ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸಾಂಸ್ಕೃತಿಕ ಚರಿತ್ರೆ ಕಟ್ಟಿಕೊಡುವ ವ್ಯಕ್ತಿಚಿತ್ರಗಳು

Last Updated 30 ಜುಲೈ 2022, 19:32 IST
ಅಕ್ಷರ ಗಾತ್ರ

ಕವಿ ಮತ್ತು ಸೃಜನಶೀಲ ಅನುವಾದಕ ಎಂದು ಗುರುತಿಸಲಾಗುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ‘ಚಹಾದ ಜೋಡಿ ಚೂಡಾದ್ಹಾಂಗ’ ಅಂಕಣದ ಮೂಲಕ ಚಿರಪರಿಚಿತರು. ಹದಿನೆಂಟು ಕವನ ಸಂಕಲನ ಹಾಗೂ ಹದಿನೆಂಟು ಅನುವಾದಿತ ನಾಟಕಗಳನ್ನು ಪ್ರಕಟಿಸಿರುವ ಅವರ 11ನೇ ಗದ್ಯ ಬರೆಹಗಳ ಸಂಕಲನವಿದು. ಉತ್ತರ ಕರ್ನಾಟಕದ ಆಡುಮಾತನ್ನು ಬಳಸಿ ಬರೆಯುವ ಅವರ ಗದ್ಯವು ಸಹಜ ಮಾತಿನ ಲಯವನ್ನು ವಿಸ್ತರಿಸಿ ಕವಿತೆಯಾಗಿ ಬಿಡಬಲ್ಲದು. ಸರಾಗವಾಗಿ ಓದಿಸಿಕೊಂಡು ಹೋಗುವ ಲವಲವಿಕೆಯ ಗದ್ಯ ಅವರದು.

ದಟ್ಟ ನೆನಪಿನ ಓಣಿಯಲ್ಲಿ ಓಡಾಡುತ್ತ ಅಲ್ಲಿನ ವ್ಯಕ್ತಿ ವಿವರ, ಘಟನೆ-ಸಂಗತಿಗಳನ್ನು ಕರಾರುವಾಕ್ಕಾಗಿ ಪದಕ್ಕಿಳಿಸುವ ಕೌಶಲ ಪಟ್ಟಣಶೆಟ್ಟರಿಗೆ ಸಿದ್ಧಿಸಿದೆ. ಹಾಗೆ ದಾಖಲಿಸುವಾಗ ಅದರ ತಾಜಾತನ ಕಳೆದುಹೋಗದಂತೆ ಅವರು ಬರೆಯಬಲ್ಲರು. ಧಾರವಾಡ ಕೇಂದ್ರಿತ ಉತ್ತರ ಕರ್ನಾಟಕದ ಲೇಖಕ-ಕವಿಗಳ ಜೊತೆಗಿನ ಒಡನಾಟದ ಗಳಿಗೆಯನ್ನು ದಾಖಲಿಸುವ ‘ಮಾತು ಮುಗಿದಿಲ್ಲ’ ಸಂಕಲನವು ಒಟ್ಟು ಹದಿನಾರು ಬರೆಹಗಳನ್ನು ಒಳಗೊಂಡಿದೆ. ಅದರಲ್ಲಿ ಎರಡು ಲೇಖನಗಳು ಬೇಂದ್ರೆಯವರನ್ನು ಕುರಿತವುಗಳಾಗಿದ್ದರೆ ಮತ್ತೆರಡು ಗಿರಡ್ಡಿ ಗೋವಿಂದರಾಜ ಅವರನ್ನು ಕುರಿತವು.

‘ಸಂಕ್ರಮಣ’ ಸಾಹಿತ್ಯ ಪತ್ರಿಕೆ ಆರಂಭಿಸಿ ಸಾಹಿತ್ಯಕ-ಸಾಂಸ್ಕೃತಿಕ ಲೋಕದಲ್ಲಿ ಅದಕ್ಕೊಂದು ಛಾಪು ಮೂಡಿಸಲು ಕಾರಣರಾದವರಲ್ಲಿ ಪಟ್ಟಣಶೆಟ್ಟರು ಪ್ರಮುಖರು. ಮೂವರು ‘ಸಂಕ್ರಮಣ ಗೆಳೆಯರ’ ಪೈಕಿ ಒಬ್ಬರಾದ ಪಟ್ಟಣಶೆಟ್ಟರು ತಮ್ಮ ಆಪ್ತ ಗೆಳೆಯರಾದ ಕವಿ-ಹೋರಾಟಗಾರ ಚಂದ್ರಶೇಖರ ಪಾಟೀಲ ಮತ್ತು ವಿಮರ್ಶಕ-ಕತೆಗಾರ ಗಿರಡ್ಡಿ ಗೋವಿಂದರಾಜ ಅವರ ವ್ಯಕ್ತಿಚಿತ್ರ ಕಟ್ಟಿಕೊಟ್ಟಿದ್ದಾರೆ. ಗೆಳೆತನದ ಭಿಡೆ ಬಿಟ್ಟು ಬರೆದ ಈ ‘ಪ್ರಬಂಧ’ಗಳಲ್ಲಿ ಆಪ್ತತೆಯ ಜೊತೆಗೆ ‘ಅಂತರ’ ಕಾದಿಟ್ಟುಕೊಂಡ ‘ಗ್ರಹಿಕೆ’ ಕೂಡ ದಾಖಲಾಗಿದೆ. ಈ ಮಾತು ಗಿರಡ್ಡಿ ಮತ್ತು ಚಂಪಾ ಕುರಿತ ಬರೆಹಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಟ್ಟು ಸಂಕಲನದ ಎಲ್ಲ ಬರೆಹಗಳಿಗೂ ಅದು ಅನ್ವಯಿಸುತ್ತದೆ. ಅದು ಪಟ್ಟಣಶೆಟ್ಟರ ಬರೆಹದ ಶೈಲಿವಿಶೇಷ.

ಕೆಲವು ಬರೆಹಗಳು ‘ಅಂಕಣ’ಗಳಾಗಿದ್ದರೆ ಕೆಲವು ಸಾಹಿತ್ಯ ಪತ್ರಿಕೆಗಾಗಿ ಬರೆದವುಗಳು. ಹಾಗೆಯೇ ಒಂದೆರಡು ಬರೆಹಗಳು ಸಭೆ-ಸಮಾರಂಭ-ಗೋಷ್ಠಿಗಳಲ್ಲಿ ಆಡಿದ ಮಾತುಗಳನ್ನು ಅಕ್ಷರಕ್ಕಿಳಿಸಿದವುಗಳು. ಹೀಗಾಗಿ ಬರೆಹಗಳ ಸ್ವರೂಪ ಏಕರೂಪಿಯಾಗಿಲ್ಲ. ಈ ಭಿನ್ನತೆಯು ವೈವಿಧ್ಯಕ್ಕೆ ಕಾರಣವಾಗಿದೆ. ಇಲ್ಲಿ ಬರೆಹಗಳಾಗಿರುವ ವ್ಯಕ್ತಿಗಳ ಪೈಕಿ ಒಂದಿಬ್ಬರನ್ನು ಬಿಟ್ಟರೆ ಬಹುತೇಕ ಎಲ್ಲರೂ ಪಟ್ಟಣಶೆಟ್ಟರಿಗೆ ವ್ಯಕ್ತಿಗತವಾಗಿ ಪರಿಚಿತರಾಗಿರುವವರು-ಆಪ್ತರು. ಒಡನಾಟದ ನೆನಪುಗಳನ್ನು ದಾಖಲಿಸುವಾಗ ಲೇಖಕರು ಒದಗಿಸುವ ಅತ್ಯಂತ ಸಣ್ಣ ಮತ್ತು ಸೂಕ್ಷ್ಮ ವಿವರಗಳು ಲೇಖಕ ಹಾಗೂ ವಸ್ತು ಎರಡರ ವಿಭಿನ್ನ-ವಿಶಿಷ್ಟ ವ್ಯಕ್ತಿತ್ವ ಅನಾವರಣಕ್ಕೆ ಕಾರಣವಾಗುತ್ತವೆ.

ಧಾರವಾಡದ ಗೆಳೆಯರ ಗುಂಪಿನ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ವಿ.ಕೃ.ಗೋಕಾಕ, ಜಿ.ಬಿ. ಜೋಶಿ ಕುರಿತ ಬರೆಹಗಳು ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ವಿವರಗಳನ್ನು ಸೇರಿಸುತ್ತವೆ. ಇಲ್ಲಿ ಚರಿತ್ರೆ ಕಟ್ಟುವ ಉದ್ದೇಶವಿಲ್ಲದಿದ್ದರೂ ಚಾರಿತ್ರಿಕ ಮಹತ್ವ ಪಡೆದ ಈ ಬರೆಹಗಳು ಕುತೂಹಲ-ಆಸಕ್ತಿಗಳ ಜೊತೆಯಲ್ಲಿಯೇ ಸಂಶೋಧನ ಗುಣವನ್ನೂ ಹೊಂದಿವೆ. ‘ಗೆಳೆಯರ ಗುಂಪಿ’ನ ಸಮಕಾಲೀನರಾಗಿದ್ದರೂ ಗುಂಪಿನ ಭಾಗವಾಗಿರದ ಸಾಲಿ ರಾಮಚಂದ್ರರಾಯ, ಪಾ.ವೆಂ. ಆಚಾರ್ಯ ಹಾಗೂ ಗುರುನಾಥ ಜೋಶಿ ಅವರನ್ನು ಕುರಿತ ಬರೆಹಗಳು ಆಪ್ತತೆ-ಆರ್ದ್ರತೆಗಳಿಂದ ಕೂಡಿವೆ. ಧಾರವಾಡದ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಹೆಜ್ಜೆಗುರುತು ಮೂಡಿಸಿದ ನವೋದಯಪೂರ್ವ ಲೇಖಕರಾದ ಸಕ್ಕರಿ ಬಾಳಾಚಾರ್ಯ ಹಾಗೂ ಶಾಂತಕವಿಗಳನ್ನು ಕುರಿತ ಎರಡು ಬರೆಹಗಳು ಲೇಖಕರ ಸಂಶೋಧನೆ ಹಾಗೂ ಓದಿನ ಹರಹುಗಳನ್ನು ಬಿಚ್ಚಿಡುತ್ತವೆ.

ಆಪ್ತಮಿತ್ರರಾದ ಗಿರಡ್ಡಿ, ಚಂಪಾ, ಶಾಂತಿನಾಥ ದೇಸಾಯಿ ಅವರನ್ನು ಕುರಿತ ಲೇಖನಗಳು ನೆನಪುಗಳ ಮೆರವಣಿಗೆಯಲ್ಲಿ ಸವಾರಿ ಹೊರಟಂತಿವೆ. ಆಪ್ತತೆಯ ಕಾರಣಕ್ಕಾಗಿ ಕಟುವಾಗದೇ ಇರುವುದು ಪಟ್ಟಣಶೆಟ್ಟರಿಗೆ ಸಾಧ್ಯವೇ ಇಲ್ಲ. ಹೀಗಾಗಿಯೇ ಅವು ಕಟುಮಧುರ. ಈ ಬರೆಹಗಳು ‘ವಸ್ತು’ವಿನ ಸಾಂಸ್ಕೃತಿಕ-ಸಾಹಿತ್ಯಕ ಮಹತ್ವ ವಿವರಿಸುತ್ತಲೇ ವಿಮರ್ಶಾತ್ಮಕ ಒಳನೋಟಗಳನ್ನೂ ನೀಡುತ್ತವೆ.

ಪ್ರಥಮ ಸಂಕ್ರಮಣ ಸಾಹಿತ್ಯ ಸಮ್ಮೇಳನ ಹಾಗೂ ಪಟ್ಟಣಶೆಟ್ಟರ ಆತ್ಮಕತೆಯ ಮೊದಲ ಭಾಗ ‘ಗಿರಿಜವ್ವನ ಮಗ’ ಬಿಡುಗಡೆ ಸಂದರ್ಭದಲ್ಲಿ ಆಡಿದ ಮಾತುಗಳನ್ನೂ ಪದಗಳಲ್ಲಿ ದಾಖಲಿಸಿದ್ದಾರೆ. ‘ಬೇಂದ್ರೆ ಕಂಡ ಧಾರವಾಡ’ ಲೇಖನವು ಬೇಂದ್ರೆಯವರ ಧಾರವಾಡವನ್ನು ಪರಿಚಯಿಸುವುದಕ್ಕೆ ಸೀಮಿತವಾಗಿಲ್ಲ. ಚಾರಿತ್ರಿಕ ವಿವರನೀಡುತ್ತ ಸಾಂಸ್ಕೃತಿಕ ಮಹತ್ವದ ಬರೆಹವಾಗಿ ಪರಿಣಮಿಸುತ್ತದೆ. ಕೊನೆಯಾಗದ, ಕೊನೆಯಿರದ ಅಂಟಿದ ನಂಟಿನ ನೆನಪುಗಳು ಈ ಪುಸ್ತಕದ ವಿಶೇಷ.

ನಾವು ಓದಿದ, ಕೇಳಿದ, ನೋಡಿದ ವ್ಯಕ್ತಿಗಳ ಕುರಿತ ಸಮೀಪದ ನೋಟವನ್ನು ಕಟ್ಟಿಕೊಡುವ ಈ ಬರೆಹಗಳ ‘ಒಂದು ನೋಟ’ ಅದು ಅಪ್ತನೋಟ. ಪ್ರೀತಿ ಇಟ್ಟುಕೊಂಡೇ ಬರೆದ ಬರೆಹಗಳಿವು. ಪದಗಳ ಜೊತೆಗೆ ಆಟವಾಡುತ್ತ ಕವಿತೆ ಕಟ್ಟುತ್ತ ಬಂದಿರುವ ಪಟ್ಟಣಶೆಟ್ಟರ ಕಾವ್ಯಾತ್ಮಕ ಆಟ ಗದ್ಯದಲ್ಲೂ ಮುಂದುವರೆದಿದೆ.

ಕೃತಿ: ಮಾತು ಮುಗಿದಿಲ್ಲ
(ಲೇಖಕರ ಒಡನಾಟ)
ಸಿದ್ಧಲಿಂಗ ಪಟ್ಟಣಶೆಟ್ಟಿ
ಪುಟ: 240 ಬೆಲೆ: 240
ಪ್ರ: ಅನನ್ಯ ಪ್ರಕಾಶನ, ಧಾರವಾಡ
ಸಂಪರ್ಕ: 9448630637

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT