ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಕೆ.ಸಂಧ್ಯಾಶರ್ಮ ಬರೆದ ಕವಿತೆ: ವಿಚಿತ್ರ ತೀರ್ಪು

Last Updated 11 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಪ್ರಶಸ್ತಿ ವಿಜೇತ ಕಲಾವಿದನ ಸುತ್ತ
ಸ್ವಸ್ತಿ ಮಾಗಧರ ದಂಡು
ಕೈಕುಲುಕಿ ಹಾರ ಹಾಕಿ
ಅಭಿನಂದಿಸಿ ಹೊಗಳಿದ್ದು
ಅಜೀರ್ಣವಾಗುವ ರೀತಿ
ಪೆಚ್ಚಾಗಿಸಿ ಗೊಂದಲ-ಫಜೀತಿ
ವರ್ಷಗಟ್ಟಲೆ
ತಾದಾತ್ಮ್ಯ ತಪಿಸಿ
ಗೆರೆಗೆರೆಗಳ ಎದೆಹೊಕ್ಕು ಒಲಿಸಿ
ಬಣ್ಣ ಬನಿಸಿ,
ಪ್ರತಿಭೆ ಕೆನೆ ಸೋಸಿ
ಧಾರೆ ಎರೆದ ಚಿತ್ರಪಟ
ಪಟಲಗಳನ್ನೆಲ್ಲ
ಇಕ್ಕಿಮೆಟ್ಟಿದ ಬಾಹುಬಲಿ
ಪದಕ-ಪ್ರಶಸ್ತಿಗಳನೆಲ್ಲ
ಗೆದ್ದ ಗಂಡುಗಲಿ
ಇವನಾರೆಂದು ದಿಟ್ಟಿಸಿ
ಕಕ್ಕಾಬಿಕ್ಕಿ!
ಕುಂಚಸ್ಪರ್ಶವಿಲ್ಲದ ಈ
ಉದ್ಭವಮೂರ್ತಿಯ ಜನನ
ನಿಗೂಢ-ಚಿದಂಬರ ರಹಸ್ಯ !
ಎಲೆಮರೆಯ ಕಾಯಂತೆ
ಮೂಲೆಗುಂಪಾದ ತನುವೊಳಗೆ
ಹನಿಗೊಂಡ ವರ್ಣಮೇಳ
ಅಸಮಾನ್ಯ ಏಕಲವ್ಯನವತಾರ !
ತಂತಾನೇ ಆವಿರ್ಭವಿಸಿದ ಕೃತಿಯ
ಕೋನ ಕೋನಗಳಿಗೆ ದುರ್ಬೀನಿಟ್ಟು
ಒರೆ ಹಚ್ಚಿ ತೀರ್ಪಿಸಿದ ಮೌಲ್ಯ
ಪುಟವಿಟ್ಟ ಬಂಗಾರ
ನಿರ್ಣಾಯಕರ ಸೂಕ್ಷ್ಮ ಗ್ರಾಹ್ಯ
ಅಲೌಕಿಕ ಮಸೂರ ದೃಶ್ಶಕ್ತಿಗೆ
ಬೆಚ್ಚಿ ದಂಗಾದ ಕಲಾವಿದನ
ಅಣಕಿಸುತ್ತಿತ್ತು
ಅವನ ಸೃಷ್ಟಿಯಲ್ಲದ ಸೃಷ್ಟಿ
ಸ್ವಯಂಭು ಮೇರುಕೃತಿ !
ಕುಂಚದ ಬೆವರಹನಿಗೆ ಗರ್ಭಿಸಿ
ಶಿವೆಯ ಮೈ ಗಂಧಕೆ ಜೀವತಳೆದು
ಅಂಬೆಗಾಲಿಟ್ಟ ಕಂದನ ಬಾಲಲೀಲೆ
ಖಾಲಿ ಕ್ಯಾನ್ವಾಸಿನ ಹರಹು
ವರ್ಣಗಳ ಅಯಸ್ಕಾಂತ !
ಅವನು ಹೆರದ ಹೆರಿಗೆ
ಜೀವಗೊಂಡ ಅನಾಥ ಚಿತ್ರ
ಸೃಜಿಸಿದ ಅನೂಹ್ಯ ಕಲ್ಪನೆ
ಅಸಂಖ್ಯ ಅಂತರಾರ್ಥ ಸ್ಫುರಣೆ
ಹೊಳಹು ಸುಳುಹುಗಳು
ನಿಗೂಢ ವಿಸ್ಮಯ
ನಿಜವ ನುಂಗಿತ್ತು
ಕಲೆಯ ನೆರಳು !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT