ಭಾನುವಾರ, ಮಾರ್ಚ್ 29, 2020
19 °C

ಕನ್ನಡದಲ್ಲಿ ಪ್ರಾಕೃತ ಶಬ್ದ ಸಾಗರ

ಡಾ.ಎಚ್.ಶಶಿಕಲಾ Updated:

ಅಕ್ಷರ ಗಾತ್ರ : | |

Prajavani

ಕ ನ್ನಡದ ಪ್ರಾಚೀನ ಕಾವ್ಯಗಳಾದ ವಡ್ಡಾರಾಧನೆ, ಪಂಪಭಾರತ, ಚಾವುಂಡರಾಯ ಪುರಾಣ ಮುಂತಾದ ಕೃತಿಗಳನ್ನು ಓದುವಾಗ ಅಲ್ಲಲ್ಲಿ ಪದಗಳ ಬಳಕೆ, ಅರ್ಥ ತಿಳಿಯದ ಹಲವು ಅಡೆತಡೆಗಳು ಬರುತ್ತವೆ; ಕೆಲವೊಂದು ಶಬ್ದಗಳು ಅವು ಕನ್ನಡದವೇ ಅಥವಾ ಅನ್ಯಭಾಷೆಯವೇ ಎಂಬುದು ಗೊತ್ತಾಗದೆ ಕಾವ್ಯವನ್ನು ಅರಿಯಲು ತೊಡಕನ್ನು ತಂದೊಡ್ಡುತ್ತವೆ. ಇಂತಹ ಸಂದರ್ಭದಲ್ಲಿ ಶಬ್ದಕೋಶಗಳಿಗೆ ತಡಕಾಡುವುದು ಸಹಜವೇ ಆಗಿದೆ. ಈ ಹುಡುಕಾಟದಲ್ಲಿ ದೊರೆಯದೇ ಹೋಗುತ್ತಿದ್ದ ನಿಘಂಟೆಂದರೆ ಪ್ರಾಕೃತ ಭಾಷೆಯ ಕನ್ನಡದ ನಿಘಂಟು. ಡಾ.ಆರ್.ಲಕ್ಷ್ಮೀನಾರಾಯಣ ಅವರ ಪರಿಶ್ರಮದಿಂದ ಆ ಕೊರತೆ ಈಗ ನೀಗಿದೆ. ಕುವೆಂಪು ಭಾಷಾಭಾರತಿಯು ಪ್ರಾಕೃತದಲ್ಲಿದ್ದ ‘ಪಾಇಅ- ಸದ್ದ-ಮಹಣ್ಣವೋ’ ನಿಘಂಟನ್ನು ಈಗ ಕನ್ನಡದಲ್ಲಿ ‘ಪ್ರಾಕೃತ-ಕನ್ನಡ ಬೃಹತ್ ನಿಘಂಟಾ’ಗಿ ಹೊರತಂದಿದೆ.

ಕನ್ನಡ ಭಾಷೆಯ ಚರಿತ್ರೆಯನ್ನು ಕಟ್ಟಲು ಹಲವು ಸಾಧನ ಸಾಮಗ್ರಿಗಳ ಅಗತ್ಯವಿದೆ. ಅದರಲ್ಲಿ ವ್ಯಾಕರಣ, ಭಾಷಾವಿಜ್ಞಾನ, ಗ್ರಂಥ ಸಂಪಾದನೆ, ಛಂದಸ್ಸು – ಇಂತಹ ಹತ್ತು ಹಲವು ಸಾಧನಗಳಲ್ಲಿ ನಿಘಂಟೂ ಒಂದು. ಕಾಲಾನುಕಾಲಕ್ಕೆ ಕನ್ನಡವು ಅನ್ಯ ಭಾಷೆಯಿಂದಲೂ ಸಾಕಷ್ಟು ಪದಗಳನ್ನು ಸೇರಿಸಿಕೊಂಡು ಸಾಗಿಬಂದಿದೆ. ಅದರಲ್ಲಿ ಸಂಸ್ಕೃತ, ಪ್ರಾಕೃತ, ಉರ್ದು, ಪರ್ಷಿಯನ್, ಇಂಗ್ಲಿಷ್ ಮೊದಲಾದವು ಇವೆ. ಇವುಗಳಲ್ಲಿ ಮುಖ್ಯವಾಗಿ ಕನ್ನಡವು ಸಂಸ್ಕೃತದಿಂದ ಸಾಕಷ್ಟು ಶಬ್ದ, ವ್ಯಾಕರಣ, ಛಂದಸ್ಸು ಇವುಗಳನ್ನು ತನ್ನದಾಗಿಸಿಕೊಂಡಿದೆ. ಕನ್ನಡಕ್ಕೆ ಸಂಸ್ಕೃತವು ಒದಗಿ ಬಂದಿರುವುದನ್ನು ಕನ್ನಡ ಸಾಕಷ್ಟು ಗುರುತಿಸಿಕೊಂಡಿದೆ. ಆದರೆ, ಒಂದು ತಿಳಿವಳಿಕೆಯಂತೆ, ಸಂಸ್ಕೃತಕ್ಕಿಂತಲೂ ಪ್ರಾಚೀನವಾದ ಪ್ರಾಕೃತವು ಕನ್ನಡದ ಮೇಲೆ ಬೀರಿರುವ ಪ್ರಭಾವ ಅಪಾರವಾಗಿದೆ.

ಹಾಗೆ ನೋಡಿದರೆ, ದ್ರಾವಿಡವು ಬೇರೆ ಬೇರೆ ಭಾಷೆಗಳಾಗಿ ಒಡೆದುಕೊಳ್ಳುವಲ್ಲಿ ಅನ್ಯ ಭಾಷಾ ಸಂಪರ್ಕವೂ ಒಂದು ಪ್ರಮುಖ ಕಾರಣ. ಇದರಲ್ಲಿ ಪ್ರಾಕೃತದ ಪ್ರಭೇದಗಳ ಸಂಬಂಧ ಕನ್ನಡಕ್ಕೆ ಎಷ್ಟು ಇತ್ತು ಎಂಬುದನ್ನು ಕಂಡುಕೊಳ್ಳುವಲ್ಲಿ ಪ್ರಾಕೃತದ ಅಧ್ಯಯನ ಮಹತ್ವದ್ದು. ತದ್ಭವವೆಂದು ಹೇಳುತ್ತಿರುವ ಎಷ್ಟೋ ಪದಗಳನ್ನು ಕನ್ನಡವು ಪ್ರಾಕೃತದಿಂದ ನೇರವಾಗಿ ಪಡೆದಿದೆ. ಉದಾಹರಣೆಗೆ ಕನ್ನಡದ ‘ಅಜ್ಜ’ ಎಂಬುದು ಬಂದಿರುವುದು ಸಂಸ್ಕೃತದ ‘ಆರ್ಯ’ದಿಂದಲೋ ಅಥವಾ ‘ಅದ್ಯ’ದಿಂದಲೋ ಎಂಬುದನ್ನು ಗುರ್ತಿಸುವುದು ಒಂದಾದರೆ, ಇದು ಕನ್ನಡವೋ ಅಥವಾ ಪ್ರಾಕೃತವೋ ಎಂಬ ಸಂಶಯ ಇನ್ನೊಂದೆಡೆ. ಸಂಸ್ಕೃತದ ಆರ್ಯ/ಅದ್ಯ ಕನ್ನಡದಲ್ಲಿ ‘ಅಜ್ಜ’ ಎಂದಾಗಿದೆಯೋ ಅಥವಾ ಪ್ರಾಕೃತದ ‘ಅಜ್ಜ’ ಪದವನ್ನು ಕನ್ನಡ ಬಳಸಿಕೊಳ್ಳುತ್ತಿದೆಯೋ ಎಂಬ ಪ್ರಶ್ನೆ ಹುಟ್ಟುತ್ತದೆ. ಇಂತಹ ಸಾವಿರಾರು ಪದಗಳ ಬಗ್ಗೆ ಹುಟ್ಟುವ ಸಂಶಯಕ್ಕೆ ಈಗ ಒಂದು ದಾರಿ: ಕುವೆಂಪು ಭಾಷಾ ಭಾರತಿ ಪ್ರಕಟಿಸಿರುವ ಪ್ರಾಕೃತ-ಕನ್ನಡ ಬೃಹತ್ ನಿಘಂಟು.

‘ಪಾಇಅ- ಸದ್ದ-ಮಹಣ್ಣವೋ’ ಹರಗೋವಿಂದದಾಸ್ ತ್ರಿಕಮ ಚಂದ್ ಸೇಠ್ ಅವರು 1928ರಲ್ಲಿ ಪ್ರಕಟ ಮಾಡಿದ ನಿಘಂಟು. ಇದರಲ್ಲಿ ಪ್ರಾಕೃತ ಭಾಷೆಯಲ್ಲಿರುವ ಸುಮಾರು ಅರವತ್ತು ಸಾವಿರ ಪದಗಳಿಗೆ ಸಂಸ್ಕೃತ ಮತ್ತು ಹಿಂದಿಯಲ್ಲಿ ಅರ್ಥ ನೀಡಲಾಗಿದೆ. ಪ್ರಾಕೃತ ಪದಗಳ ವ್ಯಾಕರಣದ ಲಕ್ಷಣ ಮತ್ತು ಅವುಗಳ ವೈಶಿಷ್ಟ್ಯವನ್ನು ಗುರುತಿಸುವುದರ ಜೊತೆಗೆ, ಈ ಪದಗಳು ಪ್ರಯೋಗಗೊಂಡಿರುವ ಕೃತಿಯ ಹೆಸರು ಹಾಗೂ ಉಲ್ಲೇಖಗೊಂಡಿರುವ ಸಾಲಿನ ಸಮೇತ ನೀಡಲಾಗಿದೆ.

ಲಕ್ಷ್ಮೀನಾರಾಯಣ ಅವರು ದೇವನಾಗರಿ ಲಿಪಿಯಲ್ಲಿದ್ದ ಪ್ರಾಕೃತದ ಮತ್ತು ಅದರ ಸಂಸ್ಕೃತ ರೂಪದ ನಲವತ್ತು ಸಾವಿರ ಮೂಲಪದ ಮತ್ತು ಇಪ್ಪತ್ತು ಸಾವಿರ ನಿಷ್ಪನ್ನ ಪದಗಳನ್ನು (ಒಟ್ಟು ಅರವತ್ತು ಸಾವಿರ ಪದಗಳು) ಕನ್ನಡಕ್ಕೆ ಲಿಪ್ಯಂತರಿಸಿರುವುದರ ಜೊತೆಗೆ ಕನ್ನಡದಲ್ಲಿ ಅರ್ಥವನ್ನೂ ನೀಡಿದ್ದಾರೆ. ‘ಅ’ ಕಾರಾದಿಯಾಗಿರುವ ಪದಗಳ ನಮೂದು ಪದದ ಲಿಂಗ ಯಾವುದು ಎಂಬುದನ್ನು ತಿಳಿಸುವುದರ ಜೊತೆಗೆ, ಪದದ ವ್ಯಾಕರಣ ವಿಶೇಷವನ್ನು ಹೇಳುತ್ತದೆ. ಯಾವ ಕೃತಿಯಲ್ಲಿ ಈ ಪದದ ಪ್ರಯೋಗವಿದೆ ಎಂಬುದರೊಡನೆ, ಕೆಲವೊಂದು ನಮೂದುಗಳಲ್ಲಿ ಪದದ ಪ್ರಯೋಗವಿರುವ ಕೃತಿಯ ಉಲ್ಲೇಖದ ಜೊತೆಯಲ್ಲಿ, ಆ ವಾಕ್ಯದ ಸಾಲುಗಳನ್ನೂ ತಿಳಿಸುತ್ತದೆ.

ಪ್ರಾಕೃತದ ವಿವಿಧ ಪ್ರಭೇದಗಳಲ್ಲಿ, ನಿರ್ದಿಷ್ಟವಾದ ಪದವು ಯಾವ ಪ್ರಭೇದಕ್ಕೆ ಸೇರಿದೆ ಎಂಬುದರ ಬಗ್ಗೆ ನಮೂದು ಇದೆ. ಪ್ರಾಕೃತ ಪದ, ಪದದ ಸ್ವರೂಪ ಮತ್ತು ಇದರ ಸಂಸ್ಕೃತ ಮೂಲವನ್ನು ದಪ್ಪ ಅಕ್ಷರದಲ್ಲಿ ನೀಡಲಾಗಿದೆ. ಇದರಿಂದ ನಿಘಂಟನ್ನು ಪರಾಮರ್ಶನ ಮಾಡಲು ತೊಡಗಿದೊಡನೆಯೇ ಗಮನವು ಸಹಜವಾಗಿ ಪದದ ಸ್ವರೂಪವನ್ನು ಗಮನಿಸಲು ಸಾಧ್ಯವಾಗುತ್ತದೆ.
ಇದರಲ್ಲಿ ಲಕ್ಷ್ಮೀನಾರಾಯಣ ಅವರು ಕನ್ನಡಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಕನ್ನಡದಲ್ಲಿ ಕರ್ಮಣೀ ಪ್ರಯೋಗ ಹೆಚ್ಚು ಇಲ್ಲದಿರುವುದರಿಂದ, ಕನ್ನಡದಲ್ಲಿ ಅರ್ಥ ನೀಡುವಾಗ ಅದಕ್ಕೆ ತಕ್ಕಂತೆ ಬಹಳಷ್ಟು ಕಡೆ ಮಾರ್ಪಾಡು ಮಾಡಿದ್ದಾರೆ. ಮಾಡಲ್ಪಟ್ಟ, ನೋಡಲ್ಪಟ್ಟ ಎಂಬುದರ ಸ್ಥಳದಲ್ಲಿ ಮಾಡಲಾದ, ನೋಡಲಾದ ಎಂಬ ರೂಪಗಳನ್ನು ನೀಡಿದ್ದಾರೆ. ವರ್ಗಪಂಚಮಾಕ್ಷರಗಳ ಬರಹದ ಬಳಕೆ ಕನ್ನಡದಲ್ಲಿ ಇಲ್ಲದ ಕಾರಣ (ಖಣ್ಡ, ಸ್ಕನ್ದ- ಇಂತಹ ಪದಗಳು) ಸಂಸ್ಕೃತ ಪದಗಳಲ್ಲಿ ಅನುನಾಸಿಕಗಳ ಸ್ಥಳದಲ್ಲಿ ಬಿಂದುವನ್ನು (ಖಂಡ, ಸ್ಕಂದ) ಬಳಸಿದ್ದಾರೆ.

ಪ್ರಾಕೃತದಲ್ಲಿರುವ ಹ್ರಸ್ವ ‘ಎ’ಕಾರ ಮತ್ತು ‘ಒ’ಕಾರದ ಉಚ್ಚಾರಣೆಗಳನ್ನು ಅವು ಬರುವ ಸಂದರ್ಭಗಳನ್ನು ಸರಿಸಿ ಕನ್ನಡ ರೂಪಗಳಲ್ಲಿ ಅಳವಡಿಸಲಾಗಿದೆ. ಮೂಲ ನಿಘಂಟಿನಲ್ಲಿ ಉಲ್ಲೇಖಿಸಿರುವ ಪದ ಪ್ರಯೋಗಗಳ ಉಲ್ಲೇಖವಿರುವ ಸುಮಾರು 250ಕ್ಕೂ ಹೆಚ್ಚಿನ ಆಧಾರಗ್ರಂಥಗಳ ಉಲ್ಲೇಖವನ್ನು ಅವುಗಳು ಈಗ ದೊರಕುವುದಿಲ್ಲ ಎಂಬ ಕಾರಣಕ್ಕೆ ಕನ್ನಡ ನಿಘಂಟಿನಲ್ಲಿ ಕೆಲವೆಡೆ ಬಿಡಲಾಗಿದೆ. ಪ್ರಾಕೃತ ಕೃದಂತ ರೂಪಗಳು ಎಲ್ಲಾ ಕ್ರಿಯಾಪದಗಳಿಗೂ ಒಂದೇ ರೀತಿಯಾದ್ದರಿಂದ ಗಾತ್ರ ಹೆಚ್ಚಾಗುವ ಕಾರಣ ಎಲ್ಲಾ ಕ್ರಿಯಾಪದಗಳಿಗೂ ಈ ರೂಪಗಳನ್ನು ನೀಡಿಲ್ಲ.

ಕನ್ನಡ ಭಾಷೆಯಲ್ಲಿ ನಡೆದಿರುವ ಭಾಷಿಕ ಬದಲಾವಣೆಗಳಿಗೆ ಕಾರಣವನ್ನು ಹುಡುಕಲು ಇಂತಹ ನಿಘಂಟುಗಳು ಒದಗಿಸುವ ಮಾಹಿತಿಗಳು ಅತ್ಯಮೂಲ್ಯ. ಪೂರ್ವದ ಹಳೆಗನ್ನಡವನ್ನು ಕುರಿತು ಮಾತನಾಡುವಾಗ ‘ವ’ಕಾರವು ಕನ್ನಡದಲ್ಲಿ ‘ಬ’ಕಾರವಾಗಿ ಬದಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಪ್ರಾಕೃತದಲ್ಲಿಯೂ ಇಂತಹ ಧ್ವನಿ ವ್ಯತ್ಯಾಸವಿದೆ. ಇದು ಕನ್ನಡದ ಲಕ್ಷಣವೋ ಅಥವಾ ಪ್ರಾಕೃತದ ಪ್ರಭಾವದಿಂದ ಕನ್ನಡವು ರೂಢಿಸಿಕೊಂಡಿದೆಯೋ ಎಂಬುದರ ಅಧ್ಯಯನಕ್ಕೆ ಇಂತಹ ನಿಘಂಟುಗಳು ಬೇಕು. ಒಂದು ವಿದ್ವತ್ ಪರಂಪರೆಯು ವರ್ತಮಾನದ ಭಾಷೆಯ ಮೂಲಚೂಲಗಳನ್ನು ಹುಡುಕಲು, ಅಧಿಕೃತಗೊಳಿಸಲು ಇಂತಹ ಸಾಧನಗಳು ನೆರವು ನೀಡುತ್ತವೆ.

ಕನ್ನಡದಲ್ಲಿರುವ ಜೈನಪುರಾಣ ಮತ್ತು ಜೈನ ಶಾಸ್ತ್ರ ಸಂಬಂಧಿ ಪುಸ್ತಕಗಳನ್ನು ಓದಿಕೊಳ್ಳಲು ಕನ್ನಡಕ್ಕೆ ಇಂಥ ಪ್ರಾಕೃತ ನಿಘಂಟಿನ ಅವಶ್ಯಕತೆ ಇತ್ತು. ಕನ್ನಡದಲ್ಲಿ ಸೇರಿ ಹೋಗಿರುವ ಪ್ರಾಕೃತ ಪದಗಳ ಸ್ವರೂಪ ಹಾಗೂ ಅವು ಕನ್ನಡದಲ್ಲಿ ಬಳಕೆಯಾಗುತ್ತಿರುವ ಬಗೆಯನ್ನು ಅರಿಯಲು ಈ ನಿಘಂಟು ಉಪಯುಕ್ತವಾಗಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಕನ್ನಡದ ಮೇಲೆ ಉಂಟಾಗಿರುವ ಅನ್ಯಭಾಷೆಯ ಪ್ರಭಾವದಲ್ಲಿ ಪ್ರಾಕೃತದ ಪ್ರಭಾವ ಎಲ್ಲಕ್ಕಿಂತಲೂ ಹೆಚ್ಚು. ಕನ್ನಡದ ಧ್ವನಿವ್ಯತ್ಯಾಸದ ಹಿಂದಿನ ಕಾರಣವನ್ನು ಗುರುತಿಸುವಲ್ಲಿ, ಹಲವು ತದ್ಧಿತ ಪ್ರತ್ಯಯಗಳ ಮೂಲವನ್ನು ತಿಳಿಯುವಲ್ಲಿ ನಾವು ಪ್ರಾಕೃತದ ಮೊರೆ ಹೋಗಬೇಕಾಗಿದೆ.

ಕನ್ನಡದ ನೆಲದಲ್ಲಿ ದೊರಕಿರುವ ಪ್ರಾಕೃತದ ಶಾಸನಗಳು ಕನ್ನಡ ಮತ್ತು ಪ್ರಾಕೃತದ ಸಂಬಂಧವನ್ನು ಕಾಲದ ದೃಷ್ಟಿಯಿಂದ ಬಹಳ ಪ್ರಾಚೀನತೆಗೆ ಕೊಂಡೊಯ್ಯುತ್ತವೆ. ಕನ್ನಡ ಭಾಷೆಯ ಪ್ರಾಚೀನತೆಯನ್ನು ಸಂಶೋಧನೆಯಿಂದ ಹೆಕ್ಕಿ ತೆಗೆಯಬೇಕಾದ ನಿಟ್ಟಿನಲ್ಲಿ ಕನ್ನಡ ಮತ್ತು ಪ್ರಾಕೃತದ ಸಂಬಂಧ ಬಹಳ ಮಹತ್ವವಾದದ್ದು. ಇಂತಹ ಅಧ್ಯಯನಕ್ಕೆ ಒಂದು ಉತ್ತಮ ಪೂರಕ ಸಾಮಗ್ರಿ ಈ ನಿಘಂಟು.

ಸತತವಾದ ಅಪಾರ ಶ್ರಮ ಮತ್ತು ತಾಳ್ಮೆಯಿಂದ, ಒಂದು ಸಮಿತಿ ಮಾಡಬಹುದಾದ ಕಾರ್ಯವನ್ನು ಒಬ್ಬ ವ್ಯಕ್ತಿಯಾಗಿ ಕೈಗೊಂಡು ಪೂರೈಸಿರುವ ಲಕ್ಷ್ಮೀನಾರಾಯಣ ಅವರು, ಈ ನಿಘಂಟಿನ ಮೂಲಕ ಕನ್ನಡವನ್ನು ಕಟ್ಟುವ ಕೆಲಸದಲ್ಲಿ ತಮ್ಮ ದೇಣಿಗೆ ನೀಡಿರುವುದು ಮಹತ್ವದ್ದು. ಕನ್ನಡಿಗರೆಲ್ಲರ ಪರವಾಗಿ ಹೇಳಬಹುದಾದ ಮಾತೆಂದರೆ: ಎಲ್ಲ ರೀತಿಯಿಂದಲೂ ಅವರು ಅಭಿನಂದನಾರ್ಹರು!
ಇಂತಹ ಮಹತ್ವದ ಗ್ರಂಥವು ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲೇ ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಹರ್ಷದ ವಿಚಾರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು