ಸೋಮವಾರ, ನವೆಂಬರ್ 30, 2020
27 °C

ಕವಿತೆ: ಕಾ(ಮ)ವ್ಯ ಸೂತ್ರ

ನಂದಿನಿ ಹೆದ್ದುರ್ಗ Updated:

ಅಕ್ಷರ ಗಾತ್ರ : | |

Prajavani

ಸೃಷ್ಟಿಕ್ರಿಯೆ ಸೋತ ಹೊತ್ತಿನಲಿ
ಯಾವುದಕ್ಕೂ ಇರಲಿ
ಎನುವಂತೆ ಮತ್ತೊಮ್ಮೆ ಭೇಟಿಯ
ಕುರಿತು ನೀಲಿನಕ್ಷೆಯನ್ನೆಳೆದು
ದಿನ ಗಂಟೆ ನಿಮಿಷ ನಿಗದಿಸಿದೆ

ತಳೆದು ಸುಳಿದು ಮೊಳೆದು ಬೆಳೆದು
ಆರಂಭ ಅಮೃತ ಘಳಿಗೆ
ಮುನ್ನ ‌ಬರಿ ಮುನ್ನಾಟ
ಒಲಿದೂ ಮಣಿಯದ ಹೂಟ
ಮುನಿಸಿನಲಿ ಮುಗಿಲು
ಧರೆ ಅರ್ಧಾಂಗಿಯೇ ಅಪ್ಪಟ

ದಿಟ್ಟಿ ದಿಟ್ಟಿ ಮೆಟ್ಟಿ ಕಿಡಿಹುಟ್ಟಿ
ದಿಗಿಲು ರಭಸದಲ್ಲಿ
ದೇಹದಾದಿಯಾಗಿ
ಡೊಪಮೈನು ಅಂಡ್ರೋಜಿನ್ನು
ಧುಮು ಧುಮು ಧುಮುಕಿ

ಧುಮುಗುಟ್ಟು
ಹದ ಅಪರಾಧಕ್ಕೆ ಎದೆ ತಯಾರು
ಅಧರ ಅದುರಿ ಬೆದರಿ
ಲೋಕಕ್ಕೆ ತಿಳಿಯದ ಸೋಕು
ಯಾವುದಿದು ಬೆಳಕು

ಕೋಶಕೋಶವೂ
ಮಿಂದು..
ಹೊಯ್ಯಲೊಯ್ಯಲುಸುಯ್ಯಲು
ಸುಖದ ತ್ರಾಸೆನ್ನುವುದೇ ಹೀಗೆ
ವಿಭ್ರಮದ ಬಯಲು

ಸನಿಹದ ಕಾತರಿನಲಿ ಜೀವ
ಆಸೆ ಮೀರಿ ಅಮಲು ಏರಿ
ಆವರಿಸಿ..ದರೆ...
ಧರೆ ಕಳಚಿತು ಸೆರೆ
ಕವಿದ ಮುಗಿಲು ಅದೃಶ್ಯ ಗಿರಿ
ಅದು ಕವಿಸಮಯವೋ ಕವಿವರ್ಯ!!

ಅಗೋ ಆಲಾಪದಲರು
ಸುಳಿಕುಳಿ ಬೆಟ್ಟಬಯಲು ಕುರುಳು ಹೆರಳು
ತಾಮುಂದು ನಾಮುಂದು ತೋಯ್ದು ತಣಿದು
ನಿಮಿತ್ತ ನಗ್ನವೇ ಉಳಿಯಿತು ಆ ಹಗಲು

ನೆಲವೀಗಾ ಕಾಫಿಯಲ್ಲದ್ದಿದ ಬಿಸ್ಕತ್ತು
ಹಿಂಡಿದರೆ ಬಂಡು
ತಳಮಳದ ಆಳ ಪಾತಾಳ ರಸಾತಳ
ಥಳಥಳ ಪಳಪಳ

ಮಿಂಚಿನಂಚಿನಲಿ ಹೊಂಚಿ
ಅದಲುಬದಲು ಬೆದೆ
ಅಣಿಯಾಗಿ ಅಪ್ಪಣೆ ಎಂದಿತು ಪರದೆ
ಧಡಬಡಿಸೊ ಗುಡುಗುಡುಗು
ಧಗಧಗ ಭಗ ಭೋರ್ಗರೆದು
ಕರೆದು ಮೊರೆದು ಹರಿದು ಪೊರೆದು
ಜಲಜಲಜಲಲ ಸಲಿಲ

ಗರೆದು ಹಗುರಾದ ದುಂಬಿ
ಮುಲುಗಿ ಮುಗುಳಾಯ್ತು ತುಂಬಿ
ಸೋಪಾನ ಸೋನೆ ಜೇನದೊನ್ನೆ
ತಟ್ಟನೆಬ್ಬಿಸದೆ ತಟ್ಟಿ‌ ಮಲಗಿಸಿದ
ಸೋತು ಸಂಪನ್ನಳಾದವಳ ಹುಡುಗ
ಲೋಕದಿನ್ನೊಂದು ವಜನು
ಸರಿಗಟ್ಟಬಹುದೆ ಒಲಿದು
ಕೂಡಿದ ಸೊಗವ

ಸುಖದ ಕನವರಿಕೆಯಲಿ
ನಗು ಅಚ್ಚೊತ್ತಿದವಳ ಬೆತ್ತಲು
ಬೆನ್ನ ಮುತ್ತಿದ್ದ ಹೊದರೊದರು
ಪೊದರು ಸರಿಸಿ
ಮತ್ತೊಂದು ಮುತ್ತು..ಒತ್ತಿ ಒತ್ತಿ
ಸುಷುಮ್ನ ಸುಪ್ತ ತೃಪ್ತ ಮತ್ತ‌ಮತ್ತ

ಯುಗದ ಮುಗಿಯದ ನಿರೀಕ್ಷೆ
ನಿಟ್ಟುಸಿರ ಅಂಡಾಣು
ನಿತ್ಯನಿಯಮಿತ ಸ್ಪರ್ಧೆ
ಧಾರೆ ಧಾರಕಾರ ಬಾರಾ ಮಾರ
ಕೋಟಿ ಶೂರರೂರಿನಲಿ
ಗಮ್ಯದ ಗುರಿ ಹೊಕ್ಕ
ಜಗದೇಕವೀರ

ಸುಸೂತ್ರ ಸೃಷ್ಟಿಕ್ರಿಯೆ ಧ್ಯೇಯ
ಕೂಸು ಜೀವಕೋಶ
ಸುಸಂಪನ್ನ ಭೇಟಿ ಸೂತ್ರ
ಯಾವ ಮಾಯೆಯ ಬಟ್ಟೆ
ಉಟ್ಟಿತ್ತೊ ಈ ಪದ್ಯ

-ನಂದಿನಿ ಹೆದ್ದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.