ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಕೊಯಲಿಷನ್ ಸೈನ್ಸ್!

Last Updated 3 ಮಾರ್ಚ್ 2023, 22:45 IST
ಅಕ್ಷರ ಗಾತ್ರ

‘ನಾನು ಏನೂ ಮಾಡ್ದೆ ಲೈಫ್ ವೇಸ್ಟ್ ಆಗೋಯ್ತು ಅನುಸ್ತಿದೆ’ ಎಂದು ಕೂದಲು ಕಿತ್ತುಕೊಂಡ ಪರ್ಮೇಶಿ.

‘ಅದೇನು, ಮೂರು ಕತ್ತೆ ವಯಸ್ಸಾದ್ಮೇಲೆ ಈಗ ಜ್ಞಾನೋದಯ ಆಗ್ತಿದೆ ನಿಂಗೆ?’ ಕೆಣಕಿದ ಸೀನ.

‘ಏನಿಲ್ಲ, ಮೊನ್ನೆ ವಿಜ್ಞಾನ ದಿನ ಆಚರಿಸಿದ್ರಲ್ಲ, ನನ್ ಮಗಳು ಅದೇನೇನೋ ವಿಜ್ಞಾನದ ಮಾಡೆಲ್ಲು, ಚಾರ್ಟು ಅಂತೆಲ್ಲಾ ಮಾಡ್ಕತಿದ್ಲು. ಒಂದಿಷ್ಟು ಹೆಲ್ಪ್ ಮಾಡು ಅಂದ್ಲು. ‘ಮಣ್ಣಂಗಟ್ಟೆ, ನಿಮ್ಮಪ್ಪಂಗೇನ್ ಬರುತ್ತೆ?’ ಅಂತ ಮೂತಿ ತಿವಿದ್ಲು ಹೆಂಡ್ತಿ. ತುಂಬಾ ಬೇಜಾರಾಯ್ತು ಕಣ್ರೋ’.

‘ನೀನು ಸಿನಿಮಾ, ಜಾಹೀರಾತು ಮಾಡೆಲ್‍ಗಳನ್ನ ಕಣ್‌ಕಣ್ ಬಿಟ್ಕಂಡು ನೋಡ್ತಾ ಕೂತಿದ್ದೆ. ಈಗ ಏನಾದ್ರೂ ಕಂಡುಹಿಡಿದು ನೊಬೆಲ್ ತಗೊಳೋ ಆಸೆ ಬಂದ್‌ಬಿಡ್ತಾ?’

‘ನೊಬೆಲ್ ಅಲ್ದಿದ್ರೂ ಎಡಬಿಡಂಗಿ ಸಂಶೋಧನೆ ಮಾಡೋರಿಗೆ ಇಗ್ನೊಬೆಲ್ ಪ್ರಶಸ್ತಿ ಕೊಡ್ತಾರೆ. ನಾವು ಇದ್ರಲ್ಲಿ ಎತ್ತಿದ ಕೈ. ಒಂದು ದೊಡ್ಡ ಗಾತ್ರದ ಬಳೆ ಸುತ್ತಿಸೋಕೆ ಕನಿಷ್ಠ ಏಳು ಜನ ಬೇಕು ಅಂತ ಸಂಶೋಧನೆ ಮಾಡಿ ಅದ್ಯಾವುದೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಗ್ನೊಬೆಲ್ ಗಿಟ್ಟಿಸಿದ್ರು’ ಎಂದ ಭದ್ರ.

‘ಬ್ರಿಟನ್ನಿನ ಕೋಕಕೋಲಾ ಕಂಪನಿಯು ನಲ್ಲಿಯಲ್ಲೂ ಮಿನರಲ್ ವಾಟರ್ ಬರುತ್ತದೆ ಅಂತ ತೋರಿಸಿ ಇಗ್ನೊಬೆಲ್ ಗಿಟ್ಟಿಸಿತ್ತು’.

‘ನಮ್ಮಲ್ಲೂ ತುಕ್ಕು ಹಿಡಿದ ನಲ್ಲೀಲಿ ಬರೋದು ಮಿನರಲ್ ವಾಟರ್‍ರೇ ಅಲ್ವಾ? ಅದಕ್ಕಿಂತ ಹೆಚ್ಚಾಗಿ ನಮ್ ರಾಜಕೀಯದೋರು ಗುಡಾಣದ ಹೊಟ್ಟೆ ಇಟ್ಕೊಂಡು ಡ್ರೋನ್‌ಗಿಂತ ಜೋರಾಗಿ ಪಕ್ಷದಿಂದ ಪಕ್ಷಕ್ಕೆ ಹಾರ್ತಾರೆ. ಒಂದೇ ಸಾರಿಗೆ 13-15 ಜನಾನ್ನ ಆಪರೇಷನ್ ಮಾಡ್ತಾರೆ. ಆವಾಗವಾಗ ಮಂತ್ರಿಮಂಡಲದ ಸರ್ಜರಿ ನಡೀತಿರುತ್ತೆ. ಇವೆಲ್ಲಾ ಏನ್ ಕಮ್ಮಿ ಸೈನ್ಸಾ?’

‘ಹೌದು, ಇಂಥ ಆಪರೇಷನ್ ಎಲ್ಲಾ ಮಾಡ್ತಾವ್ರೆ. ವಿಜ್ಞಾನ ಸಮ್ಮೇಳನ ಸೈನ್ಸ್ ಕಾಂಗ್ರೆಸ್ಸೇ ಯಾಕ್ ಆಗ್ಬೇಕು? ಇದು ರಾಜಕೀಯ ಅಲ್ವಾ? ನಾವು ಮುಂದಿನ ಸಾರಿಯಿಂದ ಸೈನ್ಸ್ ಜೆಡಿಎಸ್, ಸೈನ್ಸ್ ಕಮ್ಯುನಿಸ್ಟ್, ಸೈನ್ಸ್ ಬಿಜೆಪಿ, ಕನಿಷ್ಠ ಸೈನ್ಸ್ ಕೊಯಲಿಷನ್ ಆದ್ರೂ ಮಾಡಿ ಅಂತ ಪ್ರತಿಭಟನೆ ಮಾಡ್ಬೇಕು’ ಪರ್ಮೇಶಿ ಐಡಿಯಾ ಕೇಳಿ ಎಲ್ಲಾ ಥಟ್ಟಂತ ಮೂರ್ಛೆ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT