ಶನಿವಾರ, ಮೇ 8, 2021
25 °C

ವಿಮರ್ಶೆ: ಜನಪದ ಲೋಕ ಭಿತ್ತಿಯ ಕತೆಗಳು

ಸುರೇಶ ನಾಗಲಮಡಿಕೆ Updated:

ಅಕ್ಷರ ಗಾತ್ರ : | |

Prajavani

ಗುಣಸಾಗರಿ ಮತ್ತು ಇತರ ಕತೆಗಳು
ಲೇ: ಜಿ.ವಿ. ಆನಂದಮೂರ್ತಿ
ಪ್ರ: ಪ್ರೀತಿ ಪುಸ್ತಕ
ಸಂ: 98457 00747
ಪುಟಗಳು: 104 ಬೆಲೆ: 150

ಜಿ.ವಿ. ಆನಂದಮೂರ್ತಿಯವರು ತಮ್ಮ ಇದುವರೆಗಿನ ಕತೆಗಳನ್ನು ‘ಗುಣಸಾಗರಿ ಮತ್ತು ಇತರ ಕತೆಗಳು’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇಲ್ಲಿನ ಕತೆಗಳಲ್ಲಿ ಎರಡು ಮಾದರಿಗಳನ್ನು ಕಾಣಲು ಸಾಧ್ಯ. ಒಂದು, ಗ್ರಾಮ ಬದುಕಿನ ಅತಿಯಾದ ಪಲ್ಲಟಗಳು. ಇದರಲ್ಲಿ ಕಳೆದುಹೋಗುತ್ತಿರುವ ಕೂಡೊಟ್ಟಿನ ಜೀವನಕ್ರಮಗಳಿವೆ, ಜೊತೆಗೆ ಸಂಘರ್ಷ ಒಡ್ಡುತ್ತಿರುವ ಶಕ್ತಿಗಳೂ ಇವೆ. ಮತ್ತೊಂದು, ಸದ್ಯದ ಆತಂಕಗಳನ್ನು ಮೌಖಿಕ ಕಥನಗಳ ದಾರಿಗಳಿಂದ ಸಾಗಿ ಲೋಕಗ್ರಹಿಕೆಗಳನ್ನು ಕಲಾತ್ಮಕವಾಗಿ ಹಿಡಿದು ಅದನ್ನು ಸಂಕರಗೊಳಿಸುವ ಬಲವಾದ ಪ್ರಯತ್ನ. ಆನಂದಮೂರ್ತಿಯವರು ಹೆಚ್ಚು ಯಶಸ್ಸು ಕಾಣುವುದು ಈ ಮಾದರಿಯಲ್ಲೇ.

ಈ ದಾರಿಯನ್ನು ಕೇಶವ ಮಳಗಿ, ಚನ್ನಪ್ಪ ಕಟ್ಟಿ, ಲೋಕೇಶ ಅಗಸನಕಟ್ಟೆಯವರ ಕೆಲ ಕತೆಗಳಲ್ಲಿ ನೋಡಬಹುದು. ಸ್ಥಳೀಯ ಜ್ಞಾನಪರಂಪರೆಗಳ ಕೇಂದ್ರಗಳನ್ನು ಬಳಸಿಕೊಂಡು ಲೋಕವನ್ನು ಗ್ರಹಿಸುವುದು ಬಹಳ ಕಷ್ಟದ ಕೆಲಸ. ಏಕೆಂದರೆ, ಇರುವ ಮೌಖಿಕ ಕಥನದೊಳಗಡೆ ಮತ್ತೊಂದು ಹೊಸಬಗೆಯ ಕಥನವನ್ನು ಜೋಡಿಸುವುದು ಮತ್ತು ಅದರ ಕಲೆಗಾರಿಕೆಯನ್ನು ಅಂದಗೆಡದಂತೆ ಅಭಿವ್ಯಕ್ತಿಸುವುದು ಸುಲಭವಲ್ಲ.

ಆನಂದಮೂರ್ತಿಯವರ ಮತ್ತೊಂದು ಕಥನ ಪ್ರಯೋಗವೆಂದರೆ ‘ಸ್ವಗತ’ ಕ್ರಮದಲ್ಲೇ ಇಡೀ ಕತೆ ನಿರೂಪಿತಗೊಳ್ಳುವುದು. ಇದರಲ್ಲಿ ಪಾತ್ರಗಳು ತಮ್ಮನ್ನು ತಾವು ಕಂಡುಕೊಳ್ಳುವ ದಾರಿ ಒಂದಿದ್ದರೆ, ಮಗದೊಂದು ತನ್ನ ಮೂಲಕ ಲೋಕ ನಿರ್ಮಿಸಿಕೊಳ್ಳಬಹುದಾದ ದಾರಿಗಳು. ಇವೆರಡಕ್ಕೂ ಕತೆಗಳು ಇಂಬು ನೀಡಬಲ್ಲವು. ಏಕಕಾಲಕ್ಕೆ ‘ಜಲತತ್ವ’ವನ್ನು ಮತ್ತು ‘ಲೋಕಸತ್ಯ’ಗಳನ್ನು ಅನಾವರಣ ಮಾಡುವ ‘ಗುಣಸಾಗರಿ’, ‘ದಯಾ ಎಂಬ ನದಿಯ ಮಾತು’ ಎರಡೂ ಕತೆಗಳು ಭಿನ್ನವಾದ ಹಾದಿಗಳನ್ನು ತುಳಿದರೂ ನೀಡುವ ದರ್ಶನವೊಂದೇ. ಗುಣಸಾಗರಿಯಲ್ಲಿ ಕೆರೆಗಳು ಮಾತನಾಡಿದರೆ, ದಯಾನದಿಯಲ್ಲಿ ನದಿಯು ಮಾತನಾಡುತ್ತದೆ. ಅವಿವೇಕದಿಂದ ವರ್ತಿಸುವ ಮನುಷ್ಯ ಮತ್ತು ದಯೆಯಿಂದ ಸೃಷ್ಟಿಯಾಗಿರುವ ನಿಸರ್ಗತತ್ವಗಳು ಇಲ್ಲಿ ಅನೇಕ ಒಳಾರ್ಥಗಳನ್ನು ನೀಡುತ್ತವೆ.

ಗುಣಸಾಗರಿ ಮತ್ತು ದಯಾ ಇಬ್ಬರೂ ಹೆಣ್ಣು ಜೀವಗಳಾಗಿ ಕಾಣಿಸಿಕೊಳ್ಳುವುದು ಕೂಡ ಒಂದು ತಂತ್ರವೇ. ಗುಣಸಾಗರಿ, ಹೊನ್ನಮ್ಮ ಮುಂತಾದವರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುವ ವಿಧಾನಗಳು ತೀರ ಹೊಸ ಮಾದರಿಯಲ್ಲವಾದರೂ ಒಂದು ಪ್ರಾದೇಶಿಕ ಜನಪದ ಸತ್ವವನ್ನು ವರ್ತಮಾನದ ಅಸಂಗತ ಬದುಕಿಗೆ ತಾಕಿಸುವ ಪ್ರಯತ್ನ ಇಲ್ಲಿ ಪ್ರಧಾನವಾಗಿದೆ.

ದಯಾನದಿ ಕಳಿಂಗಯುದ್ಧಕ್ಕೆ ಸಾಕ್ಷಿಯಾಗಿದ್ದು ತಿಳಿದ ಸಂಗತಿ. ಬುದ್ಧತತ್ವಗಳನ್ನು ಅಶೋಕ ಅನುಸರಿಸುವುದಕ್ಕೆ ಬಹುದೊಡ್ಡ ನಿದರ್ಶನವಾಗಿ ಕಳಿಂಗಯುದ್ಧ ಕಾಣುತ್ತದೆ. ಯುದ್ಧದ ನಶ್ವರತೆಯ ಕುರಿತು ನಮ್ಮಲ್ಲಿ ಅನೇಕ ಸೃಜನಶೀಲ ಸಾಮಗ್ರಿಗಳು ಸಿಗುತ್ತವೆ. ಅಹಿಂಸೆ ಮತ್ತು ದಯೆ ಎರಡೂ ಅಂಶಗಳು ಪರಸ್ಪರ ಪೂರಕವೇ. ದಯೆ ಇಲ್ಲದಿದ್ದರೆ ಅಹಿಂಸೆ ಹುಟ್ಟಲಾರದು. ದಯೆಯ ಹೆಸರಿನಲ್ಲೇ ಇರುವಂತೆ ಕಾಣುವ ‘ದಯಾ’ನದಿ ಯುದ್ಧದ ಅಪಾರ ಹಿಂಸೆಯನ್ನು ಕಂಡ ಮೇಲೆ ಅಂತಿಮವಾಗಿ ಅಹಿಂಸೆಯ ರೂಪವನ್ನು ಬಿಕ್ಕುವಾದ ಉಪಗುಪ್ತನ ಮೂಲಕವೂ ನೋಡುತ್ತದೆ. ಮೇಲುನೋಟಕ್ಕೆ ಇತಿಹಾಸ ಸಂಬಂಧಿ ಘಟನೆಯಾದರೂ ಕತೆಯಲ್ಲಿ ಜನಪದ ತಂತ್ರ, ನಿಸರ್ಗತತ್ವ, ನಿಜಧರ್ಮದ ಅಂಶಗಳು ಮುಪ್ಪುರಿಗೊಂಡಿವೆ. ಇನ್ನಿತರ ಕೆಲ ಕತೆಗಳಲ್ಲೂ ಮೌಖಿಕ ತಂತ್ರ ವಿಧಾನಗಳೇ ಮುನ್ನೆಲೆಗೆ ಬಂದಿವೆ.

ಇಲ್ಲಿನ ಆಶಯಗಳು ಧರಿಸುವ ಬಹುಬಗೆಯ ಒಳಾರ್ಥಗಳಿಂದ ಸಮಕಾಲೀನ ಲೋಕಗ್ರಹಿಕೆಗಳ ಸಂಕಟಗಳನ್ನು ಮತ್ತು ಮುಚ್ಚಿಡಲಾರದ ಜಾತಿ ವ್ಯವಸ್ಥೆಯ ಹಿಂಸೆಗಳನ್ನು ಕಾಣಲು ಸಾಧ್ಯ. ‘ಸಂಕಲವ್ವ’ ಕತೆಯಲ್ಲಿ ಮೌಖಿಕ ಸಂವಾದದ ಮೂಲಕ ಕಂಬಾಲಪಲ್ಲಿಯ ದುರಂತ ಕತೆಯನ್ನು ‘ಹೇಳಲಾಗಿದೆ’. ಹೀಗೆ ‘ಹೇಳುವಾಗ’ ವಿವರ ಮತ್ತು ಘಟನೆಗಳು ಹದ ತಪ್ಪಿದರೆ ಕತೆಯ ನೇಯ್ಗೆಗೆ ಅಡ್ಡಿಯಾಗಬಹುದಾದ ಎಲ್ಲ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಇಲ್ಲಿನ ಕಂಬಾಲಪಲ್ಲಿಯ ಕರಕಲಾದ ವ್ಯಕ್ತಿಗಳು ‘ಜೀವಾತ್ಮ’ಗಳಾಗಿ ಬಂದು ಅದೇ ದುರಂತವನ್ನು ಎದುರಿಸಿದ ಕೊರಚರ ದೊಡ್ಡಸಿದ್ದನ ಹೆಂಡತಿ ಸಂಕಲವ್ವನ ಜೊತೆ ಕನಸಿನಲ್ಲಿ ಮಾತುಕತೆ ನಡೆಸುವುದು ಕತೆಗೆ ವಿಚಿತ್ರ ತಿರುವನ್ನು ನೀಡಿದೆ. ಮೇಲುನೋಟಕ್ಕೆ ‘ಕುಸುಮಬಾಲೆ’ ಕಾದಂಬರಿಯ ಜ್ಯೋತಮ್ಮಂದಿರು ನೆನಪಿಗೆ ಬಂದರೂ ತಟಕ್ಕನೆ ತನ್ನ ಜಾಡನ್ನು ಬದಲಿಸಿಕೊಳ್ಳುತ್ತದೆ.

ಒಂದು ವರದಿಯನ್ನೋ ಅಥವಾ ಕೇಳಿದ ಘಟನೆಯನ್ನೋ ಕಲೆಯಾಗಿ ಕೆತ್ತಿ ಭಾಷೆಯಲ್ಲಿ ಹಿಡಿದಿಡುವುದು ಸುಲಭವಲ್ಲ. ‘ಚಿತ್ತಯ್ಯ’ನ ಕತೆಯಲ್ಲೂ ಹೀಗೆ ಆಗುತ್ತದೆ. ಕ್ಷೇತ್ರಕಾರ್ಯದ ವಿವರಗಳಿಂದ ಕೂಡಿದ ಕಥನಕ್ರಮವಾದರೂ ಮುಂದೆ ಸಾಗುತ್ತಾ ಚಿತ್ತಯ್ಯನ ಮೂಲಕ ಮೌಖಿಕ ಕಥನವನ್ನು ಹಾಗೂ ಅದರ ಗರ್ಭದ ಮುಖೇನ ಜನಪದ ನಂಬಿಕೆ, ದುಗಡಗಳನ್ನು ಗಟ್ಟಿಯಾಗಿ ನಿರೂಪಿಸುವುದರ ಮೂಲಕ ಯಶಸ್ಸು ಕಂಡಿದೆ.

ಇದೇ ಬಗೆಯ ನಂಬಿಕೆಗಳು ‘ಮೊಗ್ಗು’ಕತೆಯಲ್ಲೂ ಬರುತ್ತವೆ. ಆನಂದಮೂರ್ತಿಯವರ ಕತೆಗಳ ತಳಹದಿ ಗಟ್ಟಿಯಾಗಿದ್ದರೂ ಕೆಲ ಕತೆಗಳಲ್ಲಿ ಅವರು ಸೇರಿಸುವ ಪ್ರಶ್ನೆಗಳು ಕತೆಯ ನಿರೂಪಕನ ಮೂಲಕ ಬಂದರೆ ಯಾವ ಬಗೆಯ ವೈಚಾರಿಕತೆಯನ್ನು ತೋರಿಸಬಲ್ಲವು, ಪಾತ್ರಗಳ ಮೂಲಕ ಬಂದರೆ ಆ ದಾರಿಗಳು ಯಾವ ತಿರುವನ್ನು ಪಡೆದುಕೊಳ್ಳಬಲ್ಲವು ಎಂಬುದನ್ನು ನಾವೇ ಯೋಚಿಸಬೇಕಾಗುತ್ತದೆ.  ಇವೆಲ್ಲವನ್ನೂ ಮೀರಿ ಅವರ ಕತೆಗಳ ರೂಪಕಾತ್ಮಕ ಭಾಷಿಕ ನುಡಿಗಟ್ಟು, ಅದಕ್ಕೆ ತಕ್ಕಂತೆ ಅವರು ನಿರ್ಮಿಸಿಕೊಂಡಿರುವ ಆಶಯದ
ಕೇಂದ್ರಗಳು ಗಮನಸೆಳೆಯುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು