ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ ಗಾಯಕರಿಗೆ ರಸಾನುಭವ ನೀಡುತ್ತಿದ್ದ ಗಾಯಕ ಎಸ್‌ಪಿಬಿ: ಕೆ.ಎಸ್ ಚಿತ್ರಾ

Last Updated 25 ಸೆಪ್ಟೆಂಬರ್ 2020, 10:09 IST
ಅಕ್ಷರ ಗಾತ್ರ

ಒಂದು ಯುಗ ಮುಗಿದಿದೆ. ಸಂಗೀತ ಎಂದಿಗೂ ಒಂದೇ ರೀತಿ ಇರುವುದಿಲ್ಲ. ಜಗತ್ತು ಎಂದಿಗೂ ಒಂದೇ ರೀತಿ ಇರುವುದಿಲ್ಲ. ಉತ್ತಮ ಗಾಯಕಿಯಾಗಲು ನನಗೆ ಮಾರ್ಗದರ್ಶನ ನೀಡಿದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಪದಗಳು ಸಾಕಾಗುವುದಿಲ್ಲ. ನಿಮ್ಮ ಶ್ರೇಷ್ಠ ಮತ್ತು ಸುಂದರವಾದ ಉಪಸ್ಥಿತಿಯಿಲ್ಲದೆ ಸಂಗೀತ ಕಚೇರಿಯ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಸಾವಿತ್ರಿ ಅಮ್ಮ, ಚರಣ್ ಪಲ್ಲವಿ ಮತ್ತು ಕುಟುಂಬಕ್ಕೆ ಸಂತಾಪ ಮತ್ತು ಪ್ರಾರ್ಥನೆ. ಪ್ರಣಾಮ.

ಖ್ಯಾತ ಗಾಯಕಿ ಕೆಎಸ್ ಚಿತ್ರಾ ಎಸ್‌ಪಿಬಿ ನಿಧನಕ್ಕೆ ಫೇಸ್‌ಬುಕ್‌ನಲ್ಲಿ ಸಂತಾಪ ಸೂಚಿಸಿದ್ದು ಹೀಗೆ. ಚಿತ್ರಾ ಅವರ ಸಂಗೀತ ಯಾತ್ರೆಯಲ್ಲಿ ಮಾರ್ಗದರ್ಶನ ನೀಡಿದ ವ್ಯಕ್ತಿಯಾಗಿದ್ದರು ಎಸ್.ಪಿ. ಬಾಲಸುಬ್ರಮಣ್ಯಂ. ಚಿತ್ರಾ ಅವರ ಸಂಗೀತ ಮತ್ತು ಜೀವನದ ಬಗ್ಗೆ ಮಲಯಾಳಂನಲ್ಲಿ'ಅನುಭವಂ, ಓರ್ಮ, ಯಾತ್ರಾ' (ಅನುಭವ, ನೆನಪು, ಪಯಣ) ಎಂಬ ಪುಸ್ತಕ 2017ರಲ್ಲಿ ಪ್ರಕಟವಾಗಿದೆ. ಈ ಪುಸ್ತಕದಲ್ಲಿಕೆ.ಎಸ್. ಚಿತ್ರಾ ಅವರು ಎಸ್‌ಪಿಬಿ ಬಗ್ಗೆ ಬರೆದ ಅಧ್ಯಾಯದ ಅನುವಾದ ಇಲ್ಲಿದೆ.

‘ಪುನ್ನಕೈ ಮನ್ನನ್’ ಎಂಬ ಸಿನಿಮಾಗೆ ಹಾಡಲು ಚೆನ್ನೈನಲ್ಲಿ ಸ್ಟುಡಿಯೋಗೆ ಬಂದಾಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂಬ ಎಸ್.ಪಿ.ಬಿ. ಅವರನ್ನು ನಾನು ಮೊದಲ ಬಾರಿ ಕಂಡದ್ದು. ಈ ಹಿಂದೆ ಫೋಟೋದಲ್ಲಷ್ಟೇ ನಾನು ಅವರನ್ನು ನೋಡಿದ್ದೆ. ಅವರು ತುಂಬಾ ಗಂಭೀರ ಸ್ವಭಾವದವರಾಗಿರಬಹುದು ಎಂದು ನಾನು ಪೋಟೋ ನೋಡಿ ಅಂದುಕೊಂಡಿದ್ದೆ. ಆದರೆ ಸ್ಟುಡಿಯೋದಲ್ಲಿ ಅವರನ್ನು ನೇರ ಭೇಟಿಯಾದಾಗ ಗೊತ್ತಾಯ್ತು ನಾನು ಅಂದುಕೊಂಡದ್ದು ತಪ್ಪು ಎಂದು.

ತುಂಬಾ ಸರಳವಾಗಿರುವ ವ್ಯಕ್ತಿ ಅವರು. ದೇಹದ ಗಾತ್ರವನ್ನು, ದನಿಯ ಗಂಭೀರವನ್ನೂ ನೋಡಿ ಒಬ್ಬರು ಹೀಗೆ ಎಂದು ಅಂದುಕೊಳ್ಳಬಾರದು ಎಂದು ನನಗೆ ಅಂದು ತಿಳಿಯಿತು. ಸಂಗೀತದಲ್ಲಿ ಹಲವು ವರ್ಷಗಳ ಅನುಭವವಿರುವ ವ್ಯಕ್ತಿ ಎಸ್.ಪಿ. ಸರ್. ಹೀಗಿದ್ದರೂ ಅವರ ಸರಳತೆ ಮತ್ತು ವಿನಯತೆ ನನ್ನನ್ನು ಅಚ್ಚರಿಗೊಳಿಸಿತು. ನನಗೆ ಹಾಡಿನಲ್ಲಿ ಒಂದು ಪುಟ್ಟ ಪಾಠ ಪುಸ್ತಕವೇ ಆಗಿದ್ದರೂ ಆ ಮಾಂತ್ರಿಕ ಗಾಯಕ ಒಂದು ಹಮ್ಮಿಂಗ್‍ನಿಂದಲೂ ಜನರನ್ನು ಹಿಡಿದಿರಿಸಬಲ್ಲ ಅವರ ಕೌಶಲ್ಯವನ್ನು ಒಪ್ಪಲೇಬೇಕು.

ದಕ್ಷಿಣ ಭಾರತದಲ್ಲಿ ಹಲವಾರು ಭಾಷೆಯ ಹಾಡುಗಳನ್ನು ಹಾಡಿರುವ ಎಸ್.ಪಿ.ಬಿ. ಅನ್ಯಭಾಷೆಗಳ ಹಾಡುಗಳನ್ನು ಹಾಡುವಾಗ ಗಮನಿಸಬೇಕಾದ ಅಂಶಗಳನ್ನು ನನಗೆ ಹೇಳಿಕೊಟ್ಟಿದ್ದು. ಹಾಡುವಾಗ ಮೈಕನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ನಾನು ಸರಿಯಾಗಿ ಕಲಿತುಕೊಂಡಿದ್ದು ಎಸ್.ಪಿ.ಬಿ. ಅವರಿಂದಲೇ ಆಗಿತ್ತು.

ಅವರು ಉಚ್ಚಾರದ ಬಗ್ಗೆ ಅತೀವ ಶ್ರದ್ಧೆ ವಹಿಸುತ್ತಿದ್ದರು. ವಿವಿಧ ಭಾಷೆಗಳಲ್ಲಿ ಹಾಡು ಹಾಡುತ್ತಿರುವುದರಿಂದ ಈ ವಿಷಯದ ಬಗ್ಗೆ ಹೆಚ್ಚುಗಮನಹರಿಸಬೇಕೆಂದು ಅವರು ನನಗೆ ಹೇಳಿಕೊಟ್ಟರು. ನಾವು ಯಾವ ಊರಿನಿಂದ ಬಂದವರು ಎಂದು ಹಾಡು ಕೇಳುವವರಿಗೆ ತಿಳಿಯಬೇಕೆಂಬ ಅಗತ್ಯವಿರುವುದಿಲ್ಲವಲ್ಲ? ಅಂದಹಾಗೆ ಸಂಗೀತಕ್ಕೆ ಭಾಷೆ ಎಂಬುದು ಇದೆಯೇ?

ತೆಲುಗಿನಲ್ಲಿ ಎಸ್.ಪಿ. ಸರ್ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ಒಂದೊಂದು ಹಾಡು ಕೂಡಾ ಅದ್ಭುತ. ಒಂದ್ಸಾರಿ ಕೇಳಿದರೆ ಅವುಗಳನ್ನು ಮರೆಯುವುದೇ ಕಷ್ಟ ಎನ್ನುವ ಪರಿಸ್ಥಿತಿ. ಇದಕ್ಕೆ ಕಾರಣವೇನು ಗೊತ್ತಾ? ಒಂದೊಂದೇ ಪದಗಳನ್ನು ಅಷ್ಟೊಂದು ಸ್ಫುಟವಾಗಿ ಎಸ್.ಪಿ.ಬಿ. ಗಾನಾಲಾಪನ ಮಾಡುತ್ತಿದ್ದದ್ದು. ಒಂದೊಂದೇ ಪದದ ಅರ್ಥವನ್ನು ಗ್ರಹಿಸಿಕೊಂಡು ಅವರು ಹಾಡುತ್ತಿದ್ದರೆ ಆ ಹಾಡನ್ನು ಮರೆಯುವುದಾದರೂ ಹೇಗೆ? ಉಚ್ಚಾರದಲ್ಲಿ ಗಮನಹರಿಸಿದರೆ ಮಾತ್ರ ಹಾಡುಗಾರಿಕೆಯಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವೆಂದು ತಮ್ಮ ಜೀವನದಲ್ಲಿ, ಉಪದೇಶದ ಮೂಲಕವೂ ನನಗೆ ಹೇಳಿಕೊಟ್ಟರು. ದಕ್ಷಿಣ ಭಾರತ ಸಿನಿಮಾ ಸಂಗೀತದ ಮೇರುವ್ಯಕ್ತಿ ಎಂದರೆಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೇ.

ಅವರು ಜತೆಗಿದ್ದರೆ ಅಪರಿಚಿತ ಭಾವವಿರುವುದೇ ಇಲ್ಲ. ನಮ್ಮ ಜತೆಗಿರುವ ಸ್ವಂತ ಸಹೋದರ ಎಂಬ ರೀತಿಯಲ್ಲಿ ಅವರು ವರ್ತಿಸುತ್ತಿದ್ದರು. ನಾವಿಬ್ಬರು ಭಾಗವಹಿಸಿದ ಗಾನಮೇಳಗಳೆಲ್ಲಾ ತುಂಬಾ ಚೆನ್ನಾಗಿದ್ದವು. ಸ್ಟೇಜ್‍ನಲ್ಲಿ ನಿಂತಿದ್ದರೂ ಸುಮ್ಮನೆ ಅದೂ ಇದು ಹೇಳಿ ನಗಿಸುತ್ತಿದ್ದರವರು. ಟೆನ್ಷನ್‍ನಿಂದ ನಿಲ್ಲಲು ಅವರು ಬಿಡುತ್ತಿರಲಿಲ್ಲ. ಹಲವಾರು ಬಾರಿ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಹೋಗುವಾಗ ಎಸ್.ಪಿ. ಸರ್ ಜತೆಗಿರುತ್ತಿದ್ದರು.

ಪ್ರಮುಖ ಗಾಯಕರೆಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು. ಜಾನಕಿಯಮ್ಮ, ಎಸ್.ಪಿ. ಸರ್, ಸುಶೀಲಮ್ಮ, ಮೊದಲಾದವರು ಕಾರ್ಯಕ್ರಮದ ಮೊದಲಿನ ಸಾಲಿನಲ್ಲಿ ಕುಳಿತಿರುತ್ತಿದ್ದರು. ನಾನು ಸ್ವರ್ಣಲತಅದರ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದೆವು.

ಹೀಗಿರುವಾಗ ಅದೇನೋ ಅಭಿಪ್ರಾಯ ಕೇಳಲು ಜಾನಕಿಯಮ್ಮ ನನ್ನನ್ನು ಮುಂದೆ ಕರೆದರು. ನನ್ನ ತೊಡೆಯಲ್ಲಿ ಬ್ಯಾಗ್, ಪುಸ್ತಕವೆಲ್ಲ ಇತ್ತು. ಜಾನಕಿಯಮ್ಮ ಕರೆದ ತಕ್ಷಣ ನಾನು ಬ್ಯಾಗ್ ಪುಸ್ತಕವನ್ನು ಕುರ್ಚಿಯಲ್ಲಿಡದೆ, ಅದನ್ನು ಹಾಗೇ ಹಿಡಿದುಕೊಂಡು ಜಾನಕಿಯಮ್ಮನ ಬಳಿಗೆ ಹೋದೆ. ನಾನು ಸ್ವಲ್ಪ ಬಗ್ಗಿಯೇ ನಿಂತಿದ್ದೆ.
ಮಾತು ಮುಗಿದ ನಂತರ ನಾನು ಬೇರೇನೂ ನೋಡದೆಬಂದ ಅದೇ ರೀತಿಯಲ್ಲಿ ಬ್ಯಾಗ್ಹಾಗೇ ಹಿಡಿದುಕೊಂಡು ಹೋಗಿ ಕುಳಿತುಬಿಟ್ಟೆ. ಕುಳಿತದ್ದು ಮಾತ್ರ ನನಗೆ ನೆನಪಿದೆ.ಕ್ಷಣಾರ್ಧದಲ್ಲಿ ನಾನು ನೆಲಕ್ಕೆ ಬಿದ್ದಿದ್ದೆ. ಸುತ್ತಲಿದ್ದವರ ಗಮನವೇ ನನ್ನತ್ತ ಹರಿಯಿತು. ನನಗೆ ಸಿಕ್ಕಾಪಟ್ಟೆ ಮುಜುಗರವೂ ಆಯಿತು.

ಇದೇನಾಯ್ತು ಎಂದು ನಾನು ನೋಡುತ್ತಿದ್ದರೆ, ನಾನು ಕುಳಿತುಕೊಂಡ ಸ್ಥಳದಲ್ಲಿ ಕುರ್ಚಿ ಇರಲಿಲ್ಲ. ಕುರ್ಚಿ ಬೇರೊಂದು ಜಾಗದಲ್ಲಿತ್ತು. ನನಗೆ ತೀರಾ ದುಃಖವಾಯ್ತು. ಆ ಹೊತ್ತಿಗೆ ಹಲವರಿಗೆ ಇದು ತಮಾಷೆಯಾಗಿಯೂ, ದುಃಖವಾಗಿಯೂ ಕಾಣಿಸಿಕೊಂಡಿತ್ತು.
ಆಗ ಎಸ್.ಪಿ. ಸರ್ ನನ್ನಲ್ಲಿ ಹೇಳಿದರು. ಸ್ಸಾರಿ ಚಿತ್ರಾ, ಕುರ್ಚಿಯನ್ನು ನೋಡದೆ ನೀನು ಹೀಗೆ ಮಾಡುತ್ತಿ ಎಂದು ನಾನು ಅಂದುಕೊಂಡಿರಲಿಲ್ಲ.

ನಾನೇನು ಹೇಳಲಿ?ಎಸ್.ಪಿ. ಸರ್ ಮಾಡಿದತಮಾಷೆ ಅದು ಎಂದು ಹೇಳಿದರೆ ಸಾಕಲ್ಲವೇ? ತಮಾಷೆಗಾಗಿ ಅವರು ಕುರ್ಚಿ ಬದಲಿಸಿದರೂ ಅದನ್ನು ಗಮನಿಸದೆ ಕುಳಿತುಕೊಂಡಿದ್ದು ನನ್ನ ತಪ್ಪು.

ಏನೇ ಆಗಲಿ, ಜನರನ್ನು ಅರ್ಥ ಮಾಡಿಕೊಳ್ಳುವ ಕಲಾವಿದ ಅವರು. ಅನಗತ್ಯವಾಗಿ ಯಾರನ್ನೂ ದೂರುವುದೂ ಇಲ್ಲ. ನಾವಿಬ್ಬರೂ ಜೊತೆಯಾಗಿ ಅತೀ ಹೆಚ್ಚು ಹಾಡು ಹಾಡಿದ್ದು ಇಳಯರಾಜಾ ಸರ್ ಮತ್ತು ಎ.ಆರ್. ರೆಹಮಾನ್‍ಗಾಗಿತ್ತು. ರಾಜಾ ಸರ್ ಬಳಿ ಹಾಡಲು ಹೋದಾಗ ನನಗಾಗಿ ಕಾಯಬೇಕಾದ ಪರಿಸ್ಥಿತಿ ಬಂದಾಗ ಅವರು ನನ್ನನ್ನು ಬೈದಿಲ್ಲ ಎಂಬ ವಿಷಯ ನನಗೆ ಅಚ್ಚರಿ ಉಂಟುಮಾಡಿತ್ತು. ಸಂಗೀತದಲ್ಲಿ ಅವರಿಗಿರುವ ಟೀಂ ಸ್ಪಿರಿಟ್ ಮಾತ್ರ ಸಾಕು, ಹಾಡು ಮತ್ತು ಸಹಗಾಯಕರಿಗೆ ರಸಾನುಭವಗಳನ್ನು ನೀಡಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT