ಶನಿವಾರ, ಮಾರ್ಚ್ 25, 2023
28 °C

ಚಾಂದ್ ಪಾಷ ಎನ್.ಎಸ್ ಅವರ ಕವನ ‘ಈ ಸಾವನ್ನೊಮ್ಮೆ ಸ್ವಾಗತಿಸು‘!

ಚಾಂದ್ ಪಾಷ ಎನ್. ಎಸ್. Updated:

ಅಕ್ಷರ ಗಾತ್ರ : | |

Prajavani

ಪ್ರತಿ ರಾತ್ರಿಗಳು ನಿನ್ನ ನೆನಪಿನ ಕುಣಿಕೆಗೆ ಬದುಕನೊಪ್ಪಿಸಿ
ಸತ್ತು ಮಲಗಿದ ಶವ ಕಂಡು,
ಕರಗಿದ ಕತ್ತಲೆಗೂ ಕಣ್ಣೀರು ಬಂದೀತು!
ಹೂತಿಟ್ಟ ಬಯಕೆಗಳ ಗಂಟನ್ನೊಮ್ಮೆ ಬಿಚ್ಚಿ ನೋಡು
ಬರಿಗೈಯ ಬಡವನ ರೇಖೆಯಲ್ಲೂ ನೋವಿನ ನಕಾಶೆ ಕಾಣಬಹುದು!
ಅಳಿದುಳಿದ ಬದುಕ ಹಿಡಿದು ಹಿಂಸಿಸು
ಬಾ ಈ ಸಾವನ್ನೊಮ್ಮೆ ಸ್ವಾಗತಿಸು!

ಪ್ರತಿ ಮಾತಿಗೂ ತಗಾದೆ ತೆಗೆಯುವ ನಿನ್ನ ಮೌನವ ಹಿಡಿದು, ಕೈ ಕಾಲ ಕತ್ತರಿಸಿ ಎದೆ ಸೀಳಿ, ತಲೆ ಹೋಳಾಗುವಷ್ಟು ಸಿಟ್ಟು ಬರುತ್ತಲೇ ಇದೆ!
ಬೀದಿಗೆ ಬಿದ್ದ ಪ್ರೇಮ ಕಲಾಪಕ್ಕೆ ಹುಕುಂ ನೀಡುವ ಅಧಿಕಾರವಿಲ್ಲದ ಹೂಗಳ ಕಿತ್ತೆಸೆದು ಬಿಡು
ಮಧುರತೆ ಮಗ್ಗಲು ಬದಲಿಸಲಿ
ಮುಳ್ಳ ಮೂತಿಗೆ ತಿವಿದು ಗಾಯಗಳ ಗೌರವಿಸು!

ರಾಗದೆದೆಯಲ್ಲಿ ರೋಗ ಬಿತ್ತಿದ ಮೊದಲ ಕುಡಿ ನೋಟಕ್ಕೆ ಬದುಕಿನ ಸಂಗೀತವೆಲ್ಲ ಸದ್ದು ಗದ್ದಲವಾಯಿತು.
ಗಾಳಿಯಲ್ಲಿ ಮುಚ್ಚಿಟ್ಟ ಮುತ್ತುಗಳಿಗೆ ಮುಪ್ಪು ಬಂದಿರಬಹುದು
ಯೌವನದ ಎದೆ ಮೇಲೂ ನೆರೆಗೂದಲು
ಸುಡುವ ಕಿಡಿಗಳ ಸುರಿದು ಬಿಡು, ಪಾದದಡಿಗೆ
ಅಡಿಗಡಿಗೆ ಅಲೆಯುವ ಹೆಜ್ಜೆಗೆ ಗೋರಿ ಕಟ್ಟಿಬಿಡು!

ಪ್ರತಿ ಬಾರಿಯೂ ಹೀಗೆ ಪೊಳ್ಳು ವರದಿ ಒಪ್ಪಿಸುವ
ಹರಾಮಿ ವರದಿಗಾರನ ಬೇನಾಮಿ ಪತ್ರಿಕೆ ನೀನು!
ಪ್ರಜ್ಞೆ ತಪ್ಪುವವರೆಗೂ ಪ್ರೀತಿಸಿ ಬಿಡು
ಎಚ್ಚರದ ಅಮಲಿನಲ್ಲೂ ಸಾವಿನ ಸೆಳೆತವಿದೆ.
ಬದುಕ ಏಣಿ ಹತ್ತಿ ಕಾಲು ಕಳೆದುಕೊಂಡಿರುವೆ
ಹೆಚ್ಚು ಕಾಡಿಸದೆ ಬಾ ಈ ಸಾವನ್ನೊಮ್ಮೆ ಸ್ವಾಗತಿಸು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು