ಬೆಂಗಳೂರು: ‘ಕಾವ್ಯ ಅಥವಾ ಸಾಹಿತ್ಯಕ್ಕೆ ಕರುಳಿರಬೇಕು. ಆ ಕರುಳಿಗೆ ಕಣ್ಣಿರಬೇಕು. ಆ ಕಣ್ಣಿಗೆ ಕನಸಿರಬೇಕು. ಕನಸು ಮಣ್ಣು ಮುಟ್ಟಿದ ಮನಸ್ಸಾಗಿರಬೇಕು’ ಎಂದು ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಜರ್ಮನಿಯ ಎಷ್ಬಾರ್ನ್‌ನ ರಂಗಮಂಥನ ಸಂಸ್ಥೆಯು ಆನ್‌ಲೈನ್ ಮೂಲಕ ಹಮ್ಮಿಕೊಂಡಿದ್ದ ‘ಕನ್ನಡ ಕಾವ್ಯ ಕನ್ನಡಿ’ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಉತ್ತಮ ಕಾವ್ಯಗಳ ರಚನೆಗೆ ಅನುಭವದ ಜೊತೆಗೆ ಅಧ್ಯಯನದ ಅಗತ್ಯವೂ ಹೆಚ್ಚಿದೆ. ಅಧ್ಯಯನದಿಂದ ನಮ್ಮ ಸ್ಥಾನ ನಿರ್ದೇಶನವಾಗುತ್ತದೆ. ಪರಂಪರೆಯ ಪ್ರಜ್ಞೆ ಹಾಗೂ ಸಮಕಾಲೀನ ಪ್ರಜ್ಞೆ ಸೇರಿದಾಗಲೇ ಸಾಹಿತ್ಯ ಸೃಷ್ಟಿಯ ಸಾಧ್ಯತೆಗಳು ಹೆಚ್ಚುತ್ತದೆ. ನಮ್ಮ ಸಂವೇದನಾ ಶೀಲತೆಯೂ ಹೆಚ್ಚಾಗುತ್ತದೆ. ಚಲನಶೀಲತೆಯೂ ಬರುತ್ತದೆ. ಸಾಹಿತ್ಯದ ಸಾಧ್ಯತೆಗಳು ಸ್ಥಾವರವಲ್ಲ ಅವು ಚಲನಶೀಲವಾದುವು. ನಮ್ಮ ಅಂತರಾಳದಿಂದ ಬರುವ ಎಷ್ಟೋ ಮಾತುಗಳು ಕಾವ್ಯದ ಶಕ್ತಿ ಮತ್ತು ಸ್ಪರ್ಶವನ್ನು ಹೊಂದಿರುತ್ತವೆ’ ಎಂದರು.
‘ಅಂತರಂಗದಿಂದ ಬರುವ ಗೊಣಗುವ ಮಾತುಗಳಿಗೂ ಕಾವ್ಯದ ಶಕ್ತಿ ಇರುತ್ತದೆ ಎಂದು ಕವಿಯೊಬ್ಬರು ಹೇಳುತ್ತಾರೆ. ಗದ್ಯ ಮತ್ತು ಪದ್ಯಕ್ಕೆ ವ್ಯತ್ಯಾಸವಿದೆ. ಅದನ್ನು ಅರ್ಥಮಾಡಿಕೊಳ್ಳಬೇಕು. ಕನ್ನಡವನ್ನು ಮನಸ್ಸಿನಲ್ಲಿ ಉಳಿಸಿಕೊಂಡಿರುವುದೇ ಒಂದು ಕಾವ್ಯ. ಮಾತೃಭಾಷೆ ಅಥವಾ ಹುಟ್ಟಿ ಬೆಳೆದ ಪ್ರದೇಶದ ಭಾಷೆ ಮತ್ತು ಅಲ್ಲಿನ ನೆನಪುಗಳನ್ನು ಉಳಿಸಿಕೊಂಡಿರುವುದೇ ಕಾವ್ಯದ ಮನಸ್ಸು, ಕವಿಯ ಮನಸ್ಸು’ ಎಂದು ತಿಳಿಸಿದರು.
ವಿದುಷಿ ನಂದಿನಿ ನಾರಾಯಣ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.