಸ್ವರ ಶ್ರದ್ಧಾಂಜಲಿಯಿದು. ಅರ್ಥಾತ್ ಸವಾಯಿ ಗಂಧರ್ವ ಭೀಮಸೇನ್ ಮಹೋತ್ಸವ.

ಸಂಗೀತದ ಹಿರಿಮೆ ಎಂದರೆ ಗುರು ಶಿಷ್ಯ ಪರಂಪರೆ. ಇಲ್ಲಿ ಗುರುವಿನ ಬೋಧನೆ ಶಿಷ್ಯನಿಗೆ ಮಹಾಪ್ರಸಾದ. ಶಿಷ್ಯನ ರಿಯಾಜ್ ಗುರುವಿಗೆ ರಸದೌತಣ. ಸ್ವರ ಸರಸ್ವತಿಯ ಸಾಕ್ಷಾತ್ಕಾರಕ್ಕೂ ಈ ಪವಿತ್ರ ಸಂಬಂಧವೇ ರಹದಾರಿ.

ಈ ಸಂಬಂಧ ಅರ್ಥಾತ್ ಗುರು– ಶಿಷ್ಯರ ಭವ್ಯ ಪರಂಪರೆ ಅಜರಾಮರವಾಗಿರಲಿ ಎಂದು ಸಂಗೀತ ಕ್ಷೇತ್ರದಲ್ಲಿ ಸ್ವರಗಳ ಆರಾಧನೆ ಮೂಲಕವೇ ಗುರುಗಳ ಸ್ಮರಣೆ ನಡೆಯುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಆರು ದಶಕಗಳಿಂದ ನಡೆಯುತ್ತಿರುವ ಈ ಸಂಗೀತ ಮಹೋತ್ಸವ.
ಸಾಮಾನ್ಯವಾಗಿ ಈ ಉತ್ಸವ ನಡೆಯುವುದು ಮಾಗಿ ಚಳಿಯಲ್ಲೇ. ದೇಶದ ಇತರ ಭಾಗಗಳಲ್ಲಿ ನಡೆಯುವ ಖ್ಯಾತ ಸಂಗೀತ ಮಹೋತ್ಸವಗಳಿಗೂ ಹೆಚ್ಚು ಕಡಿಮೆ ಇದೇ ನಿಯಮ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಪ್ತಕ ಸಂಗೀತ ಉತ್ಸವ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತಾನ್‌ಸೇನ್ ಸಂಗೀತ ಹಬ್ಬ, ಕೋಲ್ಕತದಲ್ಲಿ ಡೋವರ್ ಲೇನ್ ಮ್ಯೂಸಿಕ್ ಫೆಸ್ಟಿವಲ್, ಹೈದರಾಬಾದ್‌ನಲ್ಲಿ ಪರಂಪರಾ ಸಂಗೀತ್, ಕೇರಳದಲ್ಲಿ ಸ್ವಾತಿ ಸಂಗೀತೋತ್ಸವ, ಪಂಜಾಬ್‌ನ ಜಲಂಧರ್‌ನಲ್ಲಿ 130ಕ್ಕೂ ಹೆಚ್ಚು ವರ್ಷಗಳಿಂದ ನಡೆಯುತ್ತಿರುವ ಹರಿವಲ್ಲಭ್ ಸಂಗೀತ ಸಮ್ಮೇಳನದಂಥ ಭವ್ಯ ಸಂಗೀತ ಕಛೇರಿಗಳೆಲ್ಲ ಡಿಸೆಂಬರ್‌ನ ಆಸುಪಾಸಿನಲ್ಲೇ ನಡೆಯುತ್ತವೆ.

ಈ ಸವಾಯಿ ಗಂಧರ್ವ ಸಂಗೀತ ಮಹೋತ್ಸವಕ್ಕೆ ಐವತ್ತರ ದಶಕದಲ್ಲಿ ಚಾಲನೆ ನೀಡಿದವರು ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ.
ನಾಲ್ಕು ತಾನ್‌ಪೂರ್‌ಗಳು, ಒಂದು ಹಾರ್ಮೋನಿಯಂ, ಎರಡು ಜೊತೆ ತಬಲಾಗಳೊಂದಿಗೆ ಕಪ್ಪು, ಬಿಳುಪು ಯುಗದಲ್ಲಿ ಕೆಲವೇ ಜನರ ನಡುವೆ ತಮ್ಮ ಗುರು ಸವಾಯಿ ಗಂಧರ್ವರ ಹೆಸರಿನಲ್ಲಿ ಹುಟ್ಟುಹಾಕಿದ ಕಾರ್ಯಕ್ರಮವಿದು. ಇಂದು ದೇಶದ ಮೂಲೆ ಮೂಲೆಗಳ ಲಕ್ಷಾಂತರ ಜನ ಈ ಸಂಗೀತೋತ್ಸವಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಕಲಾ ಪ್ರದರ್ಶನಕ್ಕೆ ಇಲ್ಲೊಂದು ಅವಕಾಶ ಸಿಕ್ಕರೆ ಬದುಕೇ ಧನ್ಯ ಎಂಬ ಭಾವನೆ ದಕ್ಷಿಣ ಭಾರತದ ಸಂಗೀತಗಾರರಲ್ಲಿ ಮೂಡುವಷ್ಟು ಎತ್ತರಕ್ಕೆ ಸವಾಯಿ ವೇದಿಕೆ ಹಿರಿಮೆ ಬೆಳೆದಿದೆ.

ಸವಾಯಿ ಗಂಧರ್ವರು 1952ರಲ್ಲಿ ಬದುಕಿನ ಯಾತ್ರೆ ಮುಗಿಸುತ್ತಿದ್ದಂತೆ ಅವರ ಹೆಸರು ಚಿರಸ್ಥಾಯಿ ಆಗುವಂಥ ಸ್ವರನಮನ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾದಾಗ ಭೀಮಣ್ಣನಿಗೆ ಮೂವತ್ತರ ಹರೆಯ. ಅವರಿಗೆ ಸಾಥ್ ನೀಡಿದವರು ಗಂಧರ್ವರ ಶಿಷ್ಯರೇ ಆದ ಗಂಗೂಬಾಯಿ ಹಾನಗಲ್, ಫೀರೋಜ್ ದಸ್ತೂರ್. ಇವರ ಜೊತೆಗೆ ನಾನಾಸಾಹೇಬ್ ದೇಶಪಾಂಡೆ, ದತ್ತೋಪಂತ್ ದೇಶಪಾಂಡೆ, ಬಾಳಾಸಾಹೇಬ್ ಅತ್ರೆ, ಹೀರಾಬಾಯಿ ಬಡೋದೆಕರ್, ಸರಸ್ವತಿ ರಾಣೆ ಅವರಂಥ ಕಲಾವಿದರೂ ಕೈಜೋಡಿಸಿದರು. ಆರ್ಯ ಪ್ರಸಾರಕ ಮಂಡಳ ಎಂಬ ಸಂಸ್ಥೆ ಜನ್ಮ ತಳೆಯಿತು. ಇದಕ್ಕೆ ಭೀಮಣ್ಣನಿಗೆ ಪ್ರೇರಣೆ ನೀಡಿದ್ದು ಸವಾಯಿ ಗಂಧರ್ವರ ಗುರುಗಳಾದ ಉಸ್ತಾದ್ ಅಬ್ದುಲ್ ಕರೀಂ ಖಾನರು 1910ರಲ್ಲಿ ಸ್ಥಾಪಿಸಿದ್ದ ಆರ್ಯ ಸಂಗೀತ ವಿದ್ಯಾಲಯ.

ಈ ಸಂಸ್ಥೆಯಡಿ ಮೊದಲ ವರ್ಷದ ವೇದಿಕೆ ಸಿದ್ಧವಾದಾಗ ನಾನಾಸಾಹೇಬ್ ದೇಶಪಾಂಡೆ, ಬಾಳಾಸಾಹೇಬ್ ಹಾಗೂ ಭೀಮಸೇನ್ ಜೋಶಿ ಹಾಡುವ ಮೂಲಕ ಗಂಧರ್ವರಿಗೆ ಸ್ವರ ನಮನ ಸಲ್ಲಿಸಿದರು. ಮುಂದೆ ಕೆಲವು ವರ್ಷ ಕಿರಾನಾ ಘರಾನಾ ಗಾಯಕರು ಮಾತ್ರ ಈ ವೇದಿಕೆಯಲ್ಲಿ ಹಾಡಿದರು. ನಂತರ ದೇಶದ ಬೇರೆ ಬೇರೆ ಘರಾನಾಗಳ ಗಾಯಕರು ಇಲ್ಲಿ ಬಂದು ಹಾಡಿದರು. ದಕ್ಷಿಣ ಭಾರತದಾದ್ಯಂತ ಈ ವೇದಿಕೆ ಹೆಸರಾಯಿತು. ಉತ್ತರ ಹಾಗೂ ದಕ್ಷಿಣ ಭಾರತದ ನಡುವಿನ ಸಂಗೀತ ಸಂಬಂಧವನ್ನೂ ಗಟ್ಟಿಗೊಳಿಸಿತು.

ಉತ್ತರ ಭಾರತದ ಸಂಗೀತ ದಿಗ್ಗಜರಾದ ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್, ಬಾನ್ಸುರಿ ವಾದಕ ಹರಿಪ್ರಸಾದ್ ಚೌರಾಸಿಯಾ, ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ, ಪಂಡಿತ್ ಜಸ್‌ರಾಜ್ ಹೀಗೆ ಅನೇಕರು ಗಂಧರ್ವರ ಹೆಸರಿನ ವೇದಿಕೆಯಲ್ಲಿ ತಮ್ಮ ಕಲೆ ಪ್ರಸ್ತುತಪಡಿಸಿ ಸಂಗೀತಾಸಕ್ತರ ಮನ ತಣಿಸಿದರು. ಅಫ್ಘಾನಿಸ್ತಾನದ ಉಸ್ತಾದ್ ಮೊಹಮದ್ ಖಾನ್ ಕೂಡ ಒಮ್ಮೆ ಈ ವೇದಿಕೆಗೆ ಬಂದು ಗಾಯನ ಪ್ರಸ್ತುತಪಡಿಸಿದರು.

ಪ್ರಭಾ ಅತ್ರೆ
ಪ್ರಭಾ ಅತ್ರೆ

ಇದಲ್ಲದೆ ಅರವತ್ತರಿಂದ ಎಂಬತ್ತರ ದಶಕದವರೆಗೆ ಸತತ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಸ್ವತಃ ಭೀಮಣ್ಣ ಕೂಡ ಮೆಹಫಿಲ್ ಮೂಲಕ ಗುರುಗಳಿಗೆ ನಮನ ಸಲ್ಲಿಸಿದರು. ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಗಂಧರ್ವ ಲೋಕವೇ ಧರೆಗಿಳಿಯುತ್ತಿತ್ತು. ಭೈರವಿಯೊಂದಿಗೆ ವೇದಿಕೆಗೆ ಅವರೇ ತೆರೆ ಎಳೆಯಬೇಕು ಎಂಬ ಅಘೋಷಿತ ನಿಯಮವೂ ಇತ್ತು. ಭೈರವಿಗೂ ಮುನ್ನ ಅವರ ಕಂಠದಿಂದ ಹೊರಹೊಮ್ಮುತ್ತಿದ್ದ ಮಿಯಾ ಕಿ ತೋಡಿ, ಗುಜರಿ ತೋಡಿ, ಆಸಾವರಿ ತೋಡಿ, ರಾಮಕಲಿ, ಜೋಗಿಯಾ, ಗೌಡ ಸಾರಂಗ ರಾಗಗಳ ಕಂಪು ಸವಿಯಲು ಕೇಳುಗರು ದಿನವಿಡೀ ಕಾಯುತ್ತಿದ್ದರು.

ಭೀಮಣ್ಣ ಕೂಡ ಅಷ್ಟೇ ಉತ್ಸಾಹದಿಂದ ಹಾಡುತ್ತಿದ್ದರು. 2002ರವರೆಗೆ ಕಾರ್ಯಕ್ರಮದ ನೇತೃತ್ವವಹಿಸಿ ಕೊನೆ ಕೊನೆಗೆ ವೀಲ್‌ಚೇರ್ ಮೂಲಕವೂ ವೇದಿಕೆಗೆ ಬಂದು ಹಾಡಿದರು. ಈ ನಡುವೆ ಭೀಮಣ್ಣನ ಪತ್ನಿ ವತ್ಸಲಾಬಾಯಿ ಜೋಶಿ ಕೂಡ ಈ ವೇದಿಕೆಯಲ್ಲಿ ಗಂಧರ್ವರಿಗೆ ಸ್ವರನಮನ ಸಲ್ಲಿಸಿದರು. ಭೀಮಣ್ಣ ಕೊನೆಯುಸಿರು ಎಳೆಯುತ್ತಿದ್ದಂತೆ 2012ನೇ ಸಾಲಿನಿಂದ ಸವಾಯಿ ಗಂಧರ್ವ ಸಂಗೀತ ಮಹೋತ್ಸವವು ಸವಾಯಿ ಗಂಧರ್ವ ಭೀಮಸೇನ್ ಮಹೋತ್ಸವವಾಗಿ ಪರಿವರ್ತನೆಯಾಯಿತು.

ಸದ್ಯ ಅವರ ಪುತ್ರ ಶ್ರೀನಿವಾಸ ಜೋಶಿ ಆರ್ಯ ಪ್ರಸಾರಕ ಮಂಡಳದ ನೇತೃತ್ವವಹಿಸಿ ಗುರು– ಶಿಷ್ಯ ಪರಂಪರೆಯ ದ್ಯೋತಕವಾದ ಈ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಭೀಮಣ್ಣನ ನಂತರ ಕಾರ್ಯಕ್ರಮಕ್ಕೆ ತೆರೆ ಎಳೆಯುವ ಜವಾಬ್ದಾರಿ ಹಿರಿಯ ಗಾಯಕಿ ಪ್ರಭಾ ಅತ್ರೆ ಅವರದ್ದಾಗಿದೆ.

ಮೊನ್ನೆ ನಡೆದ 66ನೇ ಮಹೋತ್ಸವದಲ್ಲಿ ಬೇಗಂ ಪರ್ವಿನ್ ಸುಲ್ತಾನ್, ಪಂಡಿತ್ ಅಜಯ ಪೋಹನ್‌ಕರ್, ಬಲವಂತಸಿಂಗ್ ನಾಮಧಾರಿ, ಉಲ್ಹಾಸ್ ಕಶಾಳಕರ್, ನಮ್ಮ ನಾಡಿನವರಾದ ದತ್ತಾತ್ರೇಯ ವೇಲಣಕರ್, ಭೀಮಣ್ಣನ ಪುತ್ರ ಶ್ರೀನಿವಾಸ್ ಜೋಶಿ ಅವರಂಥ ದಿಗ್ಗಜರ ಗಾಯನ, ರಾಹುಲ್ ಶರ್ಮಾ ಅವರ ಸಂತೂರ್, ವಿವೇಕ್ ಸೋನಾರ್ ಅವರ ಬಾನ್ಸುರಿ, ಉಸ್ತಾದ್ ಶಾಹಿದ್ ಪರವೇಜ್ ಹಾಗೂ ಪ್ರತೀಕ ಚೌಧರಿ ಅವರ ಸಿತಾರ್ ವಾದನ, ಪಂಡಿತ್ ಬಿರಜು ಮಹಾರಾಜ್ ಹಾಗೂ ತಂಡದವರ ಕಥಕ್ ಕಂಪು ನೆರೆದವರ ಮನದಲ್ಲಿ ಸ್ವರ ತಾಳಗಳ ಅಚ್ಚೊತ್ತಿದವು.

ಬಾಗೇಶ್ರೀ ರಾಗದ ಆಲಾಪಗಳೊಂದಿಗೆ ವೇದಿಕೆಯ ಕಳೆ ಹೆಚ್ಚಿಸಿದ ಡಾ.ಪ್ರಭಾ ಅತ್ರೆ ಭೈರವಿಯೊಂದಿಗೆ ಉತ್ಸವಕ್ಕೆ ತೆರೆ ಎಳೆದರು. ಸಂಪ್ರದಾಯದಂತೆ ಸವಾಯಿ ಗಂಧರ್ವರು, ಭೀಮಣ್ಣನ ಧ್ವನಿಮುದ್ರಿಕೆ ತುಣುಕುಗಳು ತೇಲಿ ಬರುತ್ತಿದ್ದಂತೆ ಶ್ರೋತೃಗಳೆಲ್ಲ ಎದ್ದುನಿಂತು ಭಾವುಕರಾದರು.ಗುರುವಿಗಾಗಿ ಶಿಷ್ಯ ಹುಟ್ಟುಹಾಕಿದ ಕಾರ್ಯಕ್ರಮ, ಅವರಿಬ್ಬರ ಪವಿತ್ರ ಸಂಬಂಧಕ್ಕೆ ಕರತಾಡನದ ಮಳೆ ಸುರಿಸಿದರು.

ಬೃಹತ್ ಪ್ರದರ್ಶನ

ಸವಾಯಿ ಗಂಧರ್ವ ಮಹೋತ್ಸವದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರ ಕುರಿತು ಚಿತ್ರ ಪ್ರದರ್ಶನ, ವಿಶೇಷ ಕೃತಿಗಳು, ಕ್ಯಾಲೆಂಡರ್ ಬಿಡುಗಡೆಯಂಥ ಕಾರ್ಯಕ್ರಮಗಳು ಗಮನ ಸೆಳೆಯುತ್ತಿವೆ.

ಕೆಲವು ವರ್ಷಗಳಿಂದ ಭೀಮಣ್ಣ ಸೇರಿದಂತೆ ಸಂಗೀತ ಕ್ಷೇತ್ರದ ದಿಗ್ಗಜರ ಬದುಕಿನ ಚಿತ್ರಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ. ಇದರ ರೂವಾರಿ ಛಾಯಾಗ್ರಾಹಕ ಸತೀಶ್ ಪಾಕನೀಕರ್. ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಈ ಉತ್ಸವದ ಚಿತ್ರಗಳನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿಯುತ್ತಿರುವ ಸತೀಶ್ ಅಂದಾಜು 500 ಸಂಗೀತ ಕಲಾವಿದರ ವಿಭಿನ್ನ ಭಂಗಿಗಳ 75 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ.

ವಿಭಿನ್ನ ಥೀಮ್‌ನೊಂದಿಗೆ ಹದಿನೈದು ವರ್ಷಗಳಿಂದ ಸಂಗೀತಗಾರರ ಅಪರೂಪದ ಕ್ಯಾಲೆಂಡರ್‌ಗಳನ್ನು ಹೊರತಂದಿದ್ದಾರೆ. ದಿಗ್ಗಜ, ಗುರುಶಿಷ್ಯ ಪರಂಪರಾ, ಗಂಧರ್ವ ಪರ್ವ, ಸ್ವರಾ ಮಂಗೇಶ್, ಆನಂದಾಚೆ ದೋಹಿ, ಸ್ವರಾಧಿರಾಜ್ ಭೀಮಸೇನ್ ಎಂಬ ಕ್ಯಾಲೆಂಡರ್‌ಗಳಂತೂ ಅಪಾರ ಖ್ಯಾತಿ ಗಳಿಸಿವೆ. ವಿವಿಧ ರಾಜ್ಯಗಳಲ್ಲಿ ಸತೀಶ್ ಸಂಗೀತಮಯ ಚಿತ್ರಗಳ ಬೃಹತ್ ಪ್ರದರ್ಶನಗಳನ್ನೂ ನಡೆಸಿದ್ದಾರೆ. ಇವರು ಕ್ಲಿಕ್ಕಿಸಿದ ಗಾಯಕ ಪು.ಲ. ದೇಶಪಾಂಡೆ ಅವರ ಚಿತ್ರವನ್ನು ಅಂಚೆಚೀಟಿಗೂ ಬಳಸಲಾಗಿದೆ. ಪ್ರಸಕ್ತ ವರ್ಷ ಉತ್ಸವದಲ್ಲಿ ಸ್ವರ ಸಾಧಕ ಎಂಬ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT