ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಟೀಪೂ: ಚಾರಿತ್ರಿಕ–ಚಿಕಿತ್ಸಕ ನೋಟ

Last Updated 2 ಜುಲೈ 2022, 20:00 IST
ಅಕ್ಷರ ಗಾತ್ರ

ಮೈಸೂರಿನ ಇತಿಹಾಸದ ನಿರೂಪಣೆಗೆ ಸಂಬಂಧಿಸಿದಂತೆ ಮತ್ತೆ ಮತ್ತೆ ಕೇಳಿಬರುವ ಹೆಸರು ಪ್ರೊ. ಪಿ.ವಿ. ನಂಜರಾಜ ಅರಸು ಅವರದು. ‘ಮೈಸೂರು ನೂರಿನ್ನೂರು ವರ್ಷದ ಹಿಂದೆ’, ‘ನಾಲ್ವಡಿ ಕೃಷ್ಣರಾಜ ಒಡೆಯರ್ – ಒಂದು ದರ್ಶನ’, ‘ಮರೆಯಲಾರದ ಮಹಾಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್’, ‘ಕನ್ನಂಬಾಡಿ ಕಟ್ಟೆಯ ಆತ್ಮಕಥೆ’ – ಇವು, ನಂಜರಾಜ ಅರಸು ಅವರ ಕೆಲವು ಸಂಶೋಧನಾ ಕೃತಿಗಳು. ಈ ಸಾಲಿಗೆ ಹೊಸ ಸೇರ್ಪಡೆ, ‘ಟೀಪೂ: ಮಾನ್ಯತೆ ಸಿಗದ ಸುಲ್ತಾನ್ ಅಂದು–ಇಂದು.’

ಟೀಪೂ ಕೃತಿ ರಚನೆಗೆ ಸಂಬಂಧಿಸಿದಂತೆ ಲೇಖಕರಿಗೆ ಎರಡು ಸ್ಪಷ್ಟ ಉದ್ದೇಶಗಳಿವೆ. ಒಂದು, ಟೀ‍ಪೂ ಸುಲ್ತಾನನ ವ್ಯಕ್ತಿತ್ವ ಮತ್ತು ಸಾಧನೆಗೆ ಸಂಬಂಧಿಸಿದಂತೆ ರೂಪುಗೊಂಡಿರುವ ಆರೋಪಗಳು ಪೊಳ್ಳು ಎನ್ನುವುದನ್ನು ಸಾಬೀತುಪಡಿಸುವುದು. ಎರಡನೆಯದು, ಮೈಸೂರಿನ ಸರ್ವಾಧಿಕಾರಿಯಾಗಿದ್ದರೂ ತನ್ನ ಪ್ರಭುತ್ವಕ್ಕೆ ಅಧಿಕೃತ ಮಾನ್ಯತೆ ಇಲ್ಲದೆಹೋದ ಸಂಗತಿ ಟೀಪೂವನ್ನು ಒಳಗೊಳಗೆ ಬಾಧಿಸುತ್ತಿತ್ತು ಎನ್ನುವುದರ ಬಗ್ಗೆ ಸಹೃದಯರ ಗಮನಸೆಳೆಯುವುದು. ಟೀಪೂವಿಗೆ ತನ್ನ ಜೀವಿತ ಕಾಲದಲ್ಲಿ ಸಿಗಬೇಕಾದ ಮಾನ್ಯತೆ, ಪ್ರಸ್ತುತ ಕೂಡ ದೊರೆಯದೆ ಹೋಗಿರುವ ಚಾರಿತ್ರಿಕ ವ್ಯಂಗ್ಯ ಹಾಗೂ ಸಮಕಾಲೀನ ರಾಜಕಾರಣದ ಬಗ್ಗೆ ಗಮನಸೆಳೆಯುವ ಈ ಕೃತಿ, ಟೀಪೂವಿನ ಘನತೆಯನ್ನು ಎತ್ತಿಹಿಡಿಯುವ ಹಾಗೂ ಆತನನ್ನು ದುರಂತ ನಾಯಕನನ್ನಾಗಿ ಚಿತ್ರಿಸುವ ಪ್ರಯತ್ನ ಮಾಡುತ್ತದೆ.

ಈವರೆಗಿನ ತಲೆಮಾರುಗಳು ಓದಿಕೊಂಡು ಬಂದ ಚರಿತ್ರೆಯ ಪಠ್ಯಗಳು ಕಟ್ಟಿಕೊಟ್ಟಿರುವುದು ‘ಮೈಸೂರು ಹುಲಿ ಟೀಪೂ ಸುಲ್ತಾನ’ ಎನ್ನುವ ಚಿತ್ರವನ್ನು. ಈಗಿನ ತಲೆಮಾರು ಓದುತ್ತಿರುವುದು ‘ಟೀಪೂ ಸುಲ್ತಾನ ಎನ್ನುವ ಮುಸ್ಲಿಮನನ್ನು.’ ಧರ್ಮದ ಕನ್ನಡಕವನ್ನು ತೊಟ್ಟಾಗ ಓದಿನ ರೀತಿ ಬದಲಾಗುವುದನ್ನು ಲೇಖಕರು ಸೂಚಿಸುತ್ತಾರೆ. ಮುಸ್ಲಿಮನಾದ ಕಾರಣಕ್ಕೆ ತನ್ನ ಜೀವಿತ ಕಾಲದಲ್ಲಿ ಸಾಮಾಜಿಕ–ರಾಜತಾಂತ್ರಿಕ ಸಂಘರ್ಷಗಳನ್ನು ಎದುರಿಸಬೇಕಾದ ಟೀಪೂ, ವರ್ತಮಾನದಲ್ಲೂ ತನ್ನ ಧರ್ಮದ ಕಾರಣಕ್ಕಾಗಿಯೇ ವಿರೂಪಗೊಳ್ಳುತ್ತಿರುವುದನ್ನು ಕೃತಿ ಚರ್ಚಿಸುತ್ತದೆ. ‘ಟೀಪೂ ಜಯಂತಿ’ ಆಚರಣೆ ಆರಂಭಗೊಳ್ಳದೆ ಹೋಗಿದ್ದಿದ್ದರೆ ಟೀಪೂ ದ್ವೇಷವೂ ಶುರುವಾಗುತ್ತಿರಲಿಲ್ಲವೇನೋ ಎನ್ನುವ ಚಿಂತನೆ, ಟೀಪೂ ರಾಜಕಾರಣದ ದಾಳವಾಗಿ ಬಳಕೆಯಾಗುತ್ತಿರುವುದರ ಬಗ್ಗೆ ಗಮನಸೆಳೆಯುತ್ತದೆ.

ದುರಂತ ನಾಯಕನನ್ನಾಗಿ ಟೀಪೂವನ್ನು ಚಿತ್ರಿಸುವಾಗ ಲೇಖಕರ ಬರವಣಿಗೆ ಕೆಲವೊಮ್ಮೆ ಭಾವುಕವಾಗುತ್ತದೆ. ಆದರೆ, ತಮ್ಮ ವಾದಸರಣಿಗೆ ಸಾಕಷ್ಟು ಪುಷ್ಟಿಯನ್ನು ಒದಗಿಸಿರುವುದು, ದೇಸಿ ಮತ್ತು ವಿದೇಶಿ ಲೇಖಕರ ಬರಹಗಳನ್ನು ದಾಖಲೆಗಳಾಗಿ ನೀಡಿರುವುದು ‍ಪುಸ್ತಕಕ್ಕೆ ವಸ್ತುನಿಷ್ಠ ಗುಣ ತಂದುಕೊಟ್ಟಿದೆ.

ಹೈದರಾಲಿ ಮತ್ತು ಟೀಪೂ ರಾಜ್ಯಾಡಳಿತ ಸುಮಾರು ನಾಲ್ಕು ದಶಕಗಳ ಅವಧಿಯದು. ಈ ಪುಟ್ಟ ಅವಧಿಯಲ್ಲೇ ವಿಶ್ವದ ಗಮನಸೆಳೆದ ಅಪ್ಪ–ಮಗನ ಸಾಧನೆ ಅಸಾಧಾರಣವಾದುದು. ಹೈದರಾಲಿಯ ಬಗ್ಗೆ ಸಂಕ್ಷಿಪ್ತ ಚಿತ್ರಣ ನೀಡುವ ಕೃತಿ, ಆಡಳಿತಗಾರನಾಗಿ ಹಾಗೂ ಹೋರಾಟಗಾರನಾಗಿ ಟೀಪೂ ಸಾಧನೆಯನ್ನು ಸಾಕಷ್ಟು ವಿವರವಾಗಿ ವಿಶ್ಲೇಷಿಸಿದೆ. ಹೈದರಾಬಾದಿನ ನಿಜಾಮ ಹಾಗೂ ಮರಾಠರನ್ನು ಒಳಗೊಂಡಂತೆ ಸ್ಥಳೀಯವಾಗಿ ಶಕ್ತಿಕೂಟವೊಂದನ್ನು ರೂಪಿಸಲು ಟೀಪೂ ಪ್ರಯತ್ನಿಸಿದ್ದ. ಆ ಪ್ರಯತ್ನ ಯಶಸ್ವಿಯಾಗದೆ ಹೋದಾಗ, ಫ್ರೆಂಚರ ಸಹಾಯ ಪಡೆಯಲು ಪ್ರಯತ್ನಿಸಿದ. ಅಫ್ಗಾನಿಸ್ತಾನ ಹಾಗೂ ಟರ್ಕಿಗಳೊಂದಿಗೆ ಮೈತ್ರಿ ಸಾಧಿಸಲು ಪ್ರಯತ್ನಿಸಿದ. ಮೈತ್ರಿಯ ಪ್ರಯತ್ನಗಳು ಫಲ ಕೊಡಲಿಲ್ಲವಾದರೂ, ಆ ಪ್ರಯತ್ನಗಳ ಹಿಂದಿನ ಟೀಪೂವಿನ ರಾಜಕೀಯ ಮಹತ್ವಾಕಾಂಕ್ಷೆ ಹಾಗೂ ಮುತ್ಸದ್ದಿತನವನ್ನು ಗುರ್ತಿಸಬೇಕು. ಟೀಪೂವಿನ ರಾಕೆಟ್‌ ತಂತ್ರಜ್ಞಾನ ಆ ಕಾಲಕ್ಕೆ ಬ್ರಿಟಿಷರಿಗೆ ಬಗೆಹರಿಯದ ಒಗಟಾಗಿ ಪರಿಣಮಿಸಿದ್ದುದು ಹೋರಾಟಗಾರನಾಗಿ ಟೀಪೂ ಮಹತ್ವವನ್ನು ಸೂಚಿಸುವಂತಿದೆ.

ಟೀಪೂ ಅವನತಿಯ ಹಿಂದೆ ಬ್ರಿಟಿಷರ ಕುಟಿಲ ರಾಜಕಾರಣದಂತೆ, ಹೈದರಾಬಾದ್‌ ನಿಜಾಮ ಹಾಗೂ ಮರಾಠರ ಸಂಕುಚಿತ ಧೋರಣೆಗಳೂ ಕೆಲಸ ಮಾಡಿರುವುದರ ಬಗ್ಗೆ ಕೃತಿ ಗಮನಸೆಳೆಯುತ್ತದೆ. ಟೀಪೂ ಮುಂದಿಟ್ಟ ವಿವಾಹ ಪ್ರಸ್ತಾಪವನ್ನು ನಿಜಾಮಮೇಲರಿಮೆಯಿಂದ ತಿರಸ್ಕರಿಸಿದ್ದ. ಸೇನಾಮೈತ್ರಿಯ ಸಾಧ್ಯತೆಗಳಿಗೂ ಬೆನ್ನುಹಾಕಿದ್ದ ಆತನಿಗೆ ಸ್ವತಂತ್ರ ವ್ಯಕ್ತಿತ್ವ ಇಲ್ಲದಿದ್ದುದರ ಬಗ್ಗೆ ಕೃತಿ ಗಮನಸೆಳೆಯುತ್ತದೆ. ಒಳಗಿನ ಶತ್ರುಗಳು ತನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಸಿಕ್ಕಿಬಿದ್ದಾಗ ಅವರನ್ನು ಕ್ಷಮಿಸುವ ಔದಾರ್ಯವನ್ನು ಟೀಪೂ ತೋರಿದರೂ, ಕ್ಷಮೆಗೆ ಪಾತ್ರರಾದ ಜನರೇ ತದನಂತರದಲ್ಲಿ ಟೀಪೂ ಪತನಕ್ಕೆ ಕಾರಣವಾಗುವ ಚಾರಿತ್ರಿಕ ವ್ಯಂಗ್ಯವನ್ನು ಲೇಖಕರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಹೈದರಾಲಿ ಮತ್ತು ಟೀಪೂವನ್ನು ಅಪಹರಣಕಾರರಾಗಿ ಚಿತ್ರಿಸಿದವರು, ಅಧಿಕಾರಕ್ಕಾಗಿ ಟೀಪೂಮಾರ್ಗವನ್ನೇ ಅನುಸರಿಸಿಯೂ ತಮ್ಮನ್ನು ಸುಧಾರಕರನ್ನಾಗಿ ಬಿಂಬಿಸಿಕೊಂಡ ಕಥನವೂ ಇಲ್ಲಿದೆ. ಈ ಸಮಯಸಾಧಕ ವ್ಯಕ್ತಿಗಳೇ ಟೀಪೂವಿನ ಮಿತಿಗಳನ್ನು ಉತ್ಪ್ರೇಕ್ಷಿಸಿರುವುದಕ್ಕೆ ಹಲವು ಉದಾಹರಣೆಗಳನ್ನು ನಂಜರಾಜ ಅರಸು ಅವರ ಕೃತಿ ನೀಡಿದೆ.

ಬಹುತ್ವದ ನೆಲೆಯಾಗಿ ಟೀಪೂ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣ ರೂಪುಗೊಂಡಿತ್ತು. ‘ಪ್ರಜಾಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಟೀಪೂವಿನೊಂದಿಗೆ ನೆರೆಯ ಯಾವುದೇ ರಾಜ್ಯವನ್ನಾಗಲೀ ರಾಜನನ್ನಾಗಲೂ ಹೋಲಿಸುವುದು ಸಾಧ್ಯವಿರಲಿಲ್ಲ’ ಎನ್ನುವ ಮೆಕೆಂಜಿ ಮಾತಿನ ಉಲ್ಲೇಖ, ‘ಪಾಶ್ಚಿಮಾತ್ಯ ವಿಧಾನವನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ ಪ್ರಥಮ ಭಾರತೀಯ ಟೀಪೂ’ ಎನ್ನುವ ಡಾಡ್‌ವೆಲ್‌ನ ಮಾತು, ಆಡಳಿತಗಾರನಾಗಿ ಟೀಪೂ ಶ್ರೀರಂಗಪಟ್ಟಣಕ್ಕೆ ತಂದುಕೊಟ್ಟಿದ್ದ ವರ್ಚಸ್ಸಿಗೆ ಕನ್ನಡಿಹಿಡಿಯುವಂತಿವೆ.

ನಂಜರಾಜ ಅರಸರ ಈ ಕೃತಿಯ ಕಥಾನಾಯಕ ಟೀಪೂ ಆದರೂ, ಪ್ರಾಸಂಗಿಕವಾಗಿ ಲೇಖಕರು ಕಟ್ಟಿಕೊಡುವ ಪುಟ್ಟ ಪುಟ್ಟ ವ್ಯಕ್ತಿಚಿತ್ರಗಳು ಸೊಗಸಾಗಿವೆ ಹಾಗೂ ಇತಿಹಾಸವನ್ನು ಬೇರೆ ಬೇರೆ ಆಯಾಮಗಳಿಂದ ನೋಡಲು ಅವಕಾಶ ಕಲ್ಪಿಸುವಂತಿವೆ. ವರ್ಣರಂಜಿತ ವ್ಯಕ್ತಿತ್ವದ ಹೈದರಾಬಾದ್‌ ನಿಜಾಮ, ರಾಜಮಾತೆ ಲಕ್ಷ್ಮಮ್ಮಣ್ಣಿಯ ಮುತ್ಸದ್ದಿತನ, ನೆಪೋಲಿಯನ್ ಬೊನಾಪಾರ್ಟೆ, ಮುಂತಾದವರ ವಿವರಗಳು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಸಾಕಷ್ಟು ಛಾಯಾಚಿತ್ರಗಳು ಮತ್ತು ಕಲಾಕೃತಿಗಳ ಬಳಕೆಯ ಮೂಲಕ ಪುಸ್ತಕದ ಚೆಲುವನ್ನು ಹೆಚ್ಚಿಸುವ ಪ್ರಯತ್ನ ಗಮನ ಸೆಳೆಯುವಂತಿದೆ.

ಕೃತಿ: ಟೀಪೂ ಮಾನ್ಯತೆ ಸಿಗದ ಸುಲ್ತಾನ್ ಅಂದು–ಇಂದು

ಲೇ: ಪ್ರೊ. ಪಿ.ವಿ. ನಂಜರಾಜ ಅರಸು

ಪ್ರ: ಅಭಿರುಚಿ ಪ್ರಕಾಶನ, ಮೈಸೂರು

ಸಂ: 9980560013.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT