ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದ ಅಂಚೆ

Last Updated 4 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಕರ್ನಾಟಕ ದರ್ಶನ, ಫೆ.19ರ ಸಂಚಿಕೆಯಲ್ಲಿ ಪ್ರಕಟವಾದ ಮಾಲತಿ ಹೆಗಡೆಯವರ 'ಬಿದಿರು ಹೆಣೆಯುವವರ ಬದುಕು' ಲೇಖನ ಓದಿ ನಮ್ಮ ಗ್ರಾಮೀಣ ಕಸುಬುಗಳು ಅವಶೇಷದತ್ತ ಹೋಗುತ್ತಿರುವ ಕುರಿತು ಕಸಿವಿಸಿಯಾಯಿತು. ನೆನಪು ಮೂರು ದಶಕ ಹಿಂದೆ ಹೋಗಿ ಬಂತು. ಉತ್ತರ ಕರ್ನಾಟಕದ ವೈಶಿಷ್ಟ್ಯ ಈ ಬಿದಿರು. ಶಿಸುನಾಳ ಶರೀಫರ 'ಬಿದಿರು' ಪದ್ಯ ಕೇಳದವರಿಲ್ಲ. ಈಗ ಬಿದಿರು ಅವಸಾನವಾಗಿದೆ. ನಮ್ಮ ಮಲೆನಾಡಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ಅದು ತೆನೆ ಬಿಟ್ಟು ಸತ್ತು ಹೋಗಿದೆ.ಅದರ ಆಯಸ್ಸು ಅರವತ್ತು ವರ್ಷ. ಈಗ ಮತ್ತೆ ಜೀವಾಂಕುರ ಪಡೆಯುತ್ತಿದೆ.

ಬಯಲು ಸೀಮೆಯಲ್ಲಿ ಬುಟ್ಟಿ ಹೆಣೆಯುವುದು, ಕೇದಿಗೆಯಿಂದ ಹಗ್ಗ ತಯಾರಿಸುವುದು ಮುಗಿದು ಹೋದ ಕತೆ, ಮಲೆನಾಡಿನಲ್ಲೂ ತ್ಯಾಮೆ, ವಾಟೆ, ಬೆತ್ತಗಳಿಂದ ಭರಪೂರ ಬುಟ್ಟಿ, ಅಡಿಕೆ ಒಣಗಿಸಲು ತಟ್ಟೆ(ಚಾಪೆ),ಹುಲ್ಲು ಚಾಪೆ, ಈಚಲು ಚಾಪೆ ತಯಾರಿಸುವ ಕಸುಬುಗಳು ಮರೆಯಾಗುತ್ತಿವೆ.

ಕೃಷಿಕರು, ಕಸುಬುದಾರರು, ಕುಶಲ ಕರ್ಮಿಗಳು ಇನ್ನು ಸ್ವಲ್ಪ ದಿನಗಳಲ್ಲಿ ಕಾಣಲೂ ಸಿಗದ ಹಂತಕ್ಕೆ ಹೋಗಿದ್ದಾರೆ. ಅಷ್ಟರಮಟ್ಟಿಗೆ ಗ್ರಾಮೀಣ ಕಸುವು ಕೊನೆಯ ಕೊಂಡಿಯಲ್ಲಿ ಜೀವ ಹಿಡಿದುಕೊಂಡು ನಿಂತಿದೆ. ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಗಳು, ಅಂದದ ವೇದಿಕೆಗೆ ಚಂದದ ಮಾತಾಗದೆ ಸರ್ಕಾರ ಮರೆಯಾಗುತ್ತಿರುವ ಇಂಥ ಸಾವಿರಾರು ಕಸುಬುಗಳಿಗೆ ಮರುಜೀವ ಕೊಡಬೇಕಾಗಿದೆ. ಕಲಿಯುವ ಯುವ ಶಕ್ತಿಗೆ ನಮ್ಮಲ್ಲಿ ಕೊರತೆ ಇಲ್ಲ. ಗ್ರಾಮೀಣ ಕಸುಬು ಅಭಿವೃದ್ಧಿ ಮಾಡಲು ಡಿಪ್ಲೊಮಾ ದಂತಹ ಕೋರ್ಸ್‌ ಮಾಡಬೇಕಾಗಿದೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಆ ಕಸುಬುಗಳನ್ನು ಉಳಿಸಿ ಬೆಳೆಸಬಾಕಾಗಿದೆ.
-ತಿರುಪತಿ ನಾಯಕ್, ಹೊಸನಗರ

***
ಮಾಲತಿ ಹೆಗಡೆಯವರ ಬಿದಿರು ಕುರಿತ ಲೇಖನ ಬಹಳ ಚೆನ್ನಾಗಿತ್ತು. ಲೇಖಕರು ಮೇದಾರರ ಬವಣೆ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ರಾಜ್ಯ ಸರ್ಕಾರ ಬಿದಿರಿನ ವಸ್ತುಗಳನ್ನು ತಯಾರಿಸುವವರಿಗೆ ಉತ್ತೇಜನ ನೀಡಬೇಕು. ಅವರಿಗೆ ಸೌಲಭ್ಯಗಳನ್ನು ನೀಡಬೇಕು. ಗುಡಿಕೈಗಾರಿಕೆಗಳನ್ನು ರಕ್ಷಿಸಬೇಕು.

ಎಂ.ಎನ್.ಯೋಗೇಶ್ ಅವರು ಬರೆದ ಮಂಜೇಗೌಡರ ರೋಬೊ ಲೇಖನ ಉತ್ತಮ ಮಾಹಿತಿಯನ್ನು ಒಳಗೊಂಡಿತ್ತು. ಕೊಳವೆಬಾವಿಯಲ್ಲಿ ಬಿದ್ದ ಮಕ್ಕಳನ್ನು ಎತ್ತಲು ಈ ರೋಬೊ ಸಹಾಯವಾಗುತ್ತದೆ ಎಂದು ಕೇಳಿ ಅಚ್ಚರಿಯಾಯಿತು.
-ಕೆ.ಎಲ್.ಬಾಬು, ಬೀರೂರು

**
ಕರ್ನಾಟಕ ದರ್ಶನ, ಫೆ.12ರ ಸಂಚಿಕೆಯಲ್ಲಿ ಪ್ರಕಟವಾದ ’ಇಲ್ಲಿ ರೈಲಿಗೂ ಬರ್ತಡೆ’ ಲೇಖನ ಮನುಷ್ಯರಿಗೆ ಯಂತ್ರಗಳೊಂದಿಗಿನ ಭಾವನಾತ್ಮಕ ಸಂಬಂಧವನ್ನು ತೆರೆದಿಟ್ಟಿತು. ಲೇಖನ ಬರೆದ ಬಿ.ಸುಮಾ ಅವರಿಗೆ ಧನ್ಯವಾದಗಳು.

ಇದೇ ಸಂಚಿಕೆಯಲ್ಲಿ ಪ್ರಕಟವಾದ ಶರತ್ ಹೆಗ್ಡೆಯವರ ‘ಪವರ್‌ಫುಲ್ ತ್ಯಾಜ್ಯ’ ಲೇಖನದಲ್ಲಿ ಗೊಬ್ಬರದಿಂದ ವಿದ್ಯುತ್ ತಯಾರಿಸುವ ವಿಷಯ ತುಂಬಾ ಅಚ್ಚರಿ ಮೂಡಿಸಿತು. ಇಂಥ ಮಾದರಿಗಳು ರಾಜ್ಯದ ಎಲ್ಲ ನಗರ, ಪಟ್ಟಣಗಳಲ್ಲೂ ಆಗಬೇಕು.
-ವೇದಮೂರ್ತಿ ಮದ್ದೇರು, ಗಾರೆಹಟ್ಟಿ, ಚಿತ್ರದುರ್ಗ

**
ಫೆ.19ರ ಸಂಚಿಕೆಯಲ್ಲಿ ಪ್ರಕಟವಾದ ’ಟೇಲರ್ ಬಂಗಲೆಗೆ ಮರಿಮಕ್ಕಳು’ ಲೇಖನ ಓದಿದೆ. ತನ್ನ ಮುತ್ತಜ್ಜ ಕಟ್ಟಿಸಿದ ಬಂಗಲೆ ನೋಡಲು ಅಷ್ಟು ದೂರದಿಂದ ಬಂದಿದ್ದ ಮರಿ ಮಕ್ಕಳ ಆಸಕ್ತಿ ಕಂಡು ಸಂತಸವಾಯಿತು. ತಮಗೂ ಸುರಪರಕ್ಕೂ ಸಂಬಂಧಗಟ್ಟಿಗೊಳಿಸುವುದಕ್ಕಾಗಿ ತಮ್ಮ ಮಕ್ಕಳನ್ನು ಮುಂದಿನ ಸಾರಿ ಇಲ್ಲಿಗೆ ಕರೆತರುವುದಾಗಿ ಹೇಳಿರವ ಅವರ ಮಾತುಗಳು ಬಹಳ ಖುಷಿಕೊಟ್ಟವು.ವಿದೇಶದಲ್ಲಿರುವ ಟೇಲರ್ ಸಹೋದದರಿಗೂ ಅವರನ್ನು ಪರಿಚಯಿಸಿದ ಲೇಖಕ ರಾಹುಲ್ ಬೆಳಗಲಿಯವರಿಗೂ ಧನ್ಯವಾದಗಳು
-ಕೊಹಿಮ, ಬಸರಕೋಡು

***
ಕನ್ನಡ ನಾಡಿನ ಅಧಿದೇವತೆ, ಕನ್ನಡಾಂಬೆ ಎಂದೆಲ್ಲ ಕರೆಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಭುವನಗಿರಿಯದಲ್ಲಿರುವ ‘ಭುವನೇಶ್ವರಿ’ ದೇವಿ ಕುರಿತ ಲೇಖನ ಅಪರೂಪದ ಮಾಹಿತಿಗಳನ್ನು ಒಳಗೊಂಡಿತ್ತು. ರವೀಂದ್ರಭಟ್ ಬಳಗುಳಿಯವರು ಭುವನಗಿರಿ ಮತ್ತು ದೇವಾಲಯದ ಹಿಂದಿರುವ ಇತಿಹಾಸವನ್ನು ಸೊಗಸಾಗಿ ವಿವರಿಸಿದ್ದಾರೆ.
-ಪಿ.ಜಯವಂತ ಪೈ, ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT