ಶನಿವಾರ, ಮೇ 21, 2022
20 °C
ಜನ್ಮ ಶತಾಬ್ದಿ

ನಾದಪುತ್ರನ ನೂರು ನೆನಪುಗಳು

ಎಸ್‌.ಆರ್‌.ರಾಮಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಭಾರತದ ಶಾಸ್ತ್ರೀಯ ಸಂಗೀತ ದಿಗ್ಗಜರಲ್ಲಿ ಒಬ್ಬರೆನಿಸಿದ ಭೀಮಸೇನ ಜೋಶಿ ಅವರ ಜನ್ಮ ಶತಾಬ್ದಿ ವರ್ಷವಿದು (4–2–1922– 24–1–2011). ಗುರುವನ್ನು ಹುಡುಕುತ್ತಾ ದೇಶ ಸುತ್ತಿ, ಸವಾಯಿ ಗಂಧರ್ವರ ಪ್ರಿಯ ಶಿಷ್ಯನಾಗಿ, ಕಿರಾಣಾ ಘರಾಣಾದ ಮೇರು ಕಲಾವಿದನಾಗಿ ಅವರು ಮೂಡಿಸಿದ ಛಾಪು ಬಲುದೊಡ್ಡದು. ಶಾಸ್ತ್ರೀಯ ಸಂಗೀತಗಾರರೆಂದರೆ ಋಷಿಯಂತೆ ಇರುವವರು ಎಂಬ ಕಲ್ಪನೆಗೆ ತದ್ವಿರುದ್ಧವಾಗಿತ್ತು ಅವರ ಬದುಕು. ಅವರ ಜನ್ಮ ಶತಾಬ್ದಿಯ ನೆಪದಲ್ಲಿ ಹೀಗೊಂದು ನೆನಪುಗಳ ಮೆರವಣಿಗೆ

2011ರಲ್ಲಿ ಅಗಲಿದ ಭೀಮಸೇನ ಜೋಶಿ ಅವರನ್ನು ನಮ್ಮ ಕಾಲದ ಅತ್ಯಂತ ಶ್ರೇಷ್ಠ ಶಾಸ್ತ್ರೀಯ ಸಂಗೀತಗಾರ ಎಂದು ಹಲವರು ಹೇಳುವುದುಂಟು. ಇದೊಂದು ಚರ್ಚಾರ್ಹ ಸಂಗತಿಯಾದರೂ ಅವರು ನಮ್ಮ ಕಾಲದ ಅತ್ಯಂತ ಪ್ರಭಾವಿ ಶಾಸ್ತ್ರೀಯ ಸಂಗೀತಗಾರರಾಗಿದ್ದರು ಎನ್ನುವುದಕ್ಕೆ ಹೆಚ್ಚಿನವರ ಅಪಸ್ವರ ಇದ್ದಿರಲಾರದು.

ಜೋಶಿಯವರು ಏಕೆ ಪ್ರಭಾವಿ ಎಂದರೆ ಕನಿಷ್ಠ ಎರಡು ಪೀಳಿಗೆಗಳ ಸಂಗೀತಗಾರರು ಅವರಂತಾಗಲು ಬಯಸಿದ್ದರು. ಅಲ್ಲದೆ, ಹಲವು ಕಲಾವಿದರು ಮುಗ್ಧವಾಗಿ ಅವರ ಶೈಲಿಯನ್ನು ಅನುಕರಿಸುತ್ತಿದ್ದರು. ಜೋಶಿ ಅವರು ವೈಯಕ್ತಿಕವಾಗಿ ಅಂತಹ ಪ್ರಭಾವಳಿಯನ್ನು ಹೊಂದಿದ್ದರು. ವೇದಿಕೆಯ ಮೇಲೂ ಅವರ ತಾರಾ ವರ್ಚಸ್ಸು ಕೆಲಸ ಮಾಡುತ್ತಿತ್ತು.

ಜೊತೆ ಜೊತೆಗೆ ಸಂಗೀತ ಸಂತನಿಗೆ ಇರಬೇಕೆಂದು ನಂಬಲಾಗಿದ್ದ ಗುಣಗಳಿಗೆ ವಿರುದ್ಧವಾಗಿದ್ದ ಅವರ ಗುಣಗಳೂ ಗಮನಸೆಳೆಯುತ್ತಿದ್ದವು. ಅವುಗಳೆಂದರೆ ಗ್ಲಾಮರ್‌, ಸಮೂಹ ಸೆಳೆತ ಹಾಗೂ ವೇಗದ ಕಾರುಗಳ ಮೇಲಿನ ಅವರ ಪ್ರೀತಿ! (ಶಾಸ್ತ್ರೀಯ ಸಂಗೀತಗಾರನೆಂದರೆ ಬಡವನಾಗಿದ್ದು, ಋಷಿಯಂತೆ ಸಂಯಮದಿಂದ ಇರುವವನು ಎಂದು ಸಿನಿಮಾಗಳಲ್ಲಿ ನೋಡಿ ನಂಬಿದವರು ನಾವಲ್ಲವೇ?)

ಜೋಶಿ ಅವರು ಮರ್ಸಿಡಿಸ್‌ ಕಾರನ್ನು ಓಡಿಸುತ್ತಿದ್ದರು. ಅವರಿಗೆ ಕುಡಿತದ ವ್ಯಾಮೋಹವೂ ಇತ್ತು. ಜೋಶಿ ಅವರ ರಂಗದ ಗೆಳೆಯರಾಗಿದ್ದ ಗಿರೀಶ ಕಾರ್ನಾಡರು ಒಮ್ಮೆ ಟಿವಿ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಈ ಮಹಾನ್‌ ಕಲಾವಿದ ಮದ್ಯವ್ಯಸನಿ’ ಎಂದು ಮುಕ್ತವಾಗಿಯೇ ಹೇಳಿದ್ದರು.

ಆದರೆ, ವಿಶೇಷ ಏನೆಂದರೆ ಜೋಶಿ ಅವರ ಸಂಗೀತ ಈ ವ್ಯಸನದಿಂದ ಏನನ್ನೂ ಕಳೆದುಕೊಳ್ಳಲಿಲ್ಲ. ಅವರು 80 ವರ್ಷ ದಾಟಿದ ಮೇಲೂ ಅದ್ಭುತವಾಗಿಯೇ ಹಾಡುತ್ತಿದ್ದರು. ಅವರಿಗಿಂತ ಚಿಕ್ಕವರಾದ ಎಷ್ಟೋ ಗಾಯಕರಿಗೆ ಧ್ವನಿ ಕೈಕೊಟ್ಟಿದ್ದನ್ನು ಮರೆಯುವಂತಿಲ್ಲ. 2002ರಲ್ಲಿ ಅವರು ಬೆಂಗಳೂರಿನಲ್ಲಿ ಕಛೇರಿಯನ್ನು ನೀಡಿದಾಗ, ಅವರು ಆಗತಾನೆ ಮಿದುಳಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡವರು ಎಂದು ಹೇಳಿದ್ದರೆ ಅಲ್ಲಿದ್ದ ಯಾರೂ ನಂಬುತ್ತಿರಲಿಲ್ಲ. ಹೌದು, ಅವರ ದೇಹಕ್ಕೆ ಆದ ಭಯಾನಕ ಹಾನಿ –ಕಾಲದ ದಾಳಿಯಿಂದ ಮತ್ತು ಸ್ವಯಂ ಪ್ರಮಾದದಿಂದ– ಎಂದಿಗೂ ಅವರ ಸಂಗೀತವನ್ನು ಬಾಧಿಸಲಿಲ್ಲ.

ಸಹಕಲಾವಿದರ ಕುರಿತ ತಮ್ಮ ಅಭಿಪ್ರಾಯಗಳನ್ನು ನಿಷ್ಠುರವಾಗಿ ಹಾಗೂ ನೇರಾನೇರವಾಗಿ ಹೇಳುತ್ತಿದ್ದ ಉಸ್ತಾದ್‌ ವಿಲಾಯತ್‌ ಖಾನ್‌ ಅವರನ್ನು ಸಂದರ್ಶಿಸುವ ಅವಕಾಶ ನನಗೊಮ್ಮೆ ಸಿಕ್ಕಿತ್ತು. ‘ನಿಮ್ಮ ಮೆಚ್ಚಿನ ಸಂಗೀತಗಾರರು ಯಾರು’ ಎಂಬ ಪ್ರಶ್ನೆಯನ್ನು ನಾನು ಕೇಳಿದ್ದೆ. ಉಸ್ತಾದರು ಕೆಲವು ಹೆಸರುಗಳನ್ನು ಹೇಳಿದ್ದರು. ಅವರು ‘ಭೀಮಸೇನ’ ಎಂಬ ಹೆಸರು ಹೇಳುವಾಗ ಅವರ ಧ್ವನಿಯಲ್ಲಿ ಅಕ್ಕರೆ ಉಕ್ಕುತ್ತಿದ್ದುದನ್ನು ನಾನು ಗುರುತಿಸಿದ್ದೆ.

ಶಾಸ್ತ್ರೀಯ ಸಂಗೀತದ ಆಳ–ಅಗಲ ಬಲ್ಲವರನ್ನು ಪ್ರಭಾವಿಸಿದಷ್ಟೇ ಅದರ ವ್ಯಾಕರಣವನ್ನೇ ಅರಿಯದ ಜನರನ್ನೂ ಸೆಳೆದಿದ್ದರು ಅವರು. ಜೋಶಿ ಅವರು ಕೊನೆಯ ಬಾರಿ ಭಜನ್‌ ಹಾಗೂ ಅಭಂಗಗಳನ್ನು ಪ್ರಸ್ತುತಪಡಿಸಿದ ಕಾರ್ಯಕ್ರಮಕ್ಕೆ 50 ಸಾವಿರ ಶ್ರೋತೃಗಳು ಸಾಕ್ಷಿಯಾಗಿದ್ದರು ಎನ್ನುವುದು ಹಿನ್ನೆಲೆ ಸಂಗೀತಗಾರ ಶಂಕರ್‌ ಮಹಾದೇವನ್‌ ಕೊಡುವ ಮಾಹಿತಿ. ಅಷ್ಟೇ ದೊಡ್ಡ ಸಂಖ್ಯೆಯ ಶ್ರೋತೃಗಳು ಜೋಶಿಯವರೇ ಪ್ರತಿವರ್ಷ ಪುಣೆಯಲ್ಲಿ ಸಂಘಟಿಸುತ್ತಿದ್ದ ಸವಾಯಿ ಗಂಧರ್ವ ಶಾಸ್ತ್ರೀಯ ಸಂಗೀತೋತ್ಸವದಲ್ಲೂ ಪಾಲ್ಗೊಳ್ಳುತ್ತಿದ್ದರು.

ಜೋಶಿ ಅವರ ಬದುಕಿನ ಕುರಿತು ಹಲವು ಕೃತಿಗಳು ಬಂದಿವೆ. ಅವರದು ಕರ್ನಾಟಕದ ಗದಗಿನ ಕನ್ನಡಿಗರ ಕುಟುಂಬ. ಉಸ್ತಾದ್‌ ಅಬ್ದುಲ್‌ ಕರೀಂ ಖಾನ್‌ ಅವರ ಧ್ವನಿಮುದ್ರಿಕೆ ಕೇಳಿದ ಮೇಲೆ ಗುರುವನ್ನು ಹುಡುಕಿಕೊಂಡು ತವರಿನಿಂದ ದೂರ ಹೊರಟರು. ಕೈಯಲ್ಲಿ ಹಣವಿಲ್ಲದೆ ಉತ್ತರ ಭಾರತದ ತುಂಬಾ ಅವರು ಅಲೆದರು. ಜೋಶಿ ಅವರ ತಂದೆ ಕೊನೆಗೆ ಅವರನ್ನು ಹುಡುಕಿಕೊಂಡು ಬಂದು ಉಸ್ತಾದ್‌ ಅಬ್ದುಲ್‌ ಕರೀಂ ಖಾನ್‌ ಅವರ ಶಿಷ್ಯರಾದ ಸವಾಯಿ ಗಂಧರ್ವರ ಗರಡಿಯೊಳಗೆ ಬಿಟ್ಟರು. ಅವರು ಕಿರಾಣಾ ಘರಾಣಾದ ವಾರಸುದಾರರಾದ ಬಗೆ ಇದು. ಗಂಗೂಬಾಯಿ ಹಾನಗಲ್‌ ಹಾಗೂ ಬಸವರಾಜ ರಾಜಗುರು ಅವರೂ ಇದೇ ಘರಾಣಾವನ್ನು ಪ್ರತಿನಿಧಿಸಿದವರು.

ಆದರೆ, ಬಲ್ಲವರು ಹೇಳುವಂತೆ, ಜೋಶಿ ನಿಸ್ಸಂದೇಹವಾಗಿ ಸ್ವಂತದ್ದನ್ನೇ ಸೃಷ್ಟಿಸಿದರು. ತಮ್ಮದೇ ರಾಗಗಳ ಮೂಲಕ ಭಜನ್‌ ಹಾಗೂ ಅಭಂಗಗಳನ್ನು ಪ್ರಸ್ತುತಪಡಿಸಿದರು. ಹಲವು ಪ್ರಖ್ಯಾತ ಸಂಗೀತಗಾರರು ಅವರನ್ನು ಅಭಿಮಾನದಿಂದ ‘ಕಳ್ಳ’ ಎಂದು ಕರೆಯುತ್ತಿದ್ದ ಕುರಿತು ಗಂಗೂಬಾಯಿ ಹಾನಗಲ್‌ ಅವರು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಬೇರೆ ಸಂಗೀತಗಾರರ ಮನೋಧರ್ಮ ಅರಿತು, ಅವರ ವಿನ್ಯಾಸಗಳನ್ನು ಕೇಳುತ್ತಿದ್ದ ಜೋಶಿ ಅವರು ಯಾವುದೇ ಪ್ರಯಾಸವಿಲ್ಲದೆ ಅವುಗಳನ್ನು ತಮ್ಮ ಸಂಗೀತದಲ್ಲಿ ಅಳವಡಿಸಿಕೊಳ್ಳುತ್ತಿದ್ದರು ಎಂದೂ ಗಂಗೂಬಾಯಿ ಹೇಳುತ್ತಿದ್ದರು.


ಪಂ. ಭೀಮಸೇನ ಜೋಶಿ

ಅವರ ಘರಾಣಾದ ರಾಗಗಳಾದ ಶುದ್ಧ ಕಲ್ಯಾಣ, ಯಮನ್‌, ದರ್ಬಾರಿ ಕಾನಡ ಹಾಗೂ ಮಿಯಾ ಮಲ್ಹಾರದ ಮೇಲೆ ಪ್ರಭುತ್ವ ಹೊಂದಿದ್ದ ಅವರು, ಲಲಿತ್‌ ಭಾಟಿಯಾರ್‌ ಮತ್ತು ಕಲಾಶ್ರೀ (ಕಲಾವತಿ ಹಾಗೂ ರಾಗೇಶ್ರೀ ರಾಗಗಳನ್ನು ಮಿಶ್ರಣಗೊಳಿಸಿ ಅವರೇ ಸೃಜಿಸಿದ ರಾಗ) ರಾಗಗಳ ಒಡೆಯರೂ ಆಗಿದ್ದರು. ‘ಅವರ ಎಲ್ಲ ರೆಕಾರ್ಡ್‌ಗಳು ಫಟಾಫಟ್‌ ಅಂತ ಶರವೇಗದಲ್ಲಿ ಮುಗಿದುಬಿಡುತ್ತಿದ್ದವು’ ಎಂದು ಎಚ್‌ಎಂವಿಯಲ್ಲಿ ಅವರ ಧ್ವನಿಮುದ್ರಿಕೆಗಳು ಬರಲು ಕಾರಣವಾದ ಗೋವಿಂದರಾವ್‌ ಮೆಲುಕು ಹಾಕುತ್ತಿದ್ದರು.

ಕನ್ನಡಿಗರು, ಹೆಮ್ಮೆಯಿಂದ ಅವರಿಗೆ ಪ್ರಶಸ್ತಿಗಳಿಂದ ಅಲಂಕರಿಸಲು ಉತ್ಸುಕರಾಗಿದ್ದರೆ, ಮರಾಠಿಗರು ಪುಣೆಯಲ್ಲಿ ಆಶ್ರಯ ನೀಡಿ, ಅವರ ಕಲೆಯನ್ನೂ ಪೋಷಿಸಿದವರು. ಇಬ್ಬರೂ ಪೈಪೋಟಿಗೆ ಬಿದ್ದವರಂತೆ ಜೋಶಿ ತಮ್ಮವರೆಂದು ವಾದಕ್ಕೆ ಇಳಿಯುತ್ತಿದ್ದರು. ಆದರೆ, ಅವರು ಇಡೀ ಭಾರತಕ್ಕೆ ಪ್ರಿಯರಾಗಿದ್ದವರು. ಅವರು ಕಛೇರಿ ನೀಡಲು ತುಂಬಾ ಇಷ್ಟಪಟ್ಟ ನಗರಗಳಲ್ಲಿ ಕೋಲ್ಕತ್ತವೂ ಒಂದು. ಅಲ್ಲಿನ ಪ್ರಬುದ್ಧ ಶ್ರೋತೃಗಳ ಪಡೆ, ಸಂಗೀತ ಸಂಸ್ಕೃತಿ ಅವರನ್ನು ಬಹುವಾಗಿ ಸೆಳೆದಿತ್ತು. ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಶಸ್ತಿ ಜೀವಿತಾವಧಿಯಲ್ಲೇ ಅವರಿಗೆ ಸಿಕ್ಕಿದ್ದು ಸೂಕ್ತವಾಗಿತ್ತು. ಅದಕ್ಕಿಂತ ಕಡಿಮೆಯಾದ ಯಾವ ಗೌರವವೂ ಅವರ ಕಲೆಗೆ ನ್ಯಾಯವನ್ನು ಒದಗಿಸುತ್ತಿರಲಿಲ್ಲ.

ಜೋಶಿಯವರ ರಾಗ ನಿರೂಪಣೆಗಳು ಸಣ್ಣದಾಗಿ ಅರಳುತ್ತಾ, ಬರುಬರುತ್ತಾ ಬೆಚ್ಚಗಾಗುತ್ತಾ, ಕೊನೆಗೆ ಸುರಳಿ, ಸುರಳಿಯಾಗಿ ಆಸ್ಫೋಟಗೊಳ್ಳುತ್ತಿದ್ದವು. ಅವರ ತಾನಗಳು ವಿದ್ಯುತ್‌ ಸಂಚಾರವನ್ನು ಮೂಡಿಸುತ್ತಿದ್ದವು. ಉಸಿರಾಡುವುದನ್ನೇ ಮರೆಯುತ್ತಿದ್ದ ಶ್ರೋತೃಗಳು ಮೂಕವಿಸ್ಮಿತರಾಗಿ ಆ ಸಂಗೀತದ ಅಲೆಯಲ್ಲಿ ತೇಲಿ ತೇಲಿ ಹೋಗುತ್ತಿದ್ದರು (ಉದಾಹರಣೆ ಬೇಕೇ? ಬಿಬಿಸಿ ನಿರ್ಮಿಸಿದ ಅವರ ಮಿಯಾ ಮಲ್ಹಾರ ರಾಗದ ಪ್ರಸ್ತುತಿ ಕಾರ್ಯಕ್ರಮವನ್ನು ಯುಟ್ಯೂಬ್‌ನಲ್ಲಿ ಆಲಿಸಿ). ಅವರ ಘರಾಣಾ ವಿಲಂಬ ಕಾಲದ ಪ್ರಸ್ತುತಿಗೆ ಹೆಸರಾಗಿದೆ. ಅದರಲ್ಲಿ ಪ್ರಾವೀಣ್ಯ ಸಾಧಿಸಿದ್ದ ಜೋಶಿಯವರು ಯಾವುದೇ ರಾಕ್‌ ಸಂಗೀತಕ್ಕೆ ಕಡಿಮೆ ಇಲ್ಲದಂತೆ ಧೃತ್‌ ಅನ್ನೂ (ವೇಗ) ಪ್ರಸ್ತುತಪಡಿಸುತ್ತಿದ್ದರು.

ಜೋಶಿಯವರ ಸಂಗೀತ ಸೌಧ ಸರಳವಾದುದು. ಆದರೆ, ಅಷ್ಟೇ ಸುಸ್ಥಿರ ವಿನ್ಯಾಸವನ್ನು ಹೊಂದಿರುವಂಥದು. ಹಲವು ಪ್ರಯೋಗಗಳನ್ನು ನಡೆಸುವ ಮೂಲಕ ಹೊಸದನ್ನು ಸೃಜಿಸಿದವರು ಅವರು. ಶಾಸ್ತ್ರೀಯ ಸಂಗೀತದ ಸಂಕೀರ್ಣ ಅಂಶಗಳನ್ನೂ ಸಾಮಾನ್ಯ ಶ್ರೋತೃವಿಗೆ ತಲುಪಿಸಬಲ್ಲ ಸಾಮರ್ಥ್ಯ ಅವರಲ್ಲಿತ್ತು. ಕಲೆಯ ಯಾವುದೇ ಆಯಾಮವನ್ನು ತೆಳುವುಗೊಳಿಸದೆ ಈ ಕಾರ್ಯವನ್ನು ಮಾಡಿದ್ದು ಅವರ ಹಿರಿಮೆ.

ಹನ್ನೊಂದು ವರ್ಷಗಳ ಹಿಂದೆ ಅವರು ಅಗಲಿದಾಗಲೇ, ಅವರ ಬದುಕು ದಂತಕಥೆಯಾಗಿ ಹೋಗಿತ್ತು. ಅವರ ಧ್ವನಿಮುದ್ರಿಕೆಗಳಲ್ಲಿ ಮಾತ್ರವಲ್ಲದೆ, ಅವರು ಬೆಳಗಿದ ಹಾದಿಯಲ್ಲಿ ನಡೆಯುವ ತಲೆಮಾರಿನ ಗಾಯಕರಲ್ಲೂ ಅವರು ಇನ್ನೂ ಬದುಕಿದ್ದಾರೆ.


ಯೌವನದ ದಿನಗಳಲ್ಲಿ ಪಂ. ಭೀಮಸೇನ ಜೋಶಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು