ಶುಕ್ರವಾರ, ಏಪ್ರಿಲ್ 10, 2020
19 °C

ಜಾಹೀರಾತುಗಳಲ್ಲಿ ಗೇ ಡೇಟಿಂಗ್‌ ಆ್ಯಪ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಹೀರಾತುಗಳು ನಿತ್ಯದ ಚಟುವಟಿಕೆಗಳ ಭಾಗವಾಗಿವೆ. ಎಲ್ಲ ಕ್ಷೇತ್ರದಲ್ಲಿಯೂ ಜಾಹೀರಾತುಗಳ ಪ್ರಭಾವಳಿ ಹೆಚ್ಚಿದ್ದು, ಪ್ರತಿಯೊಂದು ವಿಚಾರದಲ್ಲಿಯೂ ಜನರ ಅಭಿಪ್ರಾಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ ನಂತರ ಭಾರತದ ಜಾಹೀರಾತು ವಲಯದಲ್ಲಿ ರೋಮಿಯೋ ತರಹದ ಗೇ ಡೇಟಿಂಗ್‌ ಆ್ಯಪ್‌ಗಳು ಸದ್ದು ಮಾಡುತ್ತಿವೆ.

ಸುಪ್ರೀಂ ತೀರ್ಪು ಹೊರಬರುವ ಮೊದಲಿಂದಲೂ ಇಂತಹ ಕೆಲವು ಆ್ಯಪ್‌ಗಳು ಬಳಕೆಯಲ್ಲಿದ್ದವಾದರೂ, ಬಹಿರಂಗವಾಗಿರಲಿಲ್ಲ. ಸಲಿಂಗಕಾಮಕ್ಕೆ ಅವಕಾಶ ನಿರ್ಬಂಧಿಸಿದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377 ವಿರುದ್ಧ ಸುಪ್ರೀಂ ತೀರ್ಪು ಹೊರ ಬಂದ ಬಳಿಕ ಇಂತಹ ವಿಚಾರಗಳಗೆ ಮುಕ್ತವಾದ ವೇದಿಕೆ ದೊರೆತಂತಾಗಿದೆ.

2015ರಲ್ಲಿ, ಅನೌಕ್‌ ಬಟ್ಟೆ ಬ್ರಾಂಡಿಂಗ್‌ ಕಂಪನಿ ಸಲಿಂಗಿ ಜೋಡಿಯನ್ನು ಒಳಗೊಂಡ ಬೋಲ್ಡ್‌ ಇಸ್‌ ಬ್ಯೂಟಿಫುಲ್‌ ಹೆಸರಿನ ಜಾಹೀರಾತೊಂದನ್ನು ಪ್ರಕಟಿಸಿತ್ತು. ಆ ಸಮಯದಲ್ಲಿ ಈ ವಿಡಿಯೊ ಸಾಕಷ್ಟು ವೈರಲ್‌ ಆಗಿತ್ತು. ಆದರೆ ಇಂತಹ ಮತ್ತಷ್ಟು ವಿಡಿಯೊಗಳು ನಿರ್ಮಾಣವಾಗಿರಲಿಲ್ಲ.

ಸಲಿಂಗಿಗಳ ಡೇಟಿಂಗ್‌ಗೆ ಸಂಬಂಧಿಸಿದಂತೆ ಇರುವ ಅಪ್ಲಿಕೇಷನ್‌ಗಳನ್ನು ಬಳಸುವುದರಿಂದ, ಸಲಿಂಗ ಕಾಮಿಗಳು, ಉಭಯ ಲಿಂಗರತಿಗಳು, ಲಿಂಗ ಪರಿವರ್ತಿತ (ಎಲ್‌ಜಿಬಿಟಿಕ್ಯೂ) ಸಮುದಾಯದವರಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ತಿಳಿಯಲು, ಗ್ರಿಂಡರ್‌, ಟೆಂಡರ್‌ ಮತ್ತು ಡೆಲ್ಟಾ ದಂತಹ ಡೇಟಿಂಗ್‌ ಅಪ್ಲಿಕೇಷನ್‌ಗಳನ್ನು ಬಳಸುತ್ತಿರುವವರೊಡನೆ ಪ್ರಜಾವಾಣಿ ಮಾತುಕತೆ ನಡೆಸಿದೆ.

ಕಳೆದ ಮೂರು ವರ್ಷಗಳಿಂದ ಗ್ರಿಂಡರ್‌ ಆ್ಯಪ್‌ ಬಳಸುತ್ತಿರುವ ರೋಹಿತ್‌, ‘ನಮ್ಮ ಸಮುದಾಯದವರು ಮೊದಲೆಲ್ಲಾ ಸಲಿಂಗಕಾಮದ ಕುರಿತು ಮಾತನಾಡಲು ಹಿಂಜರಿಯುತ್ತಿದ್ದರು. ಈಗ ಮುಕ್ತವಾಗಿ ಮಾತನಾಡುವಂತಾಗಿದ್ದಾರೆ’ ಎನ್ನುತ್ತಾರೆ. 

‘ತಮ್ಮ ಸುತ್ತಲಿನ ಜನರು ತಪ್ಪುತಿಳಿಯಬಹುದು ಮತ್ತು ಅಪ್ಲಿಕೇಷನ್‌ಗಳನ್ನು ಬಳಸುವವರ ಮೇಲೆ ಪೊಲೀಸರು ಕಣ್ಣಿಟ್ಟಿರುತ್ತಾರೆ ಎಂಬ ಕಾರಣಕ್ಕೆ, ಗೇ ಡೇಟಿಂಗ್‌ ಅಪ್ಲಿಕೇಷನ್‌ ಬಳಸುತ್ತಿದ್ದರೂ ಬಹುತೇಕರು ತಮ್ಮ ಚಿತ್ರಗಳನ್ನು ಹಾಗೂ ವಿವರಗಳನ್ನು ಬರೆದುಕೊಳ್ಳುತ್ತಿರಲಿಲ್ಲ’ ಎನ್ನುತ್ತಾರೆ ಅವರು.

‘ತೀರ್ಪು ಪ್ರಕಟವಾದ ಬಳಿಕ, ಆಪ್‌ ಬಳಕೆದಾರರು ತಮ್ಮ ಚಿತ್ರಗಳನ್ನು ಪ್ರಕಟಿಸಲು ಧೈರ್ಯ ತೋರುತ್ತಿದ್ದಾರೆ. ಜೊತೆಗೆ ಗ್ರಿಂಡರ್‌ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇತ್ತೀಚೆಗೆ ನನ್ನ ಬಳಗದ ಸುಮಾರು 50 ಮಂದಿ ಹೊಸದಾಗಿ ಆಪ್ಲಿಕೇಷನ್‌ ಬಳಸಲು ಆರಂಭಿಸಿದ್ದಾರೆ’ ಎಂದು ವಿದ್ಯಮಾನವನ್ನು ವಿವರಿಸುತ್ತಾರೆ ರೋಹಿತ್‌.

‘ಗೇ ಡೇಟಿಂಗ್‌ ಆ್ಯಪ್‌ಗಳಲ್ಲಿ 30 ಜನರ ಗ್ರೂಪ್‌ ಮಾಡಿಕೊಳ್ಳುವ ಅವಕಾಶವಿದೆ. ಅದರ ಮೂಲಕ ಸಮುದಾಯ ಕಾರ್ಯಕ್ರಮಗಳು, ವೈದ್ಯಕೀಯ ಸುರಕ್ಷತೆ ಕುರಿತು ವಿಷಯ ಹಂಚಿಕೊಳ್ಳಲು ಸಹಕಾರಿಯಾಗಿದೆ’ ಎಂದು ಆ್ಯಪ್‌ನ ಉಪಯೋಗದ ಬಗ್ಗೆ ತಿಳಿಸುತ್ತಾರೆ.

ಗ್ರಿಂಡರ್‌ ಅಂಡ್‌ ಟಿಂಡರ್‌ ಆ್ಯಪ್‌ಗಳನ್ನು ಬಳಸುತ್ತಿರುವ ಪ್ರಿಯಾಂಕ್‌ ಎನ್ನುವ ಮತ್ತೊಬ್ಬರು, ‘ವಾಸ್ತವವಾಗಿ ಪ್ರಪಂಚವು ಮೊದಲಿಗಿಂತ ಉದಾರವಾಗಿದೆ’ ಎನ್ನುತ್ತಾರೆ.

ಸುಪ್ರೀಂ ತೀರ್ಪಿನ ಬಗ್ಗೆಯೂ ಹರ್ಷ ವ್ಯಕ್ತಪಡಿಸಿರುವ ಅವರು, ‘ಇದೊಂದು ರೀತಿ ಮೈಲೇಲಿದ್ದ ಭಾರವನ್ನು ಕಡಿಮೆ ಮಾಡಿದಂತಿದೆ. ಭಾರತದಲ್ಲಿ ಸೆಕ್ಷನ್‌ 377ರ ವಿರುದ್ಧದ ಸುಪ್ರೀಂ ತೀರ್ಪು ಬೆಂಬಲಿಸುವ ಸುಮಾರು 47 ಬ್ರಾಂಡ್‌ಗಳಿವೆ. ಅಂತಹ ಬ್ರಾಂಡ್‌ಗಳನ್ನು ಖರೀದಿಸುವಂತೆ ಕಂಪೆನಿಗಳಲ್ಲಿ ಮನವಿ ಮಾಡುತ್ತೇನೆ. ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಹೊಂದಿರುವಂತಹ ಕಂಪನಿ ನೀತಿಯನ್ನು ಕಾಣಲು ಬಯಸುತ್ತೇನೆ’ ಎಂದು ಪ್ರಿಯಾಂಕ್‌ ಹೇಳಿದ್ದಾರೆ.

ಎಫ್‌ಸಿಬಿ ಉಲ್ಕಾ ಜಾಹೀರಾತು ಕಂಪನಿಯ ಬ್ರಾಂಡ್‌ ಸರ್ವೀಸ್‌ ನಿರ್ದೇಶಕಿ ಸಪ್ನಾ ಪ್ರತಾಪ್‌ ಜತನ್‌ ಅವರು ಜಾಹೀರಾತುಗಳ ಬಗ್ಗೆ ವಿವರಿಸುತ್ತಾ, ‘ನಾವು ಈ ಸಮುದಾಯದ ಜನರತ್ತಲೂ ಗಮನ ಹರಿಸಲು ಖಂಡಿತ ಪ್ರಯತ್ನಿಸುತ್ತೇವೆ. ಜನರನ್ನು ಪ್ರಭಾವಗೊಳಿಸುವ ಮಾಧ್ಯಮಗಳಲ್ಲಿ ಜಾಹೀರಾತು ಒಂದು. ನಾವು ಟಿಂಡರ್‌ ಅಪ್ಲಿಕೇಷನ್‌ ಬಗ್ಗೆ ಜಾಹೀರಾತು ನೀಡುತ್ತೇವೆ ಎಂದಾದಮೇಲೆ ಗೇ ಡೇಟಿಂಗ್‌ ಆಪ್‌ಗಳ ಬಗ್ಗೆ ಯಾಕೆ ಸಾಧ್ಯವಿಲ್ಲ’ ಎನ್ನುತ್ತಾರೆ.

ಎಲ್‌ಜಿಬಿಟಿಕ್ಯೂ ಸಮುದಾಯದ ಬಗ್ಗೆ ಜಾಹೀರಾತುಗಳು ಜಾಗೃತಿ ಮೂಡಿಸಬೇಕು ಎನ್ನುವ ಸಪ್ನಾ, ‘ಭಾರತದಲ್ಲಿ ಇಂದಿಗೂ ಈ ಸಮುದಾಯದವರ ಬಗ್ಗೆ ತಪ್ಪುಕಲ್ಪನೆಗಳಿವೆ. ಜನರಿಗೆ ವಾಸ್ತವವನ್ನು ಅರ್ಥೈಸುವ ಅಗತ್ಯವಿದೆ. ಜನರೂ ಶಿಕ್ಷಿತರಾಗಬೇಕು. ಹೊಸ ಆಲೋಚನೆಗಳು ಜನರನ್ನು ತಲುಪಲು ಸಮಯ ತೆಗೆದುಕೊಳ್ಳುತ್ತವೆ. ಈ ಕೆಲಸ ಮಾಡಲು ಜಾಹೀರಾತು ಉತ್ತಮವಾದ ಸಾಧನ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)