ಕವಿತೆ: ‘ಕಾಡು’

ನನ್ನ ಮಗುವಿನ ಕಾಡಲ್ಲಿ
ಬರಿಯ ನಗುವಿನ ಮರಗಳು
ನಿಂತಿವೆ; ಗಟ್ಟಿಯಾಗಿ ಎತ್ತರಕೆ
ಬೆಳೆದು.
ಅವುಗಳ ಬುಡದಲಿ ನೇಹದ
ಸಸಿಗಳು ನಳನಳಿಸಿ; ನಂಬುಗೆ
ಹೂವರಳಿ, ವಿಶ್ವಾಸದ ಫಲ
ತೊನೆದಾಡುತ್ತಿರುತ್ತವೆ.
ನನ್ನದೂ ಒಂದು ಕಾಡಿದೆ,
ಅಭದ್ರ ಬೇರುಗಳ
ನಿಬಿಡ ಕಾಡು! ಕತ್ತಲೆ ತೂರಿಕೊಂಡು
ಬೆಳಕಿಗೆ ನಿಷೇಧ ಹೇರಿಕೊಂಡು
ಕಳೆ ಮರಗಳು ಹಬ್ಬಿ ಹರಡಿ..
ಸುಮ್ಮನೆ ಶ್ರಮಪಡದೆ
ಪಾಲಿಸಿಕೊಂಡು ಬಂದಿರುವೆ
‘ಕಾಡು ಕಡಿಯಬಾರದು’ ಎಂಬ
ನಿಯಮಗಳನು... ಒಟ್ರಾಷಿ
ನನಗೆ ಈ ಕಾಡೆಂದರೆ ಅಭಯಾರಣ್ಯ;
ನಾನದರೊಳಡಗಿ ಮರೆಯಾಗಿರುವ
ಖಳ ಖೂಳ ಬೇಟೆಗಾರ...
ನನ್ನ ಮಗುವಿನ ಕಾಡೊಳಗಿನ ಚಿಟ್ಟೆ,
ನವಿಲು, ಜಿಂಕೆ, ವ್ಯಾಘ್ರ.. ಮೃಗಖಗಗಳು
ಸ್ನೇಹದಿಂದಿರುವಾಗ, ನನ್ನ ಕಾಡಿನಲಿ
ಕೋಲಾಹಾಲದ ಕೂಗುಗಳ ರಣಕೇಕೆ..
ಒಮ್ಮೊಮ್ಮೆ ನಾನೇ ಗಡಗಡ ನಡುಗುತ್ತಾ
ಕಂಗೆಡುತ್ತಾ ದಾರಿತಪ್ಪಿ ದಿಕ್ಕಾಪಾಲಾಗಿ
ನನ್ನ ಕಾಡೊಳಗೆ ಅಂಡಲೆಯುತ್ತೇನೆ..
ನಗೆ ನಿಷೇಧಿಸಿದ ಈ ಕಾಡನು, ನಾನೇ ಕಾಪಾಡಿಕೊಂಡು ಬಂದಿರುವಾಗ
ಕಾಡದಿರಲಾರದೇ ಕಾಡು?!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.