ಕಥೆಗಳ ಹೊಸ ಜಾಡು

7
ವಿಮರ್ಶೆ

ಕಥೆಗಳ ಹೊಸ ಜಾಡು

Published:
Updated:

ದಲಿತ ಸಮುದಾಯದ ತವಕ ತಲ್ಲಣಗಳನ್ನು ಒಳಗೊಂಡ ಕಥೆಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಸಮಸ್ಯೆಗಳು ಎರಡು ಬಗೆಯವು. ಒಂದು, ಕಥೆಗಾರನಿಗೆ ತಾನು ಹೇಳಬೇಕಾದ ಕಥೆಯೇ (ವಸ್ತುವೇ) ಮುಖ್ಯವಾಗಿ, ಶಿಲ್ಪ ಹಾಗೂ ಭಾಷೆ ಸೊರಗುವುದು. ಎರಡನೆಯದು, ಕಥೆಗಾರ ತಾನು ಮುಖಾಮುಖಿ ಆಗಲು ಹೊರಟಿರುವ ತಲ್ಲಣದ ಭಾಗವಾಗಿಯೇ ಕಥೆ ನಿರೂಪಿಸುವುದರಿಂದ ಉಂಟಾಗುವ ತೊಡಕುಗಳು. ಈ ತೊಡಕುಗಳ ಸಂದರ್ಭದಲ್ಲಿ ಕಥೆ ತನ್ನ ಧ್ವನಿಶಕ್ತಿಯನ್ನು ಮುಕ್ಕಾಗಿಸಿಕೊಂಡು ಭಾವುಕ ನೆಲೆಯಲ್ಲಿ ಕೊನೆಗೊಳ್ಳುತ್ತದೆ. ಇವುಗಳ ಜೊತೆಗೆ ಮತ್ತೊಂದು ಸಮಸ್ಯೆಯೂ ಇದೆ: ಊರುಕೇರಿಯ ನುಡಿಗಟ್ಟನ್ನು ಬಳಸುವ ಉಮೇದು ಮತ್ತು ಭಾಷೆಯ ಮೋಹಕತೆಗೆ ಮರುಳಾಗಿ, ಆತ್ಯಂತಿಕ ಸಂಕಟಗಳನ್ನು ಕೂಡ ಮೋಹಕವಾಗಿ ಚಿತ್ರಿಸುವುದು. ಈ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ನಿವಾರಿಸಿಕೊಂಡಿರುವುದು ‘ಗೋವಿನ ಜಾಡು’‌ ಸಂಕಲನದ ವಿಶೇಷ.

‘ಗೋವಿನ ಜಾಡು’‌ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂಟಲಗೆರೆಯ ಗುರುಪ್ರಸಾದ್‌ ಅವರ ಚೊಚ್ಚಿಲ ಕಥಾಸಂಕಲನ. ಇಲ್ಲಿನ ಎಂಟೂ ಕಥೆಗಳಲ್ಲಿ ಯಾವುದರಲ್ಲೂ ಕಥೆಗಾರರ ಅನನುಭವವನ್ನು ಸೂಚಿಸುವ ಕುರುಹಗಳಿಲ್ಲ. ತನ್ನ ಅನುಭವಕ್ಕೆ ಬಂದ ಸಂಗತಿಗಳನ್ನು ಕಥೆಗಳನ್ನಾಗಿಸುವಲ್ಲಿ ಗುರುಪ್ರಸಾದ್‌ ತೋರಿರುವ ಕಸುಬುದಾರಿಕೆ ಪ್ರೌಢವಾದುದು, ಪ್ರಾಮಾಣಿಕವಾದುದು.

ಊರುಕೇರಿಯ ಬದುಕುಗಳ ಕಥೆಗಳನ್ನು ಹೇಳುವುದರ ಜೊತೆಜೊತೆಗೆ ಆ ಪರಿಸರಕ್ಕೆ ತಳಕು ಹಾಕಿಕೊಂಡ ಸಮಕಾಲೀನ ರಾಜಕಾರಣದ ಸ್ವರೂಪವನ್ನು ಚಿತ್ರಿಸಲು ಗುರುಪ್ರಸಾದ್‌ ಪ್ರಯತ್ನಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ‘ಗೋವಿನ ಜಾಡು’, ‘ಸಬ್ಸಿಡಿ’, ‘ಹಾದಿ’ ಕಥೆಗಳನ್ನು ನೋಡಬಹುದು. ಆಹಾರದ ಹೆಸರಿನಲ್ಲಿ ಸಮುದಾಯಗಳ ನಡುವೆ ಗೆರೆ ಎಳೆಯುವ ಹಾಗೂ ಮನುಷ್ಯರಿಗಿಂತಲೂ ಪಶುಗಳ ಬಗ್ಗೆ ಹೆಚ್ಚು ಕಾಳಜಿ ಮಾಡುವ ‘ಆಹಾರ ರಾಜಕಾರಣ’ವನ್ನು ‘ಗೋವಿನ ಜಾಡು’ ಕಥೆ ನಿರ್ವಹಿಸಿರುವ ರೀತಿ ಕುತೂಹಲಕರವಾಗಿದೆ. ಗೋವಧೆಯನ್ನು ವಿರೋಧಿಸುವ ಸಮಾವೇಶವೊಂದರಲ್ಲಿ ಭಾಗವಹಿಸಲು ಊರುಕೇರಿಗಳಿಂದ ಜನರನ್ನು ಕರೆತರಲಾಗುತ್ತದೆ. ಹೀಗೆ ಬರುವ ಜನರಿಗೆ ತಾವು ಯಾವ ಉದ್ದೇಶಕ್ಕಾಗಿ ಸಭೆಗೆ ಬಂದಿದ್ದೇವೆ ಎನ್ನುವುದಾಗಲೀ, ಈ ಸಭೆಯ ಉದ್ದೇಶ ತಮ್ಮ ಆಹಾರಕ್ರಮದ ವಿರುದ್ಧವಾಗಿದೆ ಎನ್ನುವ ಅರಿವಾಗಲೀ ಇಲ್ಲ. ಸ್ವಾಮೀಜಿಯ ಬೋಧನೆ, ‘ಗೋವಿನ ಹಾಡು’ ರೂಪಕದ ನಡುವೆಯೂ ಬಿಡುವು ಮಾಡಿಕೊಂಡು ತಮ್ಮ ಅಡ್ಡೆಗಳಿಗೆ ಹೋಗಿ ದನದ ಮಾಂಸ ಕಟ್ಟಿಸಿಕೊಂಡು ಬರುವ ಮುಗ್ಧತೆ ಇಲ್ಲಿನ ಜನರದು. ಬಸ್‌ನಲ್ಲಿ ಮಾಂಸದ ವಾಸನೆ ಬಂದಾಗ, ಅದನ್ನು ಮಾಲಿನ್ಯ ತುಂಬಿಕೊಂಡ ಕೆರೆಯಿಂದ ಬರುತ್ತಿರುವ ವಾಸನೆ ಎಂದೂ ಉದರಬಾಧೆಯ ಗಾಳಿಯೆಂದೂ ತೇಲಿಸಿ ಮಾತನಾಡುತ್ತಾರೆ.

ರಾಗಿ ರೊಟ್ಟಿ ಬೇಡವೆಂದು ಅನ್ನಕ್ಕಾಗಿ ಹಂಬಲಿಸುವ ಮೊಮ್ಮಗನ ಆಸೆಯನ್ನು ಈಡೇರಿಸಲು ಒದ್ದಾಡುವ ಕಮಲವ್ವ ಎನ್ನುವ ಅಜ್ಜಿಯ ಬದುಕಿನ ಸಂಕಟವನ್ನು ಅನಾವರಣಗೊಳಿಸುವ ‘ಹಾದಿ’ ಕಥೆ ಅನ್ನಭಾಗ್ಯದ ಯೋಜನೆ ಬಡವರ ಪಾಲಿಗೆ ಎಷ್ಟು ಮುಖ್ಯವಾದುದು ಎನ್ನುವುದನ್ನೂ, ಯೋಜನೆ ಎಷ್ಟರಮಟ್ಟಿಗೆ ಸಮರ್ಪಕವಾಗಿ ಜಾರಿಯಾಗುತ್ತಿದೆ ಎನ್ನುವುದನ್ನೂ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ‘ಅಕ್ಕಿ’ ತರುವ ಸಂದರ್ಭದಲ್ಲಿನ ಅಜ್ಜಿ–ಮೊಮ್ಮಗನ ಪಯಣ ಗ್ರಾಮೀಣ ಬದುಕಿನ ದಾರುಣ ಚಿತ್ರವೊಂದನ್ನು ಕೊಡುತ್ತದೆ. ಈ ಕಥೆಯ ಮತ್ತೊಂದು ಮಗ್ಗುಲಿನಂತೆ ಕಾಣಿಸುವ ‘ಸಬ್ಸಿಡಿ’, ಹಿಂದುಳಿದ ಸಮುದಾಯಗಳಿಗಾಗಿ ಇರುವ ಸರ್ಕಾರದ ಯೋಜನೆಗಳು ಅನುಷ್ಠಾನಗೊಳ್ಳುವಲ್ಲಿ ಅಡಚಣೆಯಾಗಿ ನಿಂತಿರುವ ಅಧಿಕಾರಶಾಹಿಯ ಅಮಾನವೀಯತೆಯ ಕಾಣಿಸುತ್ತದೆ. ಸಬ್ಸಿಡಿ ಸಾಲ ಪಡೆದು ಹಸು ಕೊಳ್ಳಲು ಹೊರಟ ಚನ್ನಯ್ಯ ಎನ್ನುವ ಪರಿಶಿಷ್ಟ ಜಾತಿಯ ವ್ಯಕ್ತಿ, ಸಾಲ ಪಡೆಯುವುದಿರಲಿ, ಅರ್ಜಿ ಸಲ್ಲಿಸಲೂ ಸಾಧ್ಯವಾಗದೆ ಹೋಗುವ ವಿಪರ್ಯಾಸ ಈ ಕಥೆಯಲ್ಲಿದೆ. ತಮ್ಮ ಆಹಾರದ ಆಯ್ಕೆಯನ್ನು ಬೇರೊಬ್ಬರು ನಿರ್ಣಯಿಸುವ ಪ್ರಯತ್ನವನ್ನು ಕಥೆ ಸೂಕ್ಷ್ಮವಾಗಿ ನಿರಾಕರಿಸುತ್ತದೆ.

‘ಗೋವಿನ ಜಾಡು’, ‘ಹಾದಿ’ ಹಾಗೂ ‘ಸಬ್ಸಿಡಿ’ ಕಥೆಗಳು ಸಮಕಾಲೀನ ರಾಜಕಾರಣದ ಜೊತೆಗೆ ತಳಕು ಹಾಕಿಕೊಂಡಿರುವ ದಲಿತರ ಬದುಕನ್ನು ನೇರವಾಗಿ ಚರ್ಚಿಸುತ್ತವಾದರೂ, ರಾಜಕಾರಣದ ಅಂಶಗಳು ಯಾವ ಕಥೆಯಲ್ಲೂ ತುರುಕಿದಂತೆ ಅಥವಾ ಹೇರಿಕೆಯ ರೀತಿಯಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಈ ಸಂಕಲನದ ಗುಣಾತ್ಮಕ ಸಂಗತಿ. ಕಥೆಗಾರನಿಗೆ ಯಾವುದು ಮುಖ್ಯ ಎನ್ನಿಸಿದೆಯೋ ಅದು, ವಿವರಗಳಾಗಿ ದಾಖಲಾಗುವ ಬದಲು ಕಥೆಯ ದೇಹವಾಗಿಯೇ ರೂಪುಗೊಂಡಿರುವ ಕಲಾತ್ಮಕತೆಯನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಗೋ ರಾಜಕಾರಣದ ಬಗ್ಗೆ ಹೇಳುವ ಸಂದರ್ಭದಲ್ಲಿ ಕಥೆಗಾರ ಯಾವುದೊಂದು ನಿಲುವನ್ನೂ ಸ್ಪಷ್ಟವಾಗಿ ವ್ಯಕ್ತಪಡಿಸದೆ ಹೋದರೂ, ಓದುಗರೊಳಗೆ ಕಥೆ ಉಂಟುಮಾಡುವ ಕಂಪನಗಳು ನಾವು ಸಾಗಬೇಕಾದ ದಿಕ್ಕು ಯಾವುದೆನ್ನುವುದನ್ನು ನಿಚ್ಚಳವಾಗಿಸುವಂತಿವೆ.

‘ಮುಟ್ಟು’ ಸಂಕಲನದ ಮತ್ತೊಂದು ಮುಖ್ಯವಾದ ಕಥೆ. ಗಂಡನಿಂದ ದೊರಕದ ಸುಖವನ್ನು ಮನೆಯಾಳಿನಿಂದ ಪಡೆಯಲು ಮುಂದಾಗುವ ಯುವ ಗೌಡತಿಯ ಕಥೆ ಕನ್ನಡ ಕಥಾಲೋಕಕ್ಕೆ ಹೊಸತೇನೂ ಅಲ್ಲ. ಆದರೆ, ಈ ಕಥೆಯನ್ನು ಗುರುಪ್ರಸಾದ್‌ ನಿರ್ವಹಿಸಿರುವ ರೀತಿ ಭಿನ್ನವಾದುದು. ಚೆಲುವ ಹಾಗೂ ರೂಪ – ಇಬ್ಬರ ಹಸಿವೆಯ ಸ್ವರೂಪ ಭಿನ್ನವಾದುದು. ಇಬ್ಬರೂ ಒಂದಾಗುವ ಕ್ಷಣ, ಹಸಿವು ತೀರುವ ಸಹಜಕ್ಷಣವಾಗಿ ರೂಪುಗೊಂಡಿರುವುದು ಹಾಗೂ ‘ಮುಟ್ಟು’ ಎನ್ನುವುದು ಸ್ಪರ್ಶದ ಚೌಕಟ್ಟು ದಾಟಿ, ಗುರಿಯ ರೂಪ ಪಡೆದಿರುವುದು ಕಥೆಯ ಘನತೆಯನ್ನು ಹೆಚ್ಚಿಸಿದೆ. ‘ನೀಲಿ ಮಗಳು’ ಕೂಡ ಇಂತಹುದೇ ಕಥೆ. ಅಮ್ಮನೊಂದಿಗಿನ ಊರ ಮೇಷ್ಟರ ಸಂಬಂಧ ಮಗಳ ಕಣ್ಣಿನಲ್ಲಿ ಪಡೆದುಕೊಳ್ಳುವ ಸ್ವರೂಪಗಳನ್ನು ಕಥೆ ಸೂಕ್ಷ್ಮವಾಗಿ ನಿಭಾಯಿಸಿದೆ.

ಅನಿರೀಕ್ಷಿತ ಮುಕ್ತಾಯಗಳಿಂದ ಓದುಗರನ್ನು ಬೆಚ್ಚಿಬೀಳಿಸುವ ಗೋಜಿಗೆ ಹೋಗದ ಕಥೆಗಾರರು, ಹುಸಿ ಭರವಸೆಗಳನ್ನು ಮೂಡಿಸುವ ಪ್ರಯತ್ನವನ್ನೂ ಮಾಡುವುದಿಲ್ಲ. ಇದಕ್ಕೆ ಉದಾಹರಣೆಯಾಗಿ – ಊರಿಗೆ ಹಿಂದಿರುಗಲಾಗದ, ನಗರದಲ್ಲಿ ನೆಲೆ ಕಂಡುಕೊಳ್ಳಲಾಗದ ತರುಣನೊಬ್ಬನ ಸಂಕಟ–ಸಂದಿಗ್ಧದ ‘ಅವ್ಯಕ್ತ’ ಕಥೆಯನ್ನು ನೋಡಬಹುದು. ಉಸಿರುಗಟ್ಟಿಸುವ ನಗರದಿಂದ ಪಾರಾಗಲು ಹೊರಟು, ತನ್ನೂರಿಗೆ ಹೋಗುವ ರೈಲಿನಲ್ಲಿ ಜಾಗ ದೊರಕಿಸಿಕೊಳ್ಳಲಾಗದೆ ಕಥಾನಾಯಕ ದಿಗ್ಭ್ರಮೆಯಲ್ಲಿ ನಿಲ್ಲುವುದು ಕಠೋರ ವಾಸ್ತವವೆನ್ನಿಸುತ್ತದೆ. ‘ವೆಡ್ಡಿಂಗ್‌ ಆ್ಯನಿವರ್ಸರಿ’ ಭಿನ್ನವಾಗಿ ನಿಲ್ಲುವ ಕಥೆ. ಮಧ್ಯಮವರ್ಗದ ದಂಪತಿಯ ಬದುಕಿನ ಮುನಿಸು ಹಾಗೂ ಪ್ರೇಮದ ಕ್ಷಣಗಳನ್ನು ಈ ಕಥೆ ಲವಲವಿಕೆಯಿಂದ ಚಿತ್ರಿಸಿದೆ. ‘ವೆಡ್ಡಿಂಗ್‌ ಆ್ಯನಿವರ್ಸರಿ’ ಕಥೆಯೂ ಸೇರಿದಂತೆ ಸಂಕಲನದ ಬಹುತೇಕ ಕಥೆಗಳಲ್ಲಿ ಮನುಷ್ಯ ಮನುಷ್ಯರ ನಡುವಣ ಪ್ರೇಮಕ್ಕೆ ಅಥವಾ ತಲ್ಲಣಕ್ಕೆ ರೂಪಕದ ರೀತಿಯಲ್ಲಿ ‘ಆಹಾರ’ ಬಳಕೆಯಾಗಿರುವುದು ಕುತೂಹಲಕರ.

‘ಗೋವಿನ ಜಾಡು’ ಸಂಕಲನದ ಕಥೆಗಳ ಭಾಷೆ ಸರಳತೆಯಲ್ಲಿನ ಸೌಂದರ್ಯವನ್ನು ಸೂಚಿಸುವಂತಿದೆ. ಚಿಕ್ಕನಾಯಕನಹಳ್ಳಿ ಪರಿಸರದ ಭಾಷೆ ಬಳಕೆಯಾಗಿದ್ದರೂ, ಅದು ಎಲ್ಲರ ಕನ್ನಡ ಎನ್ನುವಷ್ಟು ಸಹಜವಾಗಿದೆ. ಚೊಚ್ಚಿಲ ಕೃತಿಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, ಆ ಕೃತಿಗಳ ಲೇಖಕರನ್ನು ಸಾಹಿತ್ಯಲೋಕಕ್ಕೆ ಸ್ವಾಗತಿಸುವುದು ವಾಡಿಕೆ. ಆದರೆ, ಗುರುಪ್ರಸಾದ್‌ ಕಂಟಲಗೆರೆ ಅವರು ಕನ್ನಡ ಕಥಾಲೋಕ ಉತ್ಸಾಹದಿಂದ ಸ್ವಾಗತಿಸಬೇಕಾದ ಹಾಗೂ ಮುಂದಿನ ಕಥೆಗಳಿಗಾಗಿ ನಿರೀಕ್ಷಿಸಬೇಕಾದ ಕಥೆಗಾರ ಎಂದು ಹೇಳುವುದು ರೂಢಿಗತ ಮಾತಾಗಿರದೆ, ಅದನ್ನು ಪ್ರಸಕ್ತ ಸಂಕಲನದ ಯಶಸ್ಸಿಗೆ ಸಂದ ಮೆಚ್ಚುಗೆ ಎಂದೇ ಭಾವಿಸಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !