ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜ ಪಾತ್ರಗಳಲ್ಲಿ ಕಟ್ಟಿದ ಕಾಲ್ಪನಿಕ ಕಥೆ

author interview
Last Updated 9 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

‘ಮೂರು ದೇಶಗಳಲ್ಲಿ ಕೂತು ಕಥೆಯನ್ನು ಹೆಣೆಯಲಾಗಿದ್ದರೂ, ಓದುವವರಿಗೆ ಮೈಸೂರಿನ ಐತಿಹಾಸಿಕ ನೆನಪುಗಳು ಕಾಡಲಿವೆ. ಕಥೆ ಕಾಲ್ಪನಿಕವಾದರೂ, ಪಾತ್ರಗಳು ಹಾಗೂ ಸ್ಥಳಗಳಲ್ಲಿ ನೈಜತೆ ಕಾಯ್ದುಕೊಳ್ಳಲಾಗಿದೆ‘ ಎಂದು ಜರ್ಮನಿಯಲ್ಲಿ ನೆಲೆಸಿರುವ ಜೆ.ಎಚ್‌.ಪುನೀತ್‌ ಮಾತು ಆರಂಭಿಸಿದರು.

ಸ್ವಪ್ನಾ ಬುಕ್‌ ಹೌಸ್‌ನಲ್ಲಿ ಶನಿವಾರ ಅವರ ಪುಸ್ತಕ ‘ದಿ ಫಾರ್ಬಿಡನ್‌ ಕ್ವೆಸ್ಟ್‌ ಆಫ್‌ ಮೈಸೂರು’ ಪುಸ್ತಕ ಬಿಡುಗಡೆಯಾಯಿತು. ಈ ವೇಳೆ ಅವರು ‘ಮೆಟ್ರೊ’ದೊಂದಿಗೆ ಹರಟಿದರು.

’ಬೆಂಗಳೂರಿನಲ್ಲಿ ಆರಂಭಿಕ ವಿದ್ಯಾಭ್ಯಾಸ ಮಾಡಿದೆ. ಬಳಿಕ ಹೊರದೇಶಕ್ಕೆ ಹೋದೆ.ಇಲ್ಲಿಗೆ ಬಂದಾಗಲೆಲ್ಲಾ ಪುಸ್ತಕದ ಕೆಲವು ಭಾಗಗಳನ್ನು ಬರೆಯುತ್ತಿದ್ದೆ. ದಕ್ಷಿಣ ಕೊರಿಯಾ, ಜರ್ಮನಿಯಲ್ಲೂ ಈ ಕೃತಿ ರಚನೆ ಮಾಡಿದ್ದೇನೆ. ಪ್ರೇಮ ಕಥೆಯೊಳಗೆ ಬರುವ ರೋಚಕ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿದೆ. ಮೈಸೂರಿನ ರಾಜರು ಹಾಗೂ ಅಲ್ಲಿಯ ಸ್ಥಳಗಳನ್ನು ಕಥೆಯಲ್ಲಿ ಮುಖ್ಯವಾಗಿ ಬಳಸಿಕೊಳ್ಳಲಾಗಿದ್ದರೂ, ಕಥಾಹಂದರ ಮಾತ್ರ ಸಂಪೂರ್ಣವಾಗಿ ಕಾಲ್ಪನಿಕವಾಗಿದೆ‘ ಎಂದು ತಮ್ಮ ಎರಡನೇ ಪುಸ್ತಕದ ಹೊರಳುಗಳನ್ನು ಬಿಚ್ಚಿಟ್ಟರು.

’ಕಾಲೇಜಿನ ದಿನಗಳಲ್ಲಿ ನನ್ನ ಮೊದಲ ಪುಸ್ತಕ ಅಚ್ಚಾಯಿತು. ಹದಿಹರೆಯದ ಯುವಕ, ಯುವತಿಯನ್ನು ಆಧರಿಸಿ ಬರೆದಿದ್ದೆ. ’ಲವ್ ಲಸ್ಟ್‌ ಆ್ಯಂಡ್‌ ಲಾಯಲ್ಟಿ ಇನ್‌ ಎ ಗರ್ಲ್ಸ್‌ ಲೈಫ್‌‘ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆಗಲೇ ಮನಸ್ಸಿನಲ್ಲಿ, ಲೇಖಕನಾಗಿ ಬೆಳೆಯುವ ಆಸೆ ಚಿಗುರಿತ್ತು‘ ಎಂದು ತಮ್ಮ ಆರಂಭಿಕ ಪ್ರಯತ್ನಗಳನ್ನು ಹಂಚಿಕೊಂಡರು.

’ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದರೂ ಬರವಣಿಗೆ ನನ್ನ ಕೈಹಿಡಿಯಿತು. ಕನ್ನಡದಲ್ಲಿ ಬರೆಯುವ ಆಸೆ ಇದೆ. ಆದರೆ ಭಾಷೆ ಸ್ವಲ್ಪ ಕಷ್ಟ. ಜೊತೆಗೆ ಇಂಗ್ಲಿಷ್‌ನಲ್ಲಿ ಪ್ರಕಟಣೆ ಸುಲಭ ಎನಿಸಿತು. ಮುಂದೆ ಅವಕಾಶ ಸಿಕ್ಕರೆ ಕನ್ನಡದ ಕಡೆ ವಾಲುವ ಬಯಕೆ ಇದೆ‘ ಎಂದರು.

’ಕನ್ನಡದ ಕೆಲವು ಲೇಖಕರು ಸಾಮರ್ಥ್ಯ ಇದ್ದರೂ ಸಾಗರದಾಚೆಗಿನ ವಿಷಯಗಳನ್ನು ಆಧರಿಸಿದ ಕಥೆಗಳನ್ನು ಬರೆಯುತ್ತಿಲ್ಲ. ಓದುಗರು ಆ ಮಟ್ಟದ ಬೌದ್ಧಿಕತೆಯನ್ನು ಹೊಂದಿಲ್ಲ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ ವಿಭಿನ್ನ ಕಥೆಗಳು ಕನ್ನಡಕ್ಕೆ ಬರುವ ಅಗತ್ಯವಿದೆ‘ ಎಂದು ಕನ್ನಡ ಸಾಹಿತ್ಯದ ಮಿತಿಗಳ ಕುರಿತು ಮಾತನಾಡಿದರು.

’ನನ್ನ ಕಥೆಯಲ್ಲಿ; ಪುರಾತತ್ವಶಾಸ್ತ್ರಜ್ಞನೊಬ್ಬ ಮನೆ ಬಿಟ್ಟು ಹೋಗುವಾಗ, ಮೈಸೂರು ಸಂಸ್ಥಾನದ ಐತಿಹಾಸಿಕ ಆಯುಧ ’ಗಂಡಬೇರುಂಡ‘ವನ್ನು ಕದ್ದುಕೊಂಡು ಹೋಗಿದ್ದಾನೆ ಎಂಬ ವದಂತಿ ಹರಡುತ್ತದೆ. ಬಳಿಕ ಮಗ ಅವನನ್ನು ಹುಡುಕಿಕೊಂಡು ಹೋಗುತ್ತಾನೆ. ಓದುವಾಗ ಈ ಎಲ್ಲಾ ಅಂಶಗಳು ಎದೆಬಡಿತವನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ ಅಮೇಜಾನ್‌ನಲ್ಲಿ ಮಾರಾಟವಾದ ಐದು ಪ್ರಮುಖ ಕೃತಿಗಳಲ್ಲಿ ಇದೂ ಒಂದಾಗಿತ್ತು‘ ಎಂದು ಸಂತೋಷ ಹಂಚಿಕೊಂಡರು.

ಕಥೆಯಲ್ಲಿನ ಕಾಲ ಕೂಡ ಮೈಸೂರಿನ ಸಂಸ್ಥಾನ ಉತ್ತುಂಗದಲ್ಲಿ ಇದ್ದ ದಿನಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲಿಯ ಪ್ರಮುಖ ರಾಜರ ಹೆಸರುಗಳನ್ನೇ ಬಳಸಿಕೊಳ್ಳಲಾಗಿದೆ. ಅರಮನೆಯನ್ನು ಸುಡುವ ಪ್ರಸಂಗ, ಪ್ರಖ್ಯಾತ ಮೈಲಾರಿ ದೋಸೆ ಸೆಂಟರ್‌ ಕೂಡ ಕಥೆಯಲ್ಲಿ ಬಂದು ಹೋಗುತ್ತದೆ.

ಹಾಫ್‌ ಬೇಕ್ಡ್‌ ಬೀನ್ಸ್‌ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ. ₹249ಕ್ಕೆ ಅಮೇಜಾನ್‌ನಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT