ದೃಷ್ಟಾಂತ ಕತೆಗಳ ಸಂಗ್ರಹ

7

ದೃಷ್ಟಾಂತ ಕತೆಗಳ ಸಂಗ್ರಹ

Published:
Updated:

ಗಂಗಾವತಿ ಪ್ರಾಣೇಶ ಅವರು ಹಾಸ್ಯಕ್ಕೆ ಹೆಸರುವಾಸಿ. ಹಾಸ್ಯದಲ್ಲಿ ಹಲವು ಒಳಹೊಳಹು ಇರುವ ದೃಷ್ಟಾಂತಗಳನ್ನು ಹೇಳುವುದೂ ಜನಪ್ರಿಯತೆಗೆ ಕಾರಣವಾಗಿದೆ. ಅಂಥ ದೃಷ್ಟಾಂತಗಳ ಸಂಗ್ರಹವನ್ನೀಗ ಪುಸ್ತಕ ಲೋಕದಲ್ಲಿ ತಂದಿದ್ದಾರೆ. ಪುಸ್ತಕದ ಹೆಸರು ‘ಇದು ಕಥಾಕಾಲ‘ ‘ಸಂತ ಶ್ರೀ ಅಚ್ಯುತದಾಸ ಮತ್ತಿತರರಿಂದ ನಾನು ಕೇಳಿ ಮೆಚ್ಚಿದ ದೃಷ್ಟಾಂತಗಳು’ ಎಂದೇ ಹೇಳಿಕೊಂಡಿದ್ದಾರೆ.

ನಾಲ್ಕು ಭಾಗಗಳಲ್ಲಿ ಪ್ರಕಟವಾದ ಈ ಪುಸ್ತಕ ಸನ್ನಡತೆಯಲ್ಲಿ ನಡೆಯಲು ಬಯಸುವ ಯುವಕರಿಗಾಗಿ ಎಂದೂ ಪ್ರಾಣೇಶ ಹೇಳಿದ್ದಾರೆ. 

ಈ ಕಥಾಕಾಲಕ್ಕೆ ಒಂದು ಹಿನ್ನೆಲೆಯಿದೆ. ಪ್ರಾಣೇಶ ಅವರು ಹರಿಕಥೆ, ಪುರಾಣ ಪ್ರವಚನಗಳನ್ನು ಕೇಳಿ, ಪ್ರಭಾವಿತರಾದವರು. ಜೀವನದೊಳಗಿನ ಹಾಸ್ಯರಸ ಹೇಗೆ ಅಂತಃಕರಣಕ್ಕೆ ತಾಗುತ್ತದೆ ಎನ್ನುವುದನ್ನು ಅರಿತವರು. ಹಸಿ ಗೋಡೆಯೊಳಗೆ ಹಳ್ಳ ನಟ್ಟಂತೆ ಇವೆಲ್ಲ ಅವರ ನೆನಪಿನ ಕೋಶದಲ್ಲಿ ಬಂದಿಯಾಗಿವೆ. ಅವೆಲ್ಲವನ್ನೂ ಅಚ್ಚುಕಟ್ಟಾಗಿ ಪುಟ್ಟ ಚೌಕಟ್ಟಿನಲ್ಲಿಯೇ ಪ್ರಸ್ತುತಪಡಿಸಿದ್ದಾರೆ.

 ದೃಷ್ಟಾಂತದಂತೆಯೇ, ಸನ್ನಡತೆಯನ್ನು ಪ್ರೋತ್ಸಾಹಿಸುವಂತೆ ಬಹುತೇಕ ಕಥೆಗಳಿವೆ. ಕೆಲವೆಡೆ ಮಾತ್ರ ಹಾಸ್ಯ ಹಾಗೂ ಅಪಹಾಸ್ಯದ ನಡುವಿನ ತೆಳುವಾದ ಗೆರೆ ಮಾಸಿದಂಥ ಉದಾಹರಣೆಗಳು ಕಾಣುತ್ತವೆ. ಒಂದೆರಡು ಕಡೆ ಅವಹೇಳನಕಾರಿಯಾಗಿಯೂ ಭಾಸವಾಗುತ್ತದೆ.

ಇಂಥ ಬೆರಳೆಣಿಕೆಯಷ್ಟು ಕಲ್ಲುಗಳನ್ನು ಹೊರತುಪಡಿಸಿದರೆ ದೃಷ್ಟಾಂತ ಕತೆಗಳೆಲ್ಲವೂ ಸುಮಸುಗಂಧ ಸೂಸುವಂತೆ ಇವೆ. ಕೆಲವೊಮ್ಮೆ ಜನರ ನಡುವೆ ಮಾತಿನ ಭರಾಟೆಯಲ್ಲಿ ಇಂಥ ಸೂಕ್ಷ್ಮಗಳು ಸಹಜವೆನಿಸಿ, ನಗೆಯುಕ್ಕಿಸಬಲ್ಲವು. ಆದರೆ, ಓದುವಾಗ ರಸಭಂಗವೆನಿಸುವಂತೆ ಆಭಾಸ ಆಗುವುದೂ ಅಷ್ಟೆ ನಿಜ. ಅವರಿಂದ ಇನ್ನಷ್ಟು ಬರಹಗಳನ್ನು ನಿರೀಕ್ಷಿಸುವಷ್ಟು ಭಾಷೆ ಸುಲಲಿತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !