ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಇಕ್ಬಾಲುನ್ನಿಸಾ ಹುಸೇನ್ ಅವರ ‘ಪರ್ದಾ ಮತ್ತು ಪಾಲಿಗಮಿ’

Last Updated 23 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

ಮಹಿಳಾ ಚಳವಳಿ ಜಗತ್ತಿನ ಅತ್ಯಂತ ದೀರ್ಘ ವಿಮೋಚನಾ ಹೋರಾಟವಾಗಲಿರುವ ಬಗೆಗೆ ಯಾವುದೇ ಅನುಮಾನವಿಲ್ಲ. ಅದನ್ನು ಧೃಢಪಡಿಸುವಂತೆ ಇಕ್ಬಾಲುನ್ನಿಸಾ ಹುಸೇನ್ ಬರೆದ ‘ಪರ್ದಾ ಮತ್ತು ಪಾಲಿಗಮಿ’ ಕಾದಂಬರಿಯಿದೆ.

ಮಹಿಳಾ ಚಳವಳಿ ಜಗತ್ತಿನ ಅತ್ಯಂತ ದೀರ್ಘ ವಿಮೋಚನಾ ಹೋರಾಟವಾಗಲಿರುವ ಬಗೆಗೆ ಯಾವುದೇ ಅನುಮಾನವಿಲ್ಲ. ಅದನ್ನು ಧೃಢಪಡಿಸುವಂತೆ ಇಕ್ಬಾಲುನ್ನಿಸಾ ಹುಸೇನ್ ಬರೆದ ‘ಪರ್ದಾ ಮತ್ತು ಪಾಲಿಗಮಿ’ ಕಾದಂಬರಿಯಿದೆ. ಭಾರತೀಯ ಸಮಾಜದಲ್ಲಿ ಗಂಡು ಎನ್ನುವುದೊಂದು ಅಧಿಕಾರದ ತುಂಡು. ಮನುಷ್ಯ ಸಂಬಂಧಗಳೆಲ್ಲ ಗಂಡಿನೊಡನೆಯ ಅಧಿಕಾರ ಸಂಬಂಧಗಳಾಗಿಯೇ ನಿರೂಪಿತವಾಗುತ್ತವೆ. ಮನೆಯೊಳಗಿನ ಗಂಡುಗಳನ್ನು ಪರೋಪಜೀವಿಗಳನ್ನಾಗಿ ಮಾಡಿದಷ್ಟೂ ತಮ್ಮ ಸ್ಥಾನಬೆಲೆ ಹೆಚ್ಚುವುದೆಂದು ಹೆಣ್ಣುಜೀವರು ಭಾವಿಸಿದ್ದಾರೆ. ಹೆಣ್ಣುಗಳ ಹುಳಿತೇಗಿನ ಮೂಲ ಗಂಡು ಅಧಿಕಾರದೊಂದಿಗೆ ನಡೆಸುವ ಪೈಪೋಟಿಯೇ ಆಗಿದೆ. ಸೆಣಸಾಟದ ಹೆಣ್ಣು ಬದುಕನ್ನು 1944ರಲ್ಲಿ ಇಂಗ್ಲಿಷ್‌ನಲ್ಲಿ ಬಂದ ಕಾದಂಬರಿ ‘ಪರ್ದಾ ಅಂಡ್ ಪಾಲಿಗಮಿ’ ಸಮರ್ಥವಾಗಿ ಚಿತ್ರಿಸಿದೆ. ದಾದಾಪೀರ್ ಜೈಮನ್ ಅದರ ಸಾಂಸ್ಕೃತಿಕ ಅನುವಾದವನ್ನು ಸಮರ್ಥವಾಗಿ ಮಾಡಿ ಕನ್ನಡದ್ದೇ ಆಗಿಸಿದ್ದಾರೆ.

ಚಿಕ್ಕಬಳ್ಳಾಪುರದ ಇಕ್ಬಾಲುನ್ನಿಸಾ (ಜನನ 1897) ಹದಿವಯಸ್ಸಿನಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದ ಸಯ್ಯದ್ ಹುಸೇನರನ್ನು ಮದುವೆಯಾದರು. ಬಳಿಕ ಓದು ಮುಂದುವರೆಸಿ, ಮಗನ ಜೊತೆಜೊತೆಗೆ ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಐದು ಮಕ್ಕಳನ್ನು ಭಾರತದಲ್ಲಿ ಬಿಟ್ಟು, ಕೈಗೂಸಿನೊಡನೆ ಲಂಡನ್ ಸೇರಿ ಲೀಡ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಮೊದಲ ಭಾರತೀಯ ಮಹಿಳೆಯಾದರು. ಪರ್ದಾ ತ್ಯಜಿಸಿದ್ದ ಇಕ್ಬಾಲುನ್ನಿಸಾ, ಸಾಮಾಜಿಕ ಕಾರ್ಯಕರ್ತೆ, ಲೇಖಕಿಯಾಗಿ ಬೆಳೆದರು. ಭಾರತೀಯ ಮುಸ್ಲಿಮರ ನಂಬಿಕೆ, ಮೂಢನಂಬಿಕೆ, ಶೋಕಿ, ಕಪಟ, ಅಮಾಯಕತೆ, ಅತಿಧಾರ್ಮಿಕತೆ, ಬಡತನ, ಹುಸಿಗರ್ವ, ಸಮುದಾಯಪ್ರಜ್ಞೆಗಳನ್ನು ತಮ್ಮ ಬರಹಗಳಲ್ಲಿ ಚಿತ್ರಿಸಿದರು.

‘ಪರ್ದಾ ಮತ್ತು ಪಾಲಿಗಮಿ’ ನಗರವೊಂದರ ಸಿರಿವಂತ ಮುಸ್ಲಿಂ ಕುಟುಂಬದ ಕಥೆ. ಉಮರ್, ಕಬೀರ್, ಅಕ್ರಮ್ ಎಂಬ ಮೂರು ತಲೆಮಾರಿನ ಗಂಡಸರ ಯಜಮಾನಿಕೆಯ ಏಳುಬೀಳಿನ ಕಥೆ. ಹಣ ಕೂಡಿಡುತ್ತ ಬದುಕು ಸವೆಸಿದ ಅತಿ ಸಂಪ್ರದಾಯವಾದಿ ಉಮರ್; ಹದಿಹರೆಯದಲ್ಲೇ ಸಿಕ್ಕ ಯಾಜಮಾನ್ಯವನ್ನು ಸ್ವೇಚ್ಛೆಗಾಗಿ ಬಳಸಿ ನಾಲ್ಕು ಮದುವೆಯಾಗುವ ಕಬೀರ್; ಆಧುನಿಕ ಬದುಕಿಗೆ ತೆರೆದುಕೊಂಡರೂ ಕುಟುಂಬದ ನಿಯಂತ್ರಣದಿಂದ ಹೊರಬರಲಾರದ ಅಕ್ರಮ್ ಎಂಬ ಮೂವರು ಗಂಡಸರ ಸುತ್ತ ಹೆಣೆದುಕೊಂಡ ‘ದಿಲ್ಖುಶ್’ ಮನೆಯ ಹೆಣ್ಣುಲೋಕದ ಕಥೆ. ಸಂಕೋಚದ ಮುದ್ದೆಯಂತಿರುವ ಹುಡುಗರಲ್ಲಿ ಅದು ಯಾವಾಗ ಗಂಡುಗರ್ವ ಸ್ಫೋಟಿಸಿ ಯಾಜಮಾನ್ಯದ ಚಹರೆ ಬೆಳೆಯುವುದೋ ಎಂಬ ಅಚ್ಚರಿಗೆ ಇಲ್ಲಿ ಉತ್ತರ ಸಿಗುತ್ತದೆ.

‘ದಿಲ್ಖುಶ್’ ಮನೆಯಲ್ಲಿ ವಂಶೋದ್ಧಾರಕನನ್ನು ಹೆತ್ತ ಕಬೀರನ ಮೊದಲನೆಯ ಹೆಂಡತಿ ನಾಝ್ನಿಯು ಗುಣವಾಗದ ಕಾಯಿಲೆಗೆ ತುತ್ತಾಗಿ ಅಸಹಾಯಕತೆ, ಅಬಲತನವೇ ಮೈವೆತ್ತಂತಿರುವವಳು. ಮನೆಗೆಲಸ ಮಾಡಲೊಬ್ಬರು ಬೇಕೆಂದು ಮದುವೆಯಾದ ಎರಡನೆಯ ಹೆಂಡತಿ ‘ಕರಿಮುಸುಡಿ’ಯ ಬಡವಿ ಮುನೀರಾ, ಸಿರಿವಂತನ ಕೈಹಿಡಿವ ಭಾಗ್ಯ ಸಿಕ್ಕಿದ್ದಕ್ಕೆ ಕೃತಕೃತಾರ್ಥಳಾಗಿ ಗಂಡ-ಅತ್ತೆ-ಧರ್ಮ ವಿಧಿಸಿರುವುದನ್ನು ಒಂದಿಷ್ಟೂ ಬದಲಾಗಲು ಬಿಡದವಳು. ಭಾರೀ ಮೆಹೆರ್ ಪಡೆದು ಬಂದಿರುವ ಸುಂದರಿ, ಜಾಣೆ, ಕವಯಿತ್ರಿ ಮಕ್ಬೂಲ್ ಪ್ರತಿತಿಂಗಳ ಆದಾಯಕ್ಕೆ ದಾರಿ ಮಾಡಿಕೊಂಡು ಮೂರನೆಯ ಹೆಂಡತಿಯಾಗಿ ಬಂದವಳು. ಅಶುಭವನ್ನೇ ತಂದಿತ್ತ ಮೂರು ಎಂಬ ಸಂಖ್ಯೆಯನ್ನು ನಿವಾರಿಸಿ ‘ನಾಲ್ಕು’ ಮಾಡಿಕೊಳ್ಳಲು ಹದಿಹರೆಯದ ಸುಂದರ ನಿರ್ಗತಿಕ ಹುಡುಗಿ ನೂರ್‌ಜಹಾನ್ ನಾಲ್ಕನೆಯ ಹೆಂಡತಿಯಾಗಿ ಬಂದವಳು. ಇವರನ್ನೆಲ್ಲ ನಿಯಂತ್ರಿಸುವವಳು ಮುಳ್ಳುನಾಲಗೆಯ ನಿರ್ದಯಿ ಅತ್ತೆ ಜುಹ್ರಾ. ಇವರೆಲ್ಲ ಮನೆಯೊಡೆಯ ಕಬೀರನ ಅಧಿಕಾರ ಎತ್ತಿ ಹಿಡಿಯುವ ನೆಪದಲ್ಲಿ ತಮ್ಮ ಅಧಿಕಾರ ಸ್ಥಾಪಿಸಿಕೊಳ್ಳುವ ಹುಕಿಯಲ್ಲಿರುವವರು. ಒಬ್ಬರಿಗೊಬ್ಬರು ಹೆಣೆವ ಅಸಂಗತ ತರ್ಕಗಳ ಬಲೆಯಲ್ಲಿ ಸಿಲುಕಿ ಉಸಿರುಗಟ್ಟಿದ ಮನೆಯಲ್ಲಿ ಸಂಭ್ರಮಕ್ಕಿಂತ ಸಂಚೇ ಹೆಚ್ಚು. ನೆಮ್ಮದಿಗಿಂತ ಶಂಕೆಯೇ ಹೆಚ್ಚು. ಹೊಸದರ ಕನಸಿಗಿಂತ ಹಳೆಯದನ್ನು ಉಳಿಸುವ ಹಠವೇ ಹೆಚ್ಚು. ಇದ್ದಿದ್ದರಲ್ಲಿ ಸೇವಕಿಯರೇ ನಿರ್ಭೀತಿಯಿಂದ ಮಾತನಾಡುತ್ತಾರೆ. ಬಂಡೇಳುವ ಗುಣಕ್ಕಾಗಿಯೇ ನಿಂದೆಗೊಳಗಾಗುತ್ತಾರೆ.

ಕಾದಂಬರಿಯ ಹೆಣ್ಣುಲೋಕದಲ್ಲಿ ಹೆಣ್ತನವೆಂದರೆ ಬಸುರು, ಅಡುಗೆ, ದಾಸ್ಯದ ಬದುಕು, ಪೈಪೋಟಿ, ಅಧಿಕಾರ ಸ್ಥಾಪನೆಯ ಗುದ್ದಾಟ ಅಷ್ಟೇ. ಕೂಪದೊಳಗಿನ ಜಿಗಿದಾಟದ ಬದುಕಿನಲ್ಲಿ ಕಳೆದುಕೊಂಡದ್ದರ ಬಗೆಗೆ ಯಾರಿಗೂ ಅರಿವಿಲ್ಲ. ಪ್ರಶ್ನೆಗಳು ಹುಟ್ಟುವುದಿಲ್ಲ. ಬದಲಾವಣೆಯ ಬಯಕೆಯಿಲ್ಲ. ಉಲ್ಲಂಘಿಸುವ ಧೈರ್ಯವಿಲ್ಲ. ಆರೋಗ್ಯಕರ ಧಾರ್ಮಿಕತೆಯೂ ಇಲ್ಲದ ಕುರುಡು ಅನುಯಾಯಿತ್ವದಲ್ಲಿ ಅಧ್ಯಾತ್ಮದ ಬಯಲಿಗೊಯ್ಯುವ ಬೆಳಕಿಲ್ಲ. ವೈಚಾರಿಕತೆ, ಸ್ವಾತಂತ್ರ್ಯ, ಸಮಾನತೆ, ಸ್ನೇಹಭಾವಗಳು ಅವರ ಪದಕೋಶದಲ್ಲಿಲ್ಲ. ಹಕ್ಕುಗಳಿಗಾಗಿ ಹೋರಾಡುವುದು ಒತ್ತಟ್ಟಿಗಿರಲಿ, ಸ್ವಾಯತ್ತ ಬದುಕಿನ ಕನಸೇ ಅವರಿಗಿಲ್ಲ.

ಹೀಗೆ, ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಗೆ ಜಗ್ಗದೆ ವಸ್ತುಸ್ಥಿತಿಯನ್ನು ನಿರೂಪಿಸುವ ಧೈರ್ಯ ತೋರುವ ಕಾದಂಬರಿಯಲ್ಲಿ ಸುಧಾರಣೆಯ ಉತ್ಸಾಹ ಇಲ್ಲವೆನ್ನುವಷ್ಟು ಕಡಿಮೆ. ವ್ಯಂಗ್ಯ, ವಿಡಂಬನೆಗಳು ತೆರೆಮರೆಯಲ್ಲಿದ್ದರೂ ನೇರ ಬಂಡಾಯದ ಪಾತ್ರಗಳು ಬಲುಕಡಿಮೆ. ಬಂಡೇಳುವ ಗುಣದ ಮಕ್ಬೂಲ್, ಅಡುಗೆಯ ಕೆಲಸದವಳ ಪಾತ್ರಗಳು ವಿಸ್ತಾರಗೊಳ್ಳಬಹುದಾದ ಸಾಧ್ಯತೆಗಳಿದ್ದರೂ ಅದೇಕೋ ಮೊಟಕುಗೊಂಡಿವೆ. ಅಕ್ರಮ್‌ನ ಗೆಳತಿ ರೋಸ್ ಎಂಬ ಆಧುನಿಕ ಕ್ರೈಸ್ತ ಹುಡುಗಿ ಭಿನ್ನವಾಗಿದ್ದರೂ ಅವಳ ‘ಕಾಫರ‍್ನಿ’ ಚಿಂತನೆಗಳು ಮುಸ್ಲಿಂ ಹೆಣ್ಣುಗಳಿಗೆ ಅಸ್ವೀಕೃತವೆಂಬಂತೆ ಮಾಡಲಾಗಿದೆ. ಕೌಟುಂಬಿಕ, ಧಾರ್ಮಿಕ ವ್ಯವಸ್ಥೆಯ ಟೊಳ್ಳುಗಳನ್ನು ಮನಸ್ಸಿನಲ್ಲೂ ಟೀಕಿಸದ ಹೆಣ್ಣು ಪಾತ್ರಗಳು, ಅನ್ಯಾಯ ಎಸಗುವ ಗಂಡು ಉತ್ತರದಾಯಿತ್ವವೇ ಇಲ್ಲದೆ ಪಾರಾಗುವುದು, ಯಥಾಸ್ಥಿತಿಗೆ ಎಲ್ಲವನ್ನೂ ಅಂಟಿಸುವ ಅಂತ್ಯವು ಇಕ್ಬಾಲುನ್ನೀಸಾರ ಕಾದಂಬರಿಯೆಂದು ಇಟ್ಟುಕೊಂಡ ಭರವಸೆಯನ್ನು ಹುಸಿಗೊಳಿಸುತ್ತವೆ.

ಹೆಣ್ಣು ಕನಸುವ ಆದರ್ಶ ಸಮಾಜ ಹೇಗಿರಬೇಕು? ಮಹಿಳಾ ಹೋರಾಟದ ಅಂತಿಮ ಬಿಂದು ಯಾವುದು? ಹೆಣ್ಣಿನ ಜೈವಿಕ ಹಾಗೂ ಸಾಮಾಜಿಕ ಪಾತ್ರಗಳ ನಿಭಾವಣೆಯಲ್ಲಿ ಗಂಡಸಿನ ಪಾತ್ರವೇನು? ಲಿಂಗಾಧಾರಿತ ಪಾತ್ರಗಳ ತಿರುವುಮುರುವು ಮಹಿಳಾ ಹೋರಾಟದ ತುದಿಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಒಳನೋಟ ಮತ್ತು ದೂರದರ್ಶಿತ್ವವಿರುವ ಹೆಣ್ಣು ಬರಹಗಳಲ್ಲಿ ಉತ್ತರವಿರುತ್ತದೆ. 1905ರಲ್ಲಿ ಬಂಗಾಳದ ಬೇಗಂ ರುಖಿಯಾ ಶೆಖಾವತ್ ಹುಸೇನ್ ಬರೆದ ‘ಸುಲ್ತಾನಾಳ ಕನಸು’ ನೆನಪಾಗುತ್ತಿದೆ. ಅದನ್ನು ಓದತೊಡಗಿದರೆ ಸ್ತ್ರೀವಾದದ ನಾಳೆಯ ಕನಸುಗಳು ಬಿಚ್ಚಿಕೊಳ್ಳುತ್ತವೆ. ಈ ಕಾದಂಬರಿಯಲ್ಲಿ ಅಂತಹ ಆಶಾವಾದ, ಹೊರದಾರಿ, ಕನಸುಗಳು ಕಾಣಿಸುವುದಿಲ್ಲ. ಎಂದೇ ಇದನ್ನು ಸ್ತ್ರೀವಾದಿ ಕಾದಂಬರಿ ಎನ್ನುವುದಕ್ಕಿಂತ ಸ್ತ್ರೀವಾದ ಸಮಾಜಕ್ಕೆ ಯಾಕೆ ಅನಿವಾರ್ಯವೆಂದು ತಿಳಿಸುವ ಕೃತಿ ಎನ್ನಬಹುದು. ನಾವು ಹುಟ್ಟಿದ ಕುಟುಂಬ-ಜಾತಿ-ಧರ್ಮಗಳಲ್ಲಿ ಹೆಣ್ಣುಪ್ರಶ್ನೆಗಳನ್ನು ಎತ್ತದಿರುವ ಕಾರಣಕ್ಕೇ ಅವೆಲ್ಲ ಹೆಣ್ಣು ಬಂದೀಖಾನೆಗಳಾಗಿವೆಯೆಂದು ಎಚ್ಚರಿಸುವ ಕೃತಿ ಎನ್ನುವುದು ಸೂಕ್ತವಾಗುತ್ತದೆ.

ಪರ್ದಾ ಮತ್ತು ಪಾಲಿಗಮಿ

ಲೇ: ಇಕ್ಬಾಲುನ್ನೀಸಾ ಹುಸೇನ್‌

ಅ:ದಾದಾಪೀರ್‌ ಜೈಮನ್‌

ಪ್ರ: ಛಂದ ಪುಸ್ತಕ

ಸಂ: 9844422782

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT