ಕ್ಯಾನ್ಸರ್‌ ಮೆಸೇಜಿನಲ್ಲಿ ಹುರುಳಿಲ್ಲ

7

ಕ್ಯಾನ್ಸರ್‌ ಮೆಸೇಜಿನಲ್ಲಿ ಹುರುಳಿಲ್ಲ

Published:
Updated:

ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವಿಷಯ ಬಹಿರಂಗವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯ ಕಾಳಜಿಗೆ ಸಂಬಂಧಿಸಿದ ಸಂದೇಶಗಳು ಹರಿದಾಡುತ್ತಿವೆ. ಸೋನಾಲಿ ಇತ್ತೀಚೆಗೆ ಕೆಲ ಪರೀಕ್ಷೆಗಳಿಗೆ ಒಳಗಾದಾಗ ಕ್ಯಾನ್ಸರ್‌ ಇರುವುದು ತಿಳಿಯಿತು. ಕ್ಯಾನ್ಸರ್‌ ದೇಹದ ಎಲ್ಲೆಡೆ ಈಗ ಹರಡುತ್ತಿದೆ. ಚಿಕಿತ್ಸೆ ಈ ಹಂತದಲ್ಲಿ ಪರಿಣಾಮಕಾರಿಯಾಗುವುದಿಲ್ಲ. ಹಾಗಾಗಿ
ಸ್ತನ ಕ್ಯಾನ್ಸರ್‌ ಅನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಿರಿ ಎಂಬಂತಹ ಕಾಳಜಿಯುಳ್ಳ ಅನೇಕ ಸಂದೇಶಗಳು ಪ್ರತಿದಿನ ಹರಿದಾಡುತ್ತಲೇ ಇವೆ. 

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಇಂತಹ ಸಂದೇಶಗಳನ್ನು ಬಹುಬೇಗನೇ ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಾರೆ. ಈ ರೀತಿಯ ಸಂದೇಶಗಳಲ್ಲಿ  ಬಿಗಿಯಾದ ಬ್ರಾ ಧರಿಸುವುದರಿಂದ, ಒಳಉಡುಪುಗಳ ಸ್ವಚ್ಛತೆ, ವೈರ್‌ ಅಥವಾ ಎಲಾಸ್ಟಿಕ್‌ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳಬಹುದು ಎಂಬೆಲ್ಲಾ ಅಂಶಗಳಿವೆ. ಇದಲ್ಲದೇ ಸೂರ್ಯನ ಬಿಸಿಲಿಗೆ ಹೋಗುವಾಗ ಪೂರ್ತಿ ದೇಹವನ್ನು ಮುಚ್ಚುವಂತಹ ಬಟ್ಟೆಗಳನ್ನು ತೊಡಬೇಕು. ಕಪ್ಪು ಬಣ್ಣದ ಬ್ರಾ ಹಾಕಬಾರದು. ಇದರಿಂದ ನೆರಳಾತೀತ ಕಿರಣಗಳು ಮೈ ಸೋಕಿ ಸ್ತನ ಕ್ಯಾನ್ಸರ್‌ ಬರುತ್ತದೆ ಎಂದೂ ಇವೆ. ಇಂತಹ ಸಂದೇಶಗಳು ಸಾಮಾನ್ಯ ಜನರನ್ನು ಗೊಂದಲಕ್ಕೆ ಬೀಳಿಸುವುದಂತೂ ಸತ್ಯ. ಇದೆಲ್ಲಾ ನಿಜವೇ ಎಂದು ಅವರಲ್ಲಿ ಆತಂಕ ಸೃಷ್ಟಿಸುತ್ತವೆ. 

 ‘ಆದರೆ ಕಪ್ಪು ಬಣ್ಣದ ಅಥವಾ ಬಿಗಿಯಾದ ಬ್ರಾ ಹಾಕಿಕೊಂಡರೆ ಸ್ತನ ಕ್ಯಾನ್ಸರ್‌ ಬರಬಹುದು ಎಂಬುದು ವೈದ್ಯಕೀಯ ಅಧ್ಯಯನದಲ್ಲಿ ಸಾಬೀತಾಗಿಲ್ಲ. ರಾತ್ರಿಹೊತ್ತಿನಲ್ಲಿ ಬಿಗಿಯಾದ ಉಡುಪು ಧರಿಸಿ ಮಲಗುವುದರಿಂದ ಕ್ಯಾನ್ಸರ್‌ ಬರಬಹುದು ಎಂಬುದೂ ಸಾಬೀತಾಗಿಲ್ಲ. ಇದರಿಂದ ದೇಹದಲ್ಲಿ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಯಾವಾಗಲೂ ಸಡಿಲ ಉಡುಪು ಧರಿಸುವುದು ಆರಾಮದಾಯಕ. ಆದರೆ ಇವೆಲ್ಲವೂ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಹೇಳುವಂತಿಲ್ಲ’ ಎಂದು ವೈದ್ಯೆ ಡಾ. ವಿನಯಾ ಶ್ರೀನಿವಾಸ್‌ ಸ್ಪಷ್ಟನೆ ನೀಡುತ್ತಾರೆ.

ಇದು ಆನುವಂಶೀಯತೆಯಿಂದ ಹೆಚ್ಚಾಗಿ ಬರುತ್ತದೆ. ಕುಟುಂಬದಲ್ಲಿ ತಾಯಿ, ಅತ್ತೆ, ದೊಡ್ಡಮ್ಮ, ಅಜ್ಜಿಗೆ ಸ್ತನ ಕ್ಯಾನ್ಸರ್‌ ಇದ್ದಲ್ಲಿ ಭವಿಷ್ಯದಲ್ಲಿ ಕಾಯಿಲೆ ಕಾಣಿಸುವ ಸಾಧ್ಯತೆ ಹೆಚ್ಚು. ಅತಿಯಾದ ಸ್ಥೂಲಕಾಯ ಅಥವಾ ಬೊಜ್ಜು ದೇಹ ಕೂಡ ಕಾರಣ. ವಿಶೇಷವಾಗಿ ಸ್ಥೂಲಕಾಯವಿರುವ ಮಹಿಳೆಯರಿಗೆ ಮುಟ್ಟು ನಿಂತ ನಂತರ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಶರೀರದ ತೂಕವನ್ನು ಹೆಚ್ಚಾಗಲು ಬಿಡಬಾರದು. ಇನ್ನು ಧೂಮಪಾನ, ಮದ್ಯಪಾನ ಸೇವನೆಯಿಂದಲೂ ಕ್ಯಾನ್ಸರ್‌ ಬರಬಹುದು. 

ಮದುವೆಯಾಗದವರಲ್ಲಿ, ಮಕ್ಕಳಾಗದ ಮಹಿಳೆಗೆ ಅಥವಾ ಮಗುವಿಗೆ ಯಾವುದೋ ಕಾರಣದಿಂದ ಸ್ತನ್ಯಪಾನ ಮಾಡದಿದ್ದರೆ ಅಂತಹ ಮಹಿಳೆಯರಿಗೆ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳಬಹುದು. ಹಾರ್ಮೋನು ಮಾತ್ರೆ ತೆಗೆದುಕೊಳ್ಳುವುದೂ ಕ್ಯಾನ್ಸರ್‌ ತರಬಲ್ಲದು. ಹಾಗಾಗಿ ವೈದ್ಯರ ಸೂಚನೆಯಂತೆ ಅಗತ್ಯ ಸಂದರ್ಭಗಳಲ್ಲಿ ಮಾತ್ರ ಹಾರ್ಮೋನು ಮಾತ್ರೆ ಸೇವಿಸಬೇಕು ಎಂದು ವಿನಯಾ ಮಾಹಿತಿ ನೀಡುತ್ತಾರೆ. 

‘ಸ್ತನ ಕ್ಯಾನ್ಸರ್‌ ಬಗ್ಗೆ  ಭಯಪಡಬೇಕಾಗಿಲ್ಲ. ಇದನ್ನು ಮನೆಯಲ್ಲಿ ನಾವೇ ಪರೀಕ್ಷೆ ಮಾಡಿಕೊಳ್ಳಬಹುದು. ಋತುಸ್ರಾವದ ಸಮಯದಲ್ಲಿ ಸ್ತನಗಳಲ್ಲಿ ನೋವು ಅಥವಾ ಸ್ವಲ್ಪ ಗಟ್ಟಿಯಾಗಿದ್ದಂತೆ ಅನಿಸುತ್ತದೆ. ಇದು ಎಲ್ಲರಲ್ಲಿಯೂ ಸಾಮಾನ್ಯ. ಇದರಿಂದ ಸ್ತನ ಕ್ಯಾನ್ಸರ್‌ ಬಂದಿರಬಹುದು ಎಂದು ಆತಂಕ ಪಡುವ ಅಗತ್ಯವಿಲ್ಲ. 25 ವರ್ಷದ ನಂತರ ಯುವತಿಯರು ಋತುಸ್ರಾವದ ಆರು – ಏಳು ದಿನಗಳ ನಂತರ ಸ್ತನಗಳನ್ನು ಬೆರಳಿನಿಂದ ಮುಟ್ಟಿ ಗಂಟು ಏನಾದರೂ ಆಗಿದೆಯೇ ಎಂದು ಪರೀಕ್ಷಿಸಿಕೊಂಡರಾಯಿತು. ಆಗ ಅನುಮಾನ ಬಂದರೆ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಅವರು. 

ಸ್ತನ ಕ್ಯಾನ್ಸರ್‌ ಅನ್ನು ಆರಂಭದಲ್ಲೇ ಮಮೋಗ್ರಾಮ್‌ ಪರೀಕ್ಷೆಯ ಮೂಲಕ ಪತ್ತೆಹಚ್ಚಬಹುದು. ಇದರಲ್ಲಿ ಸಣ್ಣ ಗಂಟು ಆಗಿದ್ದರೂ ಆರಂಭಿಕ ಹಂತದಲ್ಲೇ ತಿಳಿಯುತ್ತದೆ. ಹೀಗಾಗಿ 45 ವರ್ಷದ ನಂತರ ಮಹಿಳೆಯರಲ್ಲಿ ಇದು ಕಂಡುಬರುವ ಸಾಧ್ಯತೆಯಿರುವುದರಿಂದ ವರ್ಷಕ್ಕೊಂದು ಬಾರಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭದಲ್ಲೇ ಪತ್ತೆ ಹಚ್ಚುವುದರಿಂದ ಕ್ಯಾನ್ಸರ್‌ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಕಿತ್ತು ಹಾಕಬಹುದು. ದೇಹದ ಬೇರೆ ಭಾಗಗಳಿಗೂ ಹರಡುವುದನ್ನು ತಪ್ಪಿಸಬಹುದು. 

ಬಿಗಿಯಾದ ಬ್ರಾಗಳನ್ನು ಧರಿಸುವುದರಿಂದ ಎದೆ ಕೆಳಭಾಗದಲ್ಲಿ ತುರಿಕೆ, ಗಾಯಗಳಾಗಬಹುದು. ಅಲ್ಲಿ ಚರ್ಮ ಸೂಕ್ಷ್ಮವಾಗಿರುತ್ತದೆ. ಬೆವರು ಹಾಗೂ ಬಿಗಿಯಾದ ಉಡುಪು ಒತ್ತುವುದರಿಂದ ಅಲ್ಲಿ ತುರಿಕೆ ಕಾಣಿಸಿಕೊಳ್ಳಬಹುದು. ಅಲ್ಲಿಗೆ ಉಗುರು ತಾಕಿದಾಗ ಅಲರ್ಜಿಯಾಗಬಹುದು. ಬಿಗಿಯಾದ ಉಡುಪು, ಎಲಾಸ್ಟಿಕ್‌ ಬಟ್ಟೆಗಳಿಂದ ರಕ್ತ ಪರಿಚಲನೆ ಸರಾಗ ನಡೆಯುವುದಿಲ್ಲ. ಇದರಿಂದ ಆ ಭಾಗದಲ್ಲಿ ಜೋಮು ಕಾಣಿಸಿಕೊಳ್ಳಬಹುದು. ಆದರೆ ಬಿಗಿಯಾದ ಉಡುಪುಗಳಿಂದ ಕ್ಯಾನ್ಸರ್‌ ಗಡ್ಡೆ ಕಾಣಿಸಿಕೊಳ್ಳಬಹುದು ಎಂಬುದು ಸತ್ಯವಲ್ಲ.  ಬಿಸಿಲಿನಲ್ಲಿ ಮೈ ಮುಚ್ಚುವ ಹಾಗೇ ಬಟ್ಟೆ ಹೊದ್ದುಕೊಂಡು ಹೋಗುವುದು ಉತ್ತಮ. ಕೆಲವರಿಗೆ ಸೂರ್ಯನ ಕಿರಣಗಳಿಂದ ಅಲರ್ಜಿ ಇರುತ್ತದೆ. ಆಗ ಅವರಲ್ಲಿ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಆದರೆ ಇದರಿಂದ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಚರ್ಮದ ಕ್ಯಾನ್ಸರ್‌ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ವಿನಯಾ.

ಸ್ತನ ಕ್ಯಾನ್ಸರ್‌ ಬರದಂತೆ ಮುನ್ನೆಚ್ಚರಿಕೆ
* ದೈಹಿಕವಾಗಿ ಫಿಟ್‌ ಆಗಿರಬೇಕು. ಎತ್ತರಕ್ಕೆ ತಕ್ಕಂತೆ ತೂಕ ಹೊಂದಿರಬೇಕು. ಅತಿಯಾದ ಬೊಜ್ಜಿನಿಂದಲೂ ಸ್ತನ ಕ್ಯಾನ್ಸರ್‌ ಬರಬಹುದು
* ಆರೋಗ್ಯಕರ ಆಹಾರ ಸೇವನೆ ಉತ್ತಮ. ಆಹಾರದಲ್ಲಿ ಹಣ್ಣು, ಹಾಲು, ತರಕಾರಿ, ಮಾಂಸ ಇರಲಿ
* ಮಗುವಿಗೆ ಸ್ತನ್ಯಪಾನ ಮಾಡಿ. ಅನಾರೋಗ್ಯ ಕಾರಣ ಹೊರತುಪಡಿಸಿ, ಅಂದ ಹಾಳಾಗುತ್ತದೆ, ಸ್ತನ ಜೋತುಬೀಳುತ್ತದೆ ಎಂದು ಮಗುವಿಗೆ ಹಾಲುಣಿಸದೇ ಇರಬಾರದು. 
* ಧೂಮಪಾನ ಹಾಗೂ ಮದ್ಯಪಾನ ಮಾಡಲೇಬಾರದು
* ವಯಸ್ಸಾದವರಲ್ಲಿ ಸ್ತನ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿರುವುದರಿಂದ ವರ್ಷಕ್ಕೊಮ್ಮೆ ಮಮೋಗ್ರಾಮ್‌ ಚಿಕಿತ್ಸೆ ಮಾಡಿಸಿಕೊಂಡರೆ ಉತ್ತಮ


–ವಿನಯಾ ಶ್ರೀನಿವಾಸ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !