ಶನಿವಾರ, ಸೆಪ್ಟೆಂಬರ್ 19, 2020
27 °C

ದಂಗೆ ಏಳುತ್ತವೆ ಕವಿತೆಗಳೂ

ಮಲ್ಲಿಕಾರ್ಜುನ್‌ ಛಬ್ಬಿ Updated:

ಅಕ್ಷರ ಗಾತ್ರ : | |

1

ರಸ್ತೆಗಳ ಎದೆಯ ಮೇಲೆ ದಿಂಡುರುಳುತ್ತಾ ಸಾಗುವ
ಗಜಗಾತ್ರದ ಲಾರಿಗಳ ತುಂಬೆಲ್ಲಾ
ಬಡ ಕೂಲಿ ಕಾರ್ಮಿಕರು
ಸಿರಿವಂತರ ಹೆಣ ಸಿಂಗರಿಸುವ ವೀರ ಬಾಹುಗಳು
ನಗರದ ಫ್ಯಾಕ್ಟರಿಗಳ ಅಪಾಯಕಾರಿ ತ್ಯಾಜ್ಯವನ್ನೆಲ್ಲಾ
ಒಡಲಲ್ಲಿ ಹೊತ್ತು ಹರಿವ ನಿರ್ಲಕ್ಷಿತ ನದಿಗಳು
ಶೋಕದಲ್ಲಿ ನಿರಂತರ ಬೇಯುವ
ಕೃಷ್ಣವಾತ್ಸಲ್ಯೆ ದೇವಕಿಯಂತೆ ಹಳ್ಳಿಗಳು
ರಕ್ಕಸ ಗಾತ್ರದ ಯಂತ್ರಗಳ ‍ಪಾದದಡಿ
ಕೇಶಮುಂಡನಗೊಂಡ ವಿಧವೆಯಂತೆ ನೆಲ

ಒಂದು ಸಸಿಯಾಗಿ ಮೊಳಕೆಯೊಡೆಯಲಾಗುವುದಿಲ್ಲ
ಶ್ರೀಗಂಧದ ಅರಮನೆಯನ್ನು ಕಟ್ಟಿಸಿದರೂ
ಭಾರೀ ಬೆಲೆಯ ಹಂಸತೂಲಿಕಾತಲ್ಪವಿದ್ದರೂ
ಕೊನೆಗೊಂದು ದಿನ ವಿಶ್ರಮಿಸಲು ಮಣ್ಣು

2

ಕಾಲನ ಲೀಲೆಯಲ್ಲಿ
ಸುಖ ಮತ್ತು ಹತಾಶೆಗಳ ಸಮಪಾಕದ ಊಟಕ್ಕಾಗಿ
ಸರದಿ ನಿಂತ ಪಯಣಿಗರು ನಾವು
ಪಾಪದೂಷಿತ ಮುಗುಳುನಗೆ ಬೀರಿ
ಪಾಪಗಳ ಸರಮಾಲೆ ಧರಿಸಿ ದೇವರ ದಿವ್ಯದರ್ಶನಕ್ಕಾಗಿ
ಸರದಿಯಲಿ ನಿಂತ ಭಕ್ತರು ನಾವು
ಪವಿತ್ರಾತ್ಮನಿಗಾಗಿ ಸಮೂಹಗಾನ ಹಾಡುತಾ
ಭಕ್ತಿಯೆಂಬುದು ಆಟಿಕೆಯ ಆತ್ಮ

3

ಭವಿಷ್ಯತ್ತಿನ ಹೊಳೆಯ ಅಲೆಯಲಿ
ಸುಳಿಗಾಳಿಗೆ ಸಿಕ್ಕು ಸುಡುಗುವ
ದುರ್ಬಲ ಸೂರ್ಯ
ಎಲ್ಲ ಋತುಗಳೂ ಗುಮಾನಿಯಿಂದ ನೋಡುತ್ತಿವೆ
ತಮಗಿಂತ ಹೆಚ್ಚು ಬಾಳದ ನರಮನುಜನ ಬುದ್ಧಿಮತ್ತೆಯನು

ನಮ್ಮ ರಕ್ತನಾಳಗಳಲ್ಲಿ ಮಲಗಿರುವ ಅತೃಪ್ತರು
ತಾಯ್ನುಡಿಯಲ್ಲಿ ನಿಡುಸುಯ್ದಾಗ
ದಂಗೆ ಏಳುತ್ತವೆ ಕವಿತೆಗಳೂ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.