ಗುರುವಾರ , ಜುಲೈ 7, 2022
23 °C

ಒಳನೋಟ | ಮಾನವತೆಯ ಫಸಲು ತೆಗೆದ ‘ರಾಗಿಕಾಳು’

ಎಚ್. ದಂಡಪ್ಪ Updated:

ಅಕ್ಷರ ಗಾತ್ರ : | |

Prajavani

ಈಗಾಗಲೇ ಮೂರು ಕವನ ಸಂಕಲನಗಳನ್ನು ಕೊಟ್ಟಿರುವ ಚೀಮನಹಳ್ಳಿ ರಮೇಶಬಾಬು ಅವರು ‘ರಾಗಿಕಾಳು’ ಎಂಬ ಮತ್ತೊಂದು ಸಂಕಲನವನ್ನು ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿ 38 ಕವಿತೆಗಳಿವೆ. ಈ ಕವಿತೆಗಳಲ್ಲಿ ಕಾವ್ಯಕ್ಕೆ ಅತ್ಯಗತ್ಯವಾದ ಭಾಷಾ ಬಳಕೆ ನಮ್ಮ ಗಮನ ಸೆಳೆಯುತ್ತದೆ.

ಜನಭಾಷೆ ಮತ್ತು ಪ್ರಕೃತಿಭಾಷೆ ಎರಡನ್ನೂ ಸೇರಿಸಿ ವಿಶಿಷ್ಟವಾದ ಭಾಷೆಯೊಂದನ್ನು ಇಲ್ಲಿ ರೂಪಿಸಿಕೊಳ್ಳಲಾಗಿದೆ. ರೂಪಕಗಳು, ಪ್ರತಿಮೆಗಳು, ಪ್ರತೀಕಗಳು, ಚಿತ್ರಗಳು, ನುಡಿಗಟ್ಟುಗಳು ಕವಿತೆಗೆ ಅನಂತ ಅರ್ಥ ಸಾಧ್ಯತೆಗಳನ್ನು ಒಳಗೊಳ್ಳಲು ಸಾಧ್ಯವಾಗಿರುವುದನ್ನು ಇಲ್ಲಿನ ಕವಿತೆಗಳಲ್ಲಿ ಕಾಣಬಹುದು. ಭಾಷೆ ಮನುಷ್ಯನ ಸಂಬಂಧಗಳನ್ನು ಬೆಸೆಯುವುದರಿಂದ ಕಾವ್ಯದ ಭಾಷೆಯೂ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಅವನನ್ನು ವಿಶ್ವಮಾನವನನ್ನಾಗಿಸುವ ಶಕ್ತಿಯನ್ನು ಪಡೆಯುತ್ತದೆ. ಈ ಬಗೆಯ ಶಕ್ತಿಯನ್ನು ಇಲ್ಲಿನ ಕವಿತೆಗಳಲ್ಲಿ ಕಾಣಬಹುದು.

ನಿದರ್ಶನಕ್ಕಾಗಿ ‘ಸೂರ್ಯನ ಪಾದ’ ಎಂಬ ಕವಿತೆಯಲ್ಲಿನ ಈ ಸಾಲುಗಳನ್ನು ಗಮನಿಸಬಹುದು. ‘ತುಳಿವ ಮನುಷ್ಯನ ಪಾದಗಳಿಗೆ/ಮರದಡಿಯ ನಕ್ಷತ್ರಗಳ ಸೋಂಕು ತಗಲಲಿ ಗುರುವೆ/ ಬಾಂಬುಗಳೆಲ್ಲಾ ಒಂಟಿ ಮರದ ಕಾಯಿಗಳಾಗಿ/ನೂರು ದಿಕ್ಕಿಗೆ ಸಿಡಿಯಲಿ ಗುರುವೆ/.’ ಇಡೀ ಕವಿತೆಯನ್ನು ಓದಿದಾಗ ಈ ಸಾಲುಗಳ ಅರ್ಥ ಮತ್ತಷ್ಟು ಸ್ಪಷ್ಟವಾಗುವುದಲ್ಲದೆ ಅದರಲ್ಲಿರುವ ಧ್ವನಿಸಾಧ್ಯತೆಗಳ ಅರಿವುಂಟಾಗುತ್ತದೆ. ಜೊತೆಗೆ ಭಾಷೆಯಲ್ಲಿ ಒಂದು ವಿಚಾರ, ವಸ್ತು, ತಾತ್ವಿಕತೆಯನ್ನು ಹಿಡಿದಿಡುವಾಗ ಕಥನಾತ್ಮಕವೆನ್ನಬಹುದಾದ ಆವರಣವೊಂದು ಸೃಷ್ಟಿಯಾಗುತ್ತದೆ. ಇದು ತಾತ್ವಿಕತೆಯನ್ನು ಬೆಳೆಸುತ್ತಾ ಮಾನವೀಯವಾಗುತ್ತಾ ಓದುಗನನ್ನು ಅರಿವಿನತ್ತ ಸೆಳೆದುಕೊಳ್ಳುತ್ತಾ ಹೋಗುತ್ತದೆ. ಇದು ಇಲ್ಲಿನ ಕವಿತೆಗಳ ಶಕ್ತಿಯೆಂದೇ ಹೇಳಬಹುದು.

ಇಲ್ಲಿನ ಬಹುತೇಕ ಕವಿತೆಗಳಲ್ಲಿ ಪ್ರಕೃತಿ ಮಾನವ ಜಗತ್ತಿಗೆ ಪೂರಕವಾಗಿ ಬರುತ್ತದೆ. ವಿಜ್ಞಾನವು ಪ್ರಕೃತಿಯನ್ನೇ ಬಳಸಿಕೊಂಡು ಮಾನವನ ಬದುಕಿಗೆ ಪೂರಕವಾಗಿ ಕೆಲಸ ಮಾಡುವಂತೆ ಕಾವ್ಯವೂ ಪ್ರಕೃತಿಯನ್ನು ಬಳಸಿಕೊಂಡು ಮಾನವನ ಬದುಕನ್ನು ಪ್ರಗತಿಯತ್ತ ಕೊಂಡೊಯ್ಯುವ ಮಾರ್ಗಗಳನ್ನು ಸೂಚಿಸುತ್ತದೆ. ಇಲ್ಲಿನ ಕವನಗಳಲ್ಲಿ ಬರುವ ಗಾಳಿ, ನೀರು, ನಕ್ಷತ್ರ‌, ಚಂದ್ರ, ಸೂರ್ಯ, ಸಸ್ಯ, ಮಣ್ಣು, ದಿನ, ರಾತ್ರಿ, ಆಕಾಶ, ಇಡೀ ಬ್ರಹ್ಮಾಂಡವೇ ಮನುಷ್ಯನ ಉನ್ನತಿಗಾಗಿಯೇ ಕ್ರಿಯಾಶೀಲವಾಗಿವೆ ಎಂಬುದು ಮನವರಿಕೆಯಾಗುವಂತೆ ಅಭಿವ್ಯಕ್ತಿಯನ್ನು ಪಡೆದುಕೊಂಡಿವೆ. ಭೌತಿಕವಾದ ಜಗತ್ತು ಮತ್ತು ಜೀವದ ಲೋಕವು ಲಯಬದ್ಧವಾದ ಛಂದೋಬದ್ಧವಾದ ನಡಿಗೆ ಹಾಗೂ ಶಿಸ್ತನ್ನು ರೂಪಿಸಿಕೊಂಡಿದೆ. ಕಾಲ ಋತುಗಳ ಬದಲಾವಣೆ ಇವೆಲ್ಲಾ ಒಂದು ಲಯದಲ್ಲಿ ಸಾಗಿದರೇನೇ ಮನುಷ್ಯನ ಬದುಕೂ ಸುಗಮವಾಗಿರುತ್ತದೆ ಎಂಬ ತಾತ್ವಿಕ ವಿಚಾರವನ್ನು ಅಷ್ಟೇ ತನ್ಮಯತೆಯಿಂದ ಭಾಷಾಲಯಗಳಲ್ಲಿ ಹಿಡಿದಿಟ್ಟಿರುವುದು ಈ ಸಂಕಲನದ ಕವಿತೆಗಳ ವೈಶಿಷ್ಟ್ಯವಾಗಿದೆ.

ಕಾವ್ಯದ ಶಕ್ತಿ ಎಂದರೆ ಪರಿಣಾಮಕಾರಿಯಾದ ಭಾಷಾಬಳಕೆ. ನಂತರದ್ದು ತಾತ್ವಿಕತೆ. ಇದಕ್ಕೆ ಕವಿತೆಗಳಲ್ಲಿನ ಕೆಲವು ಸಾಲುಗಳನ್ನು ಗಮನಿಸಬಹುದು. ‘ಕತ್ತಿ ಕಮಲ ಬಂದೂಕು ಬಾಂಬುಗಳು ಇವೆ/ಹೃದಯಬೇನೆ ಹಾಲೆದೆಯ ಭೂಮಿಗೆ’. ‘ಬೀಜಗಳು ಮೊಳೆತು ತಲೆಯೊಂದು ಅಖಂಡ ಭೂಮಿಯಾಗಲಿ ಗುರುವೆ’. ‘ಮಾತು ಉಳುಮೆಯ ಜೀವ ಸಂಬಂಧ’. ‘ಬೆಳಕೆಂದರೆ ಬೆಂದ ಜೀವದ ಸಂಬಂಧ’. ‘ಕೆಲವರಿಗೆ ಹಿಂಸೆಯೆಂದರೆ ಬೆಳಗುವ ದೀಪ’... ಇತ್ಯಾದಿ.

ಪಾದಗಳು ನಡಿಗೆಗೆ ಸಾಧನ. ಆದರೆ ಅವು ಕವಿತೆಗಳಲ್ಲಿ ಶೋಷಣೆಗೆ, ತುಳಿತಕ್ಕೆ ಸಾಧನವೂ ಆಗುತ್ತವೆ. ‘ಎದೆಯ ಮೇಲಿನ ನಡಿಗೆ’ ಇದನ್ನು ಸೂಚಿಸುತ್ತದೆ. ‘ಪಾದಗಳ ಲೋಕ’ ಕವಿತೆಯಲ್ಲಿ ಸಂಸ್ಕೃತಿ, ಚರಿತ್ರೆ ಇದೆ. ಬದುಕಿನ ಅನಾವರಣ ಇದೆ. ಪಾದಗಳು, ನಡಿಗೆ, ಪಯಣ ಈ ಸಂಕಲನದಲ್ಲಿ ಪದೇ ಪದೇ ಕಾಣಿಸಿಕೊಳ್ಳುವ Motifs(ಆಶಯ). ಇವುಗಳ ಮೂಲಕ ಮನುಷ್ಯನ ಬದುಕಿನ, ಸಂಸ್ಕೃತಿಯ, ನಾಗರಿಕತೆಯ ಕ್ರಿಯಾಶೀಲ ಬೆಳವಣಿಗೆಯ ಇತಿಹಾಸದ ಸ್ವರೂಪ ಇರುವುದನ್ನು ಗುರುತಿಸಬಹುದು. ಕಪ್ಪು ಬಿಳುಪಿನ ಬಗ್ಗೆಯೂ ಕವಿತೆಗಳಲ್ಲಿ ಜಿಜ್ಞಾಸೆ ಇದೆ. ಜೀವಪೋಷಕವಾದ ರಾಗಿ ಬೆಳೆಯುವ ಮಣ್ಣು ಕೂಡ ಕಪ್ಪು. ಕಪ್ಪು ಸಾಮಾನ್ಯರ ಕೆಳವರ್ಗ/ವರ್ಣದ ಮತ್ತು ಫಲವತ್ತತೆಯ ಸಂಕೇತವಾಗಿ ಬಂದಿದ್ದು, ಇವರೇ ಸಮೃದ್ಧತೆಗೆ ಕಾರಣರೆಂಬ ತಿಳಿವನ್ನು ಓದುಗರಿಗೆ ಮೂಡಿಸುತ್ತಾರೆ. ಶ್ರೇಷ್ಠ ಕವಿತೆ ಹೌದೋ ಅಲ್ಲವೋ ಎಂಬುದನ್ನು ತಿಳಿಯಲು ಸಾಹಿತ್ಯಕ ಮತ್ತು ಸಾಹಿತ್ಯೇತರ ಮಾನದಂಡಗಳನ್ನು ಅನ್ವಯಿಸಿ ಓದಿದಾಗ ಅವುಗಳ ಯಶಸ್ಸು ನಮಗೆ ಗೊತ್ತಾಗುತ್ತದೆ. ಈ ಎರಡೂ ಮಾನದಂಡಗಳನ್ನು ಬಳಸಿ ಅಧ್ಯಯನ ಮಾಡಿದಾಗ ಇಲ್ಲಿನ ಬಹಳಷ್ಟು ಕವಿತೆಗಳಿಗೆ ಮೌಲ್ಯ ಗೊತ್ತಾಗಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು