ಶನಿವಾರ, ಸೆಪ್ಟೆಂಬರ್ 25, 2021
23 °C

ಪುಸ್ತಕ ವಿಮರ್ಶೆ: ನೃತ್ಯ ಕಲಾಪ್ರಪಂಚದ ಸರ್ವಾಂಗ ವೈಭವ

ಗ.ನಾ.ಭಟ್ಟ Updated:

ಅಕ್ಷರ ಗಾತ್ರ : | |

Prajavani

ನೃತ್ಯಶಾಸ್ತ್ರ ಮಂಜರಿ
ಲೇ
: ಪ್ರೊ.ಕೆ.ರಾಮಮೂರ್ತಿರಾವ್
ಪ್ರ: ಸಂವಹನ ಪ್ರಕಾಶನ
ಸಂ: 0821-2476019

‘ನೃತ್ಯಶಾಸ್ತ್ರ ಮಂಜರಿ’ ಹೆಸರೇ ಹೇಳುವಂತೆ ನೃತ್ಯ ಮತ್ತು ಶಾಸ್ತ್ರವನ್ನು ಪರಿಚಯಿಸುವ ಒಂದು ಉದ್ಗ್ರಂಥ. ನೃತ್ಯದ ಬಗ್ಗೆಯೇ ಆಗಲಿ ಅಥವಾ ನೃತ್ಯಶಾಸ್ತ್ರದ ಬಗ್ಗೆಯೇ ಆಗಲಿ ಸೂತ್ರಪ್ರಾಯವಾಗಿ ಲಕ್ಷಣೀಕರಿಸುವುದು ಅಷ್ಟು ಸುಲಭವಲ್ಲ. ಅವೆರಡರ ಬಗ್ಗೆಯೂ ಅಪಾರ ತಿಳಿವಳಿಕೆ ಬೇಕಾಗುತ್ತದೆ; ಅಧ್ಯಯನ ಬೇಕಾಗುತ್ತದೆ. ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿ ರಾವ್ ಅವರು ಅಂತಹ ತಿಳಿವಳಿಕೆ ಮತ್ತು ಅಧ್ಯಯನ ಹೊಂದಿದವರು.

ಕಲೆ ಮತ್ತು ಶಾಸ್ತ್ರಗಳ ಬಗ್ಗೆ ವಿದ್ವಾಂಸರು, ನಾಟ್ಯಶಾಸ್ತ್ರಪರಿಣತರು, ವಿದಗ್ಧರು, ಕಲಾವಿದರು ಬಹುವಿಧದಲ್ಲಿ ವ್ಯಾಖ್ಯಾನಿಸಿದ್ದಾರೆ. ಡಿ.ವಿ.ಗುಂಡಪ್ಪನವರು ‘ನಮ್ಮ ಮನಸ್ಸಿಗೆ ಕಣ್ಣು, ಕಿವಿ ಮೊದಲಾದ ಇಂದ್ರಿಯಗಳ ಮೂಲಕ ಒಂದು ಸೌಂದರ್ಯವನ್ನೋ, ಒಂದು ಮಹತ್ವವನ್ನೋ, ಒಂದು ಗಂಭೀರ ವಿಚಾರವನ್ನೋ ಅನುಭವಮಾಡಿಸಿಕೊಡಬಲ್ಲ ಕುಶಲಕರ್ಮವೇ ‘ಕಲೆ’ಯೆಂದು ಕರೆದಿದ್ದಾರೆ. ಶತಾವಧಾನಿ ಆರ್. ಗಣೇಶ್ ಅವರು ಶಾಸ್ತ್ರ, ಪಾಂಡಿತ್ಯ ಮತ್ತು ಕಲೆಯ ಬಗ್ಗೆ ಒಂದು ಅಪೂರ್ವ ಒಳನೋಟವನ್ನೇ ಕೊಟ್ಟಿದ್ದಾರೆ.

ಇಂಥದ್ದೇ ದಾರಿಯಲ್ಲಿ ರಾಮಮೂರ್ತಿ ರಾವ್ ಸಾಗಿದ್ದಾರೆ. ‘ಸಂಸ್ಕೃತಿ ಮತ್ತು ಕಲೆ’ ಎಂಬ ಮೊದಲನೆಯ ಅಧ್ಯಾಯದಲ್ಲಿ ಸಂಸ್ಕೃತಿ, ಕಲೆ, ಕಲಾವಿದ, ನೃತ್ಯಕಲೆ ಮೊದಲಾದವುಗಳ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ನೀಡಿದ್ದಾರೆ. ‘ಒಂದು ಸಮಾಜದಲ್ಲಿ ಕಂಡುಬರುವ ನಡೆ-ನುಡಿ, ಆಚಾರ-ವಿಚಾರ ಇವೆಲ್ಲದರ ಸಾವಿರಾರು ವರ್ಷಗಳ ಕ್ರಮಬದ್ಧ ವಿಕಾಸದ ಫಲವೇ ಸಂಸ್ಕೃತಿ’ ಅಂತ ಹೇಳುತ್ತಾರೆ. ಅನುಭವದ ಒಂದು ಅಭಿವ್ಯಕ್ತಿ, ಹೃದಯವ್ಯಾಪಾರ, ಅಂತಃಕರಣ ಪ್ರಚೋದನೆಯೇ ‘ಕಲೆ’ಯೆಂದು ಅವರು ಅತ್ಯಂತ ಸರಳವಾಗಿ ವ್ಯಾಖ್ಯಾನಿಸುತ್ತಾರೆ.

ಎರಡನೆಯ ಅಧ್ಯಾಯದಲ್ಲಿ ಅವರು ‘ಭಾರತೀಯ ಶಾಸ್ತ್ರೀಯ ನೃತ್ಯ ಪದ್ಧತಿಗಳ ಪರಿಚಯ’ವನ್ನು ಸಂಕ್ಷಿಪ್ತವಾಗಿ ಮಾಡಿಕೊಟ್ಟಿದ್ದಾರೆ. ಭರತನಾಟ್ಯ, ಕಥಕ್ಕಳಿ, ಮೋಹಿನಿ ಆಟ್ಟಂ, ಕೂಚುಪುಡಿ ಮೊದಲಾದ ಏಳು ನೃತ್ಯಪದ್ಧತಿಗಳನ್ನು ಇಲ್ಲಿ ಪರಿಚಯಿಸಿದ್ದಾರೆ. ಆದರೆ ಇದೇ ಪರಿಚಯ 17ನೆಯ ಅಧ್ಯಾಯದಲ್ಲೂ  ಬರುತ್ತದೆ. ಇಲ್ಲಿ ಸಂಕ್ಷಿಪ್ತ, ಅಲ್ಲಿ ವಿಸ್ತಾರ ಎಂಬ ವ್ಯತ್ಯಾಸ ಬಿಟ್ಟರೆ ಎರಡೂ ಅಧ್ಯಾಯಗಳಲ್ಲಿ ವಿಷಯ ಒಂದೇ. ಎರಡನ್ನೂ ಒಂದೇ ಅಧ್ಯಾಯದಲ್ಲಿ ವಿಲೀನಗೊಳಿಸಿ ಪುನರಾವರ್ತನೆಯನ್ನು ತಪ್ಪಿಸಬಹುದಿತ್ತು. ಯಾಕೋ ಅವರು ಆ ದಿಕ್ಕಿನಲ್ಲಿ ಯೋಚಿಸಿದಂತೆ ಕಾಣುವುದಿಲ್ಲ.

ಮಣಿಪುರಿ, ಕಥಕ್ಕಳಿ ಮೊದಲಾದ ಪ್ರಾದೇಶಿಕ ಕಲೆಗಳ ಪರಿಚಯ ಮತ್ತು ನೃತ್ತ, ನೃತ್ಯ, ನಾಟ್ಯಗಳ ಪರಿಚಯ ಹೃದಯಂಗಮವಾಗಿ ಮೂಡಿಬಂದಿವೆ. ನಂದಿಕೇಶ್ವರನ ‘ಅಭಿನಯ ದರ್ಪಣ’ ಕಲಾವಿದರಿಗೆಲ್ಲ ಒಂದು ಆಕರ ಗ್ರಂಥ ಮತ್ತು ನಿತ್ಯ ಅನುಸಂಧೇಯ ಗ್ರಂಥ. ಇಂತಹ ಅಪೂರ್ವಗ್ರಂಥವನ್ನೇ ಆಧಾರವಾಗಿಟ್ಟುಕೊಂಡು ರಾಮಮೂರ್ತಿ ರಾವ್ ಅವರು ನಂದಿಕೇಶ್ವರನನ್ನೂ ಅವನ ಕೃತಿಯನ್ನೂ ಪರಿಚಯಿಸುತ್ತಾ ಸಭಾಲಕ್ಷಣ, ನಾಯಕ-ನಾಯಿಕೆಯರ ಲಕ್ಷಣ,  ರಂಗಲಕ್ಷಣ, ಪಾತ್ರಲಕ್ಷಣ ಮೊದಲಾದುವು ಸಂಕ್ಷಿಪ್ತವಾದರೂ ಅವುಗಳ ಸಾರಾಂಶ ಲೋಪಗೊಳ್ಳದಂತೆ ಸೆರೆಹಿಡಿದಿದ್ದು ಅವರಿಗೆ ಆ ಶಾಸ್ತ್ರದ ಮೇಲೆ ಇದ್ದ ಹಿಡಿತವನ್ನು ಸಾರುತ್ತದೆ.

ಇಲ್ಲಿ ಪರಿಚಯಿಸಿರುವ, ನಟನೆಗೆ ಸಂಬಂಧಪಟ್ಟ ಒಂದೊಂದು ಅಂಶವೂ ನೃತ್ಯಪ್ರಕಾರಕ್ಕಷ್ಟೇ ಸೀಮಿತವಾಗಿಲ್ಲ. ಎಲ್ಲಾ ನಟನಾಪ್ರಕಾರಗಳಿಗೂ ಅನ್ವಯವಾಗುತ್ತದೆ. ಸಿನಿಮಾ ಮತ್ತು ಸೀರಿಯಲ್ಲುಗಳಲ್ಲಿ ತಂತ್ರಜ್ಞಾನದ ಪರಮ ಅವಕಾಶವನ್ನು ಬಿಟ್ಟರೆ ಅಲ್ಲಿಯೂ ನಟನೆ, ನಿರ್ದೇಶನ, ಕಥೆ, ನೃತ್ಯ, ಅಭಿನಯ ಎಲ್ಲವೂ ಇರುತ್ತವೆ. ಇಂದು ಕೆಲವು ಸಿನಿಮಾಗಳಲ್ಲಿ ಚೋದ್ಯ ಕುಚೋದ್ಯ ಆಗಿರುವುದನ್ನೂ ಹಾಸ್ಯ ಅಪಹಾಸ್ಯ ಆಗಿರುವುದನ್ನೂ, ನಾಯಕ ಭಯಂಕರನಾಗಿರುವುದನ್ನೂ ಕಾಣುತ್ತೇವೆ.

ಹಾಗೆಯೇ ಟಿವಿ ಚಾನೆಲ್ಲುಗಳಲ್ಲಿ ಬರುವ ಧಾರಾವಾಹಿಗಳಲ್ಲಿ ಸಂಸ್ಕೃತಿ, ಅಭಿನಯ, ಅರ್ಥವತ್ತಾದ ಕಥಾಹಂದರ ಎಲ್ಲವೂ ನಾಶವಾಗಿ ಅಲ್ಲಿ ವಿಕೃತಿ, ಮನೆಮುರುಕುತನ, ಕಾಮುಕತೆ, ಮೂಢನಂಬಿಕೆಯನ್ನು ಪ್ರಚೋದಿಸುವ ಪೂಜೆ-ಪುನಸ್ಕಾರ, ಅವುಗಳ ವೈಭವೀಕರಣ ಮಾಡುತ್ತಿದ್ದಾರೆ. ಅಭಿನಯದ ಗಂಧವೂ ಇಲ್ಲದ ಯಾರು ಯಾರೋ ಪಾತ್ರವಹಿಸುತ್ತಾ ಅಭಿನಯವನ್ನು ಕಗ್ಗೊಲೆ ಮಾಡಿದ್ದಾರೆ. ಅಂತಹವರು ರಾಮಮೂರ್ತಿರಾವ್ ಬರೆದಿರುವ ಈ ಪುಸ್ತಕವನ್ನು ಓದುವುದು ಒಳ್ಳೆಯದು. ಇಲ್ಲಿ ನಟನಟಿಯರು ಹೇಗಿರಬೇಕು, ಎಂತಹ ಗುಣಗಳನ್ನು ಸಂಪಾದಿಸಿರಬೇಕು, ಅಂತಃಪ್ರಾಣ-ಬಹಿಃಪ್ರಾಣಗಳನ್ನು ಹೇಗೆ ರೂಢಿಸಿಕೊಳ್ಳಬೇಕು, ಹಾವ ಭಾವಗಳನ್ನು ಹೇಗೆ ಪ್ರಕಟಿಸಬೇಕು? ಉಚ್ಚಾರಣೆಯನ್ನು ಹೇಗೆ ಮಾಡಬೇಕು ಅನ್ನುವುದನ್ನು ರಾಮಮೂರ್ತಿರಾವ್ ಬಹಳ ಸೊಗಸಾಗಿ ನಿರೂಪಿಸಿದ್ದಾರೆ.

ಮಕ್ಕಳಿಗೆ ಅನುಕೂಲವಾಗಲೆಂದು ರಚಿಸಿರುವ ಸರಳಭಾಷೆಯ ಪುಸ್ತಕ ಇದು ಎಂದು ಲೇಖಕರು ಹೇಳಿದ್ದಾರೆ. ಹಾಗೆಂದು ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ವಿಷಯದ ಮಹತ್ವ ಮತ್ತು ಅದರ ಹಾಸುಬೀಸನ್ನು ಗಮನಿಸಿದರೆ ಇದೊಂದು ಆಚಾರ್ಯಕೃತಿಯ ಮಟ್ಟಕ್ಕಿದೆ. ಗಾತ್ರದಲ್ಲೂ, ವಿಷಯಗಹನತೆಯಲ್ಲೂ, ವಿಸ್ತಾರ-ವೈಪುಲ್ಯತೆಯಲ್ಲೂ ಇದೊಂದು ಅಪೂರ್ವ ಕೃತಿ. ಭರತನಾಟ್ಯದ ಹುಟ್ಟು ಬೆಳವಣಿಗೆಯಿಂದ ಹಿಡಿದು ಭಾರತಿ, ಸಾತ್ವತಿ, ವೃತ್ತಿ, ಯೋಗಾಸನ, ವ್ಯಾಯಾಮ, ಅಡವುಗಳ ವೈವಿಧ್ಯ, ಸಾತ್ವಿಕ, ಆಂಗಿಕ, ವಾಚಿಕ ಮೊದಲಾದ ಅಭಿನಯಗಳ ವೈಶಿಷ್ಟ್ಯ, ಭರತನಾಟ್ಯದಲ್ಲಿ ಉಪಯೋಗಿಸುವ ಪ್ರಮುಖ ವಾದ್ಯಗಳು, ಸುಳಾದಿ ಸಪ್ತ ತಾಳಗಳು ಹೀಗೆ ಅವುಗಳ ವಿಸ್ತೃತರೂಪಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಬೇರೆ ಬೇರೆ ಭಾಷೆಗಳಲ್ಲಿ ಇರುವ 20ಕ್ಕೂ ಹೆಚ್ಚು ನಾಟ್ಯಗ್ರಂಥಗಳನ್ನೂ, ಅಷ್ಟೇ ಪ್ರಮಾಣದ ನಾಟ್ಯಗುರುಗಳನ್ನೂ, ನರ್ತಕರನ್ನೂ ಇದರ ತೆಕ್ಕೆಗೆ ಸೇರಿಸಿರುವುದು ಥಟ್ಟನೆ ಬೇಕಾಗುವ ಮಾಹಿತಿಗೆ ಇದೊಂದು ಅಪೂರ್ವ ಕೊಡುಗೆಯಾಗಿ ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಮಾತ್ರವಲ್ಲ ನಮ್ಮ ಶ್ರಮವನ್ನು ತಗ್ಗಿಸುತ್ತದೆ.

ಈ ಕೃತಿಯ ಇನ್ನೊಂದು ವಿಶೇಷವೆಂದರೆ ಕೆಲವು ನೃತ್ಯವೈವಿಧ್ಯಗಳನ್ನು, ಅವುಗಳ ಗತಿಸಂಚಾರಗಳನ್ನು, ನಾಟ್ಯಶಾಸ್ತ್ರ ಅಂಗಗಳನ್ನು, ವ್ಯಾಯಾಮಕ್ರಿಯೆಗಳನ್ನು ಪರಿಚಯಿಸಲು ಕಾಲಮ್‌ಗಳನ್ನು (ಸ್ತಂಭ) ಹಾಕಿ ತೋರಿಸಿದ್ದು. ಅದು ಎಷ್ಟು ಉಪಕಾರಕವೆಂದರೆ ಅಧ್ಯೇತ್ರುವಿಗೆ ಕಲಿಕೆ ಅನ್ನವುದು ಸುಲಿದ ಬಾಳೆಹಣ್ಣಿನಂದದಿ ಸುಲಭಲಭ್ಯವಾಗಿದೆ. ಅಪವಿದ್ಧ, ನಿಕುಟ್ಟಿಕ, ಮಂಡಲಸ್ವಸ್ತಿಕ, ಲೀನಕರಣ ಮೊದಲಾದ ಸಿದ್ಧಮಾದರಿಯ ಕರಣಗಳಂತೂ ಕಾಲಮ್‍ಗಳ ಮಧ್ಯದಲ್ಲಿ ಸುಮನೋಹರವಾಗಿ ಪ್ರಕಟಗೊಂಡಿವೆ. ನೋಡಲೂ ಚೆಂದ; ಅಭ್ಯಸಿಸಲೂ ಸುಲಭ. ಕೆಲವು ನೃತ್ಯಪಟುಗಳ ಭಾವಚಿತ್ರಗಳೂ ಇದರ ಸೊಗಸನ್ನು ಹೆಚ್ಚಿಸಿವೆ. ಭಾರತೀಯ ಮತ್ತು ಪಾಶ್ಚಾತ್ಯಗೇಯ ನಾಟಕಗಳ ಪರಿಚಯ, ಯಕ್ಷಗಾನ, ಭಾಗವತಮೇಳ, ಬ್ಯಾಲೆ ನರ್ತನ, ಕೊರಿಯೊಗ್ರಫಿ, ಅವುಗಳ ಇತಿಹಾಸ, ಬೆಳವಣಿಗೆ ಹಾಗೂ ಸಾಧಕರ ಜೀವನಚರಿತ್ರೆ ಇವೆಲ್ಲವೂ ಒಂದೇ ಸೂರಿನಡಿ ದೊರೆಯುವಂತೆ ಮಾಡಿದ್ದು ಕೃತಿಯ ವೈಶಿಷ್ಟ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು