ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ| ಕಿಂಡರ್‌ ಕಥಾ, ಹೇಳಿ ಸ್ವಾಗತ...

Last Updated 31 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಹೊಳಪು ಕಾಗದ ಹಾಗೂ ಬಣ್ಣದ ಚಿತ್ರಗಳೊಂದಿಗೆ ಇಂಗ್ಲಿಷ್‌ನಲ್ಲಿ ಪ್ರಕಟಗೊಳ್ಳುವ ಮಕ್ಕಳ ಕಥೆಗಳ ಪುಸ್ತಕಗಳನ್ನು ನೋಡಿದಾಗಲೆಲ್ಲ, ‘ಈ ಭಾಗ್ಯ ಕನ್ನಡದ ಕಂದಮ್ಮಗಳಿಗಿಲ್ಲವಲ್ಲ’ ಎಂದು ಸಾಹಿತ್ಯಪ್ರಿಯರು ನಿಟ್ಟುಸಿರು‍ಬಿಡುತ್ತಿದ್ದ ದಿನಗಳು ಕೊನೆಗೊಳ್ಳುವಂತೆ ಕಾಣಿಸುತ್ತಿದೆ. ಜರ್ಮನ್‌ ಶೈಕ್ಷಣಿಕ ಸಂಸ್ಥೆ ‘Goethe institute’ ಸಹಯೋಗದಲ್ಲಿ ಬೆಂಗಳೂರಿನ ‘ನವಕರ್ನಾಟಕ ಪ್ರಕಾಶನ’ ಪ್ರಕಟಿಸಿರುವ ‘ಕಿಂಡರ್ ಕಥಾ’ ಮಾಲಿಕೆಯ ಮಕ್ಕಳ ಪುಸ್ತಕಗಳು ತಮ್ಮ ಸೊಗಸಿನಿಂದ ಎಳೆಯರ ಮನಸ್ಸನ್ನು ಸೆಳೆಯುತ್ತಿವೆ. ಹೊಳಪು ಕಾಗದದಲ್ಲಿ, ಬಣ್ಣದ ಚಿತ್ರಗಳೊಂದಿಗೆ ಮುದ್ರಣಗೊಂಡಿರುವ ಪುಟ್ಟ ಪುಟ್ಟ ಕಥೆಗಳ ಹತ್ತು ಪುಸ್ತಕಗಳು ಚಿಣ್ಣರನ್ನು ಸೆಳೆಯುವಂತಿವೆ.

ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ 2022 ಮಹತ್ವದ ವರ್ಷ. ಕೆ.ವಿ. ತಿರುಮಲೇಶರ ಹತ್ತು ಕವನ ಸಂಕಲನಗಳನ್ನು ‘ಅಭಿನವ’ ಪ್ರಕಾಶನ ಒಮ್ಮೆಗೇ ಪ್ರಕಟಿಸಿದ್ದು, ಎಚ್‌.ಎಸ್‌. ವೆಂಕಟೇಶಮೂರ್ತಿ ಸಂಪಾದಕತ್ವದ ‘ವಸಂತ ಬಾಲ ಸಾಹಿತ್ಯಮಾಲೆ’ಯ ಚಂದದ ಕೃತಿಗಳು ಪ್ರಕಟಗೊಂಡಿದ್ದು, 2022ರಲ್ಲೇ. ಈ ಸಾಲಿಗೆ ಹೊಸ ಸೇರ್ಪಡೆ, ‘ಕಿಂಡರ್‌ ಕಥಾ’ ಪುಸ್ತಕಗಳು. ಈ ಪುಸ್ತಕಗಳು ಕನ್ನಡ ಮಕ್ಕಳ ಸಾಹಿತ್ಯ ಬದಲಾಗುತ್ತಿರುವ ದಿಕ್ಕನ್ನು ಸೂಚಿಸುವಂತಿವೆ.

ವಿಭಿನ್ನ ಹಿನ್ನೆಲೆಯ ಲೇಖಕರು ‘ಕಿಂಡರ್‌ ಕಥಾ’ ಮಾಲಿಕೆಯಲ್ಲಿ ಒಟ್ಟುಗೂಡಿದ್ದಾರೆ. ಕನ್ನಡದ ಮೂಲಕ ಲೋಕಗ್ರಹಿಕೆಯನ್ನು ವಿಸ್ತರಿಸಿಕೊಳ್ಳಲು ಈ ಪುಟ್ಟ ಪುಟ್ಟ ಪುಸ್ತಕಗಳು ನೆರವಾಗುವಂತಿವೆ. ಪ್ರಾಥಮಿಕ ಶಾಲಾಮಕ್ಕಳು ತಾವೇ ಓದಿಕೊಳ್ಳಬಹುದಾದ ಈ ಕಥನಗಳಿಗೆ ಪೂರಕವಾಗಿ ಸೊಗಸಾದ ಇಲ್ಲುಸ್ಟ್ರೇಷನ್‌ಗಳಿವೆ.

ಮುದ್ರಣದ ಸೊಗಸಿನಿಂದ ಗಮನಸೆಳೆಯುವ ‘ಕಿಂಡರ್‌ ಕಥಾ’ ಪುಸ್ತಕಗಳು, ಕಥಾಸ್ವರೂಪದ ಕಾರಣದಿಂದಾಗಿ ಚರ್ಚೆಗೆ ಆಹ್ವಾನಿಸುವಂತಿವೆ. ಇದೇ ಮಾದರಿಯ ಅನೇಕ ಕೃತಿಗಳನ್ನು ‘ಪ್ರಥಮ್‌ ಬುಕ್ಸ್‌’ ಈಗಾಗಲೇ ಪ್ರಕಟಿಸಿದೆ. ಇಂಗ್ಲಿಷ್‌ನಲ್ಲಂತೂ ಇಂಥ ಪುಸ್ತಕಗಳು ಪೇಟೆಯಲ್ಲಿ ಸಾಕಷ್ಟಿವೆ. ಈ ಕೃತಿಗಳಲ್ಲಿ, ಅಕ್ಷರರೂಪದ ಕಥನ ಗೌಣವಾಗಿದ್ದು, ದೃಶ್ಯರೂಪದ ಚಿತ್ರಗಳೇ ಹೆಚ್ಚು ಮಹತ್ವ ಪಡೆದುಕೊಂಡಿರುತ್ತವೆ. ಚಿಣ್ಣರನ್ನು ಚಿತ್ರಗಳು ಸುಲಭವಾಗಿ ಸೆಳೆಯುವುದರಿಂದ, ಈ ದೃಶ್ಯಭಾಷೆ ಮಹತ್ವ ಪಡೆದುಕೊಂಡಿದೆ.

ಈ ಚಿತ್ರಪ್ರಧಾನ ಕಥನಗಳು ಮಕ್ಕಳ ಕಲ್ಪನಾಶಕ್ತಿಯನ್ನು ಮೊಟಕುಗೊಳಿಸುವ ಸಾಧ್ಯತೆಯ ಬಗ್ಗೆಯೂ ಯೋಚಿಸಬೇಕು. ಅಕ್ಷರಭಾಷೆಯ ಮೂಲಕ ಮಕ್ಕಳ ಮನಸ್ಸು ಸೃಜಿಸಿಕೊಳ್ಳಬಹುದಾದ ಕಲ್ಪನೆಯ ವ್ಯಾಪಕತೆ ಬಿಂಬಗಳ ಮೂಲಕ ಸಾಧ್ಯವಾಗುವುದಿಲ್ಲ. ಚಿತ್ರಗಳು ಮಕ್ಕಳ ಕಲ್ಪನಾಶಕ್ತಿಗೆ ಒಂದು ಚೌಕಟ್ಟನ್ನು ಹಾಕುತ್ತವೆ. ಆ ಕಾರಣದಿಂದಾಗಿಯೇ ಚಿತ್ರಗಳೊಂದಿಗೆ ಭಾಷೆಯೂ ಹದವಾಗಿ ಮಿಳಿತಗೊಳ್ಳದಿದ್ದರೆ, ಇಂಥ ಪುಸ್ತಕಗಳ ಉದ್ದೇಶ ಸೀಮಿತವಾಗಿಬಿಡುತ್ತದೆ. ಈ ವ್ಯತ್ಯಾಸ, ‘ಚಂದಮಾಮ’ ಮಾದರಿಯ ಕಥನಗಳನ್ನು ನೆನಪಿಸಿಕೊಂಡರೆ ಸ್ಪಷ್ಟವಾಗುತ್ತದೆ. ಅದ್ಭುತ ಚಿತ್ರಗಳನ್ನು ಹೊಂದಿರುತ್ತಿದ್ದ ‘ಚಂದಮಾಮ’ ಕಥೆಗಳಲ್ಲಿ ಬಣ್ಣದ ಬಿಂಬಗಳಷ್ಟೇ ಅಕ್ಷರಗಳಿಗೂ ಮಹತ್ವವಿತ್ತು. ಈ ಸಮತೋಲನ ‘ಕಿಂಡರ್‌ ಕಥಾ’ ಪುಸ್ತಕಗಳಲ್ಲಿ ಸಾಧ್ಯವಾಗಿಲ್ಲ. ಇದನ್ನು ಈ ಪುಸ್ತಕಗಳ ಕೊರತೆಯೆಂದು ಭಾವಿಸಬೇಕಿಲ್ಲ. ಕಾರ್ಪೊರೇಟ್‌ ಸಂಸ್ಥೆಗಳ ಪ್ರಭಾವಳಿಯಲ್ಲಿ ಪ್ರಕಟಗೊಳ್ಳುವ ಮಕ್ಕಳ ಕಥಾಸಾಹಿತ್ಯದ ಬಹುಪಾಲು, ಚಿತ್ರಗಳನ್ನು ನೆಚ್ಚಿರುವಂತಹದ್ದೇ ಆಗಿದೆ.

ಕಥಾವಸ್ತುವಿನ ಸಾಧ್ಯತೆಗಳ ಚರ್ಚೆಗೂ ‘ಕಿಂಡರ್‌ ಕಥಾ’ ಪುಸ್ತಕಗಳು ಒತ್ತಾಯಿಸುವಂತಿವೆ. ಸಾಮಾಜಿಕ ಹಾಗೂ ಪರಿಸರ ಸಮಸ್ಯೆಗಳನ್ನು ಮಕ್ಕಳಿಗೆ ದಾಟಿಸುವ ಜನಪ್ರಿಯ ಸೂತ್ರ ಇಲ್ಲಿನ ಬಹುತೇಕ ಕೃತಿಗಳಲ್ಲಿದೆ. ಮಾಹಿತಿ ತಲುಪಿಸುವುದು ಹಾಗೂ ಸಾಮಾಜಿಕ ಎಚ್ಚರ ರೂಪಿಸುವುದೇ ಆದ್ಯತೆಯಾಗಿಬಿಟ್ಟರೆ, ಮಕ್ಕಳ ಸಾಹಿತ್ಯದ ಪ್ರಮುಖ ಉದ್ದೇಶಗಳಾದ ಮನರಂಜನೆ ಮತ್ತು ಮನೋವಿಕಾಸದ ಸಾಧ್ಯತೆಗಳು ಹಿನ್ನೆಲೆಗೆ ಸರಿಯುತ್ತವೆ. ಈ ಬಗ್ಗೆ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ರಚಿಸುತ್ತಿರುವವರು ಗಂಭೀರವಾಗಿ ಚಿಂತಿಸಬೇಕು. ಪಠ್ಯಪುಸ್ತಕಗಳಾಚೆಗೆ ನಾವು ಏನನ್ನು ನೀಡಬಲ್ಲೆವು ಎನ್ನುವುದು ಬರಹಗಾರರಿಗೆ ಸ್ಪಷ್ಟವಿಲ್ಲದೆ ಹೋದರೆ, ನಮ್ಮ ಮಕ್ಕಳಿಗೆ ಮಹತ್ವವಾದುದೇನನ್ನೂ ಕೊಡುವುದು ಸಾಧ್ಯವಾಗಲಾರದು.

ಜನಪ್ರಿಯ ಕಥಾವಸ್ತುಗಳ ನಡುವೆಯೂ ‘ಜೈ ಭೀಮ್‌’ನಂಥ ಕಥೆ ಥಟ್ಟನೆ ಗಮನಸೆಳೆಯುವಂತಿದೆ. ಅಂಬೇಡ್ಕರ್‌ ಅವರನ್ನು ಕಾಮಿಕ್ಸ್‌ ಪಾತ್ರದ ರೂಪದಲ್ಲಿ ಮಕ್ಕಳಿಗೆ ಮುಟ್ಟಿಸಲು ಪ್ರಯತ್ನಿಸಿರುವ ಭೀಮ್‌ ಕಥೆಯ ಪರಿಕಲ್ಪನೆ ಸೊಗಸಾಗಿದೆ. ಸಾಮಾಜಿಕ ಸಮಸ್ಯೆಗಳಿಗೆ ಉತ್ತರದ ರೂಪದಲ್ಲಿ ಸಂವಿಧಾನವನ್ನು ಬಿಂಬಿಸಿರುವ ಪ್ರಯತ್ನ ಚೆನ್ನಾಗಿದೆ. ಈ ಕಥೆಗೆ ಕಲಾವಿದರ ಸೃಜನಶೀಲ ಸ್ಪಂದನವೂ ಎದ್ದುಕಾಣುವಂತಿದೆ. ಕಟ್ಟುವಿಕೆಯಲ್ಲಿ ಇನ್ನಷ್ಟು ಸಾವಧಾನ ಹಾಗೂ ರಂಜಕ ಗುಣ ಇದ್ದಿದ್ದರೆ ‘ಜೈ ಭೀಮ್‌’ ಮತ್ತಷ್ಟು ಗಟ್ಟಿಯಾಗುತ್ತಿತ್ತು.

ಗಿಣಿ ಮತ್ತು ಜೇನ್ನೊಣದ ಭೇಟಿಯ ‘ಗಣಿತ ಕಲಿತ ಗಿಣಿ’, ಲಾಜಿಕ್‌ ಗೇಟ್ಸ್‌ ತತ್ವಗಳನ್ನು ಪರಿಚಯಿಸುವ ‘ಯಾವ ನಲ್ಲಿ ಯಾವ ಪೈಪು’ ಕಥೆಗಳು ಪ್ರಯೋಗದ ರೂಪದಲ್ಲಿ ಗಮನಸೆಳೆಯುತ್ತವೆ.

ಸೊಗಸಿನ ಕಾರಣಕ್ಕಾಗಿ ‘ಕಿಂಡರ್‌ ಕಥಾ’ ಪುಸ್ತಕಗಳಿಗೆ ವಿಶೇಷ ಮಹತ್ವವಿದೆ. ಶಾಲಾಮಕ್ಕಳಿಗೆ ಪುಸ್ತಕದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಸ್ವಾಗತಾರ್ಹ ಕೃತಿಗಳಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT