ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ‘ಆನಂದಧ್ವನಿ’ ಸಂಗೀತೋತ್ಸವ

Last Updated 15 ನವೆಂಬರ್ 2018, 14:33 IST
ಅಕ್ಷರ ಗಾತ್ರ

ಸಂಗೀತ ಕಛೇರಿಗಳಲ್ಲಿ ಜುಗಲ್‌ಬಂದಿಗೆ ಸಾಕ್ಷಿಯಾಗುವುದೆಂದರೆ ಸಂಗೀತ ರಸಿಕರಿಗೆ ಹಬ್ಬ. ಅದರಲ್ಲೂ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ, ಜನಪದ ಹಾಡುಗಳು ಮತ್ತು ನೃತ್ಯಗಳ ಜುಗಲ್‌ಬಂದಿಯನ್ನು ಆಸ್ವಾದಿಸುವ ಅವಕಾಶ ಸಿಕ್ಕಿದರೆ ಹೇಗಿದ್ದೀತು? ’

ಇದೇ 16 ಮತ್ತು 17ರಂದು ಸಂಜೆ 5ರಿಂದ ನಡೆಯವ ‘ವೈಟ್‌ಫೀಲ್ಡ್‌ ಸಂಗೀತ ಉತ್ಸವ’ ಅಂತಹ ಅಪರೂಪದ ರಸಾಸ್ವಾದವನ್ನು ಉಣಬಡಿಸಲಿದೆ.ಪ್ರತಿ ವರ್ಷ ಭಿನ್ನ ಪರಿಕಲ್ಪನೆಗಳೊಂದಿಗೆ ಅಪರೂಪದ ಜುಗಲ್‌ಬಂದಿಗಳನ್ನು ಏರ್ಪಡಿಸುತ್ತಾ ಬಂದಿರುವ ಸಂಗೀತೋತ್ಸವವಿದು.

ಕಥಕ್ಕಳಿ ನೃತ್ಯ ಕಲಾವಿದ ಉನ್ನಿಕೃಷ್ಣನ್, ಬಂಗಾಳಿ ಜನಪದ ನೃತ್ಯ ಕಲೆಯಾದ ‘ಛೌ’ ಕಲಾವಿದ ಬಿರೇನ್‌ ಕಾಳಿಂದಿ, ಕಥಕ್ಕಳಿ ನೃತ್ಯ ಕಲಾವಿದ ಪ್ರಬಲ್ ಗುಪ್ತಾ, ಸಿತಾರ್‌ ವಾದಕ ಪ್ರಬೀರ್ ಭಟ್ಟಾಚಾರ್ಯ ಅವರ ಜುಗಲ್‌ಬಂದಿಗಳನ್ನು ಕೇಳಿ ಆನಂದಿಸಬಹದು. ಒಟ್ಟು 28 ಕಲಾವಿದರು ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಇದೇ ಮೊದಲ ಬಾರಿಗೆ ವಯಲಿನ್‌ ವಾದಕ ಮೈಸೂರು ಮಂಜುನಾಥ್ ಮತ್ತು ಸಾರಂಗಿ ವಾದಕ ಮುರಾದ್ ಅಲಿ ಜುಗಲ್‌ಬಂದಿ ಕಛೇರಿ ನೀಡಲಿರುವುದು ವಿಶೇಷ.ಮಂಜುನಾಥ್ ಅವರ ಕರ್ನಾಟಕ ಸಂಗೀತ ಮತ್ತು ಮುರಾದ್ ಅಲಿ ಅವರ ಹಿಂದುಸ್ತಾನಿ ಶೈಲಿಯ ಸಮಪಾಕವಾಗಿ ಇರಲಿದೆ ಈ ಕಛೇರಿ. ತಬಲಾ ವಾದಕ ಓಜಸ್ ಆದಿತ್ಯ, ಮೃದಂಗ ವಾದಕ ಬೆಂಗಳೂರು ಪ್ರವೀಣ್, ಘಟ ವಾದಕ ಸೋಮನಾಥ್‌ ರಾಯ್ ಪಕ್ಕವಾದ್ಯಗಳ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಲಿದ್ದಾರೆ. ಈ ಜುಗಲ್‌ಬಂದಿ ಶನಿವಾರ ನಡೆಯಲಿದೆ.

ಭಾನುವಾರದಂದು ವೀಣಾ ವಾದಕಿ ಸುಮಾ ಸುಧೀಂದ್ರ ಮತ್ತು ಪ್ರಬೀರ್ ಭಟ್ಟಾಚಾರ್ಯ ಅವರ ಜಂಟಿ ಕಛೇರಿ. ಪಂಡಿತ್ ಶುಭಂಕರ್‌ ಬ್ಯಾನರ್ಜಿ ಈ ಜುಗಲ್‌ಬಂದಿಯಲ್ಲಿ ತಬಲಾ ಸಾಥ್‌ ನೀಡಲಿದ್ದಾರೆ. ಜಯಚಂದ್ರ ರಾವ್‌ ಮೃದಂಗ, ಗಿರಿಧರ್ ಉಡುಪ ಘಟಂ ನೆರವು ನೀಡಲಿದ್ದಾರೆ.

ಭಾರತದ ಶಾಸ್ತ್ರೀಯ ಸಂಗೀತ, ಸಾಂಪ್ರದಾಯಿಕ ನೃತ್ಯ, ಜನಪದ ಹಾಡು, ನೃತ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ದೇಶದ ವಿವಿಧ ರಾಜ್ಯಗಳ ಜನಪದ ನೃತ್ಯಗಳನ್ನು ದೇಶದ ಎಲ್ಲ ಸಂಗೀತ ರಸಿಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ.

‘ಅಪರೂಪದ ಜುಗಲ್‌ಬಂದಿಗಳನ್ನು ಪರಿಚಯಿಸಿ, ಸಂಗೀತ ರಸಿಕರಿಗೆ ರಸದೌತಣ ಬಡಿಸುವ ಉದ್ದೇಶದಿಂದ ಆನಂದಧ್ವನಿ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಈ ಉತ್ಸವನ್ನು ಆಯೋಜಿಸುತ್ತಿದ್ದೇವೆ. 2011ರಲ್ಲಿ ನಡೆದ ಮೊದಲ ಉತ್ಸವಕ್ಕೆ ಉತ್ತಮ ಸ್ಪಂದನೆ ದೊರೆಯಿತು. ಅದೇ ಪ್ರೇರಣೆಯಿಂದ ಪ್ರತೀ ವರ್ಷ ಆಯೋಜಿಸುತ್ತಾ ಬರುತ್ತಿದ್ದೇವೆ. ಮುಂದೆಯೂ ಇಂತಹ ವಿಭಿನ್ನ ಜುಗಲ್‌ಬಂದಿ ಮತ್ತು ಸಂಗೀತ ಕಛೇರಿಗಳ ಮೂಲಕ ರಂಜಿಸಬೇಕು ಎಂಬುದು ನಮ್ಮ ಆಸೆ’ ಎಂದು ಹೇಳುತ್ತಾರೆ ಕಾರ್ಯಕ್ರಮದ ಆಯೋಜಕರಾದ ಪ್ರಬೀರ್ ಭಟ್ಟಾಚಾರ್ಯ.

‘ಈ ಉತ್ಸವ ವೈಟ್‌ಫೀಲ್ಡ್‌ಗೆ ಮಾತ್ರ ಸೀಮಿತವಾಗಬಾರದು. ಮುಂದಿನ ದಿನಗಳಲ್ಲಿ ಮಲ್ಲೇಶ್ವರಂ, ಬಸವನಗುಡಿಯಲ್ಲೂ ಆಯೋಜಿಸುವ ಆಸೆ ಇದೆ. ಅವಕಾಶ ಸಿಕ್ಕರೆ ರಾಜ್ಯದ ಇತರೆ ನಗರಗಳಲ್ಲೂ ಆಯೋಜಿಸುತ್ತೇವೆ ಆ ಅವಕಾಶ ಬೇಗ ಸಿಗಲಿ ಎಂಬುದೇ ನಮ್ಮ ಅಭಿಲಾಷೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT