ಸೋಮವಾರ, ಸೆಪ್ಟೆಂಬರ್ 20, 2021
23 °C

ನಮ್ಮವರಿಗೆ ದೇವರು ಬಂದಾಗ (ಕವಿತೆ)

ಪ್ರೊ.ಶಿರಗಾನಹಳ್ಳಿ ಶಾಂತನಾಯ್ಕ್ Updated:

ಅಕ್ಷರ ಗಾತ್ರ : | |

Prajavani

ದೇವರು ನಮ್ಮವರ ಮೈಮೇಲೆ ಬಂದಾಗ ನಮಗೆ ಬರುವ ಭಾಷೆಯಲ್ಲೆ,
ಏಯ್ ನನ್ನ ಮರೆತು ಬಿಟ್ಟೇನೋ ಮಗನೆ… ಹೂಂ… ಹೂಂ……
ಎಗ್ಗಿಲ್ಲದೆ ಮುಖದ ಮೇಲೆ ಬೊಯ್ಯುತ್ತವೆ…
ಮನದೊಳಗೆ ಕಲ್ಮಷವಿಲ್ಲದೆ ಬೇಡಿಕೆ ಸಲ್ಲಿಸುತ್ತವೆ.

ನಶೆ ತುಂಬಿದ ಮೆದಳು, ಅರೆ ಪ್ರಜ್ಞೆಯಲ್ಲಿ ಇವರು ಉಲಿಯುತ್ತಾರೆ.
ಶಾಂತಳಾಗುತಾಯೇ,
ಏನು ಕಮ್ಮಿ ಮಾಡುವಿ ಹೇಳು?
ಹೋದವರುಷ ಕೊಡಲಿಲ್ಲವೆ ಕೋಣ, ಕುರಿ, ಕೋಳಿ ಬಲಿಯನ್ನ?

ಅದು ಆಗ, ಈಗಿನದು ಹೇಳು?
ಅಯ್ಯೋ ಸುಧಾರಿಸಿಕೊಳ್ಳವ್ವ ಬಿಳಿತಲಿ ನರಮನುಷ್ಯರ ನಾವು……
ಕುಡಿತಿದ ಪಾಪಪ್ರಜ್ಞೆಯೂ ಇಲ್ಲದೆ ದೇವರೊಂದಿಗೆ ಜಿದ್ದಾ ಜಿದ್ದಿಗಿಳಿದು
ದೇವರು ತಮ್ಮ ಸಮನೆಂದು ಬಗೆಯುತ್ತಾರೆ.

ನಮ್ಮ ದೇವರುಗಳಾದರೂ ಯಾರು?
ಗುದ್ದಾಮ್ಮ, ಚೌಡಿ, ಮಾರಿ, ಗಾಳಿದುರ್ಗಮ್ಮ, ಹುಲಿಗೆಮ್ಮ, ಏಳುಮಕ್ಕಳ ತಾಯಮ್ಮ, ಗಾಳೆಮ್ಮ, ಧೂಳೆಮ್ಮ ಅಜ್ಜಮ್ಮ, ಕಾಲುಬಾಯಿಜ್ವರದಮ್ಮ, ಸಾತುಭವಾನಿ, ಮಂಕಾಳಿ, ಗುಜಾಸತಿ, ಗಡಿದುರಗಮ್ಮ
ನೂರ್ಕೋಟಿ ಜನಕ್ಕೆ ಮೂರ್ಕೋಟಿ ಹೆಣ್ಣು ದೇವರಾದರೂ ಬೇಡವೆ?

ದೇವರು ನಮ್ಮವರ ಮೈಯೊಳಗೆ ಗೊತ್ತಿಲ್ಲದೆ ಪರಕಿಯ ಪ್ರವೇಶ ಮಾಡಿ
ಹೆಚ್ಚೆಂದರೆ ಕುರಿ, ಕೋಳಿ ಬಲಿಕೇಳುತ್ತವೆ.
ಕೊಡದಿದ್ದರೆ ಕೊಸರಾಡುತ್ತವೆ.
ಬೇಸರದಿಂದ ಮುನಿಸಿಕೊಂಡು ಮಾಯವಾಗುತ್ತವೆ.

ನಮ್ಮ ದೇವರು ಮೈಮೇಲೆ ಬಂದಾಗ
ತಲೆ ಅಲ್ಲಾಡಿಸಿ, ಉಸ್ಸೆಂದು ಸದ್ದುಮಾಡಿ, ಒಮ್ಮೆ ಹೂಂಕರಿಸಿ
ಬೇವಿನ ಸೊಪ್ಪಿನಿಂದ ಹೊಡೆಸಿಕೊಂಡು,
ಸುಳ್ಳೆಂಬ ಸತ್ಯವನ್ನೋ ಸತ್ಯವೆಂಬ ಸುಳ್ಳನ್ನೋ ಪವಡಿಸಿ ಪಾರಾಗಿಬಿಡುತ್ತವೆ.

ಆದಿಮ ದೇವರಿಗೆ ಮಡಿ ಮೈಲಿಗೆ ಇಲ್ಲ
ಮುಟ್ಟಾದ ಮಹಿಳೆ ಕೈಯ ನೈವೇದ್ಯವನ್ನು ಸ್ವೀಕರಿಸುತ್ತವೆ
ತಿಂಗಳಾದರೂ ಮೈತೊಳೆಯದ ಪೂಜಾರಿಯ ಮೈಯಲ್ಲೂ ಪವಡಿಸುತ್ತವೆ.
ಬಂಡದೇವರು.

ಉಳ್ಳವರ ಮರ್ಜಿಗಿರಬೇಕು ಜಾತ್ರೆಗಳು
ವರ್ಷಕೊಮ್ಮೆ ಮಾರಮ್ಮನ ಹಬ್ಬ
ಬಲಿಕೊಟ್ಟ ಕುರಿಗಳು ಮಾತ್ರ
ಬೀಗರಿಗರ್ಧ ಬಂದವರಿಗರ್ಧ ಕಡೆಗೂಳಿಯುವುದು ಸಾಲದ ಶೂಲ
ನಮ್ಮ ದೇವರು ನರಬಲಿ ಕೇಳುವುದಿಲ್ಲ
ಮಂದಿರ ಕಟ್ಟಿಸು ಎಂದು ಹೇಳುವುದಿಲ್ಲ.
ಕಾಯಿ ಹೊಡೆದಾರು ಸೈ- ಕೈ ಮುಗಿದರೂ ಸೈ
ಕೋಮುವುದಾವನೆಂದು ಬಿತ್ತುವುದಿಲ್ಲ.

ತಿಳಿದಿಲ್ಲ ಇವಕ್ಕೆ ಗಚಾರ ಅಮವಾಸ್ಯೆಯ ಗಮತ್ತು
ಚರಂಡಿಯೊಳಗೆ ಕೂತ ತಲಪಟರಾಯನ ಪಡಿಪಾಟಲು
ಪರರ ಸ್ವತ್ತು ಬೇಡದ ಕರುಣಾಳು
ಕೊಟ್ಟರಷ್ಟೇ ಪಡೆಯುವ ದಯಾಳು

ನಮ್ಮವರಿಗೆ ದೇವರು ಬಂದಾಗ
ನಮ್ಮಂತೆ ಮಾತನಾಡುತ್ತವೆ. ಸಿಟ್ಟಾಗುತ್ತವೆ, ಬೈದರೂ ಬೈಯಿಸಿಕೊಳ್ಳುತ್ತವೆ.
ಹಿಂತಿರುಗಿ ಬೊಯ್ಯುತ್ತವೆ.
ಎಂದೂ, ಮನುಷ್ಯನ ಮನಸ್ಸು ನೋಯಿಸಿದ ಮನುಜಪ್ರೇಮದ ದೇವರು ನಮ್ಮೊಂದಿಗೆ ಮಾತನಾಡುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು