ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಲಾ ಭಲಾ ಬಲಭುಜಕೆ ಸಾಟಿ ಯಾರೈ?

Last Updated 9 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಈಗಲೂ ಹಳ್ಳಿಗಳಲ್ಲಿ ನಾಟಕದ ಮಾತೆತ್ತಿದರೆ ಸಾಕು, ಅದೆಂತಹುದೋ ಸಂಭ್ರಮ ಗರಿಗೆದರುತ್ತದೆ. ಟಿ.ವಿ., ಸ್ಮಾರ್ಟ್ ಫೋನ್‌ಗಳು ಎಂಟ್ರಿಯಾಗದ ಕಾಲಕ್ಕೆ ಹಳ್ಳಿಗರಲ್ಲಿ ಮನರಂಜನೆಯ ಜೊತೆಗೆ ಸೃಜನಶೀಲತೆಯ ಹಾಗೂ ಜೀವನೋತ್ಸಾಹದ ಪ್ರತೀಕವಾಗಿ ನಾಟಕಗಳು ಅವರ ಜಡತ್ವವನ್ನು ದೂರಮಾಡಿದ್ದವು. ಅದರಲ್ಲೂ ಪೌರಾಣಿಕ ನಾಟಕಗಳೆಂದರೆ ಇನ್ನೂ ಒಂದು ಗುಲಗಂಜಿ ತೂಕ ಹೆಚ್ಚೇ ಎನಿಸುವ ಸಂಭ್ರಮ. ನಾಟಕ ಪ್ರದರ್ಶನದ ದಿನ ನಾಟಕ ನೋಡುವುದೆಷ್ಟು ಸಂತಸವೋ ಅದಕ್ಕಿಂತ ಹೆಚ್ಚಾಗಿ ತಿಂಗಳುಗಳ ಕಾಲ ತಡರಾತ್ರಿಯವರೆಗೂ ನಡೆಯುವ ನಾಟಕದ ಪೂರ್ವ ತಯಾರಿಯೇ ಹೆಚ್ಚು ಖುಷಿ ಕೊಡುವ ಸಂಗತಿಯಾಗಿತ್ತು.

ಊರದೇವರ ಪಡಸಾಲೆಯೇ ತಾಲೀಮಿನ ಕೇಂದ್ರಸ್ಥಾನ. ನಾಟಕದ ಪಾತ್ರಧಾರಿಗಳು ಸಂಭಾಷಣೆಯನ್ನು ನಾಟಕದ ಮೇಷ್ಟ್ರಿಗೆ ಒಪ್ಪಿಸುವಲ್ಲಿನ ಪರದಾಟ ಸುತ್ತ ನೆರೆದವರಿಗೆ ನಗೆಹಬ್ಬವನ್ನುಂಟು ಮಾಡುತ್ತಿತ್ತು. ಮೈನವಿರೇಳಿಸುವ ಅಭಿನಯಕ್ಕೆ ಸುತ್ತ ನೆರೆದ ರಂಗಾಸಕ್ತರ ‘ಭಲೇ.. ಭಲೇ..!’ ಎನ್ನುವ ಉದ್ಗಾರವೂ ಇರುತ್ತಿತ್ತು. ನಾಟಕದ ಮೇಷ್ಟ್ರ ಹಾರ್ಮೋನಿಯಂ ಮಾಧುರ್ಯದ ಜೊತೆಗಿನ ಅಭಿನಯದಲ್ಲಿ ಶೃಂಗಾರ, ಹಾಸ್ಯ, ಕರುಣ, ಭಯಾನಕ... ಮುಂತಾದ ನವರಸಗಳೆಲ್ಲವೂ ಅಭಿವ್ಯಕ್ತಗೊಳ್ಳುತ್ತಿದ್ದವು. ಇದು ಹಳ್ಳಿಗರ ನಾಟಕಪ್ರೀತಿಯನ್ನು, ಜೀವನಪ್ರೀತಿಯನ್ನು ಎತ್ತಿ ತೋರುತ್ತಿತ್ತು. ಇಂತಿಪ್ಪ ನಾಟಕೋತ್ಸವದಲ್ಲಿ ಅಚಾನಕ್ಕಾಗಿ ಹುಟ್ಟಿಕೊಳ್ಳುತ್ತಿದ್ದ ಹಾಸ್ಯದ ಹದ ಬೆರೆತ ಪರದಾಟಗಳು ಸಹ ಅಷ್ಟೇ ರೋಚಕವಾಗಿರುತ್ತಿದ್ದವು. ಅಂತಹುದೊಂದರ ಸವಿಯಿದು.

‘ಕುರುಕ್ಷೇತ್’ರ ಇಂದಿಗೂ ಅತಿ ಜನಪ್ರಿಯ ನಾಟಕ. ಹಳ್ಳಿಯ ಜನರೆಲ್ಲಾ ಸೇರಿ ಕುರುಕ್ಷೇತ್ರ ನಾಟಕವನ್ನು ಆಡಲೇಬೇಕೆಂದು ತೀರ್ಮಾನಿಸಿದರು. ಪಾತ್ರ ಹಂಚಿಕೆಯೂ ನಡೆಯಿತು. ಅದರೊಳಗಿನ ಭೀಮಸೇನನ ಪಾತ್ರ ಗಟ್ಟಿಮುಟ್ಟಾದ ಆಜಾನುಬಾಹು ನಮ್ಮ ಮಲ್ಲಣ್ಣನಿಗೆ ಮೀಸಲಾಗಿತ್ತು. ಗರಡಿಮನೆಯಲ್ಲಿ ಪಳಗಿದ್ದ ಮಲ್ಲಣ್ಣ ಕ್ವಿಂಟಾಲುಗಟ್ಟಲೇ ತೂಗುವ ಧಾನ್ಯದ ಚೀಲಗಳನ್ನು ಏಕಾಂಗಿಯಾಗಿಯೇ ಬೆನ್ನಿಗೇರಿಸಿಕೊಂಡು ಹೋಗುತ್ತಿದ್ದ. ತನ್ನ ತಾಕತ್ತಿನಿಂದಲೂ, ಭೀಮನ ಪಾತ್ರದ ಅಮೋಘ ಅಭಿನಯದಿಂದಲೂ ಸುತ್ತಾ ಹತ್ತೂರಿಗೂ ಹೆಸರುವಾಸಿಯಾಗಿದ್ದ. ಸ್ವಲ್ಪ ಹೆಚ್ಚೇ ಎನಿಸುವ ನಾಟಕದ ಹುಚ್ಚು ಇತ್ತೆನ್ನಿ. ಯಾವುದಕ್ಕೆ ತಪ್ಪಿದರೂ ಪ್ರತಿದಿನ ನಡೆಯುವ ನಾಟಕದ ತಾಲೀಮಿಗೆ ಅವನೆಂದೂ ಗೈರಾದವನಲ್ಲ. ಊರ ಗುಡಿಯ ಮುಂದಿನ ಪೌಳಿಯೇ ಅವರ ಪ್ರಾಕ್ಟೀಸಿನ ಕೇಂದ್ರಸ್ಥಾನವಾಗಿತ್ತು.

ರಾತ್ರಿ ಭೋಜನದ ನಂತರ ನಾಟಕದ ಮೇಷ್ಟ್ರು ಬಂದಾಕ್ಷಣವೇ ಎಲ್ಲಾ ಪಾತ್ರಧಾರಿಗಳ ತಾಲೀಮು ಶುರುವಾಗುತ್ತಿತ್ತು. ‘ನಮೋ ವೆಂಕಟೇಶ, ನಮೋ ತಿರುಮಲೇಶ...’ ಎಂಬ ಪ್ರಾರ್ಥನೆಯೊಂದಿಗೆ ಚಾಲನೆ ಸಿಗುತ್ತಿದ್ದ ನಾಟಕಕ್ಕೆ ನಾಟಕಾಸಕ್ತರು ಜೊತೆಯಾಗುತ್ತಿದ್ದರು. ಅದರಲ್ಲೂ ನಮ್ಮ ಜಗಜಟ್ಟಿ ಭೀಮ ಆಲಿಯಾಸ್ ಮಲ್ಲಣ್ಣ ಬಲು ಉತ್ಸಾಹದಿಂದಲೇ ಪೂರ್ವತಯಾರಿಯಲ್ಲಿ ತೊಡಗಿಕೊಳ್ಳುತ್ತಿದ್ದ. ರಂಗಪ್ರವೇಶದ ಆರಂಭದಲ್ಲೇ ಪರಕಾಯ ಪ್ರವೇಶ ಮಾಡಿ ಜಗಜಟ್ಟಿ ಭೀಮನಾಗಿಯೇ ಬದಲಾಗುತ್ತಿದ್ದ. ತನ್ನ ಗತ್ತು, ಗೈರತ್ತು, ಅಭಿನಯದಿಂದಲೂ ಎಲ್ಲರ ಮನಸೂರೆಗೊಳ್ಳುತ್ತಿದ್ದ. ಈ ನಡುವೆ ಮತ್ತೊಂದು ಸನ್ನೀವೇಶದ ರಂಗಪ್ರವೇಶಕ್ಕೆ ಹೆಚ್ಚಿನ ಸಮಯವಿರುತ್ತಿದ್ದರಿಂದ ಅಲ್ಲೇ ಜಗಲಿಯ ಮೇಲೆ ನಿದ್ರಾದೇವಿಯ ವಶನಾಗುತ್ತಿದ್ದ. ನಾಟಕಪ್ರೀತಿಯ ಜೊತೆಜೊತೆಗೆ ಗಡದ್ದಾದ ಊಟ, ಸೊಂಪಾದ ನಿದ್ದೆಯ ಮೇಲೂ ಅಷ್ಟೇ ಪ್ರೀತಿ ಮಲ್ಲಣ್ಣನಿಗೆ. ಮತ್ತೆ ಅವನ ಪಾತ್ರ ಪ್ರವೇಶವಾಗುವ ಸಮಯದಲ್ಲಿ ನಾಟಕದ ಮೇಷ್ಟ್ರು, ‘ಲೇ ಭೀಮಾ...’ ಎಂದಾಕ್ಷಣ ಮಲಗಿದ್ದಲ್ಲಿಯೇ ಎದ್ದು ನಿಂತು,

‘ಭಲಾ ಭಲಾ ಬಲಭುಜಕೆ ಸಾಟಿ ಯಾರೈ
ದುರುಳ ಕೌರವನ ಸಮರದಿ ಮೆಟ್ಟಿ
ಕುಟ್ಟಿ ಕುಟ್ಟಿ ಪುಡಿಗಟ್ಟಿ ನೀಚನ
ಭಲಾ ಭಲಾ ಬಲಭುಜಕೆ ಸಾಟಿ ಯಾರೈ...’

ಎಂದು ಆಕ್ರೋಶಭರಿತವಾಗಿ ಕಂದವ ಹಾಡುತಾ ಮತ್ತೆ ರಂಗಪ್ರವೇಶ ಮಾಡುತ್ತಿದ್ದ. ಸಂಭಾಷಣೆ ಮತ್ತು ಹಾಡುಗಳನ್ನು ಅಷ್ಟೊಂದು ಕರತಲಾಮಲಕ ಮಾಡಿಕೊಂಡಿದ್ದ. ಸುತ್ತಲಿದ್ದವರ ಮೈ ಜುಮ್ಮೆಂದು ‘ಭಲೇ ಭಲೇ ಮಲ್ಲ...’ನೆಂದು ಮೆಚ್ಚುಗೆಯ ಭಾವ ಹೊರಸೂಸುತ್ತಿದ್ದರು. ಇದು ಮಲ್ಲಣ್ಣನ ಪ್ರತಿದಿನದ ನಾಟಕ ತಾಲೀಮಿನ ದಿನಚರಿಯಾಗಿತ್ತು.

ಇನ್ನೇನು ಊರ ತೇರಿನ ಬಯಲಲ್ಲಿ ಗೊತ್ತುಪಡಿಸಿದ ದಿನದಂದು ನಾಟಕ ಶುರುವಾಯಿತು. ಝಗಮಗಿಸುವ ಲೈಟುಗಳೂ, ವರ್ಣಮಯ ರಂಗಮಂದಿರವೂ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು. ಸುತ್ತೆಲ್ಲಾ ಜನವೋ ಜನ, ಇಡೀ ಊರಲ್ಲೆಲ್ಲಾ ಸಂಭ್ರಮವೋ ಸಂಭ್ರಮ. ‘ನಮೋ ವೆಂಕಟೇಶ...’ ಪ್ರಾರ್ಥನೆಯೊಂದಿಗೆ ನಾಟಕವೂ ಆರಂಭವಾಯಿತು. ಇತ್ತ ಭೀಮನೂ ಮುಖಬಣ್ಣ ಹಚ್ಚುವ ಕಲಾವಿದರಿಗೆ ನಮಸ್ಕರಿಸಿ ಹೆಚ್ಚಿನ ದಕ್ಷಿಣೆ ನೀಡಿ ರೌದ್ರತೆಯನ್ನು ಪ್ರದರ್ಶಿಸಲು ತನ್ನ ಮುಖಕ್ಕೆ ತರತರಹದ ಬಣ್ಣವನ್ನು ಹಚ್ಚಿಸಿಕೊಂಡನು. ಇಳಿಬಿದ್ದ ಉದ್ದುದ್ದ ಗುಂಗುರುಕೂದಲಿನ ವಿಗ್ ತೊಟ್ಟು ಕಿರೀಟಧಾರಿಯಾಗಿ, ಬಲಗೈಯಲ್ಲಿ ಗದೆಯ ಹಿಡಿದು ತನ್ನ ಪಾತ್ರ ಪ್ರವೇಶದಲ್ಲಿ ಅದ್ಭುತವಾದ ರಂಗಗೀತೆಯನ್ನು ಹಾಡಿ ಸಭಿಕರ ಕೇಕೆ, ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡನು. ಯಥಾಪ್ರಕಾರ ಮುಂದಿನ ರಂಗಪ್ರವೇಶಕ್ಕಿನ್ನೂ ಎರಡು ಗಂಟೆಗಳ ವಿರಾಮ. ಅಭ್ಯಾಸಬಲವೆಂಬಂತೆ ಅದಾಗಲೇ ಮಲ್ಲಣ್ಣನಿಗೆ ಆಕಳಿಕೆ ನುಗ್ಗಿ ಬರುತ್ತಿತ್ತು. ಮಾಮೂಲಿಯೆಂಬಂತೆ ಆ ಜನಸಂದಣಿಯ ಮಧ್ಯೆಯೂ ನಿದ್ದೆಗಾಗಿ ಸೂಕ್ತ ಜಾಗ ಹುಡುಕಾಡಹತ್ತಿದನು.

ಆ ಹುಣ್ಣಿಮೆಯ ರಾತ್ರಿಯಂದು ಅದೇ ಊರಿನ ರೈತನೊಬ್ಬ ತನ್ನ ಬಂಡಿಯಲ್ಲಿ ದೂರದ ನೆಂಟರ ಊರಿಗೆ ಭತ್ತದ ಹುಲ್ಲನ್ನು ತುಂಬಿಕೊಂಡು ಹೊರಟಿದ್ದ. ರೈತನು ಆರಂಭದ ನಾಟಕದ ಸವಿಯನ್ನಾದರೂ ಮೆದ್ದು ಹೊರಟರಾಯಿತೆಂದು ಬಂಡಿಯನ್ನು ರಂಗಮಂಟಪದ ಬದಿಯಲ್ಲೆ ನಿಲ್ಲಿಸಿ, ಸ್ವಲ್ಪ ದೂರದಲ್ಲಿ ಜೋಡೆತ್ತುಗಳಾದ ರಾಮ ಭೀಮನನ್ನು ಕಂಬಕ್ಕೆ ಕಟ್ಟಿ ನಾಟಕ ನೋಡುವುದರಲ್ಲಿ ಲೀನವಾಗಿಬಿಟ್ಟ. ಇತ್ತ ಮಲ್ಲಣ್ಣನ ಕಣ್ಣಿಗೆ ಬಿತ್ತು ಭತ್ತದ ಹುಲ್ಲನ್ನು ತುಂಬಿದ್ದ ಎತ್ತಿನ ಬಂಡಿ. ತಡಮಾಡದೆ ಗದೆ ಮತ್ತು ಕಿರೀಟವನ್ನು ಪಕ್ಕಕ್ಕಿಟ್ಟು ಭತ್ತದ ಹುಲ್ಲಿನ ಮೇಲೆ ನಿದ್ರಾದೇವಿಗೆ ಶರಣಾದ. ಮೆತ್ತಗಿದ್ದರಿಂದಲೋ ಏನೋ ಬಲುಬೇಗ ಗಾಢನಿದ್ದೆಯೂ ಆವರಿಸಿತು.

ಇತ್ತ ಸಮಯವಾದ್ದರಿಂದ ರೈತ ತನ್ನ ಎತ್ತುಗಳನ್ನು ಗಾಡಿಯ ನೊಗಕ್ಕೆ ಹೂಡಿ ಸರಿರಾತ್ರಿಯಲ್ಲೇ ತನ್ನ ಬಂಡಿ ಪಯಣ ಮುಂದುವರಿಸಿದ. ಮಲ್ಲಣ್ಣ ಬಂಡಿಯಲ್ಲಿ ಮಲಗಿರುವುದು ರೈತನ ಗಮನಕ್ಕೆ ಬಂದಿರಲಿಲ್ಲ. ಹುಣ್ಣಿಮೆಯ ಬೆಳದಿಂಗಳಲಿ ಪಯಣ ಸಾಗುತ್ತಿತ್ತು. ಯಾವ ನರಪಿಳ್ಳೆಯೂ ಇಲ್ಲದ ಅರೆಬರೆ ಕಾಡಂಚಿನ ದಾರಿ. ಆ ನೀರವ ರಾತ್ರಿಯಲ್ಲಿ ದೂರದೆಲ್ಲೆಲ್ಲೋ ಕೂಗುತ್ತಿದ್ದ ಕತ್ತೆ ಕಿರುಬಗಳ ಕೂಗು ಮನದ ಮೂಲೆಯೆಲ್ಲೆಲ್ಲೋ ಆತಂಕದ ಛಾಯೆ ಕವಿಯುವಂತೆ ಮಾಡಿತ್ತು. ‘ಆ ಅಡವಿ ದಾರಿ ಸರಿ ಇಲ್ಲ. ಬೆಳಿಗ್ಗೆ ಆದ್ರೂ ಹೋಗ್ಬಾರದೆ?’ ಎಂಬ ಮಡದಿಯ ಮಾತನ್ನು ನೆನೆದು ಆ ನಡುರಾತ್ರಿಯಲ್ಲಿ ನಡುಕ ಹುಟ್ಟಿದರೂ ಧೈರ್ಯ ತಂದುಕೊಂಡು ಮುಂದೆ ಸಾಗಿದ. ರೈತನ ಗಟ್ಟಿಮುಟ್ಟಾದ ಪ್ರೀತಿಯ ಹೋರಿಯೊಂದು ಇದ್ದಕ್ಕಿದ್ದಂತೆ ಎತ್ತಲೋ ಸಾಗುವುದಕ್ಕೆ ಪ್ರಾರಂಭಿಸಿತು. ಸಿಟ್ಟಾದ ರೈತ ‘ಲೇ ಭೀಮಾ...’ ಎಂದು ಬಾರಕೋಲಿನಿಂದ ಚಟಾರನೇ ಬಾರಿಸಿದ.

ಭೀಮ ಎಂಬ ಶಬ್ದ ಕಿವಿಗೆ ಬಿದ್ದೊಡನೇ ಇತ್ತ ನಿದ್ರಾದೇವಿಯ ಉತ್ತುಂಗದಲ್ಲಿದ್ದ ಮಲ್ಲಣ್ಣನು ಒಮ್ಮೆಗೆ ಆವೇಶಭರಿತನಾಗಿ ಇರುವ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ‘ಭಲಾಭಲಾ...’ ಎಂದು ಜೋರಾಗಿ ಘರ್ಜಿಸಿ ರಂಗಪ್ರವೇಶಕ್ಕೆ ಅಣಿಯಾಗಿಬಿಟ್ಟನು. ಇದ್ದಕ್ಕಿದ್ದಂತೆ ಕೇಳಿದ ಶಬ್ಬಕ್ಕೆ ಬೆಚ್ಚಿಬಿದ್ದ ರೈತ ಹಿಂದೆ ತಿರುಗಿ ಬಂಡಿಯ ಮೇಲಿದ್ದ ಭತ್ತದ ಹುಲ್ಲಿನ ಕಡೆಗೊಮ್ಮೆ ನೋಡಿದನು. ಗಗನದೆತ್ತರಕ್ಕೆ ನಿಂತ ವಿಚಿತ್ರ ಬಣ್ಣಗಳಿಂದ ಕೂಡಿದ ಆಜಾನುಬಾಹು ವಿಕಾರಾಕೃತಿ. ಕೆಂಡದಂತಹ ಕಣ್ಣುಗಳು, ಆವೇಶದ ಏದುಸಿರು, ತಲೆಯ ಮೇಲಿನಿಂದ ಇಳಿಬಿದ್ದ ಕೂದಲುಗಳು ಸೊಂಟಕ್ಕೆ ಕಟ್ಟಿದ್ದ ಬಿಳಿಯ ವಸ್ತ್ರ ಮೈಮೇಲೆಲ್ಲಾ ಹರಡಿಕೊಂಡ ಭತ್ತದ ಹುಲ್ಲಿನ ಎಳೆಗಳು. ರೈತ ಮೂರ್ಛೆ ಹೋಗುವುದೊಂದೇ ಬಾಕಿ. ಬಂಡಿಯನ್ನು ಬಿಟ್ಟು ಎದ್ದೆನೋ ಬಿದ್ದೆನೋ ಎಂದು ಓಟ ಕಿತ್ತುಬಿಟ್ಟ. ಇತ್ತ ಮಲ್ಲಣ್ಣನ ಆವೇಶದ ದನಿಗೆ ಬೆಚ್ಚಿಬಿದ್ದ ಹೋರಿಗಳು ಲಂಗು ಲಗಾಮಿಲ್ಲದಂತೆ ಭಯಭೀತವಾಗಿ ಮನ ಬಂದೆಡೆಗೆ ನುಗ್ಗಿದವು. ತಾನೆಲ್ಲಿದ್ದೇನೆ ಎಂದು ಸಾವರಿಸಿಕೊಳ್ಳುವುದಕ್ಕೂ ಬಿಡದ ಹೋರಿಗಳ ಓಟದಿಂದಾಗಿ ದುರುಳ ಕೌರವನನ್ನು ಪುಡಿಗಟ್ಟಬೇಕಾದ ಮಲ್ಲಣ್ಣನ ಶರೀರ ನಜ್ಜುಗುಜ್ಜಾಗಿತ್ತು. ಆರ್ಭಟಿಸಬೇಕಾದ ಶಾರೀರವಂತೂ ದನಿ ಕಳೆದುಕೊಂಡಿತ್ತು.

ಇತ್ತ ರಂಗಮಂಟಪದಲ್ಲಿ ಛಲದಂಕಮಲ್ಲ ಕೌರವಾಧಿಪತಿಯೂ ಭೀಮನ ಜೊತೆಗಿನ ಸಮರಕ್ಕೆ ಕಾದು ಕುಳಿತದ್ದಷ್ಟೇ ಬಂತು. ಅತ್ತ ನೋಡಿದರೆ ಬೆಚ್ಚಿಬಿದ್ದ ಹೋರಿಗಳಿಗೆ, ಪಲಾಯನಗೈದ ರೈತನಿಗೆ, ಕಕ್ಕಾಬಿಕ್ಕಿಯಾದ ಮಲ್ಲಣ್ಣನಿಗೆ ಏನು ನಡೆಯುತ್ತಿದೆ ಎಂಬುದರ ಪರಿವೆಯೇ ಇಲ್ಲದಂತಹ ಸ್ಥಿತಿ! ಜಗಜಟ್ಟಿ ಭೀಮನಿಗೆ ಕಾದು ಕುಳಿತ ರಂಗಮಂಟಪದಲ್ಲೆಲ್ಲ ಪರದಾಟ. ನಾಟಕದ ಮೇಷ್ಟ್ರು ಮೈಕ್ಹಿಡಿದು ‘ಲೇ ಭೀಮಾ...’ ಎಂದು ಉದ್ಗರಿಸಿದರೂ ಮಲ್ಲಣ್ಣನ ಸುಳಿವಿಲ್ಲ. ಪ್ರೇಕ್ಷಕ ಪ್ರಭುಗಳು ಸಹನೆಯ ಕಟ್ಟೆ ಒಡೆದು ಆದಾಗಲೇ ಕೇಕೆ ಸಿಳ್ಳೆಗಳಿಗೆ ನಾಂದಿ ಹಾಡಿದ್ದರು. ಕಳವಳಕ್ಕೀಡಾದ ನಾಟಕದ ವ್ಯವಸ್ಥಾಪಕರು ಮೈಕು ಹಿಡಿದು ‘ಛಲದಂಕಮಲ್ಲ ಕೌರವಾಧಿಪತಿಯು ಸಮರಕ್ಕೆ ಸಿದ್ಧವಾಗಿದ್ದು ಭೀಮಪಾತ್ರಧಾರಿ ಮಲ್ಲಣ್ಣನು ಜರೂರು ವೇದಿಕೆಗೆ ಆಗಮಿಸಬೇಕು...’ ಎಂದು ಕಳಕಳಿಯಾಗಿ ವಿನಂತಿಸುತ್ತಿದ್ದರೆ ದೂರದಲ್ಲೆಲ್ಲೋ ಹೋರಿಗಳು ಮಲ್ಲಣ್ಣನನ್ನು ಬೇಲಿಸಾಲ ನಡುವೆ ಕೆಡವಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT