ಬುಧವಾರ, ಮಾರ್ಚ್ 29, 2023
27 °C

ಕವನ ಸ್ಪರ್ಧೆ 2021: ಅಂಜನಾ ಹೆಗಡೆ ಅವರ ಕವನ ‘ಹಚ್ಚೆ ಹಾಕುವವನಿಗೆ’

ಅಂಜನಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಎದೆಯಮೇಲೆ ಹೂವರಳಿಸುವವನ ಕೈಗೆ
ತಲ್ಲಣಗಳು ತಾಕುವುದಿಲ್ಲ
ಸೂರ್ಯ-ಚಂದ್ರ ತಾರೆಗಳೆಲ್ಲವೂ
ನಿಲುಕುತ್ತವೆ ಅವನ ಬೆರಳಿಗೆ
ನಕ್ಷತ್ರ ನೀಲಿಯಾಗಿ
ಆಕಾಶ ಕೆಂಪಗಾಗಿ!
ಎಲ್ಲವೂ ಅವನಿಷ್ಟದಂತೆಯೇ ಇಲ್ಲಿ
ಪದಗಳಿಲ್ಲದ ಕವಿತೆ ಎದೆತುಂಬ

ತಂದು ಕೂರಿಸುತ್ತಾನೆ ಎಲ್ಲೆಂದರಲ್ಲಿ
ಅಲ್ಲೆಲ್ಲೋ ಹಾರಾಡುವ ಚಿಟ್ಟೆಯ
ಅಂಗಳದ ಮೈಮೇಲಿನ ರಂಗೋಲಿ
ನುಣುಪಾದ ಪಾದಗಳ ಮೇಲೆ!
ನಾಜೂಕು ಪದರಗಳೊಳಗೆ
ಚುಚ್ಚಿದ ಬಣ್ಣಗಳು ತನಗಂಟದಂತೆ
ಅಂತರವ ಕಾಯ್ದುಕೊಳ್ಳುತ್ತಾನೆ

ಮರಿಜಿಂಕೆಯೊಂದು ಕಾಲಮರೆತು
ಕಣ್ಣುಮಿಟುಕಿಸುತ್ತದೆ
ನಿಂತಸಮಯದ ಒಡಲಿನಲ್ಲಿ
ಸದಾ ಹಸಿರಾದ ಹುಲ್ಲುಗಾವಲು!
ಶಿವನ ಶಿರದಿಂದಿಳಿದ ಗಂಗೆ
ಸ್ಪರ್ಶಕ್ಕೆ ಸಿಕ್ಕುತ್ತಾಳೆ
ಮೂರ್ತ-ಅಮೂರ್ತಗಳೆಲ್ಲವೂ
ಅವನಾಜ್ಞೆಯಂತೆಯೇ ಇಲ್ಲಿ
ಸಾಲುಸಾಲು ಕತೆಗಳು
ಬಿಡಿಬಿಡಿಯಾಗಿ ಹರಡಿಕೊಳ್ಳುತ್ತವೆ

ಬಾಲಕೃಷ್ಣನ ನವಿಲುಗರಿ
ಬೆನ್ನಮೇಲೆ ಕಚಗುಳಿಯಿಡುವಾಗ
ಮೊಲದಮರಿಯೊಂದು ಕುತ್ತಿಗೆಯ ಮುದ್ದಿಸುತ್ತದೆ
ಕೀಗೊಂಚಲಿನಿಂದ ಹೊರಟ
ರೆಕ್ಕೆಯೊಂದು ಬಯಲ ತಲುಪಿದರೆ
ಆಗಸದಿಂದಿಳಿದ ಅದೃಷ್ಟದೇವತೆ
ಮುಂಗೈಮೇಲೆ!
ನೆನಪ ಹಿಡಿದಿಡುವ ಕಾಯಕದಲ್ಲಿ
ನೋವಿನ ಮಾರಾಟ ರಿಯಾಯಿತಿಯಲ್ಲಿ

ಹೊಕ್ಕುಳಿಗೆ ಸೂಜಿ ಚುಚ್ಚುವವನ
ತೆರೆದ ಎದೆಯಮೇಲೆ
ಬಣ್ಣದ ಹೂಗಳ ಹರಡಬೇಕಿದೆ;
ಪರಿಮಳದ ಎಳೆಯೊಂದ ಎಳೆಯಬೇಕಿದೆ!
ಸೂಜಿಗಂಟಿದ ಸತ್ಯಗಳೆಲ್ಲ
ಬಳ್ಳಿಯಾಗಿ ಹಬ್ಬಿಕೊಳ್ಳಲಿ
ಹಚ್ಚೆ ಹಾಕುವವನ ಹೃದಯದಲ್ಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು