ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕಟ ಸಂಬಂಧಿ ಈ ದುಶಾಂಬೆ

Last Updated 1 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಮಧ್ಯ ಏಷ್ಯಾದ ಪುಟ್ಟ ದೇಶ ತಜಕಿಸ್ತಾನ ಇತ್ತೀಚೆಗೆ ಭಾರತೀಯ ಮಾಧ್ಯಮಗಳಲ್ಲಿ ಮತ್ತೆ ಮತ್ತೆ ಸುದ್ದಿಯಾಗಿದೆ. ಮೊದಲಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ತಜಕಿಸ್ತಾನದ ರಾಜಧಾನಿ ದುಶಾಂಬೆಗೆ ಅಧಿಕೃತ ಭೇಟಿ ನೀಡಿದ ಬೆನ್ನಲ್ಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಕೂಡಾ ದುಶಾಂಬೆಗೆ ಹೋಗಿ ಬಂದಿದ್ದಾರೆ. ಮೋದಿಯವರಂತೂ 2015ರಲ್ಲೇ ದುಶಾಂಬೆಗೆ ಭೇಟಿ ನೀಡಿ ರಬೀಂದ್ರನಾಥ ಠಾಕೂರ್‌ ಅವರ ಪುತ್ಥಳಿ ಉದ್ಘಾಟಿಸಿದ್ದಾರೆ. ಕಳೆದ ಜೂನ್‌ನಲ್ಲಿ ನಿತಿನ್‌ ಗಡ್ಕರಿಯವರು ಇಲ್ಲಿಗೆ ಭೇಟಿ ನೀಡಿ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ವಿವೇಕಾನಂದ ಸಾಂಸ್ಕೃತಿಕ ಕೇಂದ್ರವೆಂದು ಮರುನಾಮಕರಣ ಮಾಡಿ ಬಂದಿದ್ದಾರೆ. ಇದು ಈಚಿನ ವರ್ಷಗಳಲ್ಲಿ ಮಧ್ಯಏಷ್ಯಾದಲ್ಲಿ ಭೌಗೋಳಿಕವಾಗಿ ಬಹಳ ಮುಖ್ಯ ಜಾಗದಲ್ಲಿರುವ ತಜಕಿಸ್ತಾನ ಪಡೆದುಕೊಳ್ಳುತ್ತಿರುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ತಜಕಿಸ್ತಾನವು ರಷ್ಯಾ, ಚೀನಾ, ಅಮೆರಿಕ, ಭಾರತ ಮುಂತಾಗಿ ಎಲ್ಲಾ ದೇಶಗಳಿಗೆ ಒಂದಿಲ್ಲೊಂದು ಕಾರಣಕ್ಕೆ ಸಂಬಂಧ ಬೆಳೆಸಬೇಕಾದ ರಾಷ್ಟ್ರವಾಗಿ ಕಂಡುಬರುತ್ತಿದೆ. ಚೀನಾ, ಆಫ್ಘಾನಿಸ್ತಾನ, ಪಾಕಿಸ್ತಾನಗಳ ಗಡಿ ಹೊಂದಿರುವ ತಜಕಿಸ್ತಾನದಲ್ಲಿ ಇಸ್ಲಾಂ ಹೆಸರಿನ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚದಂತೆ ಕಾವಲು ಕಾಯುವುದು ಜಾಗತಿಕವಾಗಿ ಅನಿವಾರ್ಯವಾಗಿದೆ.

ತಜಕಿಸ್ತಾನವು ಈ ಹಿಂದೆ ಸೋವಿಯತ್‌ ಒಕ್ಕೂಟ ಗಣರಾಜ್ಯದ ಭಾಗವಾಗಿತ್ತು. 1990ರ ದಶಕದಲ್ಲಿ ಮಿಖಾಯಿಲ್‌ ಗೊರ್ಬಚೆವ್ ಬಿತ್ತಿದ ಸ್ವಾತಂತ್ರ್ಯದ ಕನಸುಗಳನ್ನು ಸಾಕಾರಗೊಳಿಸಿಕೊಂಡ ರಾಷ್ಟ್ರಗಳಲ್ಲಿ ತಜಕಿಸ್ತಾನವೂ ಒಂದು. 1991ರಲ್ಲಿ ದೇಶವು ಸ್ವಾತಂತ್ರ್ಯ ಘೋಷಿಸಿಕೊಂಡರೂ ಆಂತರಿಕ ಕಲಹದ ದಳ್ಳುರಿಯಲ್ಲಿ ಬೆಂದ ತಜಕಿಸ್ತಾನ ಸ್ವತಂತ್ರ ರಾಷ್ಟ್ರವಾಗಿ ಜಾಗತಿಕ ಮನ್ನಣೆ ಗಳಿಸಲು ಹಾಗೂ ಅಭಿವೃದ್ಧಿಯ ದೃಢ ಹೆಜ್ಜೆಗಳನ್ನಿಡಲು ದಶಕಗಳೇ ಬೇಕಾದವು. ಸುಮಾರು ಒಂಬತ್ತು ಮಿಲಿಯ ಜನಸಂಖ್ಯೆ ಇರುವ ಈ ದೇಶಕ್ಕೆ 1,43,100 ಚದರ ಕಿಲೋಮೀಟರ್‌ಗಳಷ್ಟು ಭೂಭಾಗವಿದೆ. ತಜಕಿಸ್ತಾನದ ರಾಜಧಾನಿ ದುಶಾಂಬೆ. ತಜಕಿ ಭಾಷೆಯಲ್ಲಿ ದುಶಾಂಬೆಯೆಂದರೆ ಸೋಮವಾರದ ಮಾರುಕಟ್ಟೆ ಎಂಬ ಅರ್ಥ. ನಮ್ಮಲ್ಲಿ ಸೋಮವಾರ ಪೇಟೆ, ಶನಿವಾರ ಸಂತೆಗಳು ಇರುವ ಹಾಗೆ. ತಜಕಿಸ್ತಾನದಲ್ಲಿರುವುದೇ ಮೂರ‍್ನಾಲ್ಕು ಮುಖ್ಯ ಪಟ್ಟಣಗಳು. ಅಂತರರಾಷ್ಟ್ರೀಯ ವಿಮಾನ ಸೌಲಭ್ಯವಿರುವುದು ದುಶಾಂಬೆಗೆ ಮಾತ್ರ.
ದುಶಾಂಬೆ ನಮ್ಮ ನವದೆಹಲಿಯ ಹಾಗೆ ಆಧುನಿಕ ನಗರ. ರಾಷ್ಟ್ರಪತಿ ಭವನ, ಸಂಸತ್ ಭವನ,ಎಲ್ಲ ದೇಶಗಳ ದೂತಾವಾಸಗಳು, ಸರ್ಕಾರದ ಎಲ್ಲ ಮುಖ್ಯ ಕಚೇರಿಗಳು ಇಲ್ಲಿವೆ. ದೇಶದ ಎಲ್ಲ ವಿಶ್ವವಿದ್ಯಾಲಯಗಳೂ ಇಲ್ಲಿಯೇ ಕೇಂದ್ರೀಕೃತಗೊಂಡಿವೆ. ಇಲ್ಲಿನ ಉದ್ಯಾನಗಳು, ಪುತ್ಥಳಿಗಳು, ರಸ್ತೆಗಳು ನೋಡುವಂತಿವೆ. ಎರಡು ದಶಕಗಳಲ್ಲಿ ಇದು ಮಧ್ಯಏಷ್ಯಾದ ಪ್ರಮುಖ ರಾಜಧಾನಿಯಾಗಿ ಬೆಳೆದಿರುವ ಬಗ್ಗೆ ಅನುಮಾನವಿಲ್ಲ. ದುಶಾಂಬೆಯ ಭಾಷೆ ತಜಕ್‌ ಆದರೂ ರಷ್ಯನ್ ಮಾತನಾಡುವವರ ಸಂಖ್ಯೆ ಸಾಕಷ್ಟಿದೆ. ಎರಡೂ ಮಾಧ್ಯಮಗಳಲ್ಲಿ ಶಿಕ್ಷಣ ನಡೆಯುತ್ತದೆ. ಹಿಂದೆ ಈಗಿನ ಕಿರ್ಗಿಸ್ತಾನ, ಕಜಕಿಸ್ತಾನ, ಉಜ್ಬೆಕಿಸ್ತಾನ, ತುರ್ಕ್‌ಮೇನಿಸ್ತಾನಗಳೆಲ್ಲ ಸೋವಿಯತ್‌ ಒಕ್ಕೂಟದ ಭಾಗವೇ ಆಗಿದ್ದರಿಂದ ಆಗ ಈ ಭಾಗಕ್ಕೆ ಬಂದು ನೆಲೆ ಕಂಡುಕೊಂಡವರು ಸಾಕಷ್ಟು ಸಂಖ್ಯೆಯಲ್ಲಿದ್ದು ಜನಸಂಖ್ಯೆಯಲ್ಲೂ ಭಾಷೆಯಲ್ಲೂ ವೈವಿಧ್ಯಗಳಿವೆ. ಈಗಲೂ ತಜಕಿ ಗಂಡಸರಿಗೆ ದುಡಿಯಲು ಇರುವ ಕನಸು ಮಾಸ್ಕೋ. ಈ ಎರಡು ದೇಶಗಳ ಮಧ್ಯೆ ಗೆಳೆತನವಿರುವುರಿಂದ ಹಾಗೂ ರಷ್ಯಾಕ್ಕೆ ಹೋಗಲು ತಜಕಿಗಳಿಗೆ ಪ್ರತ್ಯೇಕ ವೀಸಾ ಅಗತ್ಯವಿಲ್ಲವಾಗಿ ತುಂಬಾ ಜನ ರಷ್ಯಾದ ರಾಜಧಾನಿ ಮಾಸ್ಕೋಗೆ ಕೆಲಸ ಹುಡುಕಿ ಹೋಗುತ್ತಾರೆ. ಅಲ್ಲಿಂದ ಇಲ್ಲಿಗೆ ಬಂದವರೂ ಇಲ್ಲದಿಲ್ಲ.

ಭಾರತೀಯ ಉಡುಗೆಯಲ್ಲಿ ತಜಕಿ ಹುಡುಗಿಯರು
ಭಾರತೀಯ ಉಡುಗೆಯಲ್ಲಿ ತಜಕಿ ಹುಡುಗಿಯರು

ಒಂದು ವರ್ಷದ ಹಿಂದೆ ದುಶಾಂಬೆಯ ಹೆಸರೂ ಗೊತ್ತಿರಲಿಲ್ಲ. ಹೊರದೇಶವೊಂದರ ಭಾರತೀಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕನಾಗಿ ನೇಮಕಗೊಂಡ ಸಂದರ್ಭದಲ್ಲಿ ಮೊದಲ ಬಾರಿಗೆ ದುಶಾಂಬೆಯ ಹೆಸರು ಕೇಳಿದ್ದು. ನಿಮ್ಮನ್ನು ತಜಕಿಸ್ತಾನದ ರಾಜಧಾನಿ ದುಶಾಂಬೆಯ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದೆ ಎಂಬ ಇ-ಮೇಲ್ ಬಂದಾಗ ಗೂಗಲ್‌ನಲ್ಲಿ ದುಶಾಂಬೆಯ ವಿವರಗಳನ್ನು ಹುಡುಕಿದ್ದೇ ಹುಡುಕಿದ್ದು! ಹಾಗೆ ನೋಡಿದರೆ ದುಶಾಂಬೆ ನವದೆಹಲಿಯಿಂದ ಬಹಳ ದೂರವಿಲ್ಲ. ವಿಮಾನದಲ್ಲಿ ಎರಡೂವರೆ ಗಂಟೆಗಳ ಪ್ರಯಾಣವಷ್ಟೇ. ಆದರೆ ವಾರಕ್ಕೆ ಒಂದೇ ವಿಮಾನಸೇವೆ ಇರುವುದು. ಅದೂ ತಜಿಕ್‌ ಏರ್‌ಲೈನ್ಸ್‌ನವರದು. ವಾರದ ಮಧ್ಯೆ ದುಶಾಂಬೆಗೆ ಪ್ರಯಾಣಿಸಬೇಕಾದ ಸಂದರ್ಭ ಬಂದರೆ ದುಬೈ ಮೂಲಕ ಅಥವಾ ಕಜಕಿಸ್ತಾನದ ಆಲಮಟೈ ಮೂಲಕ ಹೋಗಬೇಕು. ಅದಕ್ಕೆ ಹೆಚ್ಚು ಸಮಯ ಬೇಕು, ಹಣವೂ ದುಪ್ಪಟ್ಟು ತೆರಬೇಕು. ಸೂಕ್ತ ವಿಮಾನ ಸಾರಿಗೆ ಇರದಿರುವುದೊಂದೇ ಭಾರತಕ್ಕೆ ಮಾನಸಿಕವಾಗಿಯೂ ಭೌಗೋಳಿಕವಾಗಿಯೂ ಹತ್ತಿರವಿರುವ ದುಶಾಂಬೆಯನ್ನು ದೂರವಿಟ್ಟಿರುವುದು.
ತಜಕಿಗಳಿಗೆ ಭಾರತೀಯರ ಕಂಡರೆ ಅದೇನು ಪ್ರೀತಿಯೋ ಗೊತ್ತಿಲ್ಲ. ನಮ್ಮ ಮುಖ ನೋಡಿದರೆ ‘ನಮಸ್ತೆ’ ಅನ್ನುತ್ತಾರೆ. ‘ಹಿಂದೂಸ್ತಾನ್?’ ಎಂದು ಪ್ರಶ್ನಿಸುತ್ತಾರೆ. ನಾವೇ ಹಿಂದೂಸ್ತಾನವೆಂದು ಹೇಳಿಕೊಳ್ಳಲು ಸಂಕೋಚಪಡುವ ಪರಿಸ್ಥಿತಿ ಇರುವಾಗ ಪರಕೀಯರು ಅದೂ ಮುಸಲ್ಮಾನರು ಅಪವಾದಗಳಿರದೇ ಪ್ರತಿಯೊಬ್ಬರೂ ಹಿಂದೂಸ್ತಾನವೆಂದೇ ಸಂಬೋಧಿಸುವುದನ್ನು ಕಂಡಾಗ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯುವುದಿಲ್ಲ! ನಾನು ಭೇಟಿ ಮಾಡಿದ ತಜಕಿಗಳಿಗೆಲ್ಲ ಭಾರತಕ್ಕೆ ಬರುವ ಕನಸಿದೆ. ದೊಡ್ಡವರಾದರೆ ಆಗ್ರಾಕ್ಕೆ ಹೋಗಬೇಕು ತಾಜಮಹಲ್ ನೋಡಬೇಕು ಎಂದು ಆಶಿಸುತ್ತಾರೆ. ವಿದ್ಯಾರ್ಥಿಗಳು ಭಾರತ ಸರ್ಕಾರದ ವಿದ್ಯಾರ್ಥಿವೇತನ ಪಡೆದು ಭಾರತೀಯ ವಿ.ವಿಗಳಿಗೆ ಓದಲು ಬರುವ ಕನಸು ಕಾಣುತ್ತಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರಗಳು ತಮ್ಮ ಲಘು ರಾಜನೀತಿಯ (ಸಾಫ್ಟ್ ಡಿಪ್ಲೊಮಸಿ) ಭಾಗವಾಗಿ ಆಯಾದೇಶಗಳಿಂದ ಸ್ಕಾಲರ್‌ಷಿಪ್ ನೀಡಿ ವಿದ್ಯಾರ್ಥಿಗಳನ್ನು ಭಾರತಕ್ಕೆ ಕಳಿಸುತ್ತವೆ. ದುಶಾಂಬೆಯ ಭಾರತೀಯ ಎಂಬೆಸಿಯು ಪ್ರತಿವರ್ಷ 25 ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ ಕೊಟ್ಟು ಭಾರತಕ್ಕೆ ಕಳಿಸುವ ಅವಕಾಶ ಹೊಂದಿದೆ. ತಜಕಿಗಳು ಬಡವರಾಗಿದ್ದು ಅವರಿಗೆ ವಿಮಾನವೆಚ್ಚ ನೀಡದಿದ್ದರೆ ಭಾರತಕ್ಕೆ ಹೋಗಲಿಕ್ಕೆ ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಅವರ ಹೋಗಿಬರುವ ವಿಮಾನವೆಚ್ಚವನ್ನೂ ಭಾರತೀಯ ಸಾಂಸ್ಕೃತಿಕ ಕೇಂದ್ರವು ವಹಿಸುತ್ತದೆ.

ಹೊಸದಾಗಿ ಆರಂಭಗೊಂಡ ಉದ್ಯಾನದಲ್ಲಿ ಇರುವ ಪ್ರತಿಮೆ
ಹೊಸದಾಗಿ ಆರಂಭಗೊಂಡ ಉದ್ಯಾನದಲ್ಲಿ ಇರುವ ಪ್ರತಿಮೆ

ತಜಕಿಸ್ತಾನದ ರಾಜಧಾನಿ ಎನಿಸಿಕೊಂಡರೂ ದುಶಾಂಬೆ ನಮ್ಮ ಮೈಸೂರಿನಷ್ಟೂ ದೊಡ್ಡ ಊರಲ್ಲ. ಜನಸಂಖ್ಯೆಯೂ ಕೇವಲ ಎಂಟು ಲಕ್ಷವಿರಬಹುದು. ಆದರೆ ಅದೊಂದು ಸುಂದರ ನಗರ. ಇಲ್ಲಿಯವರು ಹೇಳುವಂತೆ ಸ್ವಾತಂತ್ರ್ಯಬಂದ ಎರಡೇ ದಶಕಗಳಲ್ಲಿ ಆಧುನಿಕ ನಗರವಾಗಿ ಬೆಳೆದಿದೆ. ಈಗ ಎಲ್ಲಿ ನೋಡಿದರೂ ಗಗನಚುಂಬಿ ಸೌಧಗಳು. ಪಾರ್ಕುಗಳು, ಪ್ರತಿಮೆಗಳು, ರಸ್ತೆಯ ಇಕ್ಕೆಲಗಳಲ್ಲೂ ಹೂಗಿಡಗಳು. ರಸ್ತೆಗಳ ಸ್ವಚ್ಛತೆಯ ಬಗ್ಗೆ ದುಶಾಂಬೆಯ ಸ್ಥಳೀಯ ಸರ್ಕಾರ ನೀಡುವ ಆದ್ಯತೆ ಮಾದರಿಯಾದುದು. ನಡುರಾತ್ರಿಯಲ್ಲೂ ರಸ್ತೆ ಗುಡಿಸುವುದನ್ನು ಇಲ್ಲಿ ಮಾತ್ರ ಕಾಣಬಹುದೇನೊ! ಬೆಳಗಾಗುವಾಗ ಒಂದು ಲಾರಿ ಇಡೀ ರಸ್ತೆಗೆ ನೀರು ಚೆಲ್ಲಿ ತೊಳೆದು ಹೋಗುವುದನ್ನು ಕಾಣಬಹುದು. ಮೊದಮೊದಲಿಗೆ ರಸ್ತೆಯಲ್ಲಿ ಮಾತ್ರ ಮಳೆ ಬರುವುದು ಹೇಗೆಂದು ಯೋಚಿಸುತ್ತಿದ್ದೆ. ಒಮ್ಮೆ ಬೆಳಗಿನ ಜಾವ ಲಾರಿ ನೀರು ಸುರಿದು ಹೋಗುವುದನ್ನು ಕಂಡಾಗಲೇ ಸತ್ಯ ಗೊತ್ತಾದದ್ದು! ದುಶಾಂಬೆಯ ದೃಷ್ಟಿಬೊಟ್ಟು ಎನ್ನಬಹುದಾದದ್ದು ಸೊಮೊನಿ ಪ್ರತಿಮೆ. ಸೊಮೊನಿ, ತಜಕಿಗಳ ಮೊದಲ ರಾಜನಂತೆ. ಹೀಗಾಗಿ ಅವನಿಗೆ ವಿಶೇಷ ಮಾನ್ಯತೆ. ಇಲ್ಲಿನ ಹಣಕ್ಕೂ ಸೊಮೊನಿಯ ಹೆಸರು. ಸೊಮೊನಿ ಪ್ರತಿಮೆಯ ಜಾಗ ಸಂಜೆ ಜನ ಬಂದು ಕುಳಿತು ಸಮಯ ಕಳೆಯಬಹುದಾದ ಸುಂದರ ತಾಣ. ಪಕ್ಕದಲ್ಲೇ ಬಹುದೊಡ್ಡ ಉದ್ಯಾನ. ದುಶಾಂಬೆಯ ತುಂಬ ಉದ್ಯಾನಗಳೇ ಎನ್ನಬಹುದು. ಅವುಗಳನ್ನು ಬೆಳೆಸಲು ಸರ್ಕಾರ ಆದ್ಯತೆ ನೀಡುವುದನ್ನು ಎಲ್ಲೆಡೆ ಕಾಣಬಹುದು. ಇತ್ತೀಚೆಗೆ ಉಜ್ಬೆಕಿಸ್ತಾನದ ಅಧ್ಯಕ್ಷರು ಭೇಟಿ ನೀಡಿದಾಗ ಹೊಸಪಾರ್ಕನ್ನು ಉದ್ಘಾಟಿಸಿದ್ದಾರೆ.

ದುಶಾಂಬೆ ಚಳಿಯ ಪ್ರದೇಶ. ಇದೀಗ ಚಳಿಗಾಲ ಆರಂಭಗೊಂಡಿದ್ದು ಬೆಳಿಗ್ಗೆ ಏಳುವಾಗ ಸೊನ್ನೆ ಡಿಗ್ರಿ ತೋರಿಸುತ್ತಿರುತ್ತದೆ. ನಡುರಾತ್ರಿಗಳಲ್ಲಿ ಮೈನಸ್‌ಗೆ ಹೋಗುವುದು ಮಾಮೂಲಿ. ಜನವರಿ ಬಂದರೆ ರಸ್ತೆಗಳಲ್ಲಿ ಮಂಜುಗಡ್ಡೆ ರಾಶಿ ಬೀಳುವುದಂತೆ. ಜನರಿಗೆ ಅದರಲ್ಲೂ ಬಡವರಿಗೆ ಚಳಿಯಿಂದ ತೊಂದರೆ ಆಗಬಾರದು ಎಂದು ಸರ್ಕಾರವು ಚಳಿಗಾಲದಲ್ಲಿ ಎಲ್ಲರ ಮನೆಗೆ ಪೈಪುಗಳಲ್ಲಿ ಬಿಸಿ ನೀರನ್ನು ಹರಿಸುತ್ತದೆ. ಇದರಿಂದ ಮನೆಯ ಒಳಭಾಗ ಬೆಚ್ಚಗಿರಲು ಸಾಧ್ಯವಾಗುತ್ತದೆ. ಹದಿನಾಲ್ಕನೇ ಮಹಡಿಯಲ್ಲಿರುವ ನಮ್ಮ ಮನೆಗೂ ಬಿಸಿನೀರು ಪೈಪುಗಳಲ್ಲಿ ಹರಿದು ಬರುವುದು, ಅದಕ್ಕೆ ಸರ್ಕಾರವು ನೆಪ ಮಾತ್ರಕ್ಕೆ ಸ್ವಲ್ಪ ಶುಲ್ಕ ಪಡೆಯುವುದು ಅಚ್ಚರಿಯ ವಿಷಯ. ನೀರು ಹರಿಯುವವರೆಗೂ ನಾನಿದನ್ನು ನಂಬಿರಲಿಲ್ಲ! ಈಗ ಹೊರಗೆ ಕೊರೆಯುವ ಚಳಿಯಿರುವಾಗ ಈ ಪೈಪುಗಳಿಗೆ ಆತು ಕುಳಿತುಕೊಳ್ಳುವುದೇ ಸುಖದ ಅನುಭವ ನೀಡುವ ವಿಚಾರ.

ಮಹಿಳಾ ಶಿಕ್ಷಣದ ಮಹತ್ವ ಸಾರುವ ಅಮ್ಮ–ಮಗಳ ಪ್ರತಿಮೆ
ಮಹಿಳಾ ಶಿಕ್ಷಣದ ಮಹತ್ವ ಸಾರುವ ಅಮ್ಮ–ಮಗಳ ಪ್ರತಿಮೆ

ಸೋವಿಯತ್‌ ಒಕ್ಕೂಟ ವಿಭಜನೆಗೊಂಡು ತಜಕಿಸ್ತಾನ ಸ್ವತಂತ್ರವೆಂದು ಘೋಷಿಸಿಕೊಂಡಾಗ ಆಂತರಿಕ ಹೊಯ್ದಾಟಗಳು ನಡೆದಿದ್ದೇ ದುಶಾಂಬೆಯಲ್ಲಿ. ನಾನು ಕುತೂಹಲದಿಂದ ಯಾರ ಮೇಲೆ ನೀವು ಯುದ್ಧ ಮಾಡಿದಿರಿ ಎಂದು ತಜಕಿಯ ಪ್ರಜೆಯೊಬ್ಬರನ್ನು ಕೇಳಿದಾಗ ತಜಕಿಗಳು ತಜಕಿಗಳ ಮೇಲೇ ಯುದ್ಧ ಮಾಡಿ ರಕ್ತ ಹರಿಸಿದರು ಎಂದು ವಿಷಾದದಿಂದ ನೆನೆದುಕೊಂಡರು. ಆದರೆ ದುಶಾಂಬೆ ಹಾಗೂ ತಜಕಿಸ್ತಾನ ಈಗ ಆರಂಭಿಕ ವಿಪ್ಲವಗಳಿಂದ ಹೊರಬಂದು ಬೆಳವಣಿಗೆಯ ದಾಪುಗಾಲು ಹಾಕುತ್ತಿವೆ. ತಜಕಿಸ್ತಾನ ಅಧ್ಯಕ್ಷೀಯ ಮಾದರಿ ಸರ್ಕಾರ ಹೊಂದಿದ್ದು ಈಗಿನ ಅಧ್ಯಕ್ಷ ಇಮಾಮ್ ಅಲಿ ರಹಮೊನ್‌ ದೇಶವನ್ನು ಸದೃಢವಾಗಿ ಬೆಳೆಸುತ್ತಿದ್ದಾರೆ. ಮುಖ್ಯವಾಗಿ ಎಲ್ಲ ದೇಶಗಳೊಂದಿಗೆ ಸಕಾರಾತ್ಮಕ ಸಂಬಂಧ ಇರಿಸಿಕೊಂಡು ತಜಕಿಸ್ತಾನಕ್ಕೆ ಜಾಗತಿಕ ಮನ್ನಣೆ ಗಳಿಸಿಕೊಟ್ಟಿದ್ದಾರೆ. ರಷ್ಯಾ ಈಗಲೂ ತಜಕಿಸ್ತಾನಕ್ಕೆ ಹಿರಿಯಣ್ಣನಿದ್ದಂತೆ.

ದುಶಾಂಬೆಯಲ್ಲಿ ಅಚ್ಚರಿ ಎನಿಸಿದ್ದು ಗಾಂಧೀಜಿ ಹೇಳುವ ಕಾರ್ಯಗೌರವ ಇಲ್ಲಿ ಸಾಕಾರವಾಗಿರುವುದು. ಯಾವುದೇ ಕೆಲಸ ಮಾಡಲು ಇಲ್ಲಿ ಮೇಲು-ಕೀಳು ಭಾವನೆ ಇಲ್ಲ. ಡಾಕ್ಟರಿಗೆ ಇರುವಷ್ಟೇ ಗೌರವ ಬೀದಿ ಗುಡಿಸುವವನಿಗೂ ಇದೆ. ಹುಡುಗಿಯರು ಹೊಟೇಲಿನಲ್ಲಿ ಕೆಲಸ ಮಾಡುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈಚೆಗೆ ಸಿಕ್ಕ ಚಂದದ ಹುಡುಗಿಯನ್ನು ಏನು ಕೆಲಸ ಮಾಡುತ್ತೀಯಾ ಎಂದರೆ ಬೆಲ್ಲಿಡಾನ್ಸ್‌ ಟೀಚರ್‌ ಎಂದು ಯಾವ ಎಗ್ಗಿಲ್ಲದೇ ಹೇಳಿದಳು!

ತಜಕಿಸ್ತಾನವೆಂದು ಬಡರಾಷ್ಟ್ರವೆಂದೇ ಗುರುತಿಸಲಾಗುತ್ತದೆ. ಆದರೆ ಸಾಂಸ್ಕೃತಿಕವಾಗಿ ಇದು ಶ್ರೀಮಂತ ರಾಷ್ಟ್ರ ಎಂಬ ಬಗ್ಗೆ ಅನುಮಾನವಿಲ್ಲ.

ನಿಕಟ ಸಂಬಂಧ

ಹಿಂದೆ ಮೊಘಲರ ಆಳ್ವಿಕೆಯಲ್ಲಿ ಇದು ಭಾರತದ ಭಾಗವೇ ಆಗಿತ್ತು ಎನ್ನಲಾಗುತ್ತದೆ. ಏನಿದ್ದರೂ ಅನಾದಿಕಾಲದಿಂದಲೂ ಭಾರತದೊಡನೆ ನಿಕಟ ಸಂಬಂಧ ಹೊಂದಿರುವುದಕ್ಕೆ ಸಾಕ್ಷಿಗಳಿವೆ. ಈಗ ಭಾರತೀಯ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಇಲ್ಲಿ ಹಿಂದಿ, ಸಂಸ್ಕೃತ, ಭಾರತೀಯ ನೃತ್ಯ, ತಬಲಾ ಹಾಗೂ ಯೋಗ ತರಗತಿಗಳನ್ನು ನಡೆಸಲಾಗುತ್ತಿದೆ. ಇವಕ್ಕೆ ತಜಕಿ ವಿದ್ಯಾರ್ಥಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಇದೆ. ಬಾಲಿವುಡ್ ಹಾಡುಗಳಿಗೆ ಕಾಲು ಹಾಕುವುದೆಂದರೆ ಇಲ್ಲಿಯ ಯುವಕರಿಗೆ ಪ್ರಾಣ. ನಮಗಿಂತ ಚೆನ್ನಾಗಿ ತಜಕಿಗಳಿಗೆ ಬಾಲಿವುಡ್‌ ಚರಿತ್ರೆ ಗೊತ್ತಿದೆ! ಭಾರತವನ್ನು ಅವರು ಪ್ರೀತಿಸುವುದಕ್ಕೆ ಇದೂ ಕಾರಣವಾಗಿದೆ. ವಿಶೇಷವೆಂದರೆ ಭಾರತದ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಮೆಡಿಕಲ್‌ ಓದುತ್ತಿದ್ದಾರೆ! ಭಾರತ ಸರ್ಕಾರದ ವತಿಯಿಂದ ತಜಕಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಹಿಂದಿ- ಉರ್ದು ಪೀಠವನ್ನು ಇತ್ತೀಚೆಗೆ ಸ್ಥಾಪಿಸಲಾಗಿದ್ದು ಹಿಂದಿ ವಿಭಾಗವಂತೂ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದೆ. ಅಂತೂ ಸಮಕಾಲೀನ ಜಾಗತಿಕ ರಾಜಕಾರಣದ ಭಾಗವಾಗಿ ತಜಕಿಸ್ತಾನ ಪ್ರಾಮುಖ್ಯತೆಗೆ ಬರುತ್ತಿದೆ. ಭಾರತಕ್ಕೆ ತಜಕಿಸ್ತಾನವಂತೂ ‘ಹತ್ತಿರ ಹತ್ತಿರ ಬಾ...’ ಎಂಬ ಹಾಡನ್ನು ನೆನಪಿಸುವಂತಿದೆ.

ಮುಕ್ತ ದೃಷ್ಟಿ

ತಜಕಿಸ್ತಾನ ಮುಸ್ಲಿಂ ಬಾಹುಳ್ಯದ ದೇಶವಾಗಿರುವುದರಿಂದ ಎಲ್ಲೆಲ್ಲೂ ಬುರ್ಖಾಧಾರಿಗಳಿರಬಹುದು ಎಂಬುದು ಇಲ್ಲಿಗೆ ಬರುವ ಮುನ್ನ ನನ್ನ ನಿರೀಕ್ಷೆಯಾಗಿತ್ತು. ಇಲ್ಲಿಗೆ ಬಂದಮೇಲೆ ಕಂಡಿದ್ದು ಬುರ್ಖಾ ಅಲ್ಲ, ಎಲ್ಲಿ ನೋಡಿದರೂ ತುಂಡುಡುಗೆಯ ಹುಡುಗಿಯರು! ಬಟ್ಟೆಯ ದೃಷ್ಟಿಯಿಂದ ಇದು ಬಹಳ ಮುಕ್ತ ನಗರ. ಯಾರು ಏನು ಧರಿಸಬೇಕು, ಯಾರನ್ನು ಪ್ರೀತಿಸಬೇಕು ಎಂಬ ಬಗ್ಗೆ ಬೇರೆಯವರ ಹಸ್ತಕ್ಷೇಪ ಇರುವಂತಿಲ್ಲ. ಈಚೆಗೆ ಈ ಮನೋಭಾವ ಭಾರತದಲ್ಲೇ ಹೆಚ್ಚುತ್ತಿರುವುದನ್ನು ಗಮನಿಸಬೇಕು. ದುಶಾಂಬೆಯಲ್ಲಿ ಗಮನಾರ್ಹವಾಗಿ ಕಾಣುವುದೆಂದರೆ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳಿಗೆ ಸಾರ್ವಜನಿಕವಾಗಿ ಮಾನ್ಯತೆಯಿಲ್ಲ. ರಸ್ತೆಬದಿಗಳಲ್ಲಿ ಮಸೀದಿಗಳು, ಪ್ರಾರ್ಥನಾ ಮಂದಿರಗಳೂ ಇಲ್ಲಿಲ್ಲ. ಪೂಜೆ, ಪ್ರಾರ್ಥನೆ ಏನಿದ್ದರೂ ಮನೆಯೊಳಗೆ ನಡೆಯಬೇಕೆಂಬ ಕಟ್ಟಪ್ಪಣೆಯಿರುವುದರಿಂದ ಭಾರತದ ನಗರಗಳಲ್ಲಿ ಕೇಳಿಬರುವ ಮೈಕಾಸುರನ ಗದ್ದಲ ಇಲ್ಲಿ ಇಲ್ಲವೇ ಇಲ್ಲ!

ನಿರ್ದೇಶಕರು,ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ
ಎಂಬೆಸಿ ಆಫ್‌ ಇಂಡಿಯಾ, ದುಶಾಂಬೆ, ತಜಕಿಸ್ತಾನ
೯೯೨ ೯೩ ೫೯೭೪೫೬೭

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT