ಗುರುವಾರ , ಅಕ್ಟೋಬರ್ 21, 2021
22 °C

ಯಲ್ಲಮ್ಮನ ಸಂಗದಲಿ, ಚೌಡಿಕೆಯ ನಾದದಲೆ...

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

Deccan Herald

‘ಆ ಒಂದು ಪುಟ್ಟ ಪಯಣ, ಎಷ್ಟೆಲ್ಲಾ ಅನುಭವಗಳನ್ನು ಕೊಟ್ಟಿತು ಗೊತ್ತಾ?’ – ಬೆಳ್ಳಂಬೆಳಿಗ್ಗೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಉದ್ದದ ವಾದ್ಯವೊಂದನ್ನು ಹಿಡಿದು ಏರುದನಿಯಲ್ಲಿ ಜನಪದ ಹಾಡು ಹಾಡುತ್ತಾ ಕುಳಿತಿದ್ದ ಯುವತಿ, ಮಾತು ಶುರುವಿಟ್ಟುಕೊಂಡಿದ್ದು ಹೀಗೆ.

ಅವರು ಹಾಡುತ್ತಿದ್ದುದು ಉತ್ತರ ಕರ್ನಾಟಕದ ಸವದತ್ತಿ ಯಲ್ಲಮ್ಮನ ಪದ.‌

ಕಬ್ಬನ್ ಉದ್ಯಾನಕ್ಕೂ ದೂರದ ಯಲ್ಲಮ್ಮ ದೇವಿಗೂ ಕಥೆಯಂತಿರುವ ಹಾಡಿಗೂ ಈ ಸಂಗೀತ ಸಾಧನಕ್ಕೂ ಎಲ್ಲಿಂದೆಲ್ಲಿಯ ನಂಟು?  ಪ್ರಶ್ನೆಯೊಂದು ಕಣ್ಣಲ್ಲಿ ಕಾಣಿಸಿಕೊಳ್ಳುವಷ್ಟರಲ್ಲೇ, ‘ಇದೆಲ್ಲ ಶುರುವಾಗಿದ್ದು ವರ್ಷದಿಂದೀಚೆಗಷ್ಟೆ’ ಎಂದು ಮಾತಿಗೆ ಅಡಿಯಿಟ್ಟರು.  ಹೀಗೆ ಪಾರ್ಕಿನಲ್ಲಿ ಸಂಗೀತಧ್ಯಾನ ಮಾಡುವ ಇವರ ಹೆಸರು ಶಿಲ್ಪಾ ಮುಡಬಿ ಕೊತ್ತಕೋಟ. ಹುಟ್ಟಿ ಬೆಳೆದದ್ದು ಬೆಂಗಳೂರು. ಓದಿದ್ದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ. ಕ್ಯಾಮೆರಾ ಸೆಳೆತದಿಂದಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಯುನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಮಾಸ್ಟರ್ ಇನ್ ಫಿಲ್ಮ್ ಮೇಕಿಂಗ್ ಮುಗಿಸಿದರು. ಬೆಂಗಳೂರಿಗೆ ವಾಪಸ್ಸಾದ ನಂತರ ಕಿರುಚಿತ್ರಗಳ ಒಡನಾಟ. ‘ಇಲ್ಲಿಗೆ ಬಂದ ನಂತರ ಏಳು ವರ್ಷ ಕಿರುಚಿತ್ರಗಳನ್ನು ನಿರ್ಮಿಸಿದೆ. ಅವು ಹೆಸರು ತಂದುಕೊಟ್ಟವು. ಆದರೆ, ‘ಇದರಿಂದಾಚೆ ಏನೋ ಇದೆ’ ಎಂಬ ಕೊರೆತ ಮಾತ್ರ ಮನಸ್ಸನ್ನು ಬಿಡಲಿಲ್ಲ. ಹೊಸತರ ಹಂಬಲದಲ್ಲಿ ಪಾಂಡಿಚೇರಿಯ ಇಂಡಿಯನ್ ನಾಸ್ಟ್ರಂ ಥಿಯೇಟರ್‌ನ ಕುಮಾರನ್ ವಲವನ್ ಬಳಿ ಕೆಲಸ ಮಾಡಿದ್ದಾಯಿತು. ಅಲ್ಲಿಂದ ಜೊತೆಯಾದುದು ರಂಗಭೂಮಿಯ ನಂಟು.

ಅಚಾನಕ್ಕಾಗಿ ಸಿಕ್ಕ ಯಲ್ಲಮ್ಮ
ಒಮ್ಮೆ ನಾಟಕಕ್ಕೆ ಕಥೆಯ ಹುಡುಕಾಟದಲ್ಲಿದ್ದ ಸಂದರ್ಭದಲ್ಲಿ ಚರ್ಚೆಯ ನಡುವೆ ಯಲ್ಲಮ್ಮನ ವಿಷಯ ನುಸುಳಿತು. ಅಜ್ಜಿಯ ಕೈ ಹಿಡಿದು ಯಲ್ಲಮ್ಮನಾಟ ನೋಡಿದ ಬಾಲ್ಯದ ಚಿತ್ರವೂ ಮನದಲ್ಲಿ ಮಸುಕಾಗಿ ಕಾಣಿಸಿತು. ‘ಯಾಕಾಗಬಾರದು’ ಎಂದು ಉತ್ಸಾಹದಿಂದಲೇ ಯಲ್ಲಮ್ಮನಾಟದ ಪ್ರಯೋಗಕ್ಕೆ ತಂಡವನ್ನು ಅಣಿಗೊಳಿಸಲು ಮುಂದಾದರು.
ಎರಡು ತಿಂಗಳು ಸಂಶೋಧನೆ ನಡೆಯಿತು. ಪಾತ್ರ, ಸಂಭಾಷಣೆಗಳೂ ಸಿದ್ಧಗೊಂಡವು. ‘ನಿನ್ನ ಜೀವನಕ್ಕೆ ನೀ ಮಾಲೀಕಳಾಗು. ಪುರುಷನ ಮೇಲೆ ಅವಲಂಬಿತಳಾಗಬೇಡ’ ಎಂದ ಯಲ್ಲಮ್ಮನ ಆಲೋಚನೆಯನ್ನು ನಾಟಕಕ್ಕೆ ತಿರುಳಾಗಿಸಿಕೊಂಡರು.
ಯಲ್ಲಮ್ಮನಾಟ ವೇದಿಕೆ ಮೇಲೆ ಕಾಣಿಸಿಕೊಂಡಿತು. ಪುರಾಣ ಕಥೆಯ ಆಧುನಿಕ ಪ್ರಯೋಗಕ್ಕೆ ಶಹಬ್ಬಾಸ್‌ ಗಿರಿ ಸಿಕ್ಕಿತು. ಆ ಕಥೆ ವೇದಿಕೆಗಷ್ಟೇ ಸೀಮಿತವಾಗಲಿಲ್ಲ. ನಾಟಕದ ಹೊರತಾಗಿಯೂ ಯಲ್ಲಮ್ಮನ ಗುಂಗು ಮನಸ್ಸನ್ನು ಆವರಿಸಿತ್ತು...

ಹುಡುಕಾಟದ ಪಯಣ...
ಯಲ್ಲಮ್ಮನ ಕಥೆಯಲ್ಲಿ ಅಡಗಿರುವ ಹೆಣ್ಣಿನ ತುಮುಲಗಳು, ಯಲ್ಲಮ್ಮನನ್ನು ಆರಾಧಿಸುವ ಸಮುದಾಯಗಳ ಆಚಾರ–ವಿಚಾರ, ಅವರ ಕಲೆಗಳು, ಜೀವನಶೈಲಿ... ಇವೆಲ್ಲವೂ ಇವರನ್ನು ಕಾಡಿದವು. ಮತ್ತೆ ಹುಡುಕಾಟ. ಯಲ್ಲಮ್ಮನಿಗೆ ಸಂಬಂಧಿಸಿದ ಕಲೆಗಳ ಬಗ್ಗೆ ಕಿರುಚಿತ್ರ ಮಾಡಲು ನಿರ್ಧರಿಸಿದರು. ಕಾಣದ ಕಥೆಗಳನ್ನು, ಜನಪದ ಕಲೆಯನ್ನು, ಅದರಲ್ಲಿನ ಜೀವನ ಸಾರವನ್ನು ನಗರದ ಮಂದಿಗೆ ಮುಟ್ಟಿಸಬೇಕು ಎಂಬ ಹಂಬಲವೂ ಹುಟ್ಟಿಕೊಂಡಿತು. ಅದಕ್ಕೆ ಮೂರ್ತರೂಪ ಕೊಡಲು ಶಿಲ್ಪಾ ಆರಂಭಿಸಿದ್ದೇ ‘ಅರ್ಬನ್ ಫೋಕ್ ಪ್ರಾಜೆಕ್ಟ್’. ಈಗಿನ ಮಕ್ಕಳೇಕೆ ‘ಹುಯ್ಯೋ ಹುಯ್ಯೋ ಮಳೆರಾಯ’ ಹಾಡೋದಿಲ್ಲ? ರಾಗಿ ಕಣದಲ್ಲಿ ಕೂತು ಬೆಳದಿಂಗಳ ಊಟ ಸವಿಯುವ ಖುಷಿ ಈಗೇಕಿಲ್ಲ? ಪ್ರಪಂಚದ ಬಗ್ಗೆ ತಿಳಿದುಕೊಳ್ಳುವ ನಾವು ನಮ್ಮ ಸುತ್ತಲಿನ ಸಂಗತಿಗಳಿಗೆ ಕುರುಡಾಗುತ್ತೇವೇಕೆ’ ಈ ಪ್ರಶ್ನೆಗಳ ಮೂಟೆ ಹೊತ್ತು, ನಗರದ ಬದುಕಿಗೆ ಬೆಸೆಯುವಂತೆ ಜನಪದವನ್ನು ತರುವುದು ಹೇಗೆ ಎಂಬ ಆಲೋಚನೆಯೊಂದಿಗೆ ಯಲ್ಲಮ್ಮನಾಟವನ್ನೇ ಮೊದಲ ಪ್ರಯೋಗವಾಗಿ ಕೈಗೆತ್ತಿಕೊಂಡರು.
ಶಿಲ್ಪಾ ಅವರ ಪತಿ ಆದಿತ್ಯ ಜನಪದ ಪ್ರವಾಸಕ್ಕೆ ಸಾಥ್ ನೀಡಿದರು. ಇಬ್ಬರೂ ಯಲ್ಲಮ್ಮನ ಮೂಲ ಹುಡುಕುತ್ತಾ ಹೊರಟೇಬಿಟ್ಟರು. ಇವರ ಕಾರ್ಯಕ್ಕೆ ಇಂಬು ಸಿಕ್ಕಿದ್ದು ಸುಮಿತ್ರಾ ಸುಂದರ್ ಅವರಿಂದ. ಸಂಶೋಧಕಿಯಾಗಿರುವ ಇವರು ಯಲ್ಲಮ್ಮನ ಹಿನ್ನೆಲೆ ದಾಖಲಿಸುವಲ್ಲಿ ಸಹಾಯಕ್ಕೆ ನಿಂತರು.

ಯಲ್ಲಮ್ಮನ ಕಥೆಯನ್ನು ತಮ್ಮದಾಗಿಸಿಕೊಳ್ಳಲು ಸವದತ್ತಿಯಲ್ಲೇ ಠಿಕಾಣಿ ಹೂಡಿದರು ಶಿಲ್ಪಾ. ಇದಕ್ಕೆ ಸಹಾಯಕ್ಕೆ ಬಂದಿದ್ದು ಕೊಪ್ಪಳದ ಮಾರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿ. ಯಲ್ಲಮ್ಮನ ಕಥೆಯ ಮೂಲವಾಗಿರುವ ಜೋಗತಿ, ದೇವದಾಸಿ ಸಮುದಾಯದ ಹಿನ್ನೆಲೆಯನ್ನು, ಈ ಸಮುದಾಯಕ್ಕೆ ಸಂಬಂಧಿಸಿದ ಕಲೆಗಳನ್ನು, ಕಲೆ ಅವರ ಬದುಕನ್ನು ಹೇಗೆ ಆವರಿಸಿದೆ ಎಂಬುದನ್ನು ಅರಿಯಲು ನೆರವಾಯಿತು. ಇವೆಲ್ಲವೂ ಪ್ರಯೋಗಕ್ಕೆ ಹೂರಣವಾದವು. ಅಲ್ಲಿನವರ ಮನೆಗೆ ಭೇಟಿ ನೀಡಿ, ಯಲ್ಲಮ್ಮನಾಟದ ಅಭ್ಯಾಸದ ಪರಿಯನ್ನೂ ಕಂಡರು.

ಚೌಡಿಕಿಯ ಸಂಗೀತ ಸಂಗದಲ್ಲಿ...
ದೇವದಾಸಿ ಸಮುದಾಯದ ಅತಿ ಮುಖ್ಯ, ಆದರೆ ಅಳಿವಿನಂಚಿನಲ್ಲಿರುವ ವಾದ್ಯ ಚೌಡಿಕೆ. ಜನಪದದ ಹೆಸರಲ್ಲಿ ಎಷ್ಟೋ ಸಂಗೀತ ಸಾಧನಗಳು ಜನಪ್ರಿಯವಾಗಿವೆ. ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಳ್ಳುತ್ತವೆ ಕೂಡ. ಚೌಡಿಕೆ ಮಾತ್ರ ಅಸ್ಪೃಶ್ಯವಾಗಿಯೇ ಉಳಿದಿದೆ ಎನ್ನುವ ಶಿಲ್ಪಾ ಅವರಿಗೆ ಈ ಅಪರೂಪದ ಸಾಧನವನ್ನು ನಗರದ ಜನರಿಗೆ ಪರಿಚಯಿಸುವ ತವಕ. ಈ ತಾಳವಾದ್ಯದೊಂದಿಗೆ ಶ್ರುತಿ ಎಂಬ ತಂತಿ ವಾದ್ಯವನ್ನೂ ಜೊತೆಯಾಗಿ ನುಡಿಸುತ್ತಾರೆ. ಚೌಡಿಕೆಯನ್ನು ಮರದ ತೊಗಟೆಯಿಂದ ತಯಾರಿಸಲಾಗುತ್ತದೆ. ಆಕಳಿನ ಹೊಟ್ಟೆಯ ಒಳಪದರವನ್ನು ಬಳಸಿ, ಮೇಕೆಯ ಕರುಳಿನಿಂದ ಇದರ ತಂತಿ ರೂಪಿಸಲಾಗುತ್ತದೆ. ಇದರಿಂದ ಭಿನ್ನವಾದ ಸಂಗೀತ ಹೊರಹೊಮ್ಮುತ್ತದೆ. ಇಂಥ ವಾದ್ಯಗಳು ಅಪರೂಪ. ದಕ್ಷಿಣ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಪ್ರಚಲಿತದಲ್ಲಿದ್ದ ಈ ವಾದ್ಯ ಕರ್ನಾಟಕದ ಬೆಳಗಾವಿಯಲ್ಲಿದೆ. ಇದೇ ಸುಳಿವು ಹಿಡಿದು ಈ ವಾದ್ಯದ ಕಲಿಕೆಗೂ ಮುಂದಾದರು. ಇದನ್ನು ನುಡಿಸುವವರನ್ನು ಹುಡುಕಿದರು. ಬೆಳಗಾವಿಯ ಕೊತನೂರಿನ ರಾಧಾಬಾಯಿ ಚೌಡಿಕೆ ನುಡಿಸುವುದರಲ್ಲಿ ನಿಸ್ಸೀಮರು. ಮಂಜಮ್ಮ ಜೋಗತಿ, ಆಕೆಯ ಸಹೋದರಿ ರಾಮಕ್ಕ ಈ ವಾದ್ಯ ನುಡಿಸುವುದನ್ನು ಕಂಡರು. ಇವರೆಲ್ಲರಿಂದಲೂ ವಾದ್ಯ ನುಡಿಸುವ ಪರಿಯನ್ನು ಅಭ್ಯಾಸ ಮಾಡಿದರು. ಚಿಕ್ಕ ವಯಸ್ಸಿನಲ್ಲಿ ಕಲಿತಿದ್ದ ಸಂಗೀತ ನೆರವಿಗೆ ಬಂತು. ನೂರಾರು ಚೌಡಿಕೆ ಪದಗಳನ್ನೂ ಕಲಿತುಕೊಂಡರು.

ಭಿನ್ನತೆಯ ಹಂಗಿಲ್ಲದ ಪ್ರಯೋಗ
‘ಭಿನ್ನವಾಗಿ ಮಾಡುತ್ತೇನೆಂದು ನಾನೆಂದೂ ಹೇಳುವುದಿಲ್ಲ. ಹಿಂದಿನದಕ್ಕೆ ಒಂದಿಷ್ಟು ನನ್ನತನ ಬೆರೆಸುತ್ತೇನಷ್ಟೆ’ ಎನ್ನುವ ಶಿಲ್ಪಾ, ಯಲ್ಲಮ್ಮನಾಟದ ನಾಟಕವನ್ನೂ ಬೇರೆ ರೀತಿಯಲ್ಲಿ ತೋರಿದವರು. ‘ಪರಶುರಾಮ ಹಾಗೂ ಜಮದಗ್ನಿಯನ್ನು ನಾಟಕಗಳಲ್ಲಿ ಪ್ರಧಾನವಾಗಿ ತೋರಿಸುವ ಬದಲು ನಮ್ಮ ನಾಟಕದಲ್ಲಿ ಯಲ್ಲಮ್ಮನನ್ನು ತೋರಿಸಿದೆವು. ಆಕೆಯ ಮನಸ್ಥಿತಿ ಮೇಲೆ ಬೆಳಕು ಚೆಲ್ಲಿದ್ದೆವು. ಈ ಪ್ರಯೋಗಕ್ಕೆ ಎಷ್ಟೋ ಮಂದಿ ವಿರೋಧಿಸಿದರು. ಆದರೂ ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆ ಇಂದಿನ ರಂಗಭೂಮಿಯನ್ನು ಜೀವಂತಿಕೆಯಿಂದ ಇಡುವುದಲ್ಲವೇ’ ಎಂದು ಪ್ರಶ್ನಿಸುತ್ತಾರೆ ಅವರು. ನಾಲ್ಕು ಮಂದಿಯಿದ್ದ ತಂಡ ಸುಮಾರು ಮೂವತ್ತು ಪ್ರದರ್ಶನಗಳನ್ನು ನೀಡಿದೆ. ಕನ್ನಡ, ತಮಿಳು, ತೆಲುಗು, ಇಂಗ್ಲಿಷ್ ಭಾಷೆಯಲ್ಲಿ ಯಲ್ಲಮ್ಮನಾಟ ನಡೆಸಲಾಗುತ್ತಿದೆ. ಭಾಷೆ ತಿಳಿಯದವರಿಗೆ ಇಂಗ್ಲಿಷ್‍ನಲ್ಲಿ ಕಥೆ ಹೇಳುತ್ತಾ, ನಡುನಡುವೆ ಹಾಡುಗಳನ್ನು ಕನ್ನಡ, ಮರಾಠಿ, ಹಿಂದಿಯಲ್ಲಿ ಹೇಳುತ್ತಾ ಎಲ್ಲರನ್ನೂ ಮುಟ್ಟುವ ಈ ಪ್ರಯತ್ನ ಹೊಸ ಪ್ರಯೋಗ. 

ಇವಿಷ್ಟು ನಾಟಕದ ಭಾಗವಾದರೆ, ಮತ್ತೂ ವಿಶೇಷತೆ ಇರುವುದು ಚೌಡಿಕೆ ನುಡಿಸುವುದರಲ್ಲಿ. ಚೌಡಕಿ ಬಾರಿಸುತ್ತಾ ಕಥೆ ಹೇಳುವ, ಕಥೆಯನ್ನು ಹಾಡಂತೆ ಹೇಳುವ, ಮಾತಿನ ರೂಪದಲ್ಲಿ ಪ್ರಸ್ತುತ ಪಡಿಸುವ ಹೊಸ ಪ್ರಯೋಗವದು. ನಾಲ್ಕು ಗೋಡೆಗಳ ನಡುವೆ ತಮ್ಮ ಪ್ರಯೋಗ ನಡೆದರೆ ಫಲಿಸದು ಎಂಬ ಅರಿವಿನಿಂದಲೇ ಸಾರ್ವಜನಿಕ ಜಾಗದಲ್ಲಿ ತಾವೇ ಕುಳಿತು ಹಾಡಬೇಕು ಎಂದು ನಿರ್ಧರಿಸಿದರು. ಅದಕ್ಕೆ ಆರಿಸಿಕೊಂಡಿದ್ದು ಕಬ್ಬನ್ ಪಾರ್ಕನ್ನು. ಒಬ್ಬರಿಗೊಬ್ಬರು ಮಾತನಾಡಿದಷ್ಟೇ ಸರಳವಾಗಿ ಯಲ್ಲಮ್ಮನ ಕಥೆಯನ್ನು, ತಾವು ಕಂಡುಂಡ ಅನುಭವಗಳನ್ನೂ ಹಾಡಾಗಿಸಿ ಹೇಳುತ್ತಾರೆ. ಚೌಡಿಕೆಯನ್ನು ಪ್ರಚುರಪಡಿಸುವ ಉದ್ದೇಶಕ್ಕೆ ಮೂರ್ನಾಲ್ಕು ಮಂದಿ ಬೆಳ್ಳಂಬೆಳಿಗ್ಗೆ ಕಬ್ಬನ್‌ ಪಾರ್ಕ್‌ನಲ್ಲಿ ಕುಳಿತು ಹಾಡಲು ಶುರುವಿಟ್ಟುಕೊಳ್ಳುತ್ತಾರೆ.

‘ಪಾರ್ಕ್‌ನಲ್ಲಿ ಜಾಗಿಂಗ್‌ಗೆ ಬರುವವರು ಬೆರಗಾಗಿ ನೋಡುತ್ತಾರೆ. ಕನ್ನಡ ಗೊತ್ತೋ ಇಲ್ಲವೋ, ಕುಳಿತು, ಕೇಳುತ್ತಾರೆ. ಅವರೂ ಹಾಡುತ್ತಾರೆ, ಕೆಲವರು ಬರೆದುಕೊಳ್ಳುತ್ತಾರೆ. ಇದನ್ನು ಮಾಡುತ್ತಿರುವುದೇಕೆ ಎಂದು ಪ್ರಶ್ನಿಸುವವರೂ ಇದ್ದಾರೆ. ಹೀಗೂ ಇದೆಯೇ ಎಂದು ಕುಳಿತು ಕೇಳುವ ಯುವಜನರ ಪಾಲು ಹೆಚ್ಚಿದೆ. ಇವೆಲ್ಲವೂ ಕಲೆಯೊಂದನ್ನು ಜನರ ಮನಸ್ಸಿಗೆ ದಾಟಿಸುವ, ಹಾಗೆಯೇ ಉಳಿಸುವ ಪುಟ್ಟ ಪುಟ್ಟ, ಆದರೆ ಪರಿಣಾಮಕಾರಿ ಮಾಧ್ಯಮ’ ಎನ್ನುತ್ತಾರೆ ಶಿಲ್ಪಾ.
ಕಾಲೇಜು, ಕಾರ್ಪೊರೇಟ್‌ ಕಚೇರಿಗಳಲ್ಲಿ ಈ ಭಿನ್ನ ಪ್ರಯೋಗಕ್ಕೆ ಮಾನ್ಯತೆ ದಕ್ಕಿದೆ. ಚೌಡಿಕಿ ಕುರಿತು ಹಲವು ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ.
‘ಈಗಿನ ಮಕ್ಕಳಿಗೆ ಹೊಸ ಆಚರಣೆ ಬೇಕಿದೆ. ಹಳೆಯದರ ಪುನರ್‌ಸೃಷ್ಟಿ ಆಗಬೇಕಿದೆ. ಗೀಗಿಪದ, ಡೊಳ್ಳಿನ ಪದ, ಆಣತಿ ಪದ, ಹೊಲದ ಹಾಡು... ಇವೆಲ್ಲವನ್ನೂ ಮತ್ತೆ ತರಬೇಕಿದೆ. ಯಂತ್ರಗಳ ಭರಾಟೆಯಲ್ಲಿ ಕ್ಷೀಣಿಸಿರುವ ಬೀಸೊ ಪದ, ಕುಟ್ಟೋ ಪದ ಮತ್ತೆ ಅನುರಣಿಸಬೇಕಿದೆ’ ಎನ್ನುವುದು ಶಿಲ್ಪಾ ಅವರ ಅನುಭವದ ಮಾತು.

ದೇವರುಗಳ ಅರಸುತ್ತಾ...
ಯಲ್ಲಮ್ಮನ ಕಥೆಯನ್ನು ಪ್ರಯೋಗಿಸಿದ ಮೇಲೆ ಯಾವ ದೇವರನ್ನೇ ನೋಡಿದರೂ, ಶಿಲ್ಪಾ ಅವರಿಗೆ ಮೊದಲು ಕೌತುಕ ಹುಟ್ಟುತ್ತಿದ್ದುದೇ ಆ ದೇವರ ಹಿಂದಿರುವ ಕಥೆಗಳ ಮೇಲೆ. ‘ಗ್ರಾಮದ ದೇವರು ಸಮುದಾಯದಿಂದ ಪೋಷಿಸಿರುವಂಥವು. ಪ್ರತಿ ದೇವರ ಹಿಂದೆಯೂ ಒಂದು ಕಥೆಯಿರುತ್ತದೆ. ಆ ಒಂದೊಂದು ಕಥೆಯಲ್ಲೂ ಇಂದಿಗೂ ಅಗತ್ಯವಿರುವ ತಿರುಳಿರುತ್ತದೆ. ಅದನ್ನೇ ನಾನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವುದು. ಗ್ರಾಮದ ದೇವರು ಕಲಾತ್ಮಕ ಸಿನಿಮಾಗಳಂತೆ. ಒಳ್ಳೆ ಕಥೆ, ಸಾಮರ್ಥ್ಯ ಇರುತ್ತದೆ. ಆದರೆ ಇದರ ಬಗ್ಗೆ ಮಾತನಾಡುವುದು ಕಡಿಮೆ. ಈ ಅಪರೂಪದ ದೇವರುಗಳನ್ನು, ಸಮುದಾಯದ ನಂಟನ್ನು, ಈ ಮೂಲಕ ಕರ್ನಾಟಕದಲ್ಲಿನ ಜನಪದ ಪ್ರಕಾರಗಳನ್ನು ನಗರಿಗರಿಗೆ ದಾಖಲಿಸುವ ಸಣ್ಣ ಪ್ರಯತ್ನವಷ್ಟೆ’ ಎಂದು ನಗುತ್ತಾರೆ ಶಿಲ್ಪಾ.
ದಾಸಪ್ಪ ಜನಾಂಗದ ಕುರಿತೂ ಶಿಲ್ಪಾ ಶೋಧನೆ ಮುಂದುವರಿಸಿದ್ದಾರೆ. ಮಲೆ ಮಹದೇಶ್ವರ, ಮಲೆನಾಡಿನ ಭೂತ, ಮಂಟೇಸ್ವಾಮಿ, ಮಾತಂಗಿ ದೇವರುಗಳ ಹಿನ್ನೆಲೆ ಕೆದಕುವ ಪ್ರಯತ್ನದಲ್ಲಿದ್ದಾರೆ.


ಸಂಗೀತಾ ಗೋಯಲ್, ಪೂರ್ಣಿಮಾ, ಶಿಲ್ಪಾ, ಆದಿತ್ಯ, ಶ್ರುತಿ ರಾವ್ ಅವರು ಕಬ್ಬನ ಉದ್ಯಾನದಲ್ಲಿ ಸಂಗೀತ ನುಡಿಸುತ್ತಿರುವುದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.