7

ವೀಣೆಶೇಷಣ್ಣ ಭವನದಲ್ಲಿ ಪುರಂದರ ನಮನ

Published:
Updated:
ವಿದ್ವಾನ್ ಆರ್.ಕೆ.ಶ್ರೀರಾಮ್‌ ಕುಮಾರ ತಂಡ ಸಂಗೀತ ಕಛೇರಿ ನಡೆಸಿಕೊಟ್ಟಿತು

ಕರ್ನಾಟಕ ಸಂಗೀತ ಪಿತಾಮಹರೆಂದೇ ಗೌರವಿಸಲ್ಪಡುವ ಪುರಂದರದಾಸರು ಸಂಗೀತ ಪ್ರೇಮಿಗಳೆಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದರೂ ಅವರನ್ನು ಕುರಿತ ಚಾರಿತ್ರಿಕ ದಾಖಲೆಗಳು ದೊರೆಯದಿರುವುದು ಬಹುಶಃ ಸಂಗೀತಲೋಕದ ವಿಪರ್ಯಾಸವೇ ಹೌದು.

ಒಂದು ಸಂಗೀತ ಶಾಸ್ತ್ರ ಗ್ರಂಥದಲ್ಲಿ ಅವರ ರಚನೆಗಳನ್ನು ಉದಹರಿಸುವಾಗ ಮತ್ತು ಅವರ ಮಕ್ಕಳಿಗೆ ಕೃಷ್ಣದೇವರಾಯನು ನೀಡಿದ ಎನ್ನಲಾದ ಭೂಮಿ ದಾನದ ಶಾಸನದಲ್ಲಿ ‘ಪುರಂದರ ದಾಸರ ಮಕ್ಕಳಾದ...’ ಎಂಬ ಉಲ್ಲೇಖ ಬಿಟ್ಟರೆ, ಹುಡುಕಿದರೂ ಅವರನ್ನು ಕುರಿತಾದ ಶಾಸನಗಳಾಗಲಿ, ಮತ್ಯಾವುದೇ ರೀತಿಯ ದಾಖಲೆಗಳಾಗಲೀ ದೊರೆಯುವುದು ದುರ್ಲಭ.

ಬಹುಶಃ ಕಾಲಗರ್ಭದಲ್ಲಿ ಅವು ಕಣ್ಮರೆ ಆಗಿರಬಹುದು. ಇಲ್ಲದಿದ್ದಲ್ಲಿ ಅವರಂತಹ ಪ್ರಮುಖ ದಾಸರನ್ನು ಕುರಿತ ಐತಿಹ್ಯ ಇಲ್ಲವೆಂದರೆ ನಂಬುವುದು ಕಷ್ಟ. ಆದರೆ ಜನಮಾನಸದಲ್ಲಿ ‘ನವಕೋಟಿನಾರಾಯಣ’ರೆಂದೇ ಕರೆಸಿಕೊಳ್ಳುತ್ತಿದ್ದ ಅವರ ಶ್ರೀಮಂತಿಕೆಯ ಬಗ್ಗೆ, ಅವರ ಹೆಂಡತಿ ಸರಸ್ವತೀ ಬಾಯಿಯು ದಾನ ಮಾಡಿದ ನತ್ತಿನ ಬಗ್ಗೆ, ಪಂಡರಪುರದಲ್ಲಿ ಅವರನ್ನು ಕಂಬಕ್ಕೆ ಕಟ್ಟಿ ಥಳಿಸಿದುದರ ಬಗ್ಗೆ ದಂತಕಥೆಗಳು ಜನಜನಿತವಾಗಿವೆ. ಅದನ್ನೇ ವಿದ್ವಾಂಸರೂ ಚರ್ವಿತಚರ್ವಣವನ್ನಾಗಿಸುತ್ತಾ ಬಂದಿದ್ದಾರೆ. ಶಿಸ್ತುಬದ್ಧವಾದ ಸಂಶೋಧಕ ನೋಟಕ್ಕಿಂತ ಮನಕ್ಕೆ ಆಪ್ಯಾಯವಾಗುವ ಭಾವುಕ ಸಂಗತಿಗಳೇ ಹೆಚ್ಚು ಪ್ರಚಾರಕ್ಕೆ ಬರುವುದೆಂಬುದಕ್ಕೆ ಇದೊಂದು ಉದಾಹರಣೆ.

ಈಚೆಗೆ ವಿದ್ವಾನ್ ಆರ್.ಕೆ.ಶ್ರೀರಾಮ್‌ ಕುಮಾರ ಅವರು ತಮ್ಮ ಮೂವರು ಶಿಷ್ಯರಾದ ರಾಮಕೃಷ್ಣಮೂರ್ತಿ, ಅಮೃತ ಮುರಳಿ ಮತ್ತು ಭಾರತಿ ರಾಮಸುಬ್ಬನ್‌ರೊಡನೆ ‘ಪುರಂದರ ನಮನ’ ಎಂಬ ಒಂದು ಕಾರ್ಯಕ್ರಮವನ್ನು ಗಾನಭಾರತಿಯ ಆಶ್ರಯದಲ್ಲಿ ನಡೆಸಿಕೊಟ್ಟರು. ವಿದುಷಿ ಚಾರುಲತಾ ರಾಮಚಂದ್ರನ್‌ ಅವರ ಪಿಟೀಲು, ವಿದ್ವಾನ್ ಅರುಣ್ ಪ್ರಕಾಶ ಅವರ ಮೃದಂಗ ಮತ್ತು ವಿದ್ವಾನ್ ಅನಿರುದ್ಧ ಆತ್ರೇಯ ಅವರ ಖಂಜಿರ ವಾದನದ ಸಹಕಾರವಿದ್ದ ಈ ಕಾರ್ಯಕ್ರಮವು ವೀಣೆ ಶೇಷಣ್ಣ ಭವನದಲ್ಲಿ ನಡೆಯಿತು.

ಶ್ರೀರಾಮ್‌ಕುಮಾರರ ಇಂಗ್ಲೀಷಿನ ವ್ಯಾಖ್ಯಾನದೊಡನೆ ನಡೆದ ಈ ಕಾರ್ಯಕ್ರಮದ ಆಕರ್ಷಣೆ ಎಂದರೆ ಅಚ್ಚುಕಟ್ಟಾದ ಹೊಂದಾಣಿಕೆ ಇದ್ದ ನಾಲ್ವರ ಸೊಗಸಾದ ಸಂಗೀತ. ಅದಕ್ಕೆ ಒಪ್ಪುವ ಹಿತಮಿತವಾದ ಪಿಟೀಲು ಮತ್ತು ಮೃದಂಗ-ಖಂಜಿರಗಳ ಪಕ್ಕವಾದ್ಯ. ಬೆಹಾಗ್ ರಾಗದಲ್ಲಿ ಇಂಪಾಗಿ ‘ಶರಣು ಶರಣು’ ಎಂದು ವಿನಾಯಕನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕತೆ-ಹಾಡುಗಳ ಸರಣಿಯು ಅವ್ಯಾಹತವಾಗಿ ಸುಮಾರು ಹದಿನಾರು ದೇವರನಾಮಗಳನ್ನು ಒಳಗೊಂಡಿತ್ತು. ಆರಂಭದಲ್ಲಿ ಭಾರತದಲ್ಲಿ ಭಕ್ತಿ ಸಂಗೀತದ ಪ್ರಭಾವವನ್ನು ವಿವರಿಸಿ, ದ್ವೈತ-ಅದ್ವೈತಗಳ ವ್ಯತ್ಯಾಸವನ್ನು ಸರಳವಾಗಿ ಹೇಳಿ, ಭಕ್ತಿ ಸಂಗೀತ ವಾಹಿನಿಯು ನಾಮ ಸಂಕೀರ್ತನೆಯ ಮೂಲಕ ಹೇಗೆ ಈ ನಾಡನ್ನು ಒಂದುಗೂಡಿಸುವ ಸಾಧನವಾಯಿತು ಎಂಬುದರ ಕಡೆಗೆ ಗಮನ ಸೆಳೆದರು. ನಂತರ ದಾಸ ಸಾಹಿತ್ಯದ ಹುಟ್ಟನ್ನು- ನರಹರಿ ತೀರ್ಥ, ಶ್ರೀಪಾದರಾಜ, ವ್ಯಾಸರಾಯ ಮತ್ತು ಪುರಂದರ-ಕನಕರ ರಚನೆಗಳು ಹೇಗೆ ಸಾಹಿತ್ಯಕ್ಕಷ್ಟೇ ಅಲ್ಲದೆ ಕರ್ನಾಟಕ ಸಂಗೀತಕ್ಕೂ ಕೊಡುಗೆಯನ್ನು ಇತ್ತವು ಎಂಬುದನ್ನು ವಿವರಿಸಿದರು.

ವ್ಯಾಸರಾಯರ ಕೊಡುಗೆಯ ಪ್ರಾಮುಖ್ಯತೆಯನ್ನು ಹೇಳಿ, ಅವರ ಜನಪ್ರಿಯ ‘ಕೃಷ್ಣಾ ನೀ ಬೇಗನೆ ಬಾರೊ’ ಪದವನ್ನು ಹಾಡಿದರು. ಗುರುಗಳಿಂದಲೆ ಹೊಗಳಿಸಿಕೊಂಡ ಪುರಂದರರನ್ನು ಕುರಿತ ‘ದಾಸರೆಂದರೆ ಪುರಂದರ ದಾಸರಯ್ಯ’ ರಚನೆಯೊಂದಿಗೆ ಮುಂದುವರೆದು, ಜನಜನಿತವಾದ ಪುರಂದರರ ಕಥೆಯನ್ನೇ ವಿಷದವಾಗಿಸಿ ಅವರ ಕೃತಿಗಳಲ್ಲಿನ ದ್ವಿತೀಯಾಕ್ಷರ ಹಾಗೂ ಅಂತ್ಯ ಪ್ರಾಸಗಳಿಗೆ ಸುದೀರ್ಘ ಉದಾಹರಣೆಗಳನ್ನು ನೀಡಿದರು. ತಮಿಳಿನ ದಿವ್ಯ ಪ್ರಬಂಧಗಳು, ತ್ಯಾಗರಾಜರ, ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳಲ್ಲಿರುವ ಪ್ರಾಸವನ್ನೂ ಹಾಡಿ ತೋರಿದರು.

ಮುಂದೆ ಕಾರ್ಯಕ್ರಮದ ಮುಖ್ಯ ಭಾಗವನ್ನು ದಾಸರು ಸಂದರ್ಶಿಸಿದ ತೀರ್ಥಕ್ಷೇತ್ರಗಳಿಗೆ ಮೀಸಲಾಗಿರಿಸಲಾಗಿತ್ತು. ತಿರುಪತಿಯ ಶ್ರೀನಿವಾಸನನ್ನು ಕುರಿತಾದ ‘ಶರಣು ವೆಂಕಟರಮಣ’, ಅಹೋಬಲದ ನರಸಿಂಹನ ಸ್ತುತಿಸುವ ದೇವರನಾಮ, ಕಾಂಚೀಪುರದ ವರದರಾಜಸ್ವಾಮಿಯನ್ನು ಕುರಿತ ‘ಕಣ್ಣಾರೆ ಕಂಡೆ ನಾ’, ತಿರುವಣ್ಣಾಮಲೆಯ ಅರುಣಗಿರಿನಾಥನನ್ನು ಕುರಿತ ‘ಕರುಣಾನಿಧಿಯೆ ಈಶ’, ರಾಮನಾಮದ ರುಚಿಯನ್ನು ಅರಿತ ಕಾಶಿ ವಿಶ್ವನಾಥನ ವರ್ಣನೆ ಇರುವ ‘ರಾಮ ಎಂಬೋ ಎರಡಕ್ಷರದ’, ‘ಕಂಡೆ ನಾ ಉಡುಪಿಯ ಕೃಷ್ಣರಾಯನ’ -ಉಡುಪಿಯ ಕೃಷ್ಣನ ಕುರಿತು ಹೀಗೆ ಸುದೀರ್ಘ ತೀರ್ಥಕ್ಷೇತ್ರಗಳನ್ನು ಕುರಿತ ದೇವರನಾಮಗಳ ನಂತರ ಸುಬ್ಬರಾಮ ದೀಕ್ಷಿತರ ‘ಸಂಪ್ರದಾಯ ಪ್ರದರ್ಶಿನಿ’ಯಲ್ಲಿ ದಾಖಲಾಗಿರುವ ‘ಅಚ್ಯುತಾನಂದ ಗೋವಿಂದ’ ಎಂಬ ಸಪ್ತ ತಾಳಗಳ ಸುಳಾದಿಯನ್ನೂ ಹಾಡಿ ತೋರಿದರು.

ಪುರಂದರದಾಸರ ನಿಂದಾ ಸ್ತುತಿಗೂ ಉದಾಹರಣೆಯನ್ನಿತ್ತ ಅವರ ತಂಡವು ತಮ್ಮ ಶಾಸ್ತ್ರೀಯವಾದ ಸಂಗೀತದಿಂದ ಎಲ್ಲರ ಮೆಚ್ಚುಗೆ ಪಡೆಯಿತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !