ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಿಗೆಯಿಂದೆದ್ದ ನೆಟ್ಟಕಂಟಯ್ಯಸ್ವಾಮಿ!

Last Updated 2 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಶರ್ಮರು ಸಂಚರಿಸುತ್ತ ಲೋಪದೋಷಗಳನ್ನು ಕ್ಷಿಪ್ರವೇಗದಲ್ಲಿ ನಿವಾರಿಸುತ್ತಿದ್ದರು. ಭಕ್ತರ ತೊಂದರೆಗಳನ್ನು ಕಣ್ಸನ್ನೆ ಮೂಲಕ ಪರಿಹರಿಸುತ್ತಿದ್ದರು. ತಮಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿದವರಿಗೆ ಆಶೀರ್ವಾದ ಮಾಡುವ ವ್ಯವಧಾನ ಅವರಿಗಿರಲಿಲ್ಲ.ತಮಗೆ ಗೌರವ ಡಾಕ್ಟರೇಟ್ ಕೊಡಮಾಡಿದ ಮಾಕಲಡಕು ವಿಶ್ವವಿದ್ಯಾಲಯದ ಕುಲಪತಿಗಳನ್ನೇ ಔಪಚಾರಿಕವಾಗಿ ಮಾತಾಡಿಸಿದರೆಂದ ಬಳಿಕ ಆಚಾರ್ಯರ ಉಭಯಕುಶಲೋಪರಿ ವಿಚಾರಿಸಲು ಸಮಯವೆಲ್ಲಿಯದು ಶ್ರೀಯುತರಿಗೆ!

ದೇವುಳದ ಪ್ರಹರಿಗೋಡೆಯ ನೈರುತ್ಯ ದಿಕ್ಕಿನಲ್ಲಿ ಯಾರೊ ದನಿ ಎತ್ತರಿಸಿ ಜಗಳವಾಡುತ್ತಿದ್ದರು. ಅವರು ಕಲ್ಲೆಂಚು ಬುಡಕಟ್ಟಿಗೆ ಸಂಬಂಧಿಸಿದವರೊ! ಭಕ್ತಗಣಕ್ಕೆ ಸಂಬಂಧಿಸಿದವರೊ! ನಿಖರವಾಗಿ ತಿಳಿಯದು. ಅವರ ಕೈಯಲ್ಲಿ ಕೂಸುಪ್ರಾಯದ ಪ್ರಾಣಿ ಇತ್ತು, ಆ ವಿಷಯದಲ್ಲಿ ಅವರು ನಾ ಕೊಡೆ ನೀ ಬಿಡೆ ಎಂಬರ್ಥದಲ್ಲಿ ಜಗ್ಗಾಟ ಆರಂಭಿಸಿದ್ದರು. ಗಂಟೆ ಜಾಗಟೆ ನಗಾರಿ ಪಾಂಚಜನ್ಯಗಳ ಮೊಳಗಿನಿಂದ, ಎಲ್ಲರ ಚಿತ್ತ ಮೂಲಾನಕ್ಷತ್ರದ ಕಡೆ ಕೇಂದ್ರೀಕೃತವಾಗಿದ್ದರಿಂದ, ಅದು ಬುಡಕಟ್ಟಿನವರ ಕ್ಷುಲ್ಲಕ ಜಗಳವೆಂದು ಭಾವಿಸಿದ್ದರಿಂದ, ಜಗಳ ಆಡಿಸುವವನು ಅವನೆ, ಜಗಳ ಬಿಡಿಸುವವನು ಅವನೆ ಇವೇ ಮೊದಲಾದ ಜವಾಬ್ದಾರಿಗಳು ಸ್ವಾಮಿಯ ಮೇಲಿದ್ದರಿಂದ, ಜಗಳವಾಡುವುದು ಸಹ ಬುಡಕಟ್ಟಿನವರ ಸಂಪ್ರದಾಯವೆಂದು ಭಾವಿಸಿದ್ದರಿಂದ, ಅದು ಭಕ್ತಿಯ ಇನ್ನೊಂದು ಮುಖವೆಂದು ಭಾವಿಸಿದ್ದರಿಂದ ಸದ್ಭಕ್ತರ ಗಮನ ಆ ಕಡೆ ಇರಲಿಲ್ಲ.

ಭಕ್ತರಲ್ಲಿ ಹೆಚ್ಚಿನವರು ಬೆಳಗಿನಿಂದ ಉಪವಾಸವಿದ್ದರು. ನಿತ್ರಾಣಗೊಂಡಿದ್ದರು. ಮೂಲಾನಕ್ಷತ್ರ ಬಂದು ಹೋದ ಬಳಿಕ ಆಹಾರ ಸೇವಿಸುವೆವು ಎಂದು ಹರಕೆ ಹೊತ್ತಿದ್ದರು. ಅವರಂತೆ ಆಚಾರ್ಯರು ಸಹ ಬೆಳಗಿನಿಂದ ಒಂದು ಅಗಳು ಅನ್ನ, ನೀರು ಮುಟ್ಟಿರಲಿಲ್ಲ. ದಿನಂಪ್ರತಿ ಊಟ ಮಾಡುವುದು ಇದ್ದದ್ದೆ, ಉಪವಾಸದ ಪರಿಣಾಮದಿಂದ ಮೃತಪಟ್ಟವರು ನೇರವಾಗಿ ವೈಕುಂಠಕ್ಕೆ ಹೋಗುವರು ಎಂದು ಅವರೆಲ್ಲರು ಭಾವಿಸಿದ್ದರು. ಹಸಿವು ಸಹ ದೇವರ ವರಪ್ರಸಾದಗಳಲ್ಲಿ ಒಂದು ಎನ್ನುವುದು ಜ್ಞಾನಿಗಳ ಅನ್ನಿಸಿಕೆ.

ದೇವುಳದ ಧ್ವನಿವರ್ಧಕಕ್ಕೆ ಆ ದಿವಸ ಪುರಸೊತ್ತು ಇರಲಿಲ್ಲ. ಅದು ನಿರಂತರವಾಗಿ ಭಕ್ತಾದಿಗಳಿಗೆ ಸಲಹೆ, ಸೂಚನೆಗಳನ್ನು ನೀಡುತ್ತಿತ್ತು. ಅದು ಆಗ ಮೂಲಾನಕ್ಷತ್ರದ ಅನಿಶ್ಚಿತತೆ ಅದರ ಮಹತ್ವ ಕುರಿತು ವ್ಯಾಖ್ಯಾನ ಆರಂಭಿಸಿತ್ತು. ಈ ಸೂಚನೆ ರಾಜಕಾರಣಿಗಳಿಗೆ ಅಶುಭವೆನ್ನುವುದು ಪ್ರಾಜ್ಞರ ಅಭಿಪ್ರಾಯ. ಆದ್ದರಿಂದ ರಾಜಕಾರಣಿಗಳು ಚಡಪಡಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
ಇಂಥ ಅಭೂತಪೂರ್ವ ಘಟನೆ ಸಂಭವಿಸುವುದು ಶತಮಾನಗಳಿಗೊಮ್ಮೆ. ಮೂಲಾ ನಕ್ಷತ್ರ ಪ್ರವೇಶಿಸಿತು ಎಂದು ಘೋಷಿಸಿದೊಡನೆ ಮಹಾಮಂಗಳಾರತಿ ಆರಂಭವಾಯಿತು. ಅಲ್ಲಿ ಹೇರಳ ಸಂಖ್ಯೆಯಲ್ಲಿದ್ದ ಗಂಟೆ ಜಾಗಟೆ ನಗಾರಿ ಶಂಖ ವಾದ್ಯಗಳ ನಿನಾದ ಆರಂಭವಾಯಿತು. ಆ ಅಲೌಕಿಕ ಸದ್ದಿಗೆ ಆ ಪರಿಸರದಲ್ಲಿದ್ದ ಮರ್ಕಟಗಳು ಕೆರಳಿ ಭಕ್ತಿಪರವಶತೆಯಿಂದ ನೆಗೆದು ಜಿಗಿದು ಸ್ವಾಮಿಯನ್ನು ಸಂತೃಪ್ತಗೊಳಿಸಿದವು.

ಆದರೆ ಅಲ್ಲಿ ದಂಪತಿ ನಡುವೆ ವಾಗ್ವಾದ ಪರಾಕಾಷ್ಠೆ ತಲುಪಿತ್ತು. ಅಲ್ಲಿನ ಪ್ರಧಾನ ಅರ್ಚಕರಾದ ಬಲಭೀಮಸೇನಾಚಾರ್ಯರು ಹಿಡಿದಿದ್ದ ಮಹಾಮಂಗಳಾರತಿ ತಳಿಗೆ ಒಂದು ಮಣ ತೂಕವಿತ್ತು. ಮೂರು ಶತಮಾನಗಳ ಹಿಂದೆ ಆ ಪ್ರದೇಶದ ಪಾಳ್ಳೆಗಾರ ಪಿಡ್ಡಪ್ಪನಾಯಕ ಅದನ್ನು ಭಕ್ತಿಪೂರ್ವಕವಾಗಿ ಸ್ವಾಮಿಗೆ ಸಮರ್ಪಿಸಿ ದೇವುಳದ ಪ್ರಾಂಗಣದಲ್ಲಿ ಶಾಸನ ನೆಟ್ಟಿದ್ದ. ಇನ್ನು ಪ್ರಧಾನ ಅರ್ಚಕರು ಸಾಫ್ಟ್‌ವೇರ್ ಎಂಜಿನಿಯರ್. ಅಮೆರಿಕದ ಗ್ರೀನ್‌ಕಾರ್ಡ್ ನಿವಾಸಿಗಳು. ನೆಟ್ಟಕಂಟಯ್ಯಗೆ ಮಹಾಮಂಗಳಾರತಿ ಮಾಡುವುದು ಅವರ ವಂಶದ ಹಕ್ಕು. ಅದನ್ನು ನೆರವೇರಿಸಿ ಪುನಃ ಮರಳಬೇಕಿತ್ತು ಅಮೆರಿಕಕ್ಕೆ. ಒಂದು ಅಪೂರ್ವ ಸಂಗತಿ ಎಂದರೆ ಅವರು ಸಹ ನಮ್ಮ ಹುಲಿಕುಂಟಾಚಾರ್ಯರ ಹಳೆ ವಿದ್ಯಾರ್ಥಿಗಳು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ತಮ್ಮ ಗುರುಗಳ ಹೆಸರಿನಲ್ಲಿ ಸಂಸ್ಕೃತ ಪಾಠಶಾಲೆ ಆರಂಭಿಸಿರುವರು. ಅವರೇ ಇವರು ಇವರೇ ಅವರು ಎನ್ನುವ ಸಂಗತಿ ಪರಸ್ಪರ ಗೊತ್ತು. ಆದರೇನು ಪ್ರಯೋಜನ! ಕಾರಣ ಅದು ಶ್ರಾವಣ ಮಾಸದ ಕೊನೆ ಶನಿವಾರ!

ಹ್ಹಾಂ ಅಂದಹಾಗೆ ದೇವುಳದ ಮೇಲ್ಚಾವಣಿಯಲ್ಲಿ ಅಪಾರ ಸಂಖ್ಯೆಯಲ್ಲಿ ಗಂಟೆಗಳು ಜಾಗಟೆಗಳು, ಈಶಾನ್ಯ ಮೂಲೆಯಲ್ಲಿ ಅಂದರೆ ಮಿಥುನ ಶಿಲ್ಪದ ಕೆಳಗೆ ನಗಾರಿ, ಅಲ್ಲದೆ ಪ್ರಾಂಗಣದ ಮುಂದೆ ಇದ್ದ ವಾದ್ಯಗಳು! ಅವೆಲ್ಲ ಇದ್ದಕ್ಕಿದ್ದಂತೆ ನುಡಿಯಲಾರಂಭಿಸಿದವು. ಅಲ್ಲದೆ ಧೂಪದ ದೀಪಗಳ ಹೊಗೆ ದಟ್ಟವಾಗಿ ಆವರಿಸಿತು. ತಮ್ಮ ತಮ್ಮ ಶರೀರಗಳೊಳಗೆ ಕೋತಿ, ಸಿಂಗಳೀಕ, ಮುಸ್ಯಗಳನ್ನು ಆವಾಹಿಸಿಕೊಂಡಿದ್ದ ಭಕ್ತರು ಕುಣಿಯಲಾರಂಭಿಸಿದರು. ನಿರುಪದ್ರವಿ ಭಕ್ತರಿಗೆ ಕಿರುಕುಳ ನೀಡಲಾರಂಭಿಸಿದರು. ಅದು ಸೇವೆಯ ಒಂದು ಭಾಗ. ಅವುಗಳು ಕಿರುಕುಳ ನೀಡಿದಷ್ಟೂ ತಮಗೆ ಲೇಸಾಗುವುದು! ಈ ಭಾವನೆ ಇದ್ದುದರಿಂದ ಅದೆಲ್ಲವನ್ನು ಮಹಾಪ್ರಸಾದವೆಂದು ಭಾವಿಸಿ ಸಹಿಸಿಕೊಂಡರು. ಮಹಾಮಂಗಳಾರತಿ ಸಂದರ್ಭದಲ್ಲಿ ನೆಟ್ಟಕಂಟಯ್ಯಸ್ವಾಮಿ ವಿಗ್ರಹದಿಂದ ಹೀಗೆ ಉದ್ಭವಿಸಿ ಹಾಗೆ ಅಂತರ್ಧಾನವಾಗುವನಂತೆ! ರೆಪ್ಪೆಯಾರಿಸದೆ ಸಮರ್ಪಣಾಭಾವದಿಂದ ವೀಕ್ಷಿಸಿದವರಿಗೆ ಮಾತ್ರ ಆ ಸಾಕ್ಷಾತ್ಕಾರವಾಗುವುದಂತೆ! ಯಾವುದಾದರೊಂದು ರೂಪದಲ್ಲಿ ಭಕ್ತರ ಕೈವಶನಾಗುವನಂತೆ! ಈ ಅಪೂರ್ವ ದರ್ಶನಕ್ಕೆ ಈ ಅಲೌಕಿಕ ಅನುಭೂತಿ ಪಡೆದು ಕೃತಕೃತ್ಯರಾಗಲೆಂದಲ್ಲವೆ ದೂರದೂರಿನವರಾದ ತಾವೆಲ್ಲರು ಅಪಾರ ಸಂಖ್ಯೆಯಲ್ಲಿ ನೆರೆದಿರುವುದು. ಆ ಅಲೌಕಿಕ ಹಿಂಸೆ, ಕಿರುಕುಳದ ನಡುವೆಯೂ ಅಬಾಲವೃದ್ದರಾಗಿ ಸರ್ವರೂ ಆಂಜನೇಯ ಸ್ತ್ರೋತ್ರವನ್ನು ತಮಗೆ ತೋಚಿದ ಹಾಗೆ ಪಠಿಸಲಾರಂಭಿಸಿದರು.

ಇವಕ್ಕೆಲ್ಲ ಕಳಸಪ್ರಾಯವಾಗಿ ಜೈಭಜರಂಗಬಲಿ ಎಂಬ ಒಕ್ಕೊರಲಿನ ನಿನಾದ ಬೇರೆ. ಕೊನೆಗೂ ಮಹಾಮಂಗಳಾರತಿ ತಳಿಗೆ ಭಕ್ತರಿಗಭಿಮುಖವಾಯಿತು. ಸಂಭ್ರಮ ಮೇರೆ ಮೀರಿತು. ಆರತಿ ಸ್ವೀಕರಿಸುವ ಮುನ್ನ ತಳಿಗೆಯಲ್ಲಿ ಅಮೂಲ್ಯ ನಗನಾಣ್ಯ ಹಾಕುವವರು ಅಧಿಕ ಸಂಖ್ಯೆಯಲ್ಲಿದ್ದರು. ವಟುಗಳು ನಿರ್ವಿರಾಮವಾಗಿ ತಳಿಗೆಯಲ್ಲಿ ಸಂಗ್ರಹವಾಗುತ್ತಿದ್ದುದನ್ನು ಜೋಳಿಗೆಗೆ ಸೇರಿಸುತ್ತಿದ್ದರು. ಓಹೋ ಅವರು ಅದನ್ನು ಹಾಕಿದರು, ಹ್ಹಾಹ್ಹಾ ಇವರು ಇದನ್ನು ಹಾಕಿದರು ಎಂಬ ಉದ್ಗಾರಗಳಿಗೆ ಕೊನೆ ಮೊದಲಿರಲಿಲ್ಲ. ಭಕ್ತರಿಗೆ ತಳಿಗೆಗೆ ಸಮರ್ಪಿಸುತ್ತಿರುವ ವಸ್ತುಗಳ ಮೌಲ್ಯ ಕುರಿತಂತೆ ಪ್ರಜ್ಞೆ ಇರಲಿಲ್ಲ. ಭಕ್ತಿಯ ಉನ್ಮಾದ ಅದಕ್ಕೆ ಕಾರಣ. ಕಾಣಿಕೆಗಳನ್ನು ಕೂಡಲೆ ನಿಖಾಲೆ ಮಾಡುತ್ತಿದ್ದರು, ಯಾವ ಕಾರಣಕ್ಕೂ ಕಾಣಿಕೆ ನೆಲ ಸ್ಪರ್ಶಿಸಬಾರದೆಂದು ಶರ್ಮರು ಕಟ್ಟುನಿಟ್ಟಾಗಿ ವಟುಗಳಿಗೆ ತಿಳಿಸಿದ್ದರು.

ತುಸು ಹೊತ್ತಲ್ಲಿ ಇಂಥ ಘಟನೆ ಸಂಭವಿಸಬಹುದೆಂದು ಸ್ವತಃ ಬಲಭೀಮಾಚಾರ್ಯರೆ ನಿರೀಕ್ಷಿಸಿರಲಿಲ್ಲ!
ತಳಿಗೆಗೆ ನಿರ್ಜಿವ ವಸ್ತುಗಳನ್ನು ಅರ್ಪಿಸುವುದು ವಾಡಿಕೆ. ಆದರೂ, ಶತಮಾನದಲ್ಲಿ ಕೆಲವೊಮ್ಮೆ ಇಂಥ ಅಪರೂಪದ ಘಟನೆ ಸಂಭವಿಸುವುದುಂಟು. ದೇವುಳದ ಇತಿಹಾಸದಲ್ಲಿ ತಳಿಗೆಗೆ ಹುಲಿ ಚಿರತೆಗಳಂಥ ವನ್ಯಮೃಗಗಳ ಮರಿಗಳನ್ನು ಮಾತ್ರವಲ್ಲದೆ ಹೆಬ್ಬಾವಿನ ಮರಿ, ಉಡ, ಊಸರವಳ್ಳಿಗಳಂಥ ಶತಪದಿಗಳನ್ನು ಸಮರ್ಪಿಸಿ ಭಕ್ತಿ ಮೆರೆದಿರುವ ನಿದರ್ಶನಗಳುಂಟು. ಆದರೆ, ಈಗ ನೋಡಿದರೆ ತಳಿಗೆಯ ನಡುವೆ ಕುಳಿತು ಸುತ್ತಮುತ್ತ ಕುತೂಹಲದಿಂದ ನೋಡುತ್ತಿರುವುದು ಮರ್ಕಟಶಿಶು! ಹ್ಹಾಹ್ಹಾ ಅಲ್ಲ ಸಾಕ್ಷಾತ್ ನೆಟ್ಟಕಂಟಯ್ಯಸ್ವಾಮಿಯ ಹ್ರಸ್ವರೂಪ! ಭಕ್ತರು ದಿಗ್ಭ್ರಾಂತರಾದರು.

ಕೈಗಳಿಂದ ತಮ್ಮ ತಮ್ಮ ಕೆನ್ನೆಗಳಿಗೆ ಹೊಡೆದು ಕೊಳ್ಳಲಾರಂಭಿಸಿದರು. ಜೈಭಜರಂಗಬಲಿ ಎಂದು ಕೂಗಿದರು. ನಿಂತಲ್ಲಿಯೆ ಕೆಳಕ್ಕುರುಳಿ ಪ್ರಣಾಮ ಸಲ್ಲಿಸತೊಡಗಿದರು. ಅದು ತಳಿಗೆಗೆ ಎಲ್ಲಿಂದ ಬಂತು! ಹೇಗೆ ಬಂತು! ಈ ಮರ್ಕಟಶಿಶು ತಳಿಗೆಯಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿರುವುದೆಂದರೆ! ಇದು ಭಕ್ತರು ಸ್ವಯಿಚ್ಛೆಯಿಂದ ಅರ್ಪಿಸಿರಲಾರರು! ಅಷ್ಟರಲ್ಲಿ ಪ್ರಧಾನ ಅರ್ಚಕರಾದ ರಾಮಕಿಂಕರಾಚಾರ್ಯರು ಗರ್ಭಗುಡಿಯಿಂದ ಓಡಿ ಬಂದವರೆ!

ಸ್ವಾಮಿ ವಿಗ್ರಹದಿಂದ ಒಡಮೂಡಿ ಜಿಗಿದು ಬಂದದ್ದನ್ನು ತಾವು ಕಣ್ಣಾರೆ ನೋಡಿದೆವೆಂದು ಘೋಷಿಸುವುದೆ! ಅದರಿಂದ ಭಕ್ತರು ಆವೇಶದಿಂದ ಕುಣಿಯಲಾರಂಭಿಸಿದರು. ಕಸಾಪುರ ದೊರೆಯೆ ನಿನಗಾರು ಸರಿಯೆ ಸರಿ ಎಂದವರ ಹಲ್ಲು ಮುರಿಯೆ ಬಹುಪರಾಕ್!

ಸ್ವಾಮಿ ಇಂಥ ಪವಾಡ ಮೆರೆದು ಕಲಿಯುಗವನ್ನು ಪಾವನಗೊಳಿಸಿದ. ದೇವರಶಿಶು ಎಲ್ಲರ ಕಡೆ ಕೃಪಾದೃಷ್ಟಿ ಬೀರುತ್ತಿತ್ತು, ಮೈ ತುರಿಸಿಕೊಳ್ಳಲೆಂದು ಅದು ಎತ್ತುತ್ತಿದ್ದ ಕೈಯನ್ನು ಆಶೀರ್ವಾದದ ಭಂಗಿ ಎಂದು ಭಾವಿಸಿ ಭಕ್ತರು ಹ್ಹಾಹ್ಹಾ ಎಂದು ಉದ್ಗರಿಸಿದರು. ಪ್ರಯಾಣದ ಅವರಸರದಲ್ಲಿದ್ದ ಮಾಧ್ಯಮದವರು ಪುನಃ ಬಂದರು, ಎಂದಿನಂತೆ ಮಾಹಿತಿ ಸಂಗ್ರಹಿಸಿದರು. ದೇವರ ಶಿಶುವಿನ ವಿವಿಧ ಭಂಗಿಗಳನ್ನು ಸಹ ಕ್ಲಿಕ್ಕಿಸಿಕೊಂಡು ಉತ್ಸಾಹ, ಉದ್ವೇಗದಿಂದ ಪುನಃ ಮರಳಿದರು.

ಸೀತಾನ್ವೇಷಣೆ ವಿಷಯದಲ್ಲಿ ಶ್ರೀರಾಮನಿಗೆ ನೆರವಾಗಲೆಂದಲ್ಲವೆ ತ್ರೇತಾಯುಗದಲ್ಲಿ ಸ್ವಾಮಿ ಪ್ರಕಟವಾದದ್ದು! ಈ ಕಲಿಯುಗದಲ್ಲಿ ಯಾವ ಸಮಸ್ಯೆ ಪರಿಹರಿಸಲು ಸ್ವಾಮಿ ಪುನಃ ಪ್ರಕಟವಾಗಿರಬಹುದು! ಇಂಥ ಹಲವು ವಿಷಯಗಳ ಕುರಿತು ಭಕ್ತರ ಹಾಗೂ ದೇವುಳದ ಆಡಳಿತಾಧಿಕಾರಿಗಳ ನಡುವೆ ಜಿಜ್ಞಾಸೆ ನಡೆಯಿತು. ಶರ್ಮರು ಆಚಾರ್ಯರಂಥ ಪ್ರಾಜ್ಞರಿಂದ ಸಲಹೆ, ಸೂಚನೆ ಪಡೆಯಲು ಪ್ರಯತ್ನಿಸಿ ವಿಫಲರಾದರು. ಆನೆಗೊಂದಿ ಹಿರಿಯರು ಆ ಚರ್ಚೆಯಲ್ಲಿ ಮೌಖಿಕವಾಗಿ ಪಾಲ್ಗೊಳ್ಳಲಿಲ್ಲ. ಅವರು ಅಕ್ಷರಶಃ ಮೂಕರಾಗಿದ್ದರು. ಅವರು ಧ್ಯಾನಸ್ಥರಾಗಿ ದೇವರನ್ನೂ ದೇವರಶಿಶುವನ್ನೂ ನೋಡುತ್ತಿದ್ದರು.

ದೇವರಶಿಶುವಿನ ಪೋಷಣೆಯನ್ನು ದೇವಸ್ಥಾನದ ಖರ್ಚಿನಲ್ಲಿ ನಿಭಾಯಿಸುವುದೊ! ಅಥವಾ ಸ್ವಾಮಿಯ ಪಕ್ಕದ ಚಿನ್ನದ ಪಂಜರದಲ್ಲಿರಿಸಿ ಭಕ್ತರಿಗೆ ದರ್ಶನ ಕೊಡಿಸುವುದೊ! ಅಥವಾ ಅದನ್ನು ಅದೃಷ್ಟಶಾಲಿ ಭಕ್ತನಿಗೆ ವಹಿಸುವುದೊ! ಅಥವಾ ಶ್ರೀಮಂತಭಕ್ತರ ಸಮಕ್ಷಮ ಹರಾಜು ಹಾಕಿ ಬಂದ ಹಣವನ್ನು ಲೋಕಕಲ್ಯಾಣಾರ್ಥಕ್ಕೆ ವಿನಿಯೋಗಿಸುವುದೊ!

ಒಂದು ತಾಸು ವಾದೋಪವಾದ ನಡೆಯಿತು. ದೇವರಶಿಶುವನ್ನು ಅದೃಷ್ಟಶಾಲಿ ಭಕ್ತನ ವಶಕ್ಕೆ ಒಪ್ಪಿಸುವುದೆ ಒಳಿತೆಂದು ಸಭೆ ನಿರ್ಧರಿಸಿತು. ಸಮಾಧಾನಕರ ಅಂಶವೆಂದರೆ ಗಣ್ಯ, ಅತಿಗಣ್ಯ ಭಕ್ತರು ದೇವಸ್ಥಾನದ ಛತ್ರದಲ್ಲಿ ವಾಸ್ತವ್ಯ ಹೂಡಿದ್ದರು. ಕೊಡುಗೈ ದಾನಿಗಳೆನ್ನಿಸಿದ್ದ ಅವರೆಲ್ಲರೂ ದಾನ ಪಡೆಯಲು ಯೋಗ್ಯರಿದ್ದರು. ಕಪಿಚೇಷ್ಟಾಚಾರ್ಯ ಸ್ಮಾರಕ ಮಂದಿರದಲ್ಲಿ ಸಭೆ ಸೇರಿಸಲಾಯಿತು.
ಶರ್ಮರು ಸಭಾಸದರ ಕಡೆ ಸಿಂಹಾವಲೋಕನ ಮಾಡಿದರು. ಅವರು ದೇಶದ ಬಹುತೇಕ ಪವಿತ್ರ ನದಿಗಳ ಜಲಸೇವನೆ ಮಾಡಿದ್ದರು.

ಇಂಥ ಜೀವಂತ ಕಾಣಿಕೆಗಳ ಪರಿಣಾಮ ಕುರಿತು ಪರಿಣಾಮಕಾರಿ ಉಪನ್ಯಾಸ ನೀಡಿದರು. ಯಾವ್ಯಾವ ಕಾಲಘಟ್ಟದಲ್ಲಿ ಸ್ವಾಮಿ ಯಾವ್ಯಾವ ಪ್ರಾಣಿ ರೂಪದಲ್ಲಿ ಪ್ರಕಟವಾದನು! ಅವುಗಳನ್ನು ದತ್ತು ಪಡೆದವರು ಸರ್ವಾಂಗೀಣ ಅಭಿವೃದ್ದಿಯಾದ ಪರಿ ಹೇಗೆ! ಉದಾಹರಣೆಗಳ ಸಹಿತ ವಿವರಿಸಿದರು. ಶರ್ಮಾಜಿ ಮುಂದುವರೆದು ಈ ದೇವರಶಿಶುವಿದ್ದಲ್ಲಿ ಶನಿಮಹಾಶಯ ಸುಳಿಯುವುದಿಲ್ಲ! ಇದರ ಅವಶ್ಯಕತೆ ತಮ್ಮೆಲ್ಲರಿಗೆ ಇದೆ. ಶನಿ ಎಲ್ಲಾ ರಂಗಗಳಲ್ಲೂ ಆದಾಯ ತೆರಿಗೆ ಅಧಿಕಾರಿಗಳ ರೂಪದಲ್ಲಿ ಪ್ರತ್ಯಕ್ಷನಾಗುವುದೇ ಹೆಚ್ಚು. ಆತನ ಕಾಟ ನಿವಾರಣೆಯಾಗುವುದಾದರೆ! ಇಂಥ ನೂರಾರು ದೇವರಶಿಶುಗಳ ಭವಿಷ್ಯ ರೂಪಿಸಬಹುದಲ್ಲವೆ! ಈ ದೇವರಶಿಶುವನ್ನು ದತ್ತುಪಡೆದವರ ನಾಮವಾಚಕ ಅಚಂದ್ರಾರ್ಕ ದೇವಸ್ಥಾನದ ಇತಿಹಾಸದಲ್ಲಿ ರಾರಾಜಿಸುವುದಲ್ಲವೆ!
ದೇವರಶಿಶುವಿನ ಉತ್ತರಾಧಿಕಾರಿಗಳಾಗಲು ಈ ಮಟ್ಟದ ಸ್ಪರ್ಧೆ ಏರ್ಪಡಬಹುದೆಂದು ಯಾರು ಸಹ ನಿರೀಕ್ಷಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT