ಬುಧವಾರ, ಸೆಪ್ಟೆಂಬರ್ 22, 2021
21 °C

ಅವಲೋಕನ: ಭಾವತೀವ್ರತೆಯ ನುಡಿಚಿತ್ರಗಳು

ಎಸ್. ನಟರಾಜ ಬೂದಾಳು Updated:

ಅಕ್ಷರ ಗಾತ್ರ : | |

Prajavani

ತನ್‍ಹಾಯಿ
ಲೇ: ಎಚ್.ಎಸ್. ಮುಕ್ತಾಯಕ್ಕ
ಪ್ರ: ಆಶಿಯಾನ ಪ್ರಕಾಶನ
ಸಂ: 8073321430
ಪುಟ: 127, ಬೆಲೆ: 100

ಮೆಲುದನಿಯಲ್ಲಿ ತನಗಷ್ಟೇ ಕೇಳಿದರೆ ಸಾಕೆಂಬಂತೆ ಹಾಡಿಕೊಳ್ಳುವ ಹಾಡಿನಂತಿರುವ ಮುಕ್ತಾಯಕ್ಕನವರ ಈ ಕವನ ಸಂಕಲನ ತನ್‍ಹಾಯಿಗೆ ಉರ್ದು ಕಾವ್ಯ ಪರಂಪರೆಯ ಜೊತೆಗೆ ಕರುಳಬಳ್ಳಿಯ ನಂಟಿದೆ. ತನ್‍ಹಾಯಿ ಎಂದರೆ ಒಬ್ಬಂಟಿತನ. ಇದು ವಿರಹಕ್ಕಿಂತ ಭಿನ್ನ. ವಿರಹಕ್ಕೆ ಮಿಲನದ ನಂಟಿದೆ. ಆದರೆ, ತನ್‍ಹಾಯಿಗೆ ಇಲ್ಲ. ದಟ್ಟ ವಿಷಾದದ ಒಗರನ್ನು ಮಧುವಾಗಿಸುವ ಪ್ರಯತ್ನದಂತಿರುವ ತನ್‍ಹಾಯಿಯ ಮಂದ್ರಸ್ತರಕ್ಕೆ ಉರ್ದುವಿನ ಆವರಣ ಹೇಳಿಮಾಡಿಸಿದಂತಿದೆ.

ಕಿವಿಗೊಟ್ಟು ಕೇಳುವವರಿಗೆ ಮಾತ್ರ ಉರ್ದು ಗಜಲ್‍ಗಳು ಮತ್ತು ಷೇರ್‌ಗಳು ಹಿಡಿಸುತ್ತವೆ. ಪಾರಾಯಣದ ಗದ್ದಲವನ್ನು ಅಲ್ಲಿ ನಿರೀಕ್ಷಿಸಲಾಗದು. ತಂದೆ ಶಾಂತರಸರಿಂದ ಆ ಪರಂಪರೆಯ ವಾರಸುದಾರಿಕೆಯನ್ನು ಪಡೆದ ಮುಕ್ತಾಯಕ್ಕ ಗಜಲ್ ಕವಯಿತ್ರಿಯೆಂದೇ ಗುರುತಿಸಲ್ಪಟ್ಟವರು. ಇದು ಗಜಲ್‍ಗಳ ಸಂಕಲನವಲ್ಲವಾದರೂ ಅದರ ಛಾಯೆ ಕವಯಿತ್ರಿಯ ಒಪ್ಪಿಗೆಯೊಡನೆ ಸಂಕಲನದುದ್ದಕ್ಕೂ ಚಾಚಿಕೊಂಡಿದೆ. ಲೌಕಿಕದ ತುಂಬುನದಿಯನ್ನು ಈಜಿ ದಾಟಿ ಬಂದರೆ ನಾನು ನಿನ್ನವಳೆನ್ನುವ ಗಜಲ್, ಕವಿಯನ್ನೂ ಕೇಳುಗರನ್ನೂ ಒಮ್ಮೆಗೇ ದಾಟಿಸಬಲ್ಲ ನಾವೆ. ಹುಟ್ಟುಹಾಕುವವರಿಗೆ ಎರಡೂ ದಡಗಳ ಪರಿವೆ ಇರಬೇಕು. ಪ್ರವಾಹಕ್ಕೆ ಎದುರಾಗಿ ಈಜುವ ಛಾತಿ ಇರಬೇಕು.

ಹೆಸರೆಂಬ ತಲೆಬರಹವಿಲ್ಲದ ನೂರಾಇಪ್ಪತ್ತು ಮೆದುಕಾವ್ಯನುಡಿಗಳನ್ನು ಕೇಳಿಸಿಕೊಳ್ಳಲು ಬೇಕಾದ ಸಿದ್ಧತೆಯೆಂದು ಈ ಮೇಲಿನ ಮಾತುಗಳನ್ನು ಪರಿಭಾವಿಸಬಹುದು. ಇವು ಕೇವಲ ಭಾಷಿಕ ನಡೆಗಳಲ್ಲ; ಬದಲಿಗೆ ಅಂತರಂಗದ ನುಡಿಗಳು. ವಿರುದ್ಧಗಳೆಂಬಂತೆ ಗೋಚರಿಸುವ ಸಂಗತಿಗಳಲ್ಲಿಯೂ ಸಮರಸವನ್ನು ಕಾಣಬಲ್ಲವರು ಕೇಳಬಲ್ಲವರು ಒಪ್ಪಬಲ್ಲ ನುಡಿಕಾವ್ಯದ ಮಾದರಿಯೊಂದು ಹೀಗಿದೆ:

ನಿನ್ನನ್ನು ಹುಡುಕಲು/ ಸಮುದ್ರದ ಮೇಲೆ ಗೆರೆಯೊಂದನೆಳೆದಿದ್ದೆ/ ಮರುಭೂಮಿಯಲಿ/ ಹೆಜ್ಜೆಗುರುತು ಮೂಡಿಸಿದ್ದೆ/ ಪರ್ವತವ ದಾಟಿ ಬರಲು/ ಮಳೆಬಿಲ್ಲು ಕಟ್ಟಿದ್ದೆ/ ಚಂದ್ರನ ಮೇಲೇರಿ ಬರಲು/ ಮೋಡಗಳ ಏಣಿ ನೆಟ್ಟಿದ್ದೆ/ಇಷ್ಟೆಲ್ಲ ಏಕೆ?/ ‘ಪ್ರೀತಿಯಿಲ್ಲವೆಂದು ಹೇಳಿದ್ದರೆ...’

ಮಿಲನದ ಉತ್ತುಂಗ ವಿರಹವೇ ಆಗಿದೆ. ಆಹ್ವಾನ-ವಿಸರ್ಜನೆಯ ಈ ನಡೆ ನಿಸರ್ಗ ಸಹಜವಾದದ್ದು. ಬೆರೆಯಲು ಎರಡಾಗಬೇಕು ನಿಜ. ಆದರೆ, ಸದಾ ಎರಡೇ ಆಗಿರುವುದು ಬೆರೆಯಲಾರದು. ಇಲ್ಲಿಯ ಒಂಟಿತನದ ಆರ್ತತೆಗೆ ನಿಸರ್ಗದ ಸೆಳೆತಕ್ಕೆ ತನ್ನನ್ನು ಒಪ್ಪಿಸಿಕೊಳ್ಳುವ ತುಡಿತವಿದೆ. ಅಂತಹ ಕಡೆಗಳಲ್ಲಿ ಕಾವ್ಯ ಭಾಷೆಯ ಹಂಗನ್ನು ಮೀರುತ್ತದೆ.

‘ಕೊನೆ ಯಾವಾಗಲೂ ಸುಂದರವಾಗಿರುವುದಿಲ್ಲ’/ ನಾನು ಹೇಳಿದೆ. ನೀನಂದೆ,/ ‘ಸೂರ್ಯಾಸ್ತ ಸುಂದರವಲ್ಲವೆ?’/ ನಾನು ಸುಮ್ಮನಾದೆ/ ವಿದಾಯದ ಗಳಿಗೆ ಕಂಬನಿತುಂಬಿ ಕೈಬೀಸಿದೆ ನಗುತಲೆ,/ ಬಹುಶಃ ನಿನಗೆ ನನ್ನ ನಗುವಿನಲಿ ಸೂರ್ಯಾಸ್ತದ/ ಕೆಂಪಷ್ಟೆ ಕಾಣಿಸಿರಬಹುದು/ ಹಿಂದೆಯೆ ಬರುವ ಇರುಳಲ್ಲ.

ವಿರಹ-ಮಿಲನಗಳು ಶೃಂಗಾರವೆಂಬ ಸ್ಥಾಯಿಭಾವಕ್ಕೆ ದುಡಿಯುವ ನಡೆಗಳು. ಇವುಗಳಿಗೆ ಒತ್ತಿಕೊಂಡಂತಿರುವ ಒಂಟಿತನಕ್ಕೆ ಇವೆರಡೂ ನೆನಪುಗಳು ಮಾತ್ರ.

ಒಮ್ಮೊಮ್ಮೆ ನೀನು ಹತ್ತಿರವಿದ್ದರೂ/ ವಿನಾಕಾರಣ ಉದಾಸಳಾಗುವೆ/ ನಿನ್ನ ಇರುವಿಕೆಯೂ/ ನನ್ನನ್ನು ಸಂತೈಸಲಾರದು/ ಏಕೆಂದರೆ ಆಗ ನಾನು ಅಲ್ಲಿರುವುದಿಲ್ಲ/ ದುರಂತವೆಂದರೆ ನಾನು ಎಲ್ಲಿರುವೆನೋ/ ನನಗೂ ಗೊತ್ತಾಗುವುದಿಲ್ಲ.

ಇಂತಹ ಬಿಡಿಬಿಡಿಯಾದ ನುಡಿಚಿತ್ರಗಳಂತಿರುವ ಇಡೀ ಸಂಕಲನದ ಸ್ಥಾಯೀಭಾವ ಶೃಂಗಾರವಾದರೂ ಇಲ್ಲಿಯ ರಿಕ್ತತೆ ಧ್ಯಾನದ ಮತ್ತೊಂದು ಆವೃತ್ತಿಯಂತೆ ಅನುಭವಕ್ಕೆ ಬರುತ್ತದೆ. ಮರದ ತೊಟ್ಟಿನ ಸಂಬಂಧದ ಹಂಗುಹರಿದಿದ್ದರೂ ಇನ್ನೂ ಅಲ್ಲೇ ತೂಗಾಡುವ ಮಾಗಿದ ಹಣ್ಣಿನಂತಹ ಕೆಲವು ಕವನಗಳು ಮತ್ತೆ ಯಾವುದೋ ಗಜಲ್‍ನ ಷೇರ್ ಒಂದನ್ನು ನೆನಪಿಸಿದರೆ ತಪ್ಪೇನಲ್ಲ.

ಅಲ್ಲಿ ಪರ್ವತಕ್ಕೆ ಕಿರುದಾರಿಯೊಂದು ಹೋಗುವುದಲ್ಲ/ ಅಲ್ಲಿಂದ ಚುಕ್ಕೆಗಳ ಲೋಕಕೆ ಹೋಗಲು ಒಂದು ದಾರಿಯಿದೆ/ ನೀನು ಎಂದಾದರೂ ಭೇಟಿಯಾದರೆ ಕರೆದೊಯ್ಯುತ್ತೇನೆ/ ನಾವು ಕಳೆದುಹೋದ ಜಗದ/ ಬಗೆಗೆ ಮಾತು ಬೇಡ/ ಗುರುತಿಲ್ಲದ ದಾರಿಗುಂಟ ನಡೆವ ಅಪರಿಚಿತರಾಗೋಣ/ ಎಲ್ಲ ಮರೆತು ಹಾಗೆ ಹಾಗೆ ಸಾಗಿ ಹೋಗೋಣ

ಎಂದೋ ಬಂದುಹೋದ ಅಥವಾ ಮುಂದೆಂದೋ ಬರುವ ಜೋಗಿಗೆ ಕಾಯುವ ಒಂಟಿಹೆಣ್ಣಿನ ಸ್ವಗತಕ್ಕೆ ಬಹುಶಃ ಎಲ್ಲ ಭಾಷೆಗಳೂ ನುಡಿಕೊಟ್ಟಿವೆ. ಅದು ಎಲ್ಲ ಬಂಧನಗಳಿಂದ ಹೆಣ್ಣಿನ ಮುಕ್ತಿಗೆ ಲೌಕಿಕವು ಕೊಟ್ಟ ಉಡುಗೊರೆಯಂತೆ ಉರ್ದುಕಾವ್ಯ ಸಂಭ್ರಮಿಸುತ್ತದೆ. ಉಂಡುಬಂದ ಕೈಯ ಪರಿಮಳದಂತೆ ಅದು ಇಲ್ಲೂ ಮುಂದುವರಿದಿದೆ.

ನಾನು ಏಕಾಂತದಲಿ ನನ್ನ/ ಮೃದು ಕನಸುಗಳೊಡನೆ ಮಾತಾಡುತ್ತೇನೆ/ ಹೂ, ಚಿಕ್ಕೆ, ಮಳೆ ಮೋಡಗಳೊಡನೆ ನಗುತ್ತೇನೆ/ ಅವನೊಡನೆ ಕಳೆದ ಕ್ಷಣಗಳೊಡನೆ/ ಕಾಲಕಳೆಯುತ್ತೇನೆ/ ಈ ಎಲ್ಲ ಮಾತುಗಳೇ ಕವಿತೆಗಳು/ ಮತ್ತೆ ಬೇರೇನೂ ಅಲ್ಲ.

ತುಮ್ ಮುಝೆ ಭೂಲಭಿ ಜಾವೋ, ತೋ ಏ ಹಕ್ ಹೈ ತುಮ್‍ಕೊ/ ಮೇರಿಭಾತ್ ಔರ್ ಹೈ ಮೈನೆತೋ ಮೊಹೊಬತ್ ಕೀ ಹೈ  ಎಂಬ ಸಾಹಿರ್ ಲೂಧಿಯಾನ್ವಿಯವರ ಕವಿತೆಯ ಎರಡು ಸಾಲುಗಳೊಡನೆ ಒಳಕ್ಕೆ ಕರೆಯುವ ಈ ಸಂಕಲನ ಕೇಳುಗರು ಇರುವಷ್ಟು ಕಾಲ, ದೀಪದಲ್ಲಿ ಎಣ್ಣೆ ಇರುವಷ್ಟು ಕಾಲ, ಮನದಲ್ಲಿ ಕಾವ್ಯದ ಮತ್ತು ಇರುವಷ್ಟು ಕಾಲ ನಡೆಯುವ ಮೆಹಫಿಲ್ ಮುಗಿದ ಮೇಲಿನ ತಹತಹದಂತೆ ಮುಂದುವರಿಸಬಲ್ಲ ಓದುಗರಿಗಾಗಿ ಕಾಯುತ್ತದೆ. ಕೆಲವು ಕವನಗಳು ಅಲ್ಲಿಯ ನೆಲದ ವೈಶಿಷ್ಟ್ಯವಾದ ಚಿಕಣಿ ಚಿತ್ರಗಳಂತೆ ಮನದ ಭಿತ್ತಿಯಲ್ಲಿ ಮೂಡುತ್ತವೆ.

ಬಾರಮಾಸವೆಂಬ ಪ್ರಕಾರದ ಕಾವ್ಯಾಭಿವ್ಯಕ್ತಿ ಭಾರತದ ಅನೇಕ ಭಾಷೆಗಳಲ್ಲಿದೆ. ಕನ್ನಡದಲ್ಲಿ ಲಿಂಗಣ್ಣಕವಿಯ ಬಾರಮಾಸವನ್ನು ಬಿಟ್ಟರೆ ಮತ್ತೊಂದಿಲ್ಲ (ಅದನ್ನು ಶಾಂತರಸರು ಸಂಪಾದಿಸಿ ಪ್ರಕಟಿಸಿದ್ದಾರೆ). ಅದರ ವಿಶೇಷವೆಂದರೆ ವರ್ಷದ ಹನ್ನೆರಡು ತಿಂಗಳೂ ಪ್ರತಿಕ್ಷಣವೂ ಪ್ರೀತಿಯ ತೀವ್ರತೆಯನ್ನು ಅನುಭವಿಸುತ್ತಲೇ ಇರುವುದು ಅಭಿವ್ಯಕ್ತಿಸುತ್ತಲೇ ಇರುವುದು. ಇದೊಂದು ನಿರಂತರ ಎಚ್ಚರದ ಧ್ಯಾನದಂತೆ. ಅಂತಹ ಭಾವತೀವ್ರತೆಯನ್ನು ಈ ಸಂಕಲನ ಪ್ರತಿಕ್ಷಣವೂ ಧೇನಿಸುತ್ತಲೇ ಇರುತ್ತದೆ. ಇದು ಕವಿಗಾಗಲೀ ಓದುಗನಿಗಾಗಲೀ ಸರಳ ಅಭಿವ್ಯಕ್ತಿ ಕ್ರಮವಲ್ಲ. ಅಂತಹ ತೀವ್ರತೆಯ ಒತ್ತಡ ಕವಿಗೂ ಇರಬೇಕು ಓದುಗನಿಗೂ ಅದು ತಟ್ಟಬೇಕು. ಎರಡೂ ಪ್ರಾಮಾಣಿಕವಾಗಿರಬೇಕು. ಅಂತಹ ನಡೆ ಈ ಸಂಕಲನದ್ದು. ಈ ನುಡಿಚಿತ್ರದೊಂದಿಗೆ ಅದನ್ನು ಮುಂದುವರಿಸಬಹುದು.

ನನ್ನ ಅಸ್ತಿತ್ವವೇ ಇಲ್ಲದಂತೆ/ ನಿನ್ನೊಲವಿನ ಬೆಂಕಿಯಲಿ/ ಉರಿಯಬಯಸುತ್ತೇನೆ/ ಕೊನೆಗೆ ನನ್ನಾತ್ಮವೂ/ ಕರ್ಪೂರದಂತೆ ಉರಿದುಹೋಗಲಿ/ ಯಾವ ಕುರುಹೂ ಬಿಡದಂತೆ/ಎಂದೂ ಮತ್ತೆ ಹುಟ್ಟದಂತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು