ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಸಂತೆ ರೈತರು, ಗ್ರಾಹಕರ ಬೆಸುಗೆ

Last Updated 9 ಏಪ್ರಿಲ್ 2019, 19:47 IST
ಅಕ್ಷರ ಗಾತ್ರ

ನಾವು ಸೇವಿಸುವ ಆಹಾರ ಸಂಪೂರ್ಣ ಆರೋಗ್ಯವಾಗಿಲ್ಲ ಎನ್ನುವುದು ಗುಟ್ಟಿನ ವಿಷಯವೇನಲ್ಲ. ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳು, ದವಸ ಧಾನ್ಯಗಳು, ಮತ್ತಿತರ ನಿತ್ಯ ಬಳಕೆಯ ಆಹಾರ ವಸ್ತುಗಳನ್ನು ಎಲ್ಲಿ ಬೆಳೆಯಲಾಗುತ್ತದೆ? ಹೇಗೆ ಬೆಳೆಯಲಾಗುತ್ತದೆ? ಅವಕ್ಕೆ ಉಣಿಸಿದ ಗೊಬ್ಬರವೆಷ್ಟು? ಸಿಂಪಡಿಸಿದ ಔಷಧಿ ಎಂತಹುದು? ಇವೆಲ್ಲ ಗ್ರಾಹಕರಿಗೆ ಅರಿವಿರುವುದಿಲ್ಲ.

ವಸ್ತುಸ್ಥಿತಿ ಹೀಗಿರುವಾಗ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೊನಿಯ ದೇಸಿ ಅಂಗಡಿಯ ಮುಂಭಾಗದಲ್ಲಿ ವಾರಕ್ಕೊಮ್ಮೆ ದೇಸಿ ಸಂತೆಯನ್ನು ಏರ್ಪಡಿಸುವುದರ ಮೂಲಕ ಕೊಳ್ಳುವವರಲ್ಲಿ ಆಹಾರ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನ ನಡೆಯುತ್ತಿದೆ.

ನಾವು ತಿನ್ನುವ ಆಹಾರ ಹೇಗಿರಬೇಕು? ಎನ್ನುವ ಕಲ್ಪನೆಯನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಧಾರವಾಡದ ಡಾ.ಪ್ರಕಾಶ್ ಭಟ್ ಅವರು ‘ದೇಸಿ ಸಂತೆ’ ಆರಂಭಿಸಿದ್ದಾರೆ. ಇಲ್ಲಿ ಗ್ರಾಹಕರಿಗೆ ಬೆಳೆ ಬೆಳೆಯುವ ರೈತನ ಬಗ್ಗೆ ಪರಿಚಯ, ಆತನ ಕೃಷಿಯ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತದೆ. ತಾನು ಖರೀದಿಸಿದ ತರಕಾರಿ ಹೇಗೆ ಬೆಳೆದಿದೆ ಎನ್ನುವ ಮಾಹಿತಿ ಪಡೆದುಕೊಳ್ಳುವ ಭಾಗ್ಯ ಗ್ರಾಹಕನ ಪಾಲಿಗೆ ದೇಸಿ ಸಂತೆ ಒದಗಿಸಿಕೊಡುತ್ತಿದೆ.

ಗ್ರಾಹಕ ಸ್ನೇಹಿಯಾದ ದೇಸಿ ಸಂತೆಯಲ್ಲಿ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ವಿವಿಧ ಬಗೆಯ ತರಕಾರಿಗಳು, ಮಲೆನಾಡಿನ ಬಾಳೆಕಾಯಿ, ಎಳೆ ಹಲಸು, ಕಾಳುಮೆಣಸು, ಜೊಯಿಡಾದ ಗೆಣಸು, ಬೇರು ಹಲಸು, ವಿಜಯಪುರದ ಜೋಳ, ಕುಮಟಾದ ಸಿಹಿ ಈರುಳ್ಳಿ, ಮಾವಿನ ಹಣ್ಣಿನ ಸೀಸನ್‌ನಲ್ಲಿ ಅಂಕೋಲಾದ ಕರಿ ಈಶಾಡ ಸೇರಿದಂತೆ ಹತ್ತು ಹಲವು ಮಾವಿನ ಹಣ್ಣುಗಳು, ಅಕ್ಕಿಯಲ್ಲಿಯೇ ದೇಸಿ ತಳಿಯ 30ಕ್ಕೂ ಹೆಚ್ಚು ಬಗೆಯ ಅಕ್ಕಿಗಳು, ಮಸಾಲೆ ಪದಾರ್ಥಗಳು, ದೇಸಿ ಬಟ್ಟೆಗಳು ಕರಕುಶಲ ವಸ್ತುಗಳು ಹೀಗೆ ಹಲವಾರು ವಸ್ತುಗಳು ಸಂತೆಯಲ್ಲಿ ಖರೀದಿಗೆ ಲಭ್ಯವಿರುತ್ತವೆ. ವಾರಕ್ಕೊಂದು ಪೌಷ್ಟಿಕಯುಕ್ತ ತಿನಿಸು ತಯಾರಿಕಾ ಪ್ರಾತ್ಯಕ್ಷಿಕೆ ಸಂತೆಯ ವಿಶೇಷಗಳಲ್ಲೊಂದು. ಹುರಕ್ಕಿ ಹೋಳಿಗೆ, ಸಿರಿಧಾನ್ಯ ಅಡುಗೆ ತಯಾರಿ, ಔಷಧೀಯ ಸಸ್ಯಗಳಿಂದ ಅಡುಗೆ ತಯಾರಿ, ಗಡ್ಡೆಗೆಣಸುಗಳಿಂದ ತಯಾರಿಸಬಹುದಾದ ರುಚಿಕರ ಅಡುಗೆಗಳು ಹೀಗೆ ಹಲವು ಆರೋಗ್ಯಪೂರ್ಣ ಆಹಾರ ತಯಾರಿಕಾ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತಿದೆ.

ಗ್ರಾಹಕರ ಮನಸ್ಸು ಮುಟ್ಟಿದೆ
ಕೆಲವೇ ತಿಂಗಳ ಹಿಂದೆ ಆರಂಭಿಸಿದ ದೇಸಿ ಸಂತೆ ಗ್ರಾಹಕರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದೆ. ಧಾರವಾಡದ ಮಾಳಮಡ್ಡಿಯ ಗುರುರಾಜ್ ದೇಶಪಾಂಡೆ ದೇಸಿ ಸಂತೆಯ ಕಾಯಂ ಗ್ರಾಹಕರು. ಇವರು ಪ್ರತಿ ವಾರ ದೇಸಿ ಉತ್ಪನ್ನಗಳನ್ನು ಖರೀದಿಸಿ ಸಂತೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಸಪ್ತಾಪುರದ ಶ್ರೀಕಾಂತ್ ಹಣಮಂತಗುಣ ಅವರು ಇದೇ ಮೊದಲ ಬಾರಿ ಸಂತೆಗೆ ಬಂದಿದ್ದರು. ಸಂತೆಯ ವಿಶೇಷಗಳ ಕುರಿತ ಮಾಹಿತಿ ಕಿವಿಗೆ ಬಿದ್ದಾಕ್ಷಣ ಖರೀದಿಗೆಂದು ಬಂದಿದ್ದರು.

ಸಂತೆಯಲ್ಲಿ ಲಭ್ಯವಿರುವ ತರಕಾರಿ, ಸಿರಿಧಾನ್ಯ, ವಿವಿಧ ಧಾನ್ಯಗಳ ಎಣ್ಣೆಗಳು, ಕರಿ ಕಡಲೆ, ಬಿಳಿ ಕಡಲೆ, ಹಸಿರು ಕಡಲೆ, ಬಿಳಿ ಹಾಗೂ ಕೆಂಪು ಅಲಸಂದೆ, ಹುರುಳಿ, ಚೆನ್ನಂಗಿ, ಹೆಸರು ಬೇಳೆ, ಉದ್ದಿನ ಬೇಳೆ, ಶೇಂಗಾ, ಸಾಸಿವೆ, ಜೀರಿಗೆ, ಬೆಲ್ಲ, ಅಕ್ಕಿ ಮುಂತಾದ ಆಹಾರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಇವರಿಗೆ ಖುಷಿನೀಡಿದೆ. ತರಕಾರಿಗಳನ್ನು ವ್ಯಾಪಾರ ಮಾಡಲು ಬಂದಿದ್ದ ವೀರೇಶ್ ಗೌಡ ಸ್ವತಃ ಕೃಷಿಕರು. ಕ್ಯಾರಕೊಪ್ಪ ಗ್ರಾಮದವರಾದ ಇವರಲ್ಲಿ ಐದು ಎಕರೆ ಜಮೀನಿದೆ. ತರಕಾರಿ ಕೃಷಿ ಮಾಡುತ್ತಾರೆ. ಸಂಪೂರ್ಣ ಸಾವಯವ ಮಾದರಿ ಕೃಷಿ. ದೇಸಿ ಸಂತೆಯಲ್ಲಿ ಕುಳಿತು ಮೆಂತೆ, ಕೊತ್ತಂಬರಿ, ಪಾಲಕ, ಪುಂಡಿ, ಸಬ್ಬಸಗಿ, ಕಿರಕಸಾಲಿ, ಹರವಿ, ರಾಜಗಿರಿ, ಕೇಸು, ಬದನೆ, ಬೆಂಡೆ ಹೀಗೆ ಎಲ್ಲಾ ರೀತಿಯ ತರಕಾರಿಗಳನ್ನು ಮಾರಾಟ ಮಾಡುತ್ತಾರೆ.

ಉತ್ತಮ ಆರೋಗ್ಯ ನಮ್ಮದಾಗಬೇಕು ಎನ್ನುವ ಆಸೆ ನಮ್ಮಲ್ಲಿದ್ದರೆ ನಮ್ಮ ಆಹಾರದ ಆಯ್ಕೆಯೂ ಉತ್ತಮವಾಗಿಯೇ ಇರಬೇಕು. ದೇಸಿ ಸಂತೆಯ ಮೂಲಕ ಆರೋಗ್ಯಯುತ ಆಹಾರೋತ್ಪನ್ನಗಳನ್ನು ಗ್ರಾಹಕರಿಗೆ ನೀಡಲು ಕಾರ್ಯಪ್ರವೃತ್ತವಾಗಿದ್ದು ಮಾದರಿಯೇ ಸರಿ.

(ವಿವರಗಳಿಗೆ ಸಂಪರ್ಕ: 96865 10321)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT